“ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು. ಇಲ್ಲವಾದರೆ ಕಾಶ್ಮೀರದಲ್ಲಿ ಪಂಡಿತರಿಗೆ ನಾವು ಏನು ಮಾಡಿದೆವೊ ಅದನ್ನು ಇಲ್ಲಿಯೂ ಅನುಸರಿಸುತ್ತೇವೆ.”ಮೌಲಾನಾ ಸೈಯ್ಯದ ಅಹ್ಮದ ಬುಖಾರಿ ಶಾಹಿ ಇಮಾಮ ಜುಮ್ಮಾ ಮಸೀದಿ, ದೆಹಲಿ” ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಬುಖಾರಿ ಅವರ ಫೋಟೋದೊಂದಿಗೆ ಹಿಂದಿಯಲ್ಲಿ ಬರೆದಿರುವ ಬ್ಯಾನರ್ ಅನ್ನು ಲಗತ್ತಿಸಲಾಗಿದೆ.
ಆ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂದು ನೋಡೋಣ
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಲಗತ್ತಿಸಿರುವ ಬ್ಯಾನರ್ ಕುರಿತು ನಾವು ಗೂಗಲ್‌ನಲ್ಲಿ ಮಾಹಿತಿ ಹುಡುಕಿದಾಗ ವರ್ಲ್ಡ್ ವಿನ್ನರ್ ಟೈಮ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 13, 2021ರಂದು ಅಪ್ಲೋಡ್ ಮಾಡಲಾದ ವಿಡಿಯೋವೊಂದರಲ್ಲಿ ವೈರಲ್ ಪೋಸ್ಟರ್ ಕಂಡು ಬಂದಿದೆ.
ವಿಡಿಯೋದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ವೈರಲ್ ಬ್ಯಾನರ್ ಮೊಹರಂಗೆ ಮೊದಲು ಉತ್ತರಪ್ರದೇಶದ ಪ್ರತಾಪ್ ಗಢ ಜಿಲ್ಲೆಯಲ್ಲಿ ಹಾಕಲಾಗಿತ್ತು. ಮಾಹಿತಿ ಬಂದ ಕೂಡಲೇ ಪೊಲೀಸರು ಕ್ರಮ ಕೈಗೊಂಡು ಎಲ್ಲಾ ಬ್ಯಾನರ್ ಗಳನ್ನು ತೆಗೆದು ಹಾಕಿದ್ದರು.
ನಾವು ಮತ್ತಷ್ಟು ಮಾಹಿತಿ ಹುಡುಕಿದಾಗ ವೈರಲ್ ಬ್ಯಾನರ್ ಕುರಿತು ಕೆಲ ವರದಿಗಳು ಲಭ್ಯವಾಗಿದೆ. ಆ ವರದಿಗಳ ಪ್ರಕಾರ, ಪ್ರತಾಪ್ ಗಢ ಶಾಸಕ ರಾಜಾ ಭೈಯಾಗೆ ಸೇರಿದ ಶಾಲೆಯ ಗೋಡೆಯ ಮೇಲೆ ಬ್ಯಾನರ್ ಗಳು ಕಂಡು ಬಂದಿವೆ. ಅದನ್ನು ನೋಡಿದ ಸ್ಥಳೀಯರು ಆಕ್ರೋಶಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಬ್ಯಾನರ್ ಗಳನ್ನು ತೆರವು ಮಾಡಿಸಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ಮತ್ತು ದೈನಿಕ್ ಜಾಗರಣ್ ವರದಿಯನ್ನು ಪ್ರಕಟಿಸಿದ್ದವು.

