ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಶುಕ್ರವಾರ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಪ್ರತಿಭಾವಂತ ನಟನ ಅಕಾಲಿಕ ನಿಧನಕ್ಕೆ ದೇಶದಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ನಟನ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಡಲಾಗಿದ್ದು, ನಾಳೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಪಾಕಿಸ್ತಾನಿ ಯುವಕನೊಬ್ಬ ಹಾಡಿರುವ “ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ” ಕನ್ನಡ ಹಾಡೊಂಡು ವೈರಲ್ ಆಗಿದ್ದು, ಕನ್ನಡದ ಪ್ರಮುಖ ಮಾಧ್ಯಮವಾದ ಟಿವಿ9 “ಪುನೀತ್ಗೆ ಪಾಕಿಸ್ತಾನದ ಅಭಿಮಾನಿಯ ಗಾನ ನಮನ; ಕನ್ನಡದಲ್ಲಿ ಹಾಡು ಹೇಳುವ ಮೂಲಕ ಶ್ರದ್ಧಾಂಜಲಿ” ಎಂದು ಸುದ್ದಿ ಮಾಡಿದೆ.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ). ಅಲ್ಲದೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲೂ ಅದೇ ಸುದ್ದಿಯ ವಿಡಿಯೊ ವರದಿ ಮಾಡಿದ್ದು, “ಅಪ್ಪು ನಿಧನಕ್ಕೆ ಪಾಕಿಸ್ತಾನ ಅಭಿಮಾನಿಯ ಸಂತಾಪ” ಎಂದು ಶೀರ್ಷಿಕೆ ನೀಡಿದೆ.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ)

ಇದನ್ನೂ ಓದಿ: ಪುನೀತ್ ಫಿಟ್‌ನೆಟ್: ಡಾ.ದೇವಿ ಶೆಟ್ಟಿ ಹೆಸರಲ್ಲಿ ಫೇಕ್ ನ್ಯೂಸ್ ಹರಿದಾಟ
ಟಿವಿ9 ಈ ವಿಡಿಯೊವನ್ನು ‘ನಮ್ ರೇಡಿಯೊ’ ಎಂಬ ಯೂಟ್ಯೂಬ್ ಚಾನೆಲ್‌ನಿಂದ ಪಡೆದಿದ್ದು, ನಮ್ ರೇಡಿಯೊ ಇದನ್ನು ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಆಕ್ಟೋಬರ್ 29 ರಂದು ತನ್ನ ಚಾನೆಲ್‌ಗೆ, “ಪುನೀತ್ ರಾಜ್‌ಕುಮಾರ್ ಅವರ ಪಾಕಿಸ್ತಾನದ ಅಭಿಮಾನಿ” ಎಂಬ ಶೀರ್ಷಿಕೆ ನೀಡಿ ಅಪ್ಲೋಡ್ ಮಾಡಿತ್ತು.(ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ).
ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಪಾಕಿಸ್ತಾನದ ಯುವ ಅಭಿಮಾನಿ ಗಾನ ನಮನ ಸಲ್ಲಿಸಿದ್ದಾರೆ ಎಂದು ಹಲವು ಕನ್ನಡದ ಚಾನೆಲ್‌ಗಳು, ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
‘OnePlus News Kannada’ ಎಂಬ ಚಾನೆಲ್, ‘ಅಪ್ಪುಗಾಗಿ ಪಾಕಿಸ್ತಾನಿ ಅಭಿಮಾನಿ ಹಾಡಿದ!’ ಎಂದು ಶೀರ್ಷಿಕೆ ನೀಡಿ ವಿಡಯೊ ವರದಿ ಮಾಡಿದೆ. ಸುಮಾರು ಏಳು ಲಕ್ಷ ಚಂದಾದಾರರನ್ನು ಹೊಂದಿರುವ Karnataka TV ಎಂಬ ಯೂಟ್ಯೂಬ್ ಚಾನೆಲ್, ‘ಪಾಕಿಸ್ತಾನ ಅಭಿಮಾನಿಯಿಂದ ಪುನೀತ್ ಗೆ ಗಾನ ನಮನ’ ಎಂಬ ಶೀರ್ಷಿಕೆ ನೀಡಿ ವರದಿ ಮಾಡಿದೆ. ಇಷ್ಟೇ ಅಲ್ಲದೆ ಹಲವಾರು ಜನರು ಬೇರೆ ಬೇರೆ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಇದೇ ರೀತಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನಿ ಯುವಕ ಪುನೀತ್ ಅವರಿಗೆ ‘ಶ್ರದ್ದಾಂಜಲಿ ಕೋರಿ’ ಬೊಂಬೆ ಹೇಳುತೈತೆ ಹಾಡಿದರೇ?
ವಿಡಿಯೊದಲ್ಲಿ ಇರುವ ಯುವಕನ ಚಿತ್ರವನ್ನು ನಾನುಗೌರಿ.ಕಾಂ ರಿವರ್ಸ್ ಇಮೇಜ್ ಮೂಲಕ ಇಂಟರ್‌ನೆಟ್‌ನಲ್ಲಿ ಹುಡುಕಾಡಿದೆ. ಈ ವೇಳೆ ನಮಗೆ ಅಜ್ಮಲ್ ಮುಘಲ್ ಎಂಬ ಯೂಟ್ಯಬ್ ಚಾನೆಲ್ ಸಿಕ್ಕಿದೆ. ಅಜ್ಮಲ್ ಮುಘಲ್ ಅವರ ಬಗ್ಗೆ ನಾವು ಮತ್ತಷ್ಟು ಹುಡುಕಿದ್ದು ಅವರ ಇನ್‌ಸ್ಟಾಗ್ರಾಂ ಪ್ರೋಫೈಲ್ ಸಿಕ್ಕಿದೆ. ಅದರಲ್ಲಿ ಅವರು ತಾನೊಬ್ಬ ಸಂಗೀತಗಾರ ಎಂದು ಹೇಳಿಕೊಂಡಿದ್ದಾರೆ.
