ರೈತ ಹೋರಾಟದ ವರದಿಗಾರಿಕೆಯ ವೇಳೆ ಸುಳ್ಳು ವರದಿ ಮಾಡಿದ್ದಕ್ಕಾಗಿ ಝೀ ನ್ಯೂಸ್ ಚಾನಲ್ ವಿರುದ್ದ ಸಲ್ಲಿಸಲಾಗಿದ್ದ ದೂರನ್ನು News Broadcasting and Digital Standards Authority (NBDSA) ಪರಿಶೀಲನೆ ನಡೆಸಿ ಸುದ್ದಿ ಸಂಸ್ಥೆಗೆ ಛೀಮಾರಿ ಹಾಕಿದೆ. ಮಾತ್ರವಲ್ಲದೆ, ರೈತ ಹೋರಾಟದ ವಿರುದ್ದ ಪ್ರಸಾರ ಮಾಡಲಾಗಿದ್ದ, ಸುಳ್ಳು ವರದಿಗಳ ವೀಡಿಯೊಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಸೂಚನೆ ನೀಡಿದೆ.
ಝೀ ನ್ಯೂಸ್ 2021 ರ ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆಯನ್ನು ‘ಖಲಿಸ್ತಾನಿಗಳಿಗೆ’ ಲಿಂಕ್ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. 2020 ರ ದೆಹಲಿ ಗಲಭೆ ಪ್ರಕರಣದ ಕುರಿತು ಟೈಮ್ಸ್ ನೌ ನಡೆಸಿದ ಎರಡು ಕಾರ್ಯಕ್ರಮಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು NBDSA ತಿಳಿಸಿದೆ.
2021 ರ ಗಣರಾಜ್ಯೋತ್ಸವದಂದು ನಡೆಯಲು ಘೋಷಿಸಿದ್ದ ಟ್ಯ್ರಾಕ್ಟರ್ ರ್‍ಯಾಲಿ ರೈತರ ಪ್ರತಿಭಟನೆಯನ್ನು ಝೀ ನ್ಯೂಸ್ “ತಾಲ್ ಥೋಕ್ ಕೆ: ಖಲಿಸ್ತಾನ್ ಸೆ ಕಬ್ ಸಾವಧಾನ್ ಹೋಗಾ ಕಿಸಾನ್?” (ಖಲಿಸ್ತಾನ್ ಬಗ್ಗೆ ರೈತರು ಯಾವಾಗ ಎಚ್ಚರವಹಿಸುತ್ತಾರೆ?) ಮತ್ತು “ತಾಲ್ ಥೋಕ್ ಕೆ: ನಹೀ ಮಾನೆ ಕಿಸಾನ್ ತೋ ಕ್ಯಾ ಗಣರಾಜ್ಯೋತ್ಸವದ ಪರ ಹೋಗಾ ‘ಗೃಹ ಯುದ್ಧ’?” (ರೈತರು ಒಪ್ಪದಿದ್ದರೆ ಗಣರಾಜ್ಯೋತ್ಸವದಂದು ‘ಅಂತರ್ಯುದ್ಧ’ ನಡೆಯುವುದೇ?) ಎಂಬ ಎರಡು ಕಾರ್ಯಕ್ರಮ ಮಾಡಿ ಖಲಿಸ್ತಾನಿಗಳಿಗೆ ಲಿಂಕ್ ಮಾಡುವ ಪ್ರಯತ್ನ ಮಾಡಿತ್ತು. ಈ ಕಾರ್ಯಕ್ರಮ ಜನವರಿ 19 ಮತ್ತು ಜನವರಿ 20, 2021 ರಂದು ಝೀ ನ್ಯೂಸ್‌ನಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಝೀ ನ್ಯೂಸ್ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂದು NBDSA ತಿಳಿಸಿದೆ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!
ಈ ಎರಡೂ ಸುದ್ದಿಗಳ ವಿರುದ್ದ ದೂರುದಾರ ಇಂದ್ರಜಿತ್ ಘೋರ್ಪಡೆ ಎಂಬುವವರು NBDSAಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ ಜೀ ನ್ಯೂಸ್ 19.1.2021 ಮತ್ತು 20.1.2021. ರಂದು ಪ್ರಸಾರ ಮಾಡಿದ ಸುದ್ದಿಗಳು ಆಕ್ಷೇಪಾರ್ಹವಾಗಿದ್ದು, ಇವು NBDA ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಹೇಳಿದ್ದರು.
ದೂರಿನ ವಿಚಾರಣೆ ನಡೆಸಿರುವ NBDSA ಜೀ ನ್ಯೂಸ್‌ಗೆ ವಿಡಿಯೋಗಳನ್ನು ಡಿಲೀಟ್ ಮಾಡಲು ಸೂಚಿಸಿದ್ದು, ಈ ವಿಡಿಯೋಗಳು ಈ ಕೆಳಗಿನ NBDSA ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ:
- ವರದಿ ಮಾಡುವುದು ವೀಕ್ಷಕರಲ್ಲಿ ಸಂವೇದನಾಶೀಲನೆಯನ್ನು ತೊಡೆದು ಹಾಕಬಾರದು, ಭಯ, ಸಂಕಟ ಅಥವಾ ಅನಗತ್ಯ ಭಯವನ್ನು ಸೃಷ್ಟಿಸಬಾರದು.
