| ಮಾಚಯ್ಯ |

ಯಡಿಯೂರಪ್ಪ ಮತ್ತೆ ಏಕಾಂಗಿಯಾಗಿದ್ದಾರೆ, ಅದೂ ತಾವೇ ಕಟ್ಟಿಬೆಳೆಸಿದ ಬಿಜೆಪಿ ಪಕ್ಷದಲ್ಲಿ! ಸಮಸ್ತ ದಕ್ಷಿಣ ಭಾರತದಲ್ಲೇ ಬಿಜೆಪಿಗೆ ನೆಲೆ ಒದಗಿಸಿಕೊಡುವಲ್ಲಿ ಯಡಿಯೂರಪ್ಪನವರ ಪಾತ್ರ ತುಂಬಾ ದೊಡ್ಡದು. ಆ ಪಕ್ಷವನ್ನು ಸೈದ್ಧಾಂತಿಕ ಕಾರಣಕ್ಕೆ ವಿರೋಧಿಸುವವರಿಗೆ ಈ ವಿಚಾರದಲ್ಲಿ ಅವರ ಮೇಲೆ ಅಸಮಾಧಾನವಿರಬಹುದು. ಆದರೆ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯ ವಿಸ್ತರಣೆಯನ್ನು ಗಮನಿಸುವುದಾದರೆ ಅವರ ಶ್ರಮದ ಬೆವರೇ ಬಿಜೆಪಿಯ ಮೂಲ ಬಂಡವಾಳ. ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಬಿಜೆಪಿಯ ಕೋರ್ ಸಿದ್ಧಾಂತವಾದ ಕೋಮುವಾದವನ್ನು ಸಾಧ್ಯವಾದಷ್ಟು ದೂರವಿಟ್ಟು ಅವರು ಕರ್ನಾಟಕದಲ್ಲಿ ಆ ಪಕ್ಷಕ್ಕೆ ನೆಲೆ ಗಟ್ಟಿಗೊಳಿಸುತ್ತಾ ಬಂದದ್ದು. ಅವರ ಲಿಂಗಾಯತ ಜಾತಿ (ಅಥವಾ ಧರ್ಮ), ಹಾಗೂ ಆ ಲಿಂಗಾಯತರೆಲ್ಲ ಯಡಿಯೂರಪ್ಪನವರನ್ನು `ಇವ ನಮ್ಮವ’ ಎಂದು ಸ್ವೀಕರಿಸಿದ್ದು ಇದಕ್ಕೆ ಪ್ರಮುಖ ಕಾರಣ. ಇವತ್ತಿಗೂ ಬಿಲ್ಲವ, ಬಂಟರಂತಹ ಶೂದ್ರ ಸಮುದಾಯಗಳೇ ಯಥೇಚ್ಛವಾಗಿರುವ ಕರಾವಳಿ ತೀರದಲ್ಲಿ ಸಂಘ ಪರಿವಾರದ ಕೋಮುವಾದ ಬೇರುಬಿಟ್ಟಷ್ಟು ವಿಕಾರವಾಗಿ, ವೇಗವಾಗಿ ಲಿಂಗಾಯತ ಸಮುದಾಯಗಳು ಬಲಾಢ್ಯವಾಗಿರುವ ಉತ್ತರ ಕರ್ನಾಟಕದ ಸೀಮೆಯಲ್ಲಿ ಪಸರಿಸಲು ಸಾಧ್ಯವಾಗಿಲ್ಲ. ಅಲ್ಲಿ ಬಿಜೆಪಿ ಪ್ರಬಲವಾಗಿದ್ದರು ಸಹಾ.

ಇದಕ್ಕೆ ಯಡಿಯೂರಪ್ಪನವರ ಜಾತ್ಯತೀತತೆ ಕಾರಣ ಎನ್ನುವುದು ಈ ಬರಹದ ಇರಾದೆಯಲ್ಲ. ಆದರೆ ಬಸವಾದಿ ಶರಣರ ಛಾಯೆಯಲ್ಲಿ ರೂಪುತಳೆದ ಲಿಂಗಾಯತ ಧರ್ಮಕ್ಕೆ ಬ್ರಾಹ್ಮಣ್ಯ ಲೇಪನದ ಕೋಮುವಾದ ಒಗ್ಗುವ ಸಿದ್ಧಾಂತವಲ್ಲ. ಅಂತಹ `ಲಿಂಗಾಯತ’ದ ಅಂಶ ಇರುವ ಕಾರಣಕ್ಕೆ ಅಂತಲ್ಲದಿದ್ದರು, ಆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕನಾಗುವ ಹಂಬಲಕ್ಕಾದರು ಯಡಿಯೂರಪ್ಪ ಕೋಮುವಾದದಿಂದ ಅಂತರ ಕಾಯ್ದುಕೊಳ್ಳಲೇಬೇಕಾಯ್ತು. ಬಿಜೆಪಿಯನ್ನು ವಿರೋಧಿಸುವವರು ಕೂಡಾ `ಯಡಿಯೂರಪ್ಪನವರಿಂದ ಕೋಮುವಾದಕ್ಕೆ ನೆರವಾಗಿರಬಹುದು, ಆದರೆ ಇತರೆ ಬಿಜೆಪಿ ನಾಯಕರಂತೆ ಅವರು ಪ್ರಖರ ಕೋಮುವಾದಿಯಲ್ಲ’ ಎಂಬ ಮಾತನ್ನು ಒಪ್ಪಿಕೊಳ್ಳುತ್ತಾರೆ.

