“ನಮ್ಮ ರೈತರ ಭೂಮಿ ಕಸಿದುಕೊಂಡು, ನಮ್ಮ ತೆರಿಗೆಯಿಂದ ನಿರ್ಮಾಣ ಮಾಡಿದ ರಸ್ತೆಗಳಿಗೆ ಈಗಾಗಲೇ ರಸ್ತೆ ತೆರಿಗೆ ಎಂದು ಕಟ್ಟುತ್ತಿದ್ದೇವೆ. ಆದರೂ ಟೋಲ್ ಫೀ ಏಕೆ ಕಟ್ಟಬೇಕು. ಹಗಲು ದರೋಡೆಯನ್ನು ಸರ್ಕಾರ ಡಿಜಿಟಲೀಕರಣ ಮಾಡಿದ್ದು, ಫಾಸ್ಟ್ಯಾಗ್ ಮೂಲಕ ಯೋಜಿತ ದರೋಡೆಗೆ ಇಳಿದಿದೆ” ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಆರೋಪಿಸಿದ್ದಾರೆ.
ಗುರುವಾರ (ಫೆ.18) ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ರಾಥೋಡ್, ಸಾರಿಗೆ ಇಲಾಖೆ ರಸ್ತೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೂ ಟೋಲ್ ಶುಲ್ಕವನ್ನು ಯಾಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ. ರಸ್ತೆ ನಿರ್ಮಾಣ ಕಂಪೆನಿಗಳ ಅಡಿಯಾಳಾಗಿರುವ ಕೇಂದ್ರ ಸರ್ಕಾರ 18 ವರ್ಷ ಇದ್ದ ಟೋಲ್ ಸಂಗ್ರಹ ಗುರಿಯನ್ನು 30 ವರ್ಷಕ್ಕೆ ಏರಿಸಿದೆ. ಇದೊಂದು ಉದಾಹರಣೆ ಸಾಕು ಸರ್ಕಾರದ ಹಗಲು ದರೋಡೆಗೆ ಎಂದರು.
“ದೇಶದಲ್ಲಿ ದಿನವೊಂದಕ್ಕೆ 105 ಕೋಟಿಯಷ್ಟು ಟೋಲ್ ವಸೂಲಿಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ವಸೂಲಿ ಮಾಡಿದ ಹಣ ಎಲ್ಲಿ ಹೋಯಿತು. ಟೋಲ್ ರಸ್ತೆ ಬಳಸಲು ಇಚ್ಚಿಸದವರಿಗೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ರಸ್ತೆ ನಿರ್ಮಾಣ ಕಂಪೆನಿಗಳ ಮೇಲಿದೆ. ಆದರೂ ಬಹುತೇಕ ಕಡೆ ಈ ನಿಯಮ ಪಾಲಿಸಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಟೋಲ್ ಪ್ಲಾಜಾ ಮುತ್ತಿಗೆ, ದೇಶಾದ್ಯಂತ ರೈಲು ತಡೆ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ
ನೆಲಮಂಗಲ-ತುಮಕೂರು ಹೆದ್ದಾರಿ ಅತ್ಯಂತ ಕಳಪೆಯಿಂದ ಗುಣಮಟ್ಟದಿಂದ ಕೂಡಿದ್ದು, ಹೆದ್ದಾರಿ ಎನ್ನುವ ಪದಕ್ಕೆ ಅವಮಾನ ಮಾಡಿದಂತಿದೆ. ಆದರೂ ಟೋಲ್ ಶುಲ್ಕವನ್ನು ಅಮಾನುಷವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬೆರಳೆಣಿಕೆಯಷ್ಟು ರಸ್ತೆಗಳು ಮಾತ್ರ ಟೋಲ್ ಮುಕ್ತವಾಗಿದ್ದು, ಎಲ್ಲಾ ಕಡೆಯೂ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅಲ್ಲದೆ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲ ಬಾರಿ ಅಧಿಕಾರ ಹಿಡಿದಾಗ ಮುನ್ನುಡಿ ಬರೆದಿದ್ದರು. ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸಲು ಜನ ಹಣ ಕಟ್ಟಬೇಕಾದ ದಿನ ದೂರವಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್.ವಿ ಮಾತನಾಡಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಎಲ್ಲಾ ಟೋಲ್ ಪ್ಲಾಜಾಗಳ ಬಂದ್ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ಟೋಲ್‌ಪ್ಲಾಜಾಗಳನ್ನು ವಶಕ್ಕೆ ಪಡೆಯಲಾಗಿದೆ. ಫೆಬ್ರವರಿ 12ರಿಂದ ರಾಜಸ್ಥಾನದ ಟೋಲ್ ಪ್ಲಾಜಾಗಳನ್ನು ಜನರಿಗಾಗಿ ಫ್ರೀ ಮಾಡಲಾಗಿದೆ.
ಇದನ್ನೂ ಓದಿ: ರೈತ ಹೋರಾಟದ ಆಕ್ರೋಶ: ಪಂಜಾಬ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ


