ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ನಕಲಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಆಗಸ್ಟ್ 18ರ ಮಂಗಳವಾರ ಅವರ ದೆಹಲಿ ಮನೆಯಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಸಂಬಂಧಿಸಿದಂತೆ ಯುಪಿ ಪೊಲೀಸರು ಕನೋಜಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವುದು ಇದು ಮೂರನೇ ಬಾರಿಯಾಗಿದೆ. ಮಫ್ತಿನಲ್ಲಿದ್ದ ಪೊಲೀಸರು ಬಂಧಿಸಿ ವಸಂತ್ ವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
‘ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ಲಕ್ನೋಗೆ ಕರೆದೊಯ್ಯಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಕನೋಜಿಯಾ “ದ್ವೇಷವನ್ನು ಹರಡಲು ಹಿಂದೂ ಸೇನೆಯ ಮುಖಂಡ ಸುಶೀಲ್ ತಿವಾರಿ ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಫೋಟೋವನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ್ದಾರೆ” ಎಂದು ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಎಫ್‌ಐಆರ್ ಆರೋಪಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ, 153 ಬಿ, 420, 465, 468, 469 ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಿವಾರಿ ಅವರ ಫೇಸ್‌ಬುಕ್ ಪೋಸ್ಟ್ ಯುಪಿಎಸ್‌ಸಿಯಲ್ಲಿ ಇಸ್ಲಾಮಿಕ್ ಅಧ್ಯಯನಕ್ಕೆ ಬದಲಾಗಿ ವೈದಿಕ ಅಧ್ಯಯನಗಳು ತಕ್ಷಣ ಬದಲಾಯಿಸಬೇಕೆಂದು ಒತ್ತಾಯಿಸಿದೆ.
ಕನೋಜಿಯಾ ಟ್ವೀಟ್ ಮಾಡಿದ ಫೋಟೋದಲ್ಲಿ, ಚಿತ್ರ ಮತ್ತು ಹಿನ್ನೆಲೆ ಒಂದೇ ರೀತಿ ಕಾಣುತ್ತದೆ. ಆದರೆ, “ತಿವಾರಿ ಆದೇಶದ ಪ್ರಕಾರ, ರಾಮ ಮಂದಿರದೊಳಗೆ ಯಾವುದೇ ಶೂದ್ರ, ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಗಳಿಗೆ ಪ್ರವೇಶವಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಕನೋಜಿಯಾ ಟ್ವೀಟ್ ಮಾಡಿದ್ದಾರೆ.

2019 ರಲ್ಲಿ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಮದುವೆಯಾಗಲು ಬಯಸುತ್ತೇನೆ’ ಎಂದು ಹೇಳಿಕೊಂಡ ಮಹಿಳೆಯ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಕನೋಜಿಯಾನನ್ನು ಬಂಧಿಸಲಾಗಿತ್ತು.
ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ “ಆಕ್ಷೇಪಾರ್ಹ ಟ್ವೀಟ್” ಮಾಡಿದ್ದಕ್ಕಾಗಿ ದಿ ವೈರ್ ನ ಮಾಜಿ ವರದಿಗಾರ ಕನೋಜಿಯಾ ಅವರನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ


