ಒಕ್ಕೂಟ ಸರ್ಕಾರ ವಿವಾದಿತ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಷ್ಟ್ರ ರಾಜಧಾನಿಯನ್ನು ನೆರೆಯ ರಾಜ್ಯಗಳಿಗೆ ಸಂಪರ್ಕಿಸುವ ಹೆದ್ದಾರಿಗಳನ್ನು ನಿರ್ಬಂಧಿಸಿರುವುದರ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೆದ್ದಾರಿಗಳನ್ನು ಹೀಗೆ ಶಾಶ್ವತವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಒಕ್ಕೂಟ ಸರ್ಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸಿತು. ಇವುಗಳು ರೈತರಿಗೆ ಮಾರಕ ಎಂದ ರೈತರು ಇವುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಳೆದ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
“ಸಮಸ್ಯೆಗಳ ಪರಿಹಾರವು ನ್ಯಾಯಾಂಗ ಸ್ವರೂಪ, ಆಂದೋಲನ ಅಥವಾ ಸಂಸತ್ತಿನ ಚರ್ಚೆಗಳ ಮೂಲಕ ಮಾಡಬಹುದು. ಆದರೆ, ಹೆದ್ದಾರಿಗಳನ್ನು ಹೇಗೆ ನಿರ್ಬಂಧಿಸಬಹುದು..? ಅದು ಶಾಶ್ವತವಾಗಿ ಹೇಗೆ ಸಾಧ್ಯ…? ಇದು ಯಾವಾಗ ಕೊನೆಗೊಳ್ಳುತ್ತದೆ..?” ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ನ್ಯಾಯಪೀಠ ಪ್ರಶ್ನಿಸಿದೆ.
ಇದನ್ನೂ ಓದಿ: ರೈತರ ಪ್ರತಿಭಟನಾ ಗಡಿಗಳಲ್ಲಿ ಮೊಳಗಿದ ಹುತಾತ್ಮ ಭಗತ್ ಸಿಂಗ್ ಘೋಷಣೆಗಳು
ಸುಪ್ರೀಂ ಕೋರ್ಟ್ ನೊಯ್ಡಾ ನಿವಾಸಿ ಮೊನಿಕ್ಕಾ ಅಗರವಾಲ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಮೊದಲು ದಿಲ್ಲಿಯನ್ನು ತಲುಪಲು 20 ನಿಮಿಷಗಳಾಗುತ್ತಿತ್ತು. ಆದರೆ, ಈಗ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಜೊತೆಗೆ ಯುಪಿ ಗೇಟ್ ಬಳಿಯ ಪ್ರತಿಭಟನೆಗಳಿಂದಾಗಿ ಪ್ರದೇಶದ ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರ ನ್ಯಾಯಪೀಠ, ಹೆದ್ದಾರಿಗಳನ್ನು ಮುಕ್ತಗೊಳಿಸಲು ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿರುವ ನಟರಾಜ್, ಪ್ರತಿಭಟನಾ ನಿರತ ರೈತರೊಂದಿಗೆ ಸಭೆ ಕರೆದಿದ್ದೇವೆ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಪೀಠವು, “ನಾವು ಕಾನೂನನ್ನು ಹಾಕಬಹುದು. ಆದರೆ ಕಾನೂನನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುದು ನಿಮ್ಮ ಕೆಲಸವಾಗಿದೆ. ನ್ಯಾಯಾಲಯವು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಅದನ್ನು ಕಾರ್ಯಗತಗೊಳಿಸಬೇಕಾಗಿರುವುದು ಕಾರ್ಯಾಂಗದ ಕೆಲಸ” ಎಂದು ಹೇಳಿದೆ. ನ್ಯಾಯಾಲಯವು ಪ್ರಕರಣವನ್ನು ಅಕ್ಟೋಬರ್ 4 ಕ್ಕೆ ಮುಂದೂಡಿದೆ.
ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿರುವ ರೈತರು ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್ ಮತ್ತು ರಾಜಸ್ಥಾನದ ಗಡಿಗಳಲ್ಲಿ ಕಳೆದ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರದ ಮುಂದಿನ ಗುರಿ ಮಾಧ್ಯಮಗಳು, ನೀವು ಉಳಿಯಬೇಕಿದ್ದರೇ ನಮ್ಮ ಜೊತೆಯಾಗಿ: ರಾಕೇಶ್ ಟಿಕಾಯತ್