ಲೋಹಿಯಾ ಚಿಂತನೆ, ಸಮಾಜವಾದ, ಕಾಗೋಡು ಸತ್ಯಾಗ್ರಹಗಳಿಂದಾಗಿ ರೂಪುತಳೆದ ಶಾಂತವೇರಿ ಗೋಪಾಲಗೌಡರು, ಕೋಣಂದೂರು ಲಿಂಗಪ್ಪನವರಂತಹ ಸಮಾಜವಾದಿಗಳ ಪ್ರಭಾವಕ್ಕೆ ಒಳಗಾಗಿದ್ದ ಶಿವಮೊಗ್ಗದಿಂದಲೇ ತನ್ನ ರಾಜಕೀಯ ಆರಂಭಿಸಿದ ಯಡಿಯೂರಪ್ಪನವರಿಗೂ ರೈತ ಹೋರಾಟಗಳೇ ಅನಿವಾರ್ಯ ವೇದಿಕೆಗಳಾದದ್ದರಲ್ಲಿ ಅಚ್ಚರಿಯೇನೂ ಇಲ್ಲ. ಬಗರ್‍ಹುಕುಂ ರೈತರ ಪರವಾಗಿ ನಿಂತದ್ದಾಗಲಿ, 1700 ಜೀತಕಾರ್ಮಿಕರನ್ನು ಸಂಘಟಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾಗಲಿ ಆ ನೆಲಕ್ಕೆ ಅನಿವಾರ್ಯವಾದ ರಾಜಕೀಯ ನಡೆಗಳಾದರು ಯಡಿಯೂರಪ್ಪನವರನ್ನು ಪ್ರಖರ ಕೋಮುವಾದದಿಂದ ತಕ್ಕಷ್ಟು ಹಿಂಸರಿಸುವಲ್ಲು ಪ್ರಮುಖ ಪಾತ್ರ ವಹಿಸಿದ್ದವು. ಅದೇ ಕಾರಣಕ್ಕೆ, ಅವರು ಬಿಜೆಪಿಯಿಂದ ಹೊರಬಂದು 9 ಡಿಸೆಂಬರ್ 2012ರಂದು ಹಾವೇರಿ ನೆಲದಿಂದ ಕೆಜೆಪಿ ಪಕ್ಷಕ್ಕೆ ಅಧಿಕೃತ ಚಾಲನೆ ನೀಡಿದಾಗ ಪ್ರಗತಿಪರರೆನಿಸಿಕೊಂಡಿದ್ದ ಬಹಳಷ್ಟು ರಾಜಕಾರಣಿಗಳು ಮತ್ತು ಸಾಹಿತಿಗಳೂ ಅವರನ್ನು ಬೆಂಬಲಿಸಿದ್ದು, ಭಷ್ಟನ ಇಮೇಜಿನೊಂದಿಗೆ ಯಡಿಯೂರಪ್ಪ ಜೈಲಿಗೆ ಹೋಗಿಬಂದ ಅಪಖ್ಯಾತಿಗೆ ಈಡಾಗಿದ್ದರೂ ಸಹಾ!

