ಏಕಪಕ್ಷೀಯವಾದ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಮೂರು ಕೃಷಿ ಸಂಬಂಧಿ ಬಿಲ್ಲುಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿರುವುದನ್ನು, ಅದಕ್ಕೆ ಅಧ್ಯಕ್ಷೀಯ ಒಪ್ಪಿಗೆಯೂ ದೊರೆತಿರುವುದನ್ನು ಮಹಿಳಾ ಕಿಸಾನ್ ಅಧಿಕಾರ ಮಂಚ್ (MAKAAM) ಸಾರಾಸಗಟಾಗಿ ವಿರೋಧಿಸುತ್ತದೆ. ಈ ಕಾಯ್ದೆಗಳನ್ನು ರೈತರ ಹೆಸರಿನಲ್ಲಿ ಜಾರಿಗೊಳಿಸಿದ್ದರೂ ಸಹ, ಇದು ರೈತರಿಗೆ ಯಾವ ರೀತಿ ಲಾಭದಾಯಕವಾಗಿವೆಯೆಂಬುದಕ್ಕೆ ಯಾವುದೇ ಪುರಾವೆಯನ್ನು ನೀಡದೆ, ಕೇವಲ ಕೃಷಿ ಕಾರ್ಪೋರೇಟ್ ಬ್ಯುಸಿನೆಸ್‍ಗಳಿಗೆ ಅನುಕೂಲವಾಗುಂತೆ ಅಣಿಮಾಡಿಕೊಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಕಾಯಿದೆಗಳು ಬಹುತೇಕ ಮಹಿಳಾ ರೈತರಿಗೆ ಪ್ರತಿಕೂಲವಾಗಿಯೂ, ಅಸಮಾನವಾಗಿಯೂ ಪರಿಣಾಮ ಬೀರುತ್ತವೆ. ರೈತ ಮಹಿಳೆಯರು ಭಾರತೀಯ ಕೃಷಿ ವಲಯದ ಬಹುಸಂಖ್ಯಾತ ಸಣ್ಣ ಮತ್ತು ಅತಿಸಣ್ಣ ರೈತಾಪಿ ವರ್ಗವನ್ನು ಪ್ರತಿನಿಧಿಸುತ್ತಾರೆ. ಹಾಗು ತಮ್ಮ ಉಳಿವಿಗಾಗಿ ಮತ್ತು ಜೀವನೋಪಾಯಕ್ಕಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಕೃಷಿ ಕೂಲಿಕಾರ್ಮಿಕರಾಗಿ ದುಡಿಯುತ್ತಿರುವವರು ಇದೇ ಮಹಿಳೆಯರು. ಭಾರತದಲ್ಲಿ ಮಹಿಳಾ ರೈತರು ಈಗಾಗಲೇ ಹಲವು ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ: ಅವರನ್ನು ರೈತರನ್ನಾಗಿ ಗುರುತಿಸುವಿಕೆಯ ಕೊರತೆ, ಭೂಮಿ, ನೀರು, ಅರಣ್ಯ ಮುಂತಾದ ಪ್ರಮುಖ ಸಂಪನ್ಮೂಲಗಳ ಮೇಲೆ ಅಸಮಾನ ಹಕ್ಕುಗಳು, ಕೃಷಿ ವ್ಯವಸ್ಥೆಗೆ ಸಂಬಂಧಿಸಿದ ಬೆಂಬಲ ವ್ಯವಸ್ಥೆಗಳು ಮತ್ತು ಸೇವೆಗಳ ವಿಷಯಗಳಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಳಗಿನ ಪ್ರವೇಶವಾಕಾಶದಲ್ಲಿ ತಾರತಮ್ಯ ಇತ್ಯಾದಿ. ಸಾಲ, ಒಳಸುರಿಗಳು, ಸಬ್ಸಿಡಿಗಳು, ಬಜೆಟ್‍ಗಳು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡುವುದು ಇತ್ಯಾದಿ ಅಂಶಗಳ ಮೇಲೆ ಇತ್ತೀಚಿನ ಮೂರು ಕಾಯ್ದೆಗಳು ಅವರುಗಳನ್ನು ಇನ್ನೂ ಅಪಾಯಕ್ಕೆ ಗುರಿ ಮಾಡುತ್ತಿವೆ ಹಾಗು ಜೀವನೋಪಾಯಕ್ಕೆ ಕುತ್ತು ತರುತ್ತವೆ.
ಈ ಕಾಯ್ದೆಗಳು ಮಹಿಳಾ ರೈತರ ಮೇಲೆ ನೇರವಾಗಿ ಅಡ್ಡಪರಿಣಾಮ ಬೀರುತ್ತವೆಯಾದರು, ಇದರ ಹೊಡೆತ ಮತ್ತು ಪರಿಣಾಮ ಮಹಿಳಾ ಕೃಷಿ ಕೂಲಿ ಕಾರ್ಮಿಕರ ಮೇಲೆ ತೀವ್ರವಾಗಿ ಇರುತ್ತದೆ. ಮಾರುಕಟ್ಟೆಯಲ್ಲಿ ಬೆಲೆ ಅಸ್ಥಿರವಾಗುವ ಸಂದರ್ಭದಲ್ಲಿ ಇವರುಗಳ ದಿನಗೂಲಿಯು ಅಸ್ಥಿರವಾಗಲಿದೆ. ಅಲ್ಲದೆ ಈ ಮೂರು ಕಾಯ್ದೆಗಳು ನೈಸರ್ಗಿಕ ಸಂಪನ್ಮೂಲಗಳು, ಆಹಾರ ಭದ್ರತಾ ನೆಲೆ ಮತ್ತು ಅರಣ್ಯ ಪ್ರದೇಶಗಳ ಸಮೃದ್ಧ ಜೀವವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಕೃಷಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಹಸ್ತಕ್ಷೇಪದ ಅಗತ್ಯ ಇನ್ನೂ ಹೆಚ್ಚಾಗಬೇಕಿರುವ ಸಮಯದಲ್ಲಿ ಈ ಮೂರೂ ಕಾಯಿದೆಗಳು ಅದನ್ನು ಬೈಪಾಸ್ ಮಾಡುತ್ತ ದೂರ ಹೋಗಿವೆ.

ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ (ಉತ್ತೇಜನ ಹಾಗೂ ಬೆಂಬಲ) ಸುಗ್ರೀವಾಜ್ಞೆ 2020
ಮೊದಲಿಗೆ ಈ ಕೆಲವು ಸಂಗತಿಗಳನ್ನು ಗಮನಿಸೋಣ;
* ಸದ್ಯಕ್ಕೆ ಭಾರತದಲ್ಲಿ ರೈತರು ಮಾರಾಟ ಮಾಡಬಹುದಾದ ಹೆಚ್ಚುವರಿ ಕೃಷಿ ಬೆಳೆಯನ್ನು ನಿಯಂತ್ರಿತ ಮಾರುಕಟ್ಟೆ ಯಾರ್ಡ್‍ಗಳ ಹೊರಗೆ ಮಾರಾಟ ಮಾಡಲಾಗುತ್ತದೆ ಮತ್ತು ಎನ್‍ಎಸ್‍ಎಸ್‍ಒ (National Sample Survey Office) ದತ್ತಾಂಶವು ಇದನ್ನು ಪ್ರತಿಬಿಂಬಿಸುತ್ತದೆ. ಕೇವಲ 40%ರಷ್ಟು ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯ ರೈತರು ಮಾತ್ರ ಮಾರುಕಟ್ಟೆಗಾಗಿ ಮಂಡಿಗಳಿಗೆ ಹೋಗುತ್ತಾರೆ.
* ಭಾರತದಲ್ಲಿ ಸುಮಾರು 14 ಕೋಟಿ ಕೃಷಿ ಕುಟುಂಬಗಳಿವೆ. ಅವುಗಳಿಗೆ ಇರೋದು 6700ಕ್ಕಿಂತ ಕಡಿಮೆ ಸಂಖ್ಯೆಯ ನಿಯಂತ್ರಿತ ಮಾರುಕಟ್ಟೆಗಳು – 2339 ಪ್ರಮುಖ ಮಾರುಕಟ್ಟೆಗಳು ಮತ್ತು 4276 ಉಪ-ಮಾರುಕಟ್ಟೆ ಯಾರ್ಡ್‍ಗಳು. ಇವನ್ನು ನಿರ್ವಹಿಸುವ 2284 ಎಪಿಎಂಸಿಗಳು. ಗೊತ್ತುಪಡಿಸಿದ ದಿನಗಳಲ್ಲಿ ಸಾಪ್ತಾಹಿಕ ಮಾರುಕಟ್ಟೆಗಳಾಗಿ ಕೆಲಸ ನಿರ್ವಹಿಸುವ 23000 ಗ್ರಾಮೀಣ ಸಂತೆಗಳಿವೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳು: ವಿವರಣೆ ಕೋರಿ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್
* ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರ ಹತ್ತಿರ ಮಾರಾಟ ಮಾಡಲು ಹೆಚ್ಚುವರಿ ಸರಕುಗಳು ಇರುವುದೇ ಕಡಿಮೆ ಮತ್ತು ಸಾಂಸ್ಥಿಕ ಸಾಲ ವ್ಯಾಪ್ತಿಯ ಕೊರತೆಯಿಂದಾಗಿ, ಈ ರೈತರು ಸ್ಥಳೀಯ ವ್ಯಾಪಾರಿಗಳಿಗೆ (ಇವರುಗಳೇ ಬೀಜಗಳು ಮತ್ತು ಕೃಷಿ-ರಾಸಾಯನಿಕ ಒಳಸುರಿ ವಿತರಕರಾಗಿಯೂ ಕಾರ್ಯನಿರ್ವಹಿಸುತ್ತಾರೆ) ಮಾರಾಟ ಮಾಡಲು ಮಾತ್ರ ಶಕ್ತರಿರುತ್ತಾರೆ ಮತ್ತು ಅವರನ್ನಷ್ಟೇ ಆಶ್ರಯಿಸುತ್ತಾರೆ.
* ಈಗಾಗಲೆ ರೈತರಿಗೆ ಮಾರಾಟ ಮಾಡಲು ಸಾಕಷ್ಟು ದಾರಿಗಳು ಸಾಧ್ಯವಾಗಿವೆ; ಆದಾಗ್ಯೂ, ಅವೆಲ್ಲವಕ್ಕೂ ಅಗತ್ಯವಾದ ಒತ್ತಾಸರೆ ದೊರಕುತ್ತಿಲ್ಲ. ಇವುಗಳಲ್ಲಿ ಎಪಿಎಂಸಿ ಮಾರುಕಟ್ಟೆಗಳು, ಪರವಾನಗಿ ಪಡೆದ ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರು, ಕೆಲವು ರಾಜ್ಯಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಮತ್ತು ಅವರ ಒಕ್ಕೂಟಗಳ ಮೂಲಕ ಕಾರ್ಯನಿರ್ವಹಿಸುವ ರಾಜ್ಯ ಖರೀದಿ ಏಜೆನ್ಸಿಗಳು, ಫಾರ್ಮ್‍ಗೇಟ್ ವ್ಯಾಪಾರಿಗಳು, ಸಂಸ್ಕಾರಕಗಳು (ಕಬ್ಬಿನ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಅಥವಾ ಅಕ್ಕಿ ಗಿರಣಿಗಳು ಅಥವಾ ಹತ್ತಿ ಜಿನ್ನರ್‍ಗಳು ಅಥವಾ ನೂಲುವ ಗಿರಣಿಗಳು), ಒಳಸುರಿ ವಿತರಕರು/ಸಾಲದಾತರು, ಗ್ರಾಮೀಣ ಸಂತೆಗಳು, ಗ್ರಾಹಕರಿಗೆ ನೇರ ವ್ಯಾಪಾರೋದ್ಯಮ ನಡೆಸುವ ರೈತು ಪೇಟೆಗಳು/ಉಳವರ್ ಸಂತೈ/ಅಪ್ನಿ ಮಂಡಿ ಇತ್ಯಾದಿ ಸಹಕಾರಿ ಸಮಾಜಗಳ ಮತ್ತು ಹೊಸ ಯುಗದ FPOಗಳು (ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್), ಕಿರಾಣಿ ವ್ಯಾಪಾರಿಗಳಿಗೆ ನೇರ ಮಾರುಕಟ್ಟೆ, ಒಪ್ಪಂದ ಕೃಷಿ ಘಟಕಗಳು ಇತ್ಯಾದಿ ಸೇರಿವೆ.
