ಸರ್ಕಾರ ಕಳುಹಿಸಿದ ಮಸೂದೆಗೆ ರಾಜ್ಯಪಾಲ ಆರ್.ಎನ್ ರವಿ ಅವರು ಎರಡನೇ ಬಾರಿಯೂ ಸಹಿ ಹಾಕದಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ವಿಫಲಗೊಂಡಿದೆ ಎಂಬುವುದನ್ನು ತೋರಿಸುತ್ತದೆ ಎಂದು ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಕಳವಳ ವ್ಯಕ್ತಪಡಿಸಿದೆ.
ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದ ಹಿನ್ನೆಲೆ ತಮಿಳುನಾಡು ಸರ್ಕಾರ ಸಲ್ಲಿಸಿದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ವಿಚಾರಣೆ ನಡೆಸಿದೆ.
ಪಕ್ಷಗಳ ನಡುವಿನ ವಿವಾದದಿಂದಾಗಿ ಜನರು ಮತ್ತು ರಾಜ್ಯ ತೊಂದರೆ ಅನುಭವಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತಮಿಳುನಾಡು ರಾಜ್ಯ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, “ಕಾನೂನಿನ ಪ್ರಕಾರ ರಾಜ್ಯ ಶಾಸಕಾಂಗವು ಮಸೂದೆಯನ್ನು ಅಂಗೀಕರಿಸಿದರೆ, ರಾಜ್ಯಪಾಲರು ಮರುಪರಿಶೀಲನೆಗೆ ಕೋರಬಹುದು” ಎಂದು ಹೇಳಿದ್ದಾರೆ.
“ಆದಾಗ್ಯೂ, ಅದೇ ಮಸೂದೆಯನ್ನು ಪುನಃ ಅಂಗೀಕರಿಸಿ ಎರಡನೇ ಬಾರಿಗೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದರೆ, ರಾಜ್ಯಪಾಲರಿಗೆ ಒಪ್ಪಿಗೆ ನೀಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಇದು ನಮ್ಮ ಸಾಂವಿಧಾನಿಕ ಚೌಕಟ್ಟಿನಲ್ಲಿ ನಿಗದಿಪಡಿಸಲಾದ ಕಾರ್ಯವಿಧಾನವಾಗಿದೆ. ಅವರು ಇನ್ನೂ ಒಪ್ಪಿಗೆ ನೀಡದಿದ್ದರೆ ಅಥವಾ ಒಪ್ಪಿಗೆ ನೀಡಲು ವಿಫಲವಾದರೆ, ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫಲ್ಯ” ಎಂದು ರೋಹಟಗಿ ವಾದಿಸಿದ್ದಾರೆ.
ಎರಡನೇ ಸುತ್ತಿನಲ್ಲಿ ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡುವುದಕ್ಕೆ ಬದ್ಧರು ಎಂಬುವುದಕ್ಕೆ ಸಾಂವಿಧಾನಿಕ ನಿಬಂಧನೆಗಳು ಬಹಳ ಸ್ಪಷ್ಟವಾಗಿವೆ ಎಂದು ರೋಹಟಗಿ ಹೇಳಿದ್ದಾರೆ.
ಸರ್ಕಾರದ ಪರ ವಾದ ಮಂಡಿಸಿದ ಮತ್ತೊಬ್ಬರು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, “ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವ ಆಯ್ಕೆಯನ್ನು ಮೊದಲ ಹಂತದಲ್ಲಿಯೇ ಮಾಡಬೇಕಾಗಿತ್ತು. ಮರು ಪರಿಶೀಲನೆಗೆ ಕಳುಹಿಸಿದ ಬಳಿಕ ಅದನ್ನು ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ.
ಮಸೂದೆಯನ್ನು ಮರು ಮಂಡಿಸಿದ ಅನುಮೋದನೆ ಪಡೆದ ಬಳಿ ರಾಜ್ಯಪಾಲರಿಗೆ ಕಳುಹಿಸಿದರೆ, ಅದಕ್ಕೆ ಒಪ್ಪಿಗೆ ನೀಡುವುದನ್ನು ಬಿಟ್ಟು ರಾಜ್ಯಪಾಲರಿಗೆ ಬೇರೆ ದಾರಿ ಇಲ್ಲ. ಎರಡನೇ ಸುತ್ತಿನಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 6ರಕ್ಕೆ ವಿಚಾರಣೆಯನ್ನು ಮುಂದೂಡಿದೆ. ತಮಿಳುನಾಡು ಸರ್ಕಾರದ ಪರ ವಕೀಲರು ಮತ್ತು ನಂತರ ರಾಜ್ಯಪಾಲರನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ವಾದವನ್ನು ಆಲಿಸುವುದಾಗಿ ಹೇಳಿದೆ.
ರಾಜ್ಯಪಾಲ ರವಿ ಅವರು ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರ 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ರಾಜ್ಯ ವಿಧಾನಸಭೆಯು ರಾಜ್ಯಪಾಲ ರವಿ ಅವರು ಹಿಂದಿರುಗಿಸಿದ 10 ಮಸೂದೆಗಳನ್ನು ಮರು ಅಂಗೀಕರಿಸಿದ ಬಳಿಕ ರಾಜ್ಯಪಾಲ ಮತ್ತು ಸರ್ಕಾರದ ನಡುವೆ ತಿಕ್ಕಾಟ ಶುರುವಾಗಿದೆ.
ಡಿಸೆಂಬರ್ 13, 2023ರಂದು, ಆಡಳಿತದ ವ್ಯವಹಾರಗಳು ಮುಂದುವರಿಯಬೇಕು ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ತಮಿಳುನಾಡು ವಿಧಾನಸಭೆ ಮರು ಅನುಮೋದಿಸಿರುವ ಮತ್ತು ರಾಜ್ಯಪಾಲ ರವಿ ಅವರ ಒಪ್ಪಿಗೆಗೆ ಕಳುಹಿಸಿರುವ ಮಸೂದೆಗಳಿಗೆ ರಾಷ್ಟ್ರಪತಿ ಸಹಿ ಹಾಕುವುದನ್ನು ತಡೆಯಲು ಬಯಸುವುದಿಲ್ಲ ಎಂದಿತ್ತು.
ಕುಂಭ ಮೇಳ ಕಾಲ್ತುಳಿತದಲ್ಲಿ 2,000 ಜನರು ಸಾವನ್ನಪ್ಪಿದ್ದಾರೆ : ಸಂಸದ ಸಂಜಯ್ ರಾವತ್