ವಿಪರ್ಯಾಸವೆಂದರೆ, ಅಂತಹ ಬಿಜೆಪಿಗೇ ಈಗ ಯಡಿಯೂರಪ್ಪ ಎರಡನೇ ಸಲ ಬೇಡವಾಗಿದ್ದಾರೆ! ಹಿಂದೊಮ್ಮೆ ಸಿಎಂ ಹುದ್ದೆಯಲ್ಲಿದ್ದುಕೊಂಡು ನಡೆಸಿದ ಡಿನೋಟಿಫಿಕೇಷನ್, ಚೆಕ್ ಭ್ರಷ್ಟಾಚಾರ, ಗಣಿ ಹಗರಣಗಳಿಂದಾಗಿ ಪಕ್ಷದ ಆಂತರಿಕ ವಿರೋಧಿಗಳಿಗೆ ಅನಾಯಾಸವಾಗಿ ತುತ್ತಾಗಿದ್ದ ಯಡಿಯೂರಪ್ಪ ಈ ಸಲ ಬಲು ವ್ಯವಸ್ಥಿತ ಹುನ್ನಾರದಿಂದ ಅದೇ ವಿರೋಧಿಗಳ ಎದುರು ಅಸಹಾಯಕ ತುತ್ತಾಗಿ ತನ್ನ ರಾಜಕೀಯ ಜೀವನವನ್ನೇ ಕೊನೆಗಾಣಿಸಿಕೊಳ್ಳುವ ಆತಂಕದಲ್ಲಿದ್ದಾರೆ. ಇದು ಬಿಜೆಪಿಯ ವೆರಿ ಇಂಟರ್ನಲ್ ಮೂಲಗಳಿಂದ ಹೊರಬಂದಿರುವ ಸುದ್ದಿ. ಇತ್ತೀಚೆಗಿನ ಕರ್ನಾಟಕ ಬಿಜೆಪಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದು ನಿಜವೆನ್ನುವುದು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗುತ್ತೆ.

ಹೌದು, `ಇವ ನಮ್ಮವ’ ಎನ್ನುವ ಕಾರಣಕ್ಕೆ ಯಾವ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದು ಲಿಂಗಾಯತ ಸಮುದಾಯ ಆಸೆಹೊತ್ತು ಕೂತಿದೆಯೋ ಅದೇ ಯಡಿಯೂರಪ್ಪರನ್ನು ಇಂಚಿಂಚಾಗಿ ಸಿಎಂ ಗಾದಿಯಿಂದ ಹಿಂದೆ ತಳ್ಳಲಾಗುತ್ತಿದೆ. ಆ ಜಾಗಕ್ಕೆ ಆರೆಸೆಸ್‍ನ ಬಿ.ಎಲ್.ಸಂತೋಷ್ (ಸಂತೋಷ್`ಜಿ’)ರನ್ನು ತರಲು ಸಂಘ ಪರಿವಾರ ಸದ್ದಿಲ್ಲದೆ ಕಸರತ್ತು ಶುರು ಮಾಡಿಕೊಂಡಿದೆ.

ಬಿಜೆಪಿಯ ಮತದಾರರು ಮತ್ತು ತಳಮಟ್ಟದ ಕಾರ್ಯಕರ್ತರ ಮಟ್ಟಿಗೆ ಅಪರಿಚಿತರಂತಿರುವ ಈ ವ್ಯಕ್ತಿ ಆರೆಸೆಸ್ ಮತ್ತು ನಾಯಕತ್ವಗಳ ಮಟ್ಟದಲ್ಲಿ ಬಲು ಪ್ರಭಾವಿ, ಅಷ್ಟೇ ನಾಜೂಕಿನ ತಂತ್ರಗಾರ. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಸಂತೋಷ್ ಇತ್ತೀಚೆಗೆ (ನಿರ್ದಿಷ್ಟವಾಗಿ ಬ್ರಾಹ್ಮಣ ಪ್ರತಿಸ್ಪರ್ಧಿ ಅನಂತ್‍ಕುಮಾರ್ ನಿಧನದ ನಂತರ) ಕರ್ನಾಟಕದ ರಾಜಕಾರಣದಲ್ಲೇ ಹೆಚ್ಚು ಸುದ್ದಿಯಾಗುತ್ತಿರೋದು ಕೇವಲ ಕಾಕತಾಳೀಯ ಅಲ್ಲ. ಅದರ ಹಿಂದೆ ಸ್ಪಷ್ಟ ರಾಜಕೀಯ ಹೆಣಿಗೆಗಳಿವೆ.