* ಇ-ನ್ಯಾಮ್ ಪೋರ್ಟಲ್‍ನಲ್ಲಿ 1.55 ಕೋಟಿ ರೈತರು/ಮಾರಾಟಗಾರರು, 68000+ ಕಮಿಷನ್ ಏಜೆಂಟರು ಮತ್ತು 1.22+ ಲಕ್ಷ ವ್ಯಾಪಾರಿಗಳು/ಖರೀದಿದಾರರು ಮಾರ್ಚ್ 2019ರೊಳಗೆ ನೋಂದಾಯಿಸಿಕೊಂಡಿದ್ದಾರೆ, ಇದರಲ್ಲಿ 650+ ಎಫ್‍ಪಿಸಿಗಳು (ಫಾರ್ಮರ್ ಪ್ರೊಡ್ಯೂಸರ್ ಕಂಪನಿ)/ ಎಫ್‍ಪಿಒಗಳು ಸೇರಿವೆ. ಆದಾಗ್ಯೂ, ಈ ಪೋರ್ಟಲ್ ಮೂಲಕ ಅಂತರರಾಜ್ಯ ವ್ಯಾಪಾರವು ನಿರಾಶಾದಾಯಕ ಎಂಬಂತೆ ಕಡಿಮೆ ಮಟ್ಟದಲ್ಲಿದೆ ಮತ್ತು ಎಂಎಸ್‍ಪಿಗಳು (ಕನಿಷ್ಠ ಬೆಂಬಲ ಬೆಲೆಗಳು) ಈ ದಾರಿಯಲ್ಲಿ ಯಾವತ್ತಿಗೂ ರೈತರಿಗೆ ಸಂದಾಯವಾಗಿಲ್ಲ.
* ತಮ್ಮ ಸದಸ್ಯರಿಗಾಗಿ ನಿಜವಾಗಿ ಕಾರ್ಯನಿರ್ವಹಿಸುವ ಹೊಸ ಯುಗದ ರೈತ ಉತ್ಪಾದಕ ಸಂಸ್ಥೆಗಳ (ಎಫ್‍ಪಿಒ) ಸಂಖ್ಯೆ ವಿವಾದಾಸ್ಪದವಾಗಿಯೇ ಉಳಿದಿದೆ ಮತ್ತು ಸಾಮಾನ್ಯವಾಗಿ ಉಲ್ಲೇಖಿಸಲ್ಪಟ್ಟಿದ್ದಕ್ಕಿಂತ ಈ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಇದೆ. ಅದು ಆರು ಸಾವಿರ. ಮಹಿಳೆಯರು ಹೇಗಾದರೂ ಎಪಿಎಂಸಿ ನಿವ್ವಳದಿಂದ ಹೊರಗಿದ್ದಾರೆ, ಹಾಗಾದರೆ ನಾವು ಯಾಕೆ ಕಾಳಜಿ ವಹಿಸಬೇಕು?

ಖಾಸಗಿ ವ್ಯಾಪಾರಿಗಳಿಂದ ಶೋಷಣೆಗೆ ಒಳಗಾಗಿದ್ದರೂ, ಮಹಿಳಾ ಕೃಷಿಕರಿಗೆ ಬೀಜ, ಸಾಲ ಮತ್ತು ಅವಳ ಸಣ್ಣ ಪ್ರಮಾಣದ ಉತ್ಪನ್ನಗಳನ್ನು ಖರೀದಿಸಿ ಆಗಲೇ ಹಣವನ್ನು ಪಾವತಿಸುವ ಮೂಲಕ ಅಗತ್ಯವಿರುವ ಬೆಂಬಲವನ್ನು ಎಪಿಎಂಸಿಯವರು ಒದಗಿಸುತ್ತಿದ್ದಾರೆ. ಹೊಸ ಕಾಯಿದೆಯು ಮಂಡಿ ಹೊರಗಿನ ವ್ಯಾಪಾರ ಪ್ರದೇಶವನ್ನು ವ್ಯಾಖ್ಯಾನಿಸುತ್ತದೆ. ಇದು ಹೊಸ ಮತ್ತು ದೊಡ್ಡ ಖಾಸಗಿ ಆಟಗಾರರನ್ನು ಕರೆತರುವ ಸಾಧ್ಯತೆಯಿದೆ. ಅವರು ಸಣ್ಣ ರೈತರೊಂದಿಗೆ ವ್ಯಾಪಾರದಲ್ಲಿ ಲಾಭವನ್ನು ಕಾಣದಿರಬಹುದು ಹಾಗಾಗಿ ಅಂತಿಮವಾಗಿ ಹೊಸ ಮಧ್ಯವರ್ತಿಗಳ ಮೂಲಕ ಉತ್ಪನ್ನಗಳ ಒಟ್ಟುಗೂಡಿಸುವಿಕೆಯತ್ತ ಅವರು ಸಾಗುತ್ತಾರೆ. ವ್ಯಾಪಕವಾದ ಲಿಂಗ ತಾರತಮ್ಯ ಮತ್ತು ತಮ್ಮ ಚಲನೆಯ ಮೇಲಿನ ಹಲವು ನಿರ್ಬಂಧಗಳ ಜೊತೆಗೆ, ಮಹಿಳಾ ರೈತರು ತಮಗೆ ಈಗಾಗಲೇ ಪರಿಚಿತವಾಗಿದ್ದ ಅಥವಾ ಪ್ರವೇಶ ಅವಕಾಶವನ್ನು ಹೊಂದಿದ್ದಕ್ಕಿಂತ ವಿಭಿನ್ನ ಪರಿಸರ ವ್ಯವಸ್ಥೆಯೊಂದಿಗೆ ಮುಂದೆ ಜೂಜಬೇಕಾಗುತ್ತದೆ.
ಅನೇಕ ಮಹಿಳಾ ರೈತರು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರೂ, ಎಪಿಎಂಸಿಯ ಅಸ್ತಿತ್ವವು ಬೆಲೆಗಳನ್ನು ಎಂಎಸ್‍ಪಿಗಳಿಗೆ ಎಲ್ಲೋ ಹತ್ತಿರದಲ್ಲಿ ಇಡುತ್ತಿತ್ತು. ಆದ್ದರಿಂದ ಶೋಷಣೆಯ ಅಂತರವನ್ನು ಕಡಿಮೆಗೊಳಿಸುವತ್ತ ಖಾತ್ರಿಪಡಿಸುತ್ತಿತ್ತು. ಎಪಿಎಂಸಿಗಳು ಬೆಲೆಗಳನ್ನು ಘೋಷಣೆಯ ಮೂಲಕ ಸಂಜ್ಞೆ ಮಾಡುತ್ತಿದ್ದರಿಂದ ಮಾತುಕತೆಯ ಮೂಲಕ ಚೌಕಾಸಿ ಮಾಡಲು ಅನುವು ಮಾಡಿಕೊಡುತ್ತಿತ್ತು.