ಅಜ್ಮಲ್ ಮುಘಲ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು 2012 ರ ಜೂನ್ 11 ರಂದು ಪ್ರಾರಂಭಿಸಿದ್ದರು. ಅಜ್ಮಲ್ ತನ್ನ ಚಾನೆಲ್‌ನಲ್ಲಿ ಒಟ್ಟು 18 ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ತನ್ನ ಚಾನೆಲ್‌ನಲ್ಲಿ ಅವರು ಅಪ್ಲೋಡ್ ಮಾಡಿದ್ದ ಹಾಡು ಪುನೀತ್ ಅಭಿನಯದ ‘ಮಿಲನ’ ಚಿತ್ರದ ನಿನ್ನಿಂದಲೇ ಹಾಡನ್ನು ಹಾಡಿದ್ದಾರೆ. ಅಜ್ಮಲ್ ತನ್ನ ಚಾನೆಲ್‌ನಲ್ಲಿ ‘ಮುಂಗಾರು ಮಳೆ’, ‘ಮುಗುಳುನಗೆ’, ‘ಗೆಳೆಯ’, ‘ಗಾಳಿಪಟ’ ಚಿತ್ರಗಳ ಹಾಡನ್ನು ಹಾಡಿದ್ದಾರೆ.
ಇದನ್ನೂ ಓದಿ: Puneeth Rajkumar | ಭಾನುವಾರ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ: ಸಿಎಂ ಸ್ಪಷ್ಟನೆ
ಅದರಂತೆ ಬೊಂಬೆ ಹೇಳುತೈತೆ ಹಾಡನ್ನು ಮೂರು ವರ್ಷಗಳ ಹಿಂದೆ 2018 ರ ಜನವರಿ 12 ರಂದು ತನ್ನ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಿದ್ದರು.
ಅಜ್ಮಲ್ ಮುಘಲ್ ಈ ಈ ಹಾಡಿನ ವಿವರಣೆಯಲ್ಲಿ, “ನಾನೊಬ್ಬ ಪಾಕಿಸ್ತಾನಿಯಾಗಿದ್ದು, ಕನ್ನಡವು ಕಠಿಣ ಮತ್ತು ಮಧುರವಾದ ಭಾಷೆಯಾಗಿದೆ. ಅದನ್ನು ನಾನು ಚೆನ್ನಾಗಿ ಹಾಡಲು ಇಷ್ಟಪಡುತ್ತೇನೆ. ಮತ್ತೊಂದು ವಿಷಯವೇನೆಂದರೆ, ನನಗೆ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ನಾನಿದನ್ನು ಆನಂದಿಸುತ್ತೇನೆ’’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್ ರಾಜ್‌ಕುಮಾರ್’ ಅವರದಲ್ಲ
ಅಜ್ಮಲ್ ಇದೇ ಹಾಡನ್ನು 2017 ಮೇ 14 ರಂದು ಸಹ ಹಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದರು.
ಈ ಹಾಡನ್ನೇ ಕನ್ನಡದ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳು ತೆಗೆದುಕೊಂಡು, ‘ಪಾಕಿಸ್ತಾನಿ ಯುವಕ ಪುನೀತ್ ರಾಜ್‌ಕುಮಾರ್ ಅವರಿಗೆ ಗಾನ ನಮನ ಸಲ್ಲಿಸಿದ್ದಾರೆ’ ಎಂದು ತಪ್ಪಾಗಿ ವರದಿ ಮಾಡಿವೆ.
ಒಟ್ಟಿನಲ್ಲಿ ಹೇಳುವುದೇನೆಂದರೆ, ಯುವಕ ಪಾಕಿಸ್ತಾನಿ ಎಂಬುವುದು ನಿಜವೇ ಆಗಿದೆ. ಪಾಕಿಸ್ತಾನದ ಲಾಹೋರ್‌ನ ಐತಿಹಾಸಿಕ ಸ್ಥಳವಾದ ‘ಮಿನಾರ್-ಇ-ಪಾಕಿಸ್ತಾನ’ ಸ್ಥಂಭದ ಮುಂದೆಯೆ ವಿಡಿಯೊ ಮಾಡಿದ್ದಾರೆ. ಆದರೆ ಕನ್ನಡ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಅವರು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮೂರು ವರ್ಷಗಳ ಹಿಂದೆಯೆ ಅಪ್‌ಲೋಡ್ ಮಾಡಿದ್ದರು.
ನಾನುಗೌರಿ.ಕಾಂ ಪಾಕಿಸ್ತಾನಿ ಯುವಕ ಅಜ್ಮಲ್ ಅವರನ್ನು ವಿಡಿಯೋ ಕಾಲ್ ಮತ್ತು ಫೋನ್ ಕರೆ ಮೂಲಕ ಸಂಪರ್ಕಿಸಿತು. ಆದರೆ ನೆಟ್‌ವರ್ಕ್ ಕಾರಣಗಳಿಗಾಗಿ ಸಂವಹನ ಸಾಧ್ಯವಾಗಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ತಕ್ಷಣ ಅವರ ಪ್ರತಿಕ್ರಿಯೆಯನ್ನೂ ಇಲ್ಲಿ ಅಪ್ಡೇಟ್ ಮಾಡುತ್ತೇವೆ.
ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್ ಅವರ ಅಪರೂಪದ ಚಿತ್ರಗಳು


