ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಮತ್ತು ಎಂಎಸ್‌ಪಿ ಖಾತ್ರಿಗೆ ಹೊಸ ಕಾಯ್ದೆ ಜಾರಿಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ಅಭಾದಿತವಾಗಿ ಮುಂದುವರೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ನವೆಂಬರ್ 22 ರಂದು ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ ನಡೆಯಲಿದೆ, ಸೆಪ್ಟಂಬರ್ 29 ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಮೋರ್ಚಾದ ಮುಖಂಡರಾದ ಬಲ್ಬೀರ್ ಸಿಂಗ್ ದಲ್ಲೆವಾಲ್ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಕಾಯ್ದೆಗೊಂಡ ನಂತರವಷ್ಟೇ ನಾವು ಹಿಂದಿರುತ್ತೇವೆ. ಜತೆಗೆ ಎಂಎಸ್‌ಪಿ ಖಾತ್ರಿಗಾಗಿ ಕಾಯ್ದೆ ಜಾರಿಗೊಳಿಸಬೇಕಿದೆ. ಹೋರಾಟ ನಿರತ ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಆಗ ಮಾತ್ರವೇ ನಾವು ಹೋರಾಟ ಕೊನೆಗೊಳಿಸುತ್ತೇವೆ. ಹಾಗಾಗಿ ನಮ್ಮ ಹಕ್ಕೊತ್ತಾಯಗಳನ್ನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 19 ರಂದು ತಾವು ಜಾರಿಗೆ ಬಂದಿದ್ದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ಇದೇ ಬುಧವಾರ ಕ್ಯಾಬಿನೆಟ್ ಈ ಕುರಿತು ಸಭೆ ಸೇರಿ ನಿರ್ಣಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಲ್ಲಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಮಸೂದೆ ಮಂಡಿಸಬಹುದು.
ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಲಕ್ನೋದಲ್ಲಿ ನಿಗದಿಯಂತೆ ಕಿಸಾನ್ ಮಹಾಪಂಚಾಯತ್ ನಡೆಯಲಿದೆ. ಅದೇ ರೀತಿ ನವೆಂಬರ್ 26 ರಂದು ಹೋರಾಟದ ಒಂದು ವರ್ಷದ ನೆನಪಿಗೆ ಎಲ್ಲಾ ಗಡಿಗಳಲ್ಲಿ ಹೆಚ್ಚಿನ ರೈತರು ಸೇರಿ ಕಾರ್ಯಕ್ರಮ ನಡೆಸುತ್ತಾರೆ. ನವೆಂಬರ್ 29 ರಂದು ಪಾರ್ಲಿಮೆಂಟ್ ಚಲೋ ನಡೆಯಲಿದೆ ಎಂದು ಸಿಂಘು ಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಲ್ಬೀರ್ ಸಿಂಗ್ ದಲ್ಲೆವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?