ಎಪಿಎಂಸಿಗಳ ಆಚೆಗಿನ ವ್ಯಾಪಾರಿಗಳನ್ನು ನಿಯಂತ್ರಿಸುವ ಮತ್ತು ಎಪಿಎಂಸಿಯಲ್ಲಿನ ವೈಪರೀತ್ಯಗಳನ್ನು ಸರಿಮಾಡಿ ಹೆಚ್ಚು ಮಹಿಳಾ ರೈತ ಸ್ನೇಹಿಯನ್ನಾಗಿ ಮಾಡುವ ಸುಧಾರಣೆಗಳನ್ನು ತರುವ ಬದಲು, ಎಪಿಎಂಸಿಯನ್ನು ಬೈಪಾಸ್ ಮಾಡಲು ಮತ್ತು ಛಿದ್ರಗೊಂಡ ಹಾಗು ಅನಿಯಂತ್ರಿತ ಮಾರುಕಟ್ಟೆಗಳ ಯುಗವನ್ನು ತರಲು ಈ ಕಾಯಿದೆಯು ಪ್ರಸ್ತಾಪಿಸಿದೆ.
ಫಾರ್ಮ್‍ಗೇಟ್ (ಹೊಲದ ಹತ್ತಿರವೇ ಹೋಗಿ ಫಸಲನ್ನು ಕೊಳ್ಳುವುದು) ಸಂಗ್ರಹಣೆಯನ್ನು ಬಲಪಡಿಸಲು ತೆಲಂಗಾಣವು ಮಹಿಳೆಯರ ಸ್ವ-ಸಹಾಯ ಗುಂಪುಗಳನ್ನು ಬಳಸುತ್ತದೆ. ಆಂಧ್ರಪ್ರದೇಶವು ಆದಿವಾಸಿ ಮತ್ತು ಇತರ ರೈತರಿಗೆ ನೇರ ಮಾರುಕಟ್ಟೆ ಮಾರ್ಗಗಳನ್ನು ರೈತರಿಗೆ ಬಜಾರ್‌ಗಳ ರೂಪದಲ್ಲಿ ಅನುವು ಮಾಡಿಕೊಟ್ಟಿದೆ. ಅಲ್ಲಿ ಮಹಿಳಾ ರೈತರಿಗೆ ವಿಶೇಷವಾಗಿ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದೆ. ಆದರೆ, ಕೇಂದ್ರ ಕಾಯಿದೆಗಳು ಈ ದಿಕ್ಕಿನಲ್ಲಿಲ್ಲ. ಮಾರುಕಟ್ಟೆಯಲ್ಲಿ ತನ್ನ ಹಸ್ತಕ್ಷೇಪ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಸರ್ಕಾರವು ಹಿಂತೆಗೆದುಕೊಳ್ಳುವುದು ಎಂದರೆ ಸಣ್ಣ ಮತ್ತು ಅತಿಸಣ್ಣ ರೈತರನ್ನು ಕೃಷಿ ವ್ಯವಹಾರದಲ್ಲಿರುವ – ಅಗ್ರಿಬ್ಯುಸಿನೆಸ್ಸ್‌ನ ದೊಡ್ಡ ತಿಮಿಂಗಲಗಳ ಕೃಪೆಗೆ ಬಿಟ್ಟಂತೆಯೇ.
ಅಂತರ್ಜಲಕ್ಕಾಗಿ ಹೂಡಿಕೆಯ ವೆಚ್ಚಗಳು ಸೇರಿದಂತೆ ಕಾಲಾನಂತರದಲ್ಲಿ ಹೆಚ್ಚಾದ ಕೃಷಿ ವೆಚ್ಚವನ್ನು ಪೂರೈಸಲು ಎಂಎಸ್‍ಪಿಗಳು ವಿಫಲವಾಗಿವೆ ಎಂದು ನೀತಿ ಆಯೋಗದ 2016ರ ಅಧ್ಯಯನವು ತೋರಿಸುತ್ತದೆ. ಎಂಎಸ್‍ಪಿಗಳ ಬಗ್ಗೆ, ಕೇಂದ್ರೀಕೃತ ಖರೀದಿ ಏಜೆನ್ಸಿಗಳ ಬಗ್ಗೆ ಮಾಹಿತಿಯ ಕೊರತೆ, ಹೊಲಗಳಿಂದ ದೂರ ಇರುವ ಖರೀದಿ ಏಜೆನ್ಸಿಗಳಿಗೆ ಉತ್ಪನ್ನಗಳನ್ನು ಸಾಗಿಸಲು ಹೆಚ್ಚಿನ ವೆಚ್ಚಗಳು, ಪಾವತಿ ವಿಳಂಬ, ತೂಕದ ಭ್ರಷ್ಟಾಚಾರ, ಭೂ ದಾಖಲೆಗಳಿಗೆ ಒತ್ತಾಯಿಸುವುದು ಬಹುಸಂಖ್ಯಾತ ರೈತರು ಇಂದು ಎದುರಿಸುತ್ತಿರುವ ದೊಡ್ಡ ಅಡೆತಡೆಗಳು.
ಇದನ್ನೂ ಓದಿ: ಸಾಂವಿಧಾನಿಕ ವ್ಯಾಪ್ತಿಯಲ್ಲಿ ಕೃಷಿ ಮಸೂದೆಗಳನ್ನು ರಾಜ್ಯಗಳು ನಿರಾಕರಿಸಲಿ: ಸೋನಿಯಾ ಗಾಂಧಿ
ದೊಡ್ಡ ರೈತರು ಮಾತ್ರ ಎಂಎಸ್‍ಪಿ ಮತ್ತು ಮುಕ್ತ ಮಾರುಕಟ್ಟೆಗಳೆರಡರ ಲಾಭವನ್ನೂ ಪಡೆದಿದ್ದಾರೆ.
ಮಹಿಳಾ ರೈತರು ಮತ್ತು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ನೀತಿ ಆಯೋಗದ ಅಧ್ಯಯನದ ಕಳವಳಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸರ್ಕಾರ ಈ ಅಧ್ಯಯನದಿಂದ ಹೊರಹೊಮ್ಮಿರುವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಸ್ವಾಮಿನಾಥನ್ ವರದಿ ಶಿಫಾರಸ್ಸು ಮಾಡಿರುವಂತೆ ಎಂಎಸ್‍ಪಿಯನ್ನು ಪರಿಷ್ಕರಿಸುವ ಮತ್ತು ಅದನ್ನು ಖಾತರಿಪಡಿಸುವ ಕೆಲಸಕ್ಕೆ ಮುಂದಾಗಾಬೇಕಿತ್ತು.