- ಯಾವುದೇ ವಿವಾದಾತ್ಮಕ ಸಾರ್ವಜನಿಕ ಸಮಸ್ಯೆಯ ಸಂದರ್ಭದಲ್ಲಿ ಯಾವುದಾದರೂ ಒಂದು ಬದಿಯವರಿಗೆ ಅಡ್ಡಿಪಡಿಸುವ ಉದ್ದೇಶಕ್ಕಾಗಿ ಸುದ್ದಿಗಳನ್ನು ಆಯ್ಕೆ ಮಾಡಬಾರದು.
- ಸುದ್ದಿ ಪ್ರಸಾರಕ್ಕೂ ಮುನ್ನ, ಸಾಧ್ಯವಾದರೆ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಬೇಕು.
- ಸತ್ಯಗಳು ಸ್ಪಷ್ಟವಾಗಿ ಭಿನ್ನವಾಗಿರಬೇಕು. ಅವುಗಳು ಅಭಿಪ್ರಾಯ, ವಿಶ್ಲೇಷಣೆ ಮತ್ತು ಕಾಮೆಂಟ್‌ಗಳೊಂದಿಗೆ ಬೆರೆಸಬಾರದು.
- ಸತ್ಯದ ವಿರುದ್ದ ವಿದ್ದಲ್ಲಿ, ಅಂತಹ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಬೇಕು, ಸತ್ಯದ ಸರಿಯಾದ ಆವೃತ್ತಿಯ ಪ್ರಸಾರಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಬೇಕು.
- ಸಮತೋಲಿತ ವರದಿಗಾಗಿ, ಪ್ರಸಾರಕರು ತಟಸ್ಥವಾಗಿರಬೇಕು. ವಿಶೇಷವಾಗಿ ವಿವಾದಾತ್ಮಕ ವಿಷಯದ ಕುರಿತು ಯಾವುದೇ ನಿರ್ದಿಷ್ಟವಾದ ದೃಷ್ಟಿಕೋನಕ್ಕೆ ಅನಗತ್ಯ ಪ್ರಾಮುಖ್ಯತೆಯನ್ನು ನೀಡಬಾರದು.
- ರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವ ವರದಿಯನ್ನು ಮಾಡಬಾರದು.
- ಮೂಢನಂಬಿಕೆಯನ್ನು ನಂಬಿಕೆ ವಿಷಯವೆಂದು ಪ್ರಚಾರ ಮಾಡಬಾರದು.
ಝೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳು NBDAಯ ಮೇಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಅಲ್ಲದೆ, ಈ ಕಾರ್ಯಕ್ರಮಗಳಲ್ಲಿ ಸಾಮಾಜಿಕ-ಮಾಧ್ಯಮದಿಂದ ಪರಿಶೀಲಿಸದ ಮಾರ್ಪಾಡು ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಝೀ ವಾಹಿನಿಯ ಈ ಕಾರ್ಯಕ್ರಮಗಳಲ್ಲಿ, ಡಿಸೆಂಬರ್ 2020ರಲ್ಲಿ ಜರ್ಮನಿಯಲ್ಲಿ ನಡೆದ ಚಾರಿಟಿ ಈವೆಂಟ್ ಸಂದರ್ಭದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಟ್ರಾಕ್ಟರುಗಳ ವೀಡಿಯೊವನ್ನು, ಪ್ರತಿಭಟನಾನಿರತ ರೈತರು ಜನವರಿ 26 ರಂದು ನಡೆಸಲಿರುವ ಟ್ರ್ಯಾಕ್ಟರ್-ಮಾರ್ಚ್‌ಗೆ ಸಿದ್ಧವಾಗುತ್ತಿರುವ ಟ್ರಾಕ್ಟರ್‌ಗಳು ಎಂದು ಪ್ರಸಾರ ಮಾಡಲಾಗಿತ್ತು. ಇದರ ಬಗ್ಗೆ ಹಲವು ಏಜೆನ್ಸಿಗಳು ಫ್ಯಾಕ್ಟ್‌ಚೆಕ್ ನಡೆಸಿ, ಪರಿಶೀಲನೆ ನಡೆಸಿವೆ. ಆದರೂ, ತನ್ನ ವೀಕ್ಷಕರನ್ನು ದಾರಿ ತಪ್ಪಿಸಿದ್ದಕ್ಕಾಗಿ ಝೀ ನ್ಯೂಸ್ ಪ್ರಸಾರಕರು ಇನ್ನೂ ಕ್ಷಮೆಯಾಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್ ವೇದಿಕೆಯಲ್ಲಿ ABP ಚಾನೆಲ್ ವರದಿಗಾರನ ರಾಜೀನಾಮೆ!