ಕರ್ನಾಟಕದ ಚುಕ್ಕಾಣಿ ಹಿಡಿದಿರುವ ಮೈತ್ರಿ ಸರ್ಕಾರ ಎಂಪಿ ಚುನಾವಣೆಯ ನಂತರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗುತ್ತೆ ಎಂಬ ಮಾತುಗಳನ್ನು ಸ್ವತಃ ಬಿಜೆಪಿ ನಾಯಕರೇ ಆಡುತ್ತಿದ್ದಾರೆ. ಅದು ಲೋಕಸಭಾ ಫಲಿತಾಂಶ ಏನಾಗಲಿದೆ ಎನ್ನುವುದರ ಮೇಲೆ ಅವಲಂಭಿಸಿದೆ ಅನ್ನೋದು ಮಾತ್ರ ಸತ್ಯ. ಬಿಜೆಪಿ ಕೇಂದ್ರದಲ್ಲಿ ಇಷ್ಟೇ ಪ್ರಭಾವಿಯಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಆ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಈ ಹಿಂದೆಯೇ ಹಲವು ಬಾರಿ ಆಪರೇಷನ್ ಕಮಲವೆಂಬ ವಿಫಲ ಯತ್ನಗಳನ್ನು ನಡೆಸಿರುವ ಬಿಜೆಪಿ ಸುಮ್ಮನೆ ಕೂರುತ್ತೆ ಎನ್ನಲಿಕ್ಕಾಗದು. ಆದರೆ ಆಗೊಮ್ಮೆ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಲಾರರು ಅನ್ನೋದು ಬಿಜೆಪಿ ಪಾಳೆಯದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್, ಹರ್ಯಾಣದಲ್ಲಿ ಮನೋಹರಲಾಲ್ ಖಟ್ಟರ್‍ರನ್ನು ತಂದಂತೆ ಒಂದು ದಿಢೀರ್ ಅನಿರೀಕ್ಷಿತ ಮುಖವನ್ನು ಜನರ ಮೇಲೆ ಹೇರುವ ಸಂಪ್ರದಾಯದ ಬಿಜೆಪಿ ಸಂತೋಷ್‍ರನ್ನು ಕರ್ನಾಟಕದ ಸಿಎಂ ಮಾಡಲು ಎಲ್ಲಾ ತಯಾರಿ ನಡೆಸಿದೆ. ಆ ಕಾರಣಕ್ಕೇ ಇಷ್ಟುದಿನ ಮಾಧ್ಯಮಗಳ ಮುಂದೆ ಮುಖ ತೋರದ ಸಂತೋಷ್ ಈಗ ಎಗ್ಗಿಲ್ಲದೆ ಹೇಳಿಕೆ ಕೊಡುತ್ತಾ ಜನರ ನಡುವೆ ಚರ್ಚೆಗೆ ಬರುತ್ತಿರೋದು.

ಅಷ್ಟಕ್ಕೂ ಈ ಸಂತೋಷ್ ಮತ್ತು ಯಡಿಯೂರಪ್ಪನವರ ದೋಸ್ತಿ, ದುಷ್ಮನಿಗೆ ತನ್ನದೇ ಆದ ಇತಿಹಾಸವಿದೆ. 2012ರಲ್ಲಿ ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದಿದ್ದೇ ಈ ಸಂತೋಷ್`ಜಿ’ಯ ಉಪಟಳದಿಂದಾಗಿ. ಅಷ್ಟೇ ಅಲ್ಲ, ಜೈಲುಭೀತಿಯಿಂದ ಯಡಿಯೂರಪ್ಪ ಅನಿವಾರ್ಯವಾಗಿ ಸಿಎಂ ಗಾದಿಗೆ ರಾಜೀನಾಮೆ ಕೊಡಬೇಕಾಗಿ ಬಂದಾಗ ಆ ಸ್ಥಾನಕ್ಕೆ ಯಾರು ಎಂದು ನಿರ್ಧರಿಸಲು ಆರೆಸೆಸ್ ಲೀಡರುಗಳು, ಈಶ್ವರಪ್ಪ, ಸಂತೋಷ್ ಮತ್ತು ಕೇವಲ ಇಬ್ಬರು ರಾಷ್ಟ್ರೀಯ ನಾಯಕರನ್ನು ಒಳಗೊಂಡ ಗುಪ್ತ ಸಭೆಯೊಂದು ನಡೆದಿತ್ತು. ಆಗ ಯಡಿಯೂರಪ್ಪನ ಜಾಗಕ್ಕೆ ಕೇಳಿಬಂದದ್ದು ಇದೇ ಸಂತೋಷ್`ಜಿ’ ಹೆಸರು! ಇದು ತಿಳಿದು ಕೆಂಡಾಮಂಡಲವಾದ ಯಡಿಯೂರಪ್ಪ ಒಂದೊಮ್ಮೆ ಸರ್ಕಾರದ ಚುಕ್ಕಾಣಿಯನ್ನು ಪಕ್ಕಾ `ಫ್ಯೂರರ್’ ಶೈಲಿಯ ಸಂತೋಷ್ ಕೈಗೆ ಒಪ್ಪಿಸಿದರೆ ಮುಂದೆ ತನ್ನ ಕಥೆ ಮುಗಿದಂತೆಯೇ ಎಂದು ಭಾವಿಸಿ ಹಠಕ್ಕೆ ಬಿದ್ದು ತನ್ನ ಆಪ್ತ ಸದಾನಂದ ಗೌಡರನ್ನು ಸಿಎಂ ಮಾಡಿದ್ದರು. ನಂತರ ಇದೇ ಸಂತೋಷ್ ಕಿತಾಪತಿಯಿಂದ ಸದಾನಂದ ಗೌಡ ಕೂಡಾ ಯಡಿಯೂರಪ್ಪನವರ ವಿರುದ್ಧ ತಿರುಗಿಬಿದ್ದದ್ದು ಇತಿಹಾಸ.