ಎಂಎಸ್‍ಪಿ ಮತ್ತು ಖರೀದಿ ಆಡಳಿತವನ್ನು ವಿಕೇಂದ್ರೀಕೃತ ರೀತಿಯಲ್ಲಿ ಬಲಪಡಿಸಬಹುದು, ವಿಸ್ತರಿಸಬಹುದು ಮತ್ತು ಮರುಸೃಷ್ಟಿಸಬಹುದು ಎಂದು ಮಕಾಮ್ ನಂಬುತ್ತದೆ. ಫಾರ್ಮ್‍ಗೇಟ್ ಕೊಳ್ಳುವಿಕೆಯು ಅಕ್ಕಿ ಮತ್ತು ಗೋಧಿಯನ್ನು ಹೊರತುಪಡಿಸಿ ಉಳಿದ ಆಹಾರ ಧಾನ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ಖಾತ್ರಿಪಡಿಸುವ ಸಾರ್ವತ್ರಿಕ ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಸಾಧ್ಯವಾಗಿಸಲು, ಆ ಮೂಲಕ ನಿರ್ಲಕ್ಷಿತ ರೈತರು, ನಿರ್ಲಕ್ಷಿತ ಧಾನ್ಯಗಳು ಮತ್ತು ನಿರ್ಲಕ್ಷಿತ ಪ್ರದೇಶಗಳನ್ನು ಬೆಂಬಲಿಸುತ್ತದೆ. ಇಂತಹ ಕ್ರಮಗಳಿಂದ, ಹಿಂದಿನ ಖರೀದಿ ಆಡಳಿತದಲ್ಲಿ ತಪ್ಪಿನಿಂದಾಗಿರುವ ಪರಿಸರ ಸುಸ್ಥಿರತೆಯ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಬಹುದು.
ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020: ಆಹಾರ ಭದ್ರತೆ ಅಪಾಯದಲ್ಲಿದೆ
ಸಾಂಕ್ರಾಮಿಕ ಸಮಯದಲ್ಲಿ ಪಿಡಿಎಸ್ ಎಲ್ಲಾ ನಾಗರಿಕರಿಗೆ ಆಹಾರ ದೊರಕಿಸುವ ಜೀವಸೆಲೆಯಾಗಿದ್ದು, ಸರ್ಕಾರವು ಇದನ್ನು ಪಿಎಂಜಿಕೆವೈ (Pradhan Mantri Garib Kalyan Yojana) ಅಡಿಯಲ್ಲಿ ಆಹಾರ ಪಡಿತರ ವಿತರಣೆಯ ಪರಿಹಾರವಾಗಿ ಬಳಸುತ್ತಿದೆ.
‘ಅಸಾಮಾನ್ಯ ಸಂದರ್ಭಗಳಲ್ಲಿ’ ಪರಿಣಾಮಕಾರಿಯಲ್ಲದ ನಿಯಂತ್ರಣದ ಬಗ್ಗೆ ಇರುವ ಪ್ರಸ್ತಾಪವನ್ನು ಹೊರತುಪಡಿಸಿ, ಭಾರತದಲ್ಲಿನ ಆಹಾರ ಪೂರೈಕೆ ವ್ಯವಸ್ಥೆಯನ್ನು ನಿಯಂತ್ರಿಸುವ ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ತಂದಿರುವ ಬದಲಾವಣೆಗಳು ಮುಂದೆ ಹಾಹಾಕಾರರವಿದ್ದಾಗ ಹೆಚ್ಚು ದುರ್ಬಲ ವರ್ಗದ ಜನರ ಆಹಾರ ಲಭ್ಯತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. (ಅದೃಶ್ಯವಾಗಿ) ಸಂಗ್ರಹಿಸಿಡಲಾಗುತ್ತದೆ ಮತ್ತು ಕೈಗೆಟುಕುವಂತೆ ಆಗ ಆಹಾರ ಧಾನ್ಯಗಳ ಸಂಗ್ರಹಣೆ ಇರುವುದಿಲ್ಲ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಲಕ್ಷಾಂತರ ಮಕ್ಕಳ ಬೆಳವಣಿಗೆ 38% ಕುಂಠಿತಗೊಂಡಿರುವಾಗ, 50% ಗರ್ಭಿಣಿಯರು (15-49 ವರ್ಷಗಳು) ರಕ್ತಹೀನತೆಯಿಂದ ಬಳಲುತ್ತಿರುವಾಗ, ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸರ್ಕಾರ ತನ್ನ ಪಿಡಿಎಸ್‍ಅನ್ನು ವಿಸ್ತರಿಸಬೇಕು. ಈಗಿನ ಸಾಂಕ್ರಾಮಿಕ ರೋಗವು ಸಾರ್ವಜನಿಕ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯತೆಯನ್ನು ಇನ್ನಿಲ್ಲದಂತೆ ಎಚ್ಚರಿಸಿದೆ. ಕೆಲವು ದೌರ್ಬಲ್ಯಗಳ ಹೊರತಾಗಿಯೂ, ಪಿಡಿಎಸ್ ಮತ್ತು ಎಂಎನ್‍ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಹೇಗೆ ಬಡವರಿಗೆ ಸಂರಕ್ಷಕಗಳಾಗಿವೆ ಎಂಬುದನ್ನು ತೋರಿಸಿಕೊಟ್ಟಿದೆ.
ಅಗತ್ಯ ಸರಕುಗಳ ಕಾಯ್ದೆಯಡಿ, ಶೇಖರಣೆ ಮತ್ತು ಬೆಲೆಗಳ ಮೇಲಿನ ಮೊತ್ತದ ಮೇಲೆ ಕಡಿವಾಣ ಹಾಕುವುದನ್ನು ತೆಗೆದುಹಾಕಿರುವುದು (ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ), ಮಹಿಳೆಯರು, ರೈತರು, ಕೃಷಿ ಕಾರ್ಮಿಕರು ಮತ್ತು ಇತರ ಪಿಡಿಎಸ್‍ನ ಫಲಾನುಭವಿಗಳ ಮೇಲೆ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ.
