ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಮೇ 26ರಂದು 6 ತಿಂಗಳು ತುಂಬುತ್ತಿರುವ ಹಿನ್ನೆಲೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಕರಾಳ ದಿನ ಆಚರಣೆಗೆ ಕಾಂಗ್ರೆಸ್ ಸೇರಿದಂತೆ 12 ಪ್ರಮುಖ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.
ರೈತರಿಗೆ ಮಾರಕವಾಗುವ ವಿವಾದಿತ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಕಳೆದ ಆರು ತಿಂಗಳಿಂದ ದೆಹಲಿಯ ಸಿಂಘು, ಟಿಕ್ರಿ, ಶಹಜನ್‌ಪುರ ಮತ್ತು ಗಾಝಿಪುರ್ ಗಡಿಗಳಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೇ 26 ರಂದು ತಮ್ಮ ಮನೆ, ವಾಹನಗಳು ಮತ್ತು ಅಂಗಡಿಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಲು ರೈತ ಮುಖಂಡರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ನವ್‌ಜೋತ್ ಸಿಂಗ್ ಸಿಧು ತಮ್ಮ ಮನೆ ಮೇಲೆ ಕಪ್ಪು ಧ್ವಜ ಹಾರಿಸುವ ಮೂಲಕ ರೈತರ ಕರೆಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಮೇ 26 ಕ್ಕೆ ಪ್ರತಿಭಟನಾ ಗಡಿಗಳಲ್ಲಿ ಕರಾಳ ದಿನ: ದೆಹಲಿಗೆ ಹೊರಟ ಅನ್ನದಾತರು
Punjab MLA Navjot Singh Sidhu puts up a black flag at his residence in Patiala (pic 1) and Amritsar (pic 2) in support of farmers protesting against the three farm laws pic.twitter.com/fJuTOgKZNq
— ANI (@ANI) May 25, 2021
ಕಾಂಗ್ರೆಸ್ ಸೇರಿ 12 ವಿಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಸೇರಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡ (ಜೆಡಿಎಸ್), ಶರದ್ ಪವಾರ್ (ಎನ್‌ಸಿಪಿ), ಮಮತಾ ಬ್ಯಾನರ್ಜಿ (ಟಿಎಂಸಿ), ಉದ್ಧವ್ ಠಾಕ್ರೆ (ಶಿವಸೇನೆ), ಎಂ.ಕೆ.ಸ್ಟಾಲಿನ್ (ಡಿಎಂಕೆ), ಸೀತಾರಾಮ್ ಯೆಚೂರಿ (ಸಿಪಿಐಎಂ)ಹೇಮಂತ್ ಸೊರೆನ್ (ಜೆಎಂಎಂ), ಫಾರೂಕ್ ಅಬ್ದುಲ್ಲಾ (ಜೆಕೆಪಿಎ), ಅಖಿಲೇಶ್ ಯಾದವ್ (ಎಸ್‌ಪಿ), ತೇಜಸ್ವಿ ಯಾದವ್ (ಆರ್‌ಜೆಡಿ), ಡಿ ರಾಜ (ಸಿಪಿಐ) ಬೆಂಬಲ ವ್ಯಕ್ತಪಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
’ನಮ್ಮ ಅನ್ನದಾತರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವುದರಿಂದ ರಕ್ಷಿಸಲು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ. ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದಂತೆ ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸಬೇಕು. ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಕಾನೂನು ಜಾರಿಗೊಳಿಸಿ ಎಂದು 12 ವಿಪಕ್ಷಗಳು ಆಗ್ರಹಿಸಿವೆ.
ಮಳೆಯ ಮಧ್ಯೆಯೇ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ನಮ್ಮೊಂದಿಗೆ ಮಾತುಕತೆ ಪ್ರಾರಂಭಿಸಿ ಮತ್ತು ಬೇಡಿಕೆಗಳನ್ನು ಈಡೇರಿಸಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು- ಹೇಗಿದೆ ಪ್ರತಿಭಟನಾ ನಿರತ ಗಡಿಗಳಲ್ಲಿನ ಪರಿಸ್ಥಿತಿ..?