ಮೂಲತಃ ಉಡುಪಿ ಜಿಲ್ಲೆಯ ಹಿರಿಯಡ್ಕದ ಸಂತೋಷ್, ಕಲ್ಲಡ್ಕ ಪ್ರಭಾಕರ ಭಟ್ಟರ ಪರಮ ಶಿಷ್ಯನಾದರು ತನ್ನ ರಾಜಕೀಯ ಕದಲಿಕೆಗಳನ್ನು ಶುರು ಮಾಡಿದ್ದು ಶಿವಮೊಗ್ಗದಿಂದ. ಆರೆಸೆಸ್‍ನ ಗರಡಿಮನೆಯಂತಿರುವ ಶಿವಮೊಗ್ಗದ ಜಿಲ್ಲಾ ಸಂಘ ಪ್ರಚಾರಕರಾಗಿ ಕೆಲಸ ಮಾಡಲು ಶುರು ಮಾಡಿದ ಸಂತೋಷ್ ಮತ್ತು ಯಡಿಯೂರಪ್ಪ ನಡುವೆ ಗಳಸ್ಯ ಕಂಠಸ್ಯ ಗೆಳೆತನ ಮೊಳೆತಿತ್ತು. ಶಿವಮೊಗ್ಗದಲ್ಲಿದ್ದುಕೊಂಡು ಬೆಂಗಳೂರಿನ ಕೇಶವಾಕೃಪಾವನ್ನು ನಿಭಾಯಿಸಲು ಯಡಿಯೂರಪ್ಪ ಬಳಸಿಕೊಂಡದ್ದು ಇದೇ ಸಂತೋಷ್‍ರನ್ನು. ಆ ಕಾರಣಕ್ಕೆ ಯಡಿಯೂರಪ್ಪನವರ ಆಳ, ಅಗಲ, ಬಲ, ಬಲಹೀನತೆಗಳೆಲ್ಲ ಸಂತೋಷ್‍ಜಿಗೆ ಚೆನ್ನಾಗಿ ಕರಗತವಾದವು. ಮುಂದೆ ಇವೇ ಯಡಿಯೂರಪ್ಪ ಸಂತೋಷ್ ಮುಂದೆ ಬಾಲಬಿಚ್ಚದಂತೆ ಮಾಡಿಬಿಟ್ಟವು.

ನಮ್ಮ ಬಹಳಷ್ಟು ಮೀಡಿಯಾಗಳು ಸಂಘ ಪರವಾರದ ನಿರ್ದೇಶನದಂತೆ ಸಂತೋಷ್‍ರನ್ನು ತುಂಬಾ ಸರಳ, ಪ್ರಾಮಾಣಿಕ, ಎರಡು ಜೊತೆ ಬಟ್ಟೆ-ಒಂದು ಸೂಟ್‍ಕೇಸ್ ಬಿಟ್ಟು ಬೇರೆನು ಇರದ ಕರ್ನಾಟಕದ `ಫಕೀರ’ ಎಂಬರ್ಥದಲ್ಲಿ ಬಿಂಬಿಸಲು ಹೆಣಗಾಡುತ್ತಿವೆ. ಆದರೆ ಆಂತರ್ಯದಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಈ ವ್ಯಕ್ತಿ ಯಡಿಯೂರಪ್ಪ ಸಿಎಂ ಆಗಿದ್ದಾಗ ನಡೆಸಿದ ಅಷ್ಟೂ ಭಾನ್ಗಡಿಗಳ ಪರೋಕ್ಷ ಫಲಾನುಭವಿ ಎಂತಲೇ ಬಿಜೆಪಿ ಮೂಲಗಳು ಹೇಳುತ್ತಿವೆ.