ಬೆಲೆ ಭರವಸೆ ಮತ್ತು ಕೃಷಿ ಸೇವೆಗಳು ಕುರಿತ ಒಪ್ಪಂದ ಸುಗ್ರೀವಾಜ್ಞೆ 2020
ಬೀಜಗಳು, ಇತರ ಒಳಹರಿವುಗಳು ಮತ್ತು ಮೊದಲೇ ಒಪ್ಪಿದ ಬೆಲೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳು ಈಗಾಗಲೇ ಒಪ್ಪಂದಗಳಿಗೆ ರೈತರಿಗೆ ಅನುವು ಮಾಡಿಕೊಡುತ್ತಿದ್ದವು. ಇಂತಹ ಸಂದರ್ಭದಲ್ಲಿ ದೇಶಾದ್ಯಂತ ಗುತ್ತಿಗೆ ಕೃಷಿಯನ್ನು ಈ ಕಾಯಿದೆ ಕಾನೂನುಬದ್ಧಗೊಳಿಸಲು ಹೊರಟಿದೆ.
ಸಣ್ಣ ಮತ್ತು ಅಲ್ಪ ಪ್ರಮಾಣದ ಹಿಡುವಳಿಗಳ ಮೇಲೆ ಅವಲಂಬಿತವಾಗಿರುವ ಬಹುಪಾಲು ಮಹಿಳಾ ರೈತರ ದೃಷ್ಟಿಕೋನದಿಂದ ನೋಡಿದರೆ, ಈ ಕಾಯ್ದೆ ಪ್ರತಿಪಾದಿಸುವ ನಿಬಂಧನೆಗಳು ಕೃಷಿಕರಿಗೆ ಅಥವಾ ಗುತ್ತಿಗೆದಾರರಿಗೆ ಯಾವುದೇ ಅಧಿಕಾರವನ್ನು ನೀಡುವುದಿಲ್ಲ ಅಥವಾ ವಾಸ್ತವದಲ್ಲಿ ಯಾವುದೇ ರಕ್ಷಣೆ ನೀಡುವುದಿಲ್ಲ!
ಮೊದಲನೆಯದಾಗಿ, ಈ ದೇಶದಲ್ಲಿ ಸಾಮಾನ್ಯವಾಗಿ ಮಹಿಳೆಯರಲ್ಲಿ ಮತ್ತು ನಿರ್ದಿಷ್ಟವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಮಹಿಳೆಯರಲ್ಲಿ ಸಾಕ್ಷರತೆಯ ಮಟ್ಟ ಗಣನೀಯವಾಗಿ ಕೆಳಗಿರುವುದನ್ನು ಗಮನಿಸಿದರೆ, ತಮ್ಮ ಉತ್ಪನ್ನಗಳನ್ನು ಖರೀದಿಸಲು ಅಥವಾ ಇತರ ಸೇವೆಗಳಿಗಾಗಿ ಸಶಕ್ತ ಏಜೆಂಟರುಗಳು, ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಘಟಕಗಳೊಂದಿಗೆ ಮಾಡಿಕೊಳ್ಳಬೇಕಾಗಿ ಬರುವ ಒಪ್ಪಂದಗಳನ್ನು ಅರ್ಥಮಾಡಿಕೊಳ್ಳುವುದು ಅಥವಾ ಅದಕ್ಕಾಗಿ ಮಾತುಕತೆ ನಡೆಸುವುದು (ಲಿಖಿತ) ಅವರಿಗೆ ಕಷ್ಟಸಾಧ್ಯ.
ಇದಲ್ಲದೆ, ಗ್ರಾಮೀಣ ಕೃಷಿ ರಚನೆ ಮಹಿಳಾ ರೈತರು ಮತ್ತು ಕಾರ್ಮಿಕರನ್ನು ತಮ್ಮ ವರ್ಗ, ಜಾತಿ ಮತ್ತು ಲಿಂಗಧಾರಿತವಾಗಿ ನಿರ್ದಿಷ್ಟ ಅನಾನುಕೂಲತೆಗೆ ಒಳಪಡಿಸುತ್ತಿದೆ. ಅಂದರೆ ಯಾವುದೇ ಒಪ್ಪಂದಗಳಿಗೆ ಪ್ರವೇಶಿಸುವಾಗ ಚೌಕಾಶಿ ಮಾಡುವಲ್ಲಿ ಅವರು ದುರ್ಬಲ ಸ್ಥಾನದಲ್ಲಿರುತ್ತಾರೆ.
ಎರಡನೆಯದಾಗಿ, ಮೇಲಿನ ಕಾಯಿದೆಯಲ್ಲಿ ಒದಗಿಸಲಾದ ರಾಜಿ ಅಥವಾ ವಿವಾದ ಮಧ್ಯಸ್ಥಿಕೆ ಚೌಕಟ್ಟು, ಸಾಮಾನ್ಯವಾಗಿ ಸಣ್ಣ ಮತ್ತು ಅಲ್ಪ ರೈತರು ಹಾಗೂ ನಿರ್ದಿಷ್ಟವಾಗಿ ಮಹಿಳಾ ರೈತರ ವಿರುದ್ಧವಿದೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮಹಿಳಾ ರೈತರು ಮತ್ತು ವಿಶೇಷವಾಗಿ ಒಂಟಿಯಾಗಿರುವವರು ಈ ಹೊಸ ಚೌಕಟ್ಟಿನಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಮಯ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಂಡು ನಿಭಾಯಿಸುವ ಸ್ಥಿತಿಯಲ್ಲಿರುವುದಿಲ್ಲ.
ಯಾವುದೇ ಮೇಲ್ಮನವಿಯ ಅಧಿಕಾರ ನೀಡದ ಕಾಯ್ದೆಯ ಈ ಹೊಸ ವಿವಾದ ಪರಿಹಾರ ಚೌಕಟ್ಟು ಲಿಂಗ ಸಂವೇದನಾಶೀಲವಾಗಿಲ್ಲ. ಅಲ್ಲದೆ ವಾಸ್ತವವಾಗಿ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ತಮ್ಮ ಸಮಸ್ಯೆಗಳನ್ನು ಅನುಕೂಲಕರ ರೀತಿಯಲ್ಲಿ ಪರಿಹರಿಸಲು ಲಭ್ಯವಿರುವ ಯಾವುದೇ ಆಯ್ಕೆಯನ್ನು ನೀಡಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರದಿಂದ ಭರವಸೆ ನೀಡಿದ್ದರೂ, ಇದನ್ನು ಈ ಕಾಯ್ದೆಯಲ್ಲಿ ಎಲ್ಲಿಯೂ ಪ್ರಸ್ತಾಪಿಸಲಾಗಿಲ್ಲ ಅಥವಾ ನಮೂದಿಸಿಲ್ಲ. ಗುತ್ತಿಗೆ ಕೃಷಿಯು ಅನೇಕ ಸಂದರ್ಭಗಳಲ್ಲಿ ರೈತರನ್ನು ಹೇಗೆ ವಿಫಲಗೊಳಿಸಿದೆ ಎಂಬುದಕ್ಕೆ ಉದಾಹರಣೆಗಳಿಗೇನೂ ಕೊರತೆಯಿಲ್ಲ. ಈ ಮಾದರಿಗಳನ್ನು ಪ್ರಯೋಗಿಸಿದ ವಿವಿಧ ರಾಜ್ಯಗಳಲ್ಲಿನ ಅನುಭವಗಳು ಕೇಂದ್ರ ಸರ್ಕಾರಕ್ಕೆ ಪಾಠವಾಗಬೇಕಿತ್ತು.
