ಚಾಮರಾಜನಗರ ಜಿಲ್ಲೆಯ SP ದಿವ್ಯಾ ಸಾರಾ ಥಾಮಸ್ ಕೊಳ್ಳೇಗಾಲದ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಅರ್ಚಕರಿಂದ ಏಸುವಿನ ಫೋಟೊ ಇಡಿಸಿ ಪೂಜೆ ಮಾಡಿಸಿದ್ದಾರೆ. ನಮ್ಮ ದೇವಸ್ಥಾನಗಳು ಎಂದರೆ ಅಷ್ಟೊಂದು ಸಸಾರವೇ? ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಪೋಸ್ಟ್‌ನ ಆರ್ಕೈವ್ ಆವೃತ್ತಿ ಇಲ್ಲಿದೆ.
ಟ್ವಿಟ್ಟರ್‌ನಲ್ಲಿಯೂ ಅದೇ ರೀತಿಯ ಆರೋಪವೊರಿಸಲಾಗಿದ್ದು, ಆ ಟ್ವೀಟ್ 6 ಸಾವಿರಕ್ಕೂ ಹೆಚ್ಚು ಜನ ರೀಟ್ವಿಟ್ ಮಾಡಿದ್ದಾರೆ.
SP of Chamarajanar district Divya Sara Thomas has visited #AnjaneyaTemple in Kollegala. SP has reportedly put pressure on the priest to place the photo of #Jesus inside the sanctum sanctorum of Temple and asked for pooja to be offered. @noconversion@ShefVaidya pic.twitter.com/KJuWUGryEv
— Nishant Azad/निशांत आज़ाद?? (@azad_nishant) August 12, 2020
ಆಗಸ್ಟ್ 5 ರಂದು ರಾಮಂದಿರ ಶಿಲಾನ್ಯಾಸ ನಡೆಯುತ್ತಿರುವಾಗ ರಾಜ್ಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರಿಂದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ರವರು ಪರೀಶೀಲನೆ ನಡೆಸಲು ಕೊಳ್ಳೇಗಾಲಕ್ಕೆ ತೆರಳಿದ್ದರು. ಆ ವೇಳೆ ಕೊಳ್ಳೇಗಾಲದ ಜ್ಯೋತಿಷಿ ಮತ್ತು ಅರ್ಚಕ ಟಿವಿಎಸ್ ರಾಘವನ್‌ರವರು ಎಸ್ ಪಿಯವರನ್ನು ತಮ್ಮ ಸ್ವಗೃಹದಲ್ಲಿರುವ ದೇವಸ್ಥಾನಕ್ಕೆ ಆಹ್ವಾನಿಸಿದ್ದರು. ಎಸ್‌ಪಿಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರಿಂದ ಏಸು ಮತ್ತು ಮೇರಿಯ ಚಿತ್ರವುಳ್ಳ ಫೋಟೊವನ್ನು ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡಿದ ಅರ್ಚಕರು ಎಸ್‌ಪಿಯವರಿಗೆ ಸನ್ಮಾನ ಮಾಡಿ ಆ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಬಹುದು. ನಂತರ ಆ ಫೋಟೊ ವೈರಲ್ ಆಗಿದ್ದು ಎಸ್‌ಪಿಯವರೇ ಒತ್ತಾಯಪೂರ್ವಕವಾಗಿ ಏಸುವಿನ ಫೋಟೊ ಇರಿಸಿ ಪೂಜೆ ಮಾಡಿಸಿದ್ದಾರೆ ಎಂದು ದೂರಲಾಗಿತ್ತು.
ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂಬ ಆರೋಪ ಬಂದಾಗ ಅರ್ಚಕ ಟಿವಿಎಸ್ ರಾಘವನ್‌ರವರು “ಯಾರೋ ಬಂದರೂ, ಏನೇ ತಂದರೂ ಅದನ್ನು ದೇವರ ಮುಂದಿಟ್ಟು ಪೂಜೆ ಮಾಡಿಕೊಡುವುದು ನಮ್ಮ ಸಂಪ್ರದಾಯ. ಒಳ್ಳೆಯದಾಗಲಿ ಎಂಬ ಭಾವನೆಯಷ್ಟೆ ಹೊರತು ಯಾವುದೇ ಕೆಟ್ಟ ದೃಷ್ಟಿಯಿಂದ ಆ ಫೋಟೊ ಇಟ್ಟಿಲ್ಲ. ಹಿಂದೂ ಸಮುದಾಯಕ್ಕೆ ಇದರಿಂದ ನೋವಾಗಿದ್ದಾರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಅಲ್ಲದೇ ತಾನು ಹಿಂದೂಗಳಾಗಿಯೇ ಉಳಿಯುತ್ತೇನೆ, ಹಿಂದೂವಾಗಿಯೇ ಕೊನೆಯಾಗುತ್ತೇನೆ ಎಂದು ಅವರು ಹೇಳಿದ್ದಾರೆ. ಅವರ ವಿಡಿಯೋ ಇಲ್ಲಿದೆ.
ಇನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಫ್ಯಾಕ್ಟ್‌ಚೆಕ್ ನಡೆಸಿದ್ದು, ಪೊಲೀಸರು ಸ್ವತಂತ್ರವಾಗಿ ಅಲ್ಲಿನ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರಂತೆ ಎಸ್‌ಪಿ ದಿವ್ಯಾ ಸಾರಾ ಥಾಮಸ್‌ರವರು ದೇವಾಸ್ಥಾನಕ್ಕೆ ಯಾವುದೇ ಫೋಟೊ ತೆಗೆದುಕೊಂಡು ಹೋಗಿಲ್ಲ ಮತ್ತು ಏಸು ಫೋಟೊಗೆ ಪೂಜೆ ಮಾಡುವಂತೆ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅದರ ವರದಿ ಇಲ್ಲಿದೆ.
ದಿ ನ್ಯೂಸ್‌ಮಿನಿಟ್ ಜೊತೆ ಮಾತನಾಡಿದ ಎಸ್‌ಪಿ ದಿವ್ಯಾ ಸಾರಾ ಥಾಮಸ್ “ಫೇಕ್ ಪೋಸ್ಟ್ ಮೂಲಕ ನನ್ನ ಖ್ಯಾತಿ ಕೆಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಕೆಲ ಕಿಡಿಗೇಡಿಗಳು ಫೇಕ್ ಪೊಸ್ಟ್ ಹರಡುತ್ತಿದ್ದಾರೆ. ನಾನು ಕ್ರಿಶ್ಚಿಯನ್, ನನ್ನ ಪತಿ ಹಿಂದೂ ಆಗಿದ್ದಾರೆ. ನಾನು ದೇವಸ್ಥಾನಕ್ಕೆ ಹೋಗಿದ್ದೇ ಆದರೆ ಏಸುವಿನ ಫೋಟೊಗೆ ಪೂಜೆ ಮಾಡುವಂತೆ ಒತ್ತಾಯಿಸಿಲ್ಲ. ಅರ್ಚಕರೇ ಹಾಗೆ ಮಾಡಿ ನನ್ನನ್ನು ಸನ್ಮಾನಿಸಿದರು ಅಷ್ಟೇ” ಎಂದಿದ್ದಾರೆ. ಇದರ ವರದಿ ಇಲ್ಲಿದೆ.
ಒಟ್ಟಿನಲ್ಲಿ ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಪೂಜೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಒತ್ತಾಯಿಸಿಲ್ಲ ಎಂಬುವು ಸ್ಪಷ್ಟವಾಗಿದೆ.
ಕೃಪೆ: FAQTLY
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಿರುವುದು ನಿಜವೇ?