ಬಿಜೆಪಿ ಪಾಲಿಗೆ ಏಕಚಕ್ರಾಧಿಪತಿಯಂತಿದ್ದ ಯಡಿಯೂರಪ್ಪ ಯಾವಾಗ ಭ್ರಷ್ಟಾಚಾರಗಳ ಸುಳಿಗೆ ಸಿಲುಕಿದರೋ ಆಗ ಸಂತೋಷ್ ನಯವಾಗಿಯೇ ಅವರಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದರು. ಅದರ ಹಿಂದೆ ಎರಡು ಇರಾದೆಗಳಿದ್ದವು. ಮೊದಲನೆಯದು, ತನ್ನ ಆಪ್ತಮಿತ್ರ ಯಡಿಯೂರಪ್ಪನವರ ಭ್ರಷ್ಟಾಚಾರ ಕಳಂಕ ತನಗೆ ತಾಕದಂತೆ ಸ್ವಚ್ಛವಾಗುಳಿವುದು. ಎರಡನೆಯದು, ಈ ಕಳಂಕದಿಂದ ಯಡಿಯೂರಪ್ಪ ನಾಯಕನ ಸ್ಥಾನದಿಂದ ಕೆಳಗಿಳಿಯುವಂತಾದರೆ ಆ ಜಾಗವನ್ನು ತಾನು ಆಕ್ರಮಿಸಿಕೊಳ್ಳುವುದು.

ಸಂತೋಷ್‍ರ ಈ ಸ್ಟ್ರಾಟಜಿ ಅರ್ಥವಾದ ಕ್ಷಣದಿಂದಲೇ ಯಡಿಯೂರಪ್ಪ, ಸಂತೋಷ್ ವಿರುದ್ಧ ತಿರುಗಿಬೀಳಲು ಶುರು ಮಾಡಿದ್ದು. ತನ್ನ ಜಾಗಕ್ಕೆ,  ಸಂತೋಷ್ ಅಥವಾ ಶೆಟ್ಟರ್ ಬದಲು ಸದಾನಂದ ಗೌಡರು ಸಿಎಂ ಆಗಲಿ ಎಂದದ್ದಾಗಲಿ, 2012ರಲ್ಲಿ ಆರೆಸೆಸ್-ಬಿಜೆಪಿ (ಯಡಿಯೂರಪ್ಪ ವಿರೋಧಿ ಬಣ) ಸಂತೋಷ್‍ರನ್ನು ಎಂಎಲ್‍ಸಿ ಮಾಡಲು ಮುಂದಾದಾಗ ಹಠಕ್ಕೆ ಬಿದ್ದು ಯಡಿಯೂರಪ್ಪ ಅದನ್ನು ತಪ್ಪಿಸಿದ್ದಾಗಲಿ ಎಲ್ಲವೂ ಸಂತೋಷ್`ಜಿ’ ಭವಿಷ್ಯದಲ್ಲಿ ತನಗೆ ಅಡ್ಡಿಯಾಗಲಿದ್ದಾರೆ ಎಂಬ ಆತಂಕದಿಂದಲೇ.

ಸಂತೋಷ್‍ರ ಕಿರುಕುಳದಿಂದ ಬೇಸತ್ತ ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿ ಮಹತ್ತರವಾದದ್ದೇನೂ ಸಾಧಿಸದಿದ್ದರು, `ಲಿಂಗಾಯತ ಲೀಡರ್’ ಕಾರಣಕ್ಕೆ ತಾನು ಅನಿವಾರ್ಯ ಎಂಬುದನ್ನು ಬಿಜೆಪಿಗೆ 2013ರ ಚುನಾವಣೆಯಲ್ಲಿ ಚೆನ್ನಾಗಿಯೇ ಮನವರಿಕೆ ಮಾಡಿಕೊಟ್ಟರು. ಆ ಸಲ ಕೆಜೆಪಿ ಗೆದ್ದಿದ್ದು ಕೇವಲ 6 ಸ್ಥಾನಗಳಾದರು ಶೇ.9.83 ಮತಗಳಿಕೆಯ ಮೂಲಕ 36 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಮತ್ತು 35 ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಪಡೆದಿತ್ತು. ಅದರಿಂದಾಗಿ 2008ರಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿ ಕೇವಲ 40ಕ್ಕೆ ಕುಸಿಯಬೇಕಾಯ್ತು. ಇವೆಲ್ಲಾ ರಾಜಕೀಯ ಲುಕ್ಸಾನನ್ನು ಲೆಕ್ಕ ಹಾಕಿದ ಬಿಜೆಪಿಗೆ ಮತ್ತೆ ಯಡಿಯೂರಪ್ಪನವರಿಗೆ ಮಣೆ ಹಾಕುವ ಅನಿವಾರ್ಯತೆ ಬಂತು.