ಇದನ್ನೂ ಓದಿ: ಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ
ಆದ್ದರಿಂದ, ಮಕಾಮ್ ಈ ಕೆಳಗಿನ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡುತ್ತದೆ:
* ಮಧ್ಯಮ ಕಾಲದಿಂದ ದೀರ್ಘಾವಧಿಯಲ್ಲಿ, ರೈತರ ಹಕ್ಕುಗಳನ್ನು ರಕ್ಷಿಸುವುದು, ಮಾರುಕಟ್ಟೆಗಳು ನೀಡಬೇಕಾದ ಕನಿಷ್ಟ ಬೆಲೆಗಳನ್ನು ಖಾತರಿಪಡಿಸುವುದು, ಪ್ರಕೃತಿಗೆ ಹಾನಿಯಾಗದಂತೆ ಇಳುವರಿಯನ್ನು ಸುಧಾರಿಸಲು ಅಗತ್ಯವಾದ ಬೆಂಬಲವನ್ನು ಖಾತರಿಪಡಿಸುವುದು.
* ಕೃಷಿಯಲ್ಲಿ ಪರಿಸರ ಪೂರಕ ತತ್ವಗಳ ಆಧಾರದ ಮೇಲೆ ಬೆಳೆಗಳ ಜೈವಿಕ ವೈವಿಧ್ಯಮಯ ಮಾದರಿಗಳನ್ನು ಉತ್ತೇಜಿಸುವುದು, ಸಮತೋಲನ ಕಾಪಾಡುವ ನೀರಾವರಿ ಒದಗಿಸುವುದು. ಇತರ ಕೃಷಿ ಒಳಹರಿವು ಮತ್ತು ಸುಸ್ಥಿರ ಅಭ್ಯಾಸಗಳಿಗೆ ಬೆಂಬಲ ಒದಗಿಸುವುದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕೃಷಿಯಲ್ಲಿನ ಸುಧಾರಣೆಗಳಿಗಾಗಿ, ಕೃಷಿ ವ್ಯವಹಾರಗಳಲ್ಲದೆ ರೈತರನ್ನು ರಕ್ಷಿಸುವಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳು ಬೇಕಾಗುತ್ತವೆ. ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರು ಈ ಕ್ಷೇತ್ರದ ಬೆನ್ನೆಲುಬಾಗಿರುತ್ತಾರೆ. ಅವರ ಸಾಮರ್ಥ್ಯ ಮತ್ತು ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆಗಳ ಮೂಲಕ ಅವರನ್ನು ರಕ್ಷಿಸಬೇಕಾಗಿದೆ.

ಜೊತಗೆ ಈ ತತ್‍ಕ್ಷಣದ ಅವಧಿಯಲ್ಲಿ, ಮಕಾಮ್ ಮನವಿ ಮಾಡುವುದೇನೆಂದರೆ:
* ರಾಷ್ಟ್ರಪತಿಯವರು ಕಾಯಿದೆಗಳಿಗೆ ನೀಡಿರುವ ತಮ್ಮ ಅನುಮೋದನೆಯನ್ನು ಹಿಂತೆಗೆದುಕೊಳ್ಳುಬೇಕು ಅಥವಾ ಭಾರತ ಸರ್ಕಾರವೇ ಕಾಯಿದೆಗಳನ್ನು ರದ್ದುಗೊಳಿಸಬೇಕು.
* ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರನ್ನು ಬೆಂಬಲಿಸುವತ್ತ ಸರ್ಕಾರ ಗಮನ ಹರಿಸಬೇಕು – ನಗದು ವರ್ಗಾವಣೆ ಮತ್ತು ಸಾಲದ ಮರುಪಾವತಿ ಮುಂದೂಡಿಕೆಯನ್ನು ಇನ್ನೂ ವಿಸ್ತರಿಸುವುದು, ಎಂಎನ್‍ಆರ್‌ಇಜಿಎ ವಿಸ್ತರಿಸುವ, ಬೀಜ ಮತ್ತು ಮಾರುಕಟ್ಟೆ ಬೆಂಬಲವನ್ನು ಪೂರಕವಾಗಿ ಒದಗಿಸುವ ಕೆಲಸಗಳನ್ನು ತುರ್ತಾಗಿ ಮಾಡಬೇಕಿದೆ.
* ಮಾರ್ಕೆಟಿಂಗ್ ಚಾನೆಲ್ ಏನೇ ಇರಲಿ, ರೈತರನ್ನು ಒಳಗೊಂಡ ಎಲ್ಲಾ ಮಾರುಕಟ್ಟೆ ವ್ಯವಹಾರಗಳಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸಬೇಕು. ಇದು ಎಲ್ಲಾ ರೈತರಿಗೆ ಕಾನೂನುಬದ್ಧ ಅರ್ಹತೆಯಾಗಿರಬೇಕು.
* ಸ್ಥಳೀಯ ಮಟ್ಟದಲ್ಲಿ ವ್ಯಾಪಾರ ಮಾಡುವ ಮಹಿಳಾ ರೈತರಿಗೆ ಸುಲಭವಾಗಿ ಪ್ರವೇಶ ನೀಡುವಂತಹ ಸುಧಾರಣೆಗಳನ್ನು ಸರ್ಕಾರ ಎಪಿಎಂಸಿಗಳಲ್ಲಿ ತರಬೇಕು. ಇದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರ ಕೈಗೊಂಡ ಮಾದರಿಯಲ್ಲಿರಬಹುದು – ಗ್ರಾಮ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಗ್ರಹವನ್ನು ಹಸ್ತಾಂತರಿಸುವುದು ಅಥವಾ ನೇರ ಮಾರುಕಟ್ಟೆ ಉಪಕ್ರಮಗಳನ್ನು ಬೆಂಬಲಿಸುವುದಾಗಲಿ ಇರಬಹುದು.
