ಜನವರಿ 26 ರಂದು ರೈತರ ಗಣರಾಜ್ಯೋತ್ಸವ ಟ್ರಾಕ್ಟರ್ ಪರೇಡ್ ಸಮಯದಲ್ಲಿ ನಡೆದ ಅಹಿತಕರ ಘಟನೆ ಪ್ರಕರಣದಲ್ಲಿ ದೆಹಲಿ ಪೊಲೀಸರು 122 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ 80 ವರ್ಷದ ಗುರುಮುಖ್ ಸಿಂಗ್ ಅವರನ್ನೂ ಬಂಧಿಸಲಾಗಿದೆ.
ಗುರುಮುಖ್ ಸಿಂಗ್ ಬಂಧಿತರಲ್ಲಿ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದು, ಮಾಜಿ ಸೈನಿಕರಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಗುರುಮುಖ್ ಅವರನ್ನು ಜನವರಿ 29 ರಂದು ಮುಖರ್ಜಿ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಜಿ ಸೈನಿಕರಾಗಿರುವ 80 ವರ್ಷದ ಗುರುಮುಖ್ ಸಿಂಗ್ ಮೂರು ದಶಕಗಳ ಹಿಂದೆ ಸೈನ್ಯದಿಂದ ನಿವೃತ್ತರಾಗಿದ್ದರು. ಫತೇಘಡ್ ಸಾಹಿಬ್ ಜಿಲ್ಲೆಯ ಶಮಾಸ್‌ಪುರ ಗ್ರಾಮದ ಸಣ್ಣ ಕೃಷಿಕರಾಗಿರುವ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
“ಅವರು ಮೊದಲ ದಿನದಿಂದ ಕೃಷಿ ಕಾನೂನುಗಳಿಗೆ ವಿರುದ್ಧವಾಗಿದ್ದರು ಹಾಗೂ ಅವುಗಳನ್ನು ರದ್ದು ಪಡಿಸಬೇಕೆಂದು ಅವರು ಬಯಸಿದ್ದರು. ಅದಕ್ಕಾಗಿ ಅವರು ದೆಹಲಿಯ ಸಿಂಘು ಗಡಿಯಲ್ಲಿ ಮೊದಲಿನಿಂದಲೂ ಹೋರಾಟ ನಿರತರಾಗಿದ್ದಾರೆ. ಅವರು ಮೂರು ದಶಕಗಳ ಹಿಂದೆ ಸೈನ್ಯದಿಂದ ಸುಬೇದಾರ್ ಆಗಿ ನಿವೃತ್ತರಾಗಿದ್ದು, ಶಿಸ್ತುಬದ್ಧ ಜೀವನವನ್ನು ನಡೆಸುತ್ತಾರೆ” ಎಂದು ಗ್ರಾಮದ ಸರ್ಪಂಚ್ ಹರ್ಪಿಂದರ್ ಸಿಂಗ್ ಹೇಳಿಕೆಯನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ಗುರುಮುಖ್ ಅವರ ಹಿರಿಯ ಮಗ ಜಸ್ಬೀರ್ ಸಿಂಗ್ ಇಟಲಿಯಲ್ಲಿ ವಾಸಿಸುತ್ತಿದ್ದು, ಅವರ ಕಿರಿಯ ಮಗ ಕುಲ್ಬೀರ್ ಸಿಂಗ್, ಗುರುಮುಖ್ ಅವರ ಹಳ್ಳಿಯಿಂದ 12 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದಾರೆ. ಗುರುಮುಖ್ ತಮ್ಮ ಪತ್ನಿ, ತಮ್ಮ ಹಿರಿಯ ಮಗನ ಪತ್ನಿ ಹಾಗೂ ಅವರ ಮಗನೊಂದಿಗೆ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ
“ಅವರ ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅವರನ್ನು ಬಂಧಿಸಲಾಗಿದೆ ಎಂಬುವುದು ನಮಗೆ ಆಶ್ಚರ್ಯವಾಗಿದೆ” ಎಂದು ಗ್ರಾಮಸ್ಥರು ಹೇಳಿದ್ದಾರೆ. ಬಂಧಿತ ಗುರುಮುಖ್ ಅವರನ್ನು ಬೆಂಬಲಿಸಿ ಗ್ರಾಮಸ್ಥರು ದೆಹಲಿಗೆ ತೆರಳಲಿದ್ದು, “ಅಲ್ಲಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ, ಅವರು ಶೀಘ್ರದಲ್ಲೇ ಮನೆಗೆ ಬರಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಗುರುಮುಖ್ ಅವರನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ, ಬಂಧನಕ್ಕೊಳಗಾದ ಅವರಿಗೆ ಕಾನೂನು ನೆರವು ನೀಡಲು ಈಗಾಗಲೆ ವಕೀಲರನ್ನು ನೇಮಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಮಧ್ಯೆ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ, ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಎಎಪಿ ಮತ್ತು ರೈತ ಸಂಘವಾದ ಎಸ್ಎಡಿ (ಮನ್) ಬಂಧಿತ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಹರಿಯಾಣ: ರೈತ ಹೋರಾಟ ಬೆಂಬಲಿಸಿ ಜೆಜೆಪಿ ಪಕ್ಷ ತೊರೆದ ಮುಖಂಡ


