ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ (89) ಅವರು ಇಂದು (ಜೂನ್ 22) ಬೆಳಗಿನ ಜಾವ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು, ಅಮೆರಿಕನ್ ಡಾಲರ್ಸ್ ಕಾಲೋನಿಯ ತಮ್ಮ ಪುತ್ರಿ ಆರತಿ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಂಪನಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10 ರಿಂದ ರವೀಂದ್ರ ಕಲಾ ಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ರಂಗ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್ ಹಾಗೂ ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ಕಮಲಾ ಹಂಪನಾ ಅವರು 28 ಅಕ್ಟೋಬರ್ 1935ರಲ್ಲಿ ಜನಿಸಿದರು. ತುಮಕೂರಿನಲ್ಲಿ ಶಾಲಾ ಶಿಕ್ಷಣ ಹಾಗೂ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿ, 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಬೆಂಗಳೂರು ಮತ್ತು ಮೈಸೂರಿನ ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿ ಸೇವೆ ಸಲ್ಲಿಸಿದ್ದರು.
2003ರಲ್ಲಿ ಮೂಡುಬಿದಿರೆಯಲ್ಲಿ ಜರುಗಿದ 71ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.
ಕಥಾ ಸಂಕಲನಗಳಾದ ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ- ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿ ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳು ಸೇರಿ ಹಲವು ಕೃತಿಗಳನ್ನು ಕಮಲಾ ಹಂಪನ ರಚಿಸಿದ್ದಾರೆ.
ಕಮಲಾ ಹಂಪನಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಾಬಾ ಆಮ್ಟೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಡಾಕ್ಟರೇಟ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಅನುಪಮಾ ನಿರಂಜನ ಪ್ರಶಸ್ತಿ, ಸಿದ್ದಾಂತಕೀರ್ತಿ ವಿದ್ವತ್ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ : ರೇಣುಕಾಸ್ವಾಮಿ ಮೊಬೈಲ್ ಪತ್ತೆಗೆ ಪೌರ ಕಾರ್ಮಿಕರ ಬಳಕೆ: ಸಮಾಜ ಕಲ್ಯಾಣ ಇಲಾಖೆಯಿಂದ ಬಿಬಿಎಂಪಿಗೆ ನೋಟಿಸ್