* ಸರ್ಕಾರವು (ಎ) ಅಕ್ಕಿ ಹೊರತಾಗಿ ಏಕದಳ ಧಾನ್ಯಗಳ ಸಂಗ್ರಹ ಸೇರಿದಂತೆ ವಿಕೇಂದ್ರೀಕೃತ ಸಂಗ್ರಹಣೆಯನ್ನು ಉತ್ತೇಜಿಸಬೇಕು; (ಬಿ) ಖರೀದಿ ಕಾರ್ಯಾಚರಣೆಗಳಲ್ಲಿ ಭೌಗೋಳಿಕ ವೈವಿಧ್ಯೀಕರಣವನ್ನು ಖಚಿತಪಡಿಸಬೇಕು; (ಸಿ) ಸಾಕಷ್ಟು ವಿಕೇಂದ್ರೀಕೃತಗೊಂಡ ಹಾಗೂ ಆಧುನಿಕ ಮತ್ತು ವೈಜ್ಞಾನಿಕ ಶೇಖರಣೆಯ ವರ್ಧನೆಗೆ ಗಮನ ಹರಿಸಬೇಕು; (ಡಿ) ಆಹಾರ ಧಾನ್ಯಗಳ ಚಲನೆಗೆ ಹೆಚ್ಚಿನ ಆದ್ಯತೆ ನೀಡುವುದು ಮತ್ತು ಈ ಉದ್ದೇಶಕ್ಕಾಗಿ ಸಾಕಷ್ಟು ಸಂಖ್ಯೆಯ ಸಲಕರಣಗಳನ್ನು ಒದಗಿಸುವುದು; ಉದಾಹರಣೆಗೆ ರೈಲ್ವೆಯ ಸಾಮರ್ಥ್ಯವನ್ನು ವಿಸ್ತರಿಸುವುದರಿಂದ ಆಹಾರ ಧಾನ್ಯಗಳ ಚಲನೆಯನ್ನು, ಹೆಚ್ಚುವರಿ ಶೇಖರಣೆಯ ಪ್ರದೇಶಗಳಿಂದ ಸೇವಿಸುವ ಪ್ರದೇಶಗಳಿಗೆ ವಿಸ್ತರಿಸಲು ಸಾಧ್ಯವಾಗಿಸುತ್ತದೆ.
* ಸ್ಥಳೀಯ ಮಾರುಕಟ್ಟೆ ಸಮಿತಿಗಳಲ್ಲಿ ಮಹಿಳಾ ರೈತರ ಕನಿಷ್ಠ 30% ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಯೋಜನೆಯನ್ನು ರೂಪಿಸಬೇಕು. ಇದಕ್ಕಾಗಿ ಮಕಾಮ್, ಮಹಿಳಾ ರೈತರಿಗೆ ಮಾರುಕಟ್ಟೆಗಳಲ್ಲಿನ ಸುರಕ್ಷಿತ ಪ್ರವೇಶಕ್ಕೆ ಇರುವ ವ್ಯವಸ್ಥಿತ ಅಡೆತಡೆಗಳ ಬಗ್ಗೆ ದೊಡ್ಡ ಪ್ರಮಾಣದ ಅಧ್ಯಯನಕ್ಕೆ ಕರೆ ನೀಡುತ್ತದೆ.
* ಕಡಿಮೆ ಬಡ್ಡಿಗೆ ಹೆಚ್ಚಿನ ಇಕ್ವಿಟಿ ಅನುದಾನ ಮತ್ತು ಮೂಲ ಬಂಡವಾಳವನ್ನು ನೀಡುವ ಮೂಲಕ ಮಹಿಳೆಯರ ಎಫ್‍ಪಿಒಗಳನ್ನು ಉತ್ತೇಜಿಸುವಂತಹ ಸಕ್ರಿಯ ವಾತಾವರಣವನ್ನು ನಿರ್ಮಿಸಿ, ಸ್ಥಳೀಯ ಮಟ್ಟದಲ್ಲಿ ಅವುಗಳನ್ನು ಸಂಘಟಿಸಲು ಪ್ರೋತ್ಸಾಹಿಸುಬೇಕು.
* ಪತ್ರ ಹೊಂದಿರುವ ಭೂಮಾಲೀಕರಿಗೆ ಮಾತ್ರ ಸಂಭಾವನೆ/ಹಣ ನೀಡುವ ಪ್ರಸ್ತುತ ಅಭ್ಯಾಸದ ವಿರುದ್ಧ, ವಿವಿಧ ಬೆಳೆಗಳಿಗೆ ರೈತರಿಗೆ ಸಂಭಾವನೆ ದರವನ್ನು ಖಾತರಿಪಡಿಸುವ ಮತ್ತು ಎಲ್ಲಾ ಪಾವತಿಗಳನ್ನು ರೈತ ಮನೆಗಳಿಗೆ ಜಂಟಿಯಾಗಿ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವ ಪ್ರತ್ಯೇಕ ಕಾನೂನನ್ನು ತರಬೇಕು.
* ಪಿಡಿಎಸ್‍ಅನ್ನು ಸಾರ್ವತ್ರಿಕಗೊಳಿಸಿ ಮತ್ತು ಅದರಲ್ಲಿ ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ತೈಲವನ್ನು ಒಳಗೊಳ್ಳುವಂತೆ ವಿಸ್ತರಿಸಬೇಕು ಮತ್ತು ವಿಕೇಂದ್ರೀಕೃತ ಖರೀದಿ ವ್ಯವಸ್ಥೆಗಳ ಮೂಲಕ ಸಂಭಾವನೆ ದರವನ್ನು ಖಾತರಿಪಡಿಸಬೇಕು.

(ಮಹಿಳಾ ರೈತರ ಹಕ್ಕುಗಳ ವೇದಿಕೆಯ ರಾಜ್ಯ ಸಂಯೋಜಕರಾಗಿರುವ ಕವಿತಾ ಶ್ರೀನಿವಾಸನ್ ಮಹಿಳಾ ಹೋರಾಟಗಾರ್ತಿ ಮತ್ತು ರೈತ ಮಹಿಳೆಯರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಬೆಂಗಳೂರಿನವರಾದ ಕವಿತಾ ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.)