ಜೊತೆಗೆ ಕೆಂಪು ಕೋಟೆಯಿಂದ ಭಾರತದ ತ್ರಿವರ್ಣ ಧ್ವಜವನ್ನು ತೆಗೆದುಹಾಕಲಾಗಿದೆ ಎಂದು ಝೀ ನ್ಯೂಸ್ ಸುಳ್ಳು ವರದಿ ಮಾಡಿದೆ ಎಂದು ಪ್ರಾಧಿಕಾರವು ಕಂಡು ಹಿಡಿದಿದೆ. ಝೀ ನ್ಯೂಸ್ ರೈತರ ಪ್ರತಿಭಟನೆಗಳನ್ನು ಖಲಿಸ್ತಾನಿಗಳಿಗೆ ಸಂಬಂಧಿಸಿ ಪ್ರಸಾರ ಮಾಡಿದ ಮೂರು ವೀಡಿಯೊಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
News Broadcasting and Digital Standards Authority (NBDSA) finds that #ZeeNews violated code of ethics in three videos by linking #FarmersProtests to Khalistanis & by falsely reporting that Indian flag was removed from Red Fort. NBDSA asks the videos to be taken down.#Farmers pic.twitter.com/TJiYbuQAHb
— Live Law (@LiveLawIndia) November 23, 2021
ಈ ಎಲ್ಲಾ ಅಂಶಗಳನ್ನು ಗಮನಿಸಿರುವ NBDSA, ಝೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳ ಬಗ್ಗೆ ತನ್ನ ಅಸಮ್ಮತಿಯನ್ನು ಸೂಚಿಸಿದೆ. ಅಲ್ಲದೆ, ಪ್ರಸಾರ ಮಾಡಲಾಗಿರುವ ಆ ಎರಡೂ ವೀಡಿಯೊಗಳು ಚಾನಲ್‌ನ ವೆಬ್‌ಸೈಟ್ ಅಥವಾ YouTube ಅಥವಾ ಯಾವುದೇ ಇತರ ಲಿಂಕ್‌ಗಳಲ್ಲಿ ಇನ್ನೂ ಲಭ್ಯವಿದ್ದರೆ, ತಕ್ಷಣವೇ ತೆಗೆದುಹಾಕಬೇಕು ಮತ್ತು ಆ ಬಗ್ಗೆ 7 ದಿನಗಳಲ್ಲಿ NBDSA ಗೆ ಲಿಖಿತ ರೂಪದಲ್ಲಿ ದೃಢೀಕರಿಸಬೇಕು ಎಂದು ನಿರ್ದೇಶಿಸಿದೆ.
ಯಾವುದೇ ಸುದ್ದಿಯನ್ನು ವರದಿ ಮಾಡುವಾಗ ಜಾಗರೂಕತೆ ಮತ್ತು ಎಚ್ಚರಿಕೆಯನ್ನು ವಹಿಸಬೇಕು. ಪತ್ರಿಕಾ ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳ ಮೂಲಭೂತ ತತ್ವಗಳನ್ನು ಅನುಸರಿಸಬೇಕು ಅಲ್ಲದೆ, ಸರಿಯಾದ ನಿಖರತೆ ಮತ್ತು ನಿಷ್ಪಕ್ಷಪಾತದ ತತ್ವ, ಪ್ರಸಾರದ ಸಂದರ್ಭದಲ್ಲಿ ಮಾಡಿದ ಗಮನಾರ್ಹ ತಪ್ಪುಗಳನ್ನು ತಕ್ಷಣವೇ ಸರಿಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಮಾತ್ರವಲ್ಲದೆ, ಮುಂದೆ ಪ್ರಸಾರ ಮಾಡಲಾಗುವ ಸುದ್ದಿಗಳಿಗೆ ಟ್ಯಾಗ್‌ಲೈನ್‌ಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ಚಿತ್ರಗಳು/ಛಾಯಾಚಿತ್ರಗಳ ಬಳಕೆಯನ್ನು ಪ್ರಸಾರ ಮಾಡಲು/ಪ್ರಕಟಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಿದೆ.
ಇತ್ತ ದುಬೈನ ಚಾರ್ಟರ್ಡ್ ಅಕೌಂಟೆಂಟ್‍ಗಳ ಅಬುಧಾಬಿ ಸಂಘ ಝೀ ನ್ಯೂಸ್ ನಿರೂಪಕ ಸುಧೀರ್ ಚೌಧರಿಯನ್ನು ಎಮಿರೇಟ್ಸ್‌ಗೆ ಸ್ವಾಗತಿಸಲು ಸಿದ್ಧವಾಗಿತ್ತು. ಆದರೆ, ತೀವ್ರ ಟೀಕೆಗಳಿಂದಾಗಿ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ.