ಇನ್ನು ಇದೇ ವಿಷಯದ ಕುರಿತು ಆಗಸ್ಟ್ 12, 2021ರಂದು ಪ್ರತಾಪ್ ಗಢ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದರು. ಅದರಲ್ಲಿ ಪ್ರತಾಪ್ ಗಢದ ಕುಂಡಾದಲ್ಲಿ ದುಷ್ಕರ್ಮಿಗಳು ವಿವಾದಾತ್ಮಕ ಬ್ಯಾನರ್ ಗಳನ್ನು ಹಾಕಿದ್ದರು. ಆ ಬಗ್ಗೆ ಮಾಹಿತಿ ಬಂದ ತಕ್ಷಣ, ಅದನ್ನು ತೆರವುಗೊಳಿಸಿ ಅಪರಿಚಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
जनपद प्रतापगढ़ के थाना क्षेत्र कुण्डा अन्तर्गत कस्बा कुण्डा में कुछ शरारती तत्वों द्वारा आपत्तिजनक होर्डिंग लगाए जाने के प्रकरण में की जा रही कार्यवाही के संबंध में पुलिस अधीक्षक प्रतापगढ़ द्वारा दी गई बाइट। pic.twitter.com/YKzUjFTAN5
— PRATAPGARH POLICE (@pratapgarhpol) August 12, 2021
ವೈರಲ್ ಬ್ಯಾನರ್ ನಲ್ಲಿ ವಿವಾದಾತ್ಮಕ ಹೇಳಿಕೆ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿಯವರ ಹೆಸರಿನಲ್ಲಿರುವುದರಿಂದ ಅವರು ಆ ರೀತಿಯ ಹೇಳಿಕೆ ನೀಡಿದ್ದಾರೆಯೇ? ಎಂದು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಆ ಕುರಿತು ಯಾವುದೇ ವರದಿಗಳು ನಮಗೆ ಲಭ್ಯವಾಗಿಲ್ಲ.
ಬ್ಯಾನರ್ ನಲ್ಲಿ ಮುಸ್ಲಿಂ ಜನಸಂಖ್ಯೆಯ ಕುರಿತು ಉಲ್ಲೇಖಿಸಿರುವುದರಿಂದ, ನಾವು ಆ ಬಗ್ಗೆ ಮಾಹಿತಿ ಹುಡುಕಿದ್ದೇವೆ. 2011ರ ಜನಗಣತಿಯ ಪ್ರಕಾರ ಹಿಂದೂ-ಮುಸ್ಲಿಂ ಜನಸಂಖ್ಯೆಯನ್ನು ಪರಿಶೀಲಿಸಿದಾಗ, ಉತ್ತರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಹೈದರಾಬಾದ್ ಮತ್ತು ಅಸ್ಸಾಂನಲ್ಲಿ ಹಿಂದೂ ಜನಸಂಖ್ಯೆಯೇ ಬಹುಸಂಖ್ಯಾತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಬ್ಯಾನರ್ ನಲ್ಲಿ ‘ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ’ ಎಂದಿದೆ. ಆದರೆ, ಇದು ಶುದ್ದ ಸುಳ್ಳು. ಇಸ್ಲಾಂ ಧರ್ಮದಲ್ಲಿ ಆ ರೀತಿಯ ಪ್ರತಿಪಾದನೆಯಿಲ್ಲ. ಭಾರತ ದೇಶದಾದ್ಯಂತ ಮತ್ತು ಇತರ ರಾಷ್ಟ್ರಗಳಲ್ಲಿಯೂ ಮುಸ್ಲಿಮರು ಹಿಂದೂ, ಕ್ರೈಸ್ತ, ಬೌದ್ದ, ಸಿಖ್, ಜೈನ, ಪಾರ್ಸಿ, ಯಹೂದಿ ಧರ್ಮೀಯರೊಂದಿಗೆ ಬಹಳ ಅನ್ಯೋನ್ಯತೆಯಿಂದ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗ ಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ ಎಂಬ ಹೇಳಿಕೆ ನಕಲಿಯಾಗಿದ್ದು, ಇದು 2021ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಂತಹ ಬ್ಯಾನರ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ವಿದ್ಯಾರ್ಥಿನಿಯರಿಂದ ನಮಾಝ್ ಮಾಡಿಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?