ಆಗ ಬಿಜೆಪಿ ಮುಂದೆ ಯಡಿಯೂರಪ್ಪ ಇಟ್ಟದ್ದು ಒಂದೇ ಬೇಡಿಕೆ. ಅದು ಸಂತೋಷ್‍ರನ್ನು ರಾಜ್ಯ ರಾಜಕಾರಣದಿಂದ ದೂರವಿಡಬೇಕು ಎಂಬುದು! ಅದಕ್ಕೆ ಒಪ್ಪಿದ ಬಿಜೆಪಿ ಸಂತೋಷ್‍ಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹುದ್ದೆಕೊಟ್ಟು ರಾಷ್ಟ್ರ ರಾಜಕಾರಣದತ್ತ ಕರೆದೊಯ್ದಿತು. ಆದರೂ ಸಂತೋಷ್ ಸುಮ್ಮನಾಗಲಿಲ್ಲ. ಈಶ್ವರಪ್ಪ, ಸೊಗಡು ಶಿವಣ್ಣ ಮೊದಲಾದ ಯಡಿಯೂರಪ್ಪ ವಿರೋಧಿಗಳ ಮೂಲಕ ಟಾರ್ಚರ್ ಶುರು ಮಾಡಿಕೊಂಡರು. ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಭಾನ್ಗಡಿ ಮಾಡಿದ್ದೇ ಸಂತೋಷ್‍ರವರ ಕುಮ್ಮಕ್ಕಿನಿಂದ. ಇಲ್ಲದೇ ಹೋಗಿದ್ದರೆ, ಇಂಥಾ ಅಶಿಸ್ತಿಗೆ ಈಶ್ವರಪ್ಪ ಆರೆಸೆಸ್‍ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತಿತ್ತು.

`ಸಂಘಟನೆ ಉಳಿಸಿ’ ಹೆಸರಿನಲ್ಲಿ ಈ ಸಂತೋಷ್, ಯಡಿಯೂರಪ್ಪ ವಿರೋಧಿಗಳಿಗೆಲ್ಲ ಕುಮ್ಮಕ್ಕು ಕೊಟ್ಟು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ನಿರಂತರ ಸಭೆ ನಡೆಯುವಂತೆ ನೋಡಿಕೊಂಡಿದ್ದರು. ಆಗೊಮ್ಮೆ ಸಿಟ್ಟಿಗೆದ್ದ ಯಡಿಯೂರಪ್ಪನವರು ಮಾಧ್ಯಮಗಳ ಮುಂದೆಯೇ “ಈಶ್ವರಪ್ಪನ ಹಿಂದೆ ಕೆಲಸ ಮಾಡುತ್ತಿರುವ ಬ್ರೈನ್ ಯಾರೆಂಬುದು ನನಗೆ ಗೊತ್ತಿದೆ. ಸಂಘಟನೆ ಉಳಿಸಿ ಸಭೆಯಲ್ಲಿ ಸಂತೋಷ್ ಶಿಷ್ಯರೇ ಇದ್ದಾರೆ. ಅವರ ಕುಮ್ಮಕ್ಕಿನಿಂದಲೇ ಇದೆಲ್ಲವೂ ಆಗುತ್ತಿದೆ” ಎಂದು ಕಿಡಿಕಾರಿದ್ದರು. ಇನ್ನು ಯಡಿಯೂರಪ್ಪನವರ ಆಪ್ತರೆಲ್ಲರು ಸಂತೋಷ್ ಮೇಲೆ ಹರಿಹಾಯ್ದಿದ್ದರು. ಅದರಲ್ಲು ಮಾಜಿ ಅಬಕಾರಿ ಮಂತ್ರಿ ಎಂ.ಪಿ.ರೇಣುಕಾಚಾರ್ಯರಂತು “ಸಂತೋಷ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು ಅದಕ್ಕಾಗೆ ಬಿಜೆಪಿಯ ಕೆಲವರನ್ನು ಎತ್ತಿಕಟ್ಟುತ್ತಿದ್ದಾರೆ. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ವಾದವನ್ನೂ ಅವರೇ ತೇಲಿಬಿಡುತ್ತಿದ್ದು, ಆ ಮೂಲಕ ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಒಂದುಕಡೆ ಹೀಗೆ ಯಡಿಯೂರಪ್ಪನವರಿಗೆ `ಸರ್ವಾಧಿಕಾರಿ’ ಇಮೇಜನ್ನು ಆರೋಪಿಸುತ್ತಲೇ ಮತ್ತೊಂದೆಡೆ, ಸಂತೋಷ್ ಬಗ್ಗೆ ಲಾಬಿಯೂ ಶುರುವಾಗಿತ್ತು. ಬಿಜೆಪಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ 2017ರ ಏಪ್ರಿಲ್ 13ರಂದು ಟ್ವೀಟ್ ಮಾಡಿ “ಕರ್ನಾಟಕದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕಾರ್ಯತಂತ್ರವನ್ನು ರೂಪಿಸಲು ಸಂತೋಷ್ ಅವರನ್ನು ಮತ್ತೆ ರಾಜ್ಯದ ಸಂಘಟನೆಗೆ ಕರೆತರಲು ಇದು ಸಕಾಲ. ಪಕ್ಷದ ನೇತಾರರು ಈ ಬಗ್ಗೆ ಗಮನಹರಿಸಬೇಕು” ಎಂದು ವಕಾಲತ್ತು ವಹಿಸಿಕೊಂಡಿದ್ದಲ್ಲದೆ ಮೋದಿ, ಅಮಿತ್ ಶಾರನ್ನೂ ಟ್ಯಾಗ್ ಮಾಡಿದ್ದರು. ಅಂದರೆ 2018ರ ಅಸೆಂಬ್ಲಿ ಚುನಾವಣೆಗು ಮುನ್ನ ಯಡಿಯೂರಪ್ಪರ ಜಾಗಕ್ಕೆ ಸಂತೋಷ್‍ರನ್ನು ತರಲು ಎಲ್ಲಾ ಪ್ರಯತ್ನಗಳು ಜಾರಿಯಲ್ಲಿದ್ದವು.

ಆದರೂ ಲಿಂಗಾಯತ ಮತಗಳ ಈ ಹಿಂದೆ (2013ರಲ್ಲಿ) ಕೊಟ್ಟ ಏಟಿನಿಂದ ಪಾಠ ಕಲಿತಿದ್ದ ಬಿಜೆಪಿ ಮತ್ತು ಆರೆಸೆಸ್ ಬಹಿರಂಗವಾಗಿ ಅದನ್ನು ಘೋಷಿಸಿರಲಿಲ್ಲ. ಫಲಿತಾಂಶ ಹೊರಬಿದ್ದು 104 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ 113ರ ಸಿಂಪಲ್ ಮೆಜಾರಿಟಿಯಿಂದ ದೂರವೇ ಉಳಿದಿದ್ದರಿಂದ ಬಿಜೆಪಿಗೆ ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರದಲ್ಲಿ ಹೇರಿದಂತೆ ದಿಢೀರ್ ಮುಖವಾಗಿ ಸಂತೋಷ್‍ರನ್ನು ಸಿಎಂ ಗಾದಿಗೇರಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಸಾಂವಿಧಾನಿಕವಾಗಿ ಅಧಿಕಾರ ಹಿಡಿಯುವುದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಯಡಿಯೂರಪ್ಪರನ್ನು ಮೂರು ದಿನಗಳ ಸಿಎಂ ಮಾಡಿ, ಅರ್ಧಕ್ಕೇ ಕೆಳಗಿಳಿಯುವಂತೆ ಮಾಡುವ ಮೂಲಕ ಸಂಘ ಪರಿವಾರ ಎರಡು ಹಿಡನ್ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಯೋಜಿಸಿತ್ತು. ಯಡಿಯೂರಪ್ಪ ಪರ ಸಿಂಪಥಿ ಅಲೆಯಿಂದಾಗಿ ಲಿಂಗಾಯತರ ಮತಗಳನ್ನು ಭವಿಷ್ಯದಲ್ಲಿ ಸಾರಾಸಗಟಾಗಿ ತನ್ನತ್ತ ಸೆಳೆದುಕೊಳ್ಳುವುದು, ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟುವುದು. ಒಂದೊಮ್ಮೆ ಆಗಲೇ ಸ್ಪಷ್ಟ ಬಹುಮತ ಸಿಕ್ಕಿದ್ದರೆ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ, ಒಂದುವೇಳೆ ಆಗಿದ್ದರೂ ಮಧ್ಯಂತರದಲ್ಲೇ ಕೆಳಗಿಳಿಸಿ ಸಂತೋಷ್‍ರನ್ನು ಪ್ರತಿಷ್ಠಾಪಿಸಲಾಗುತ್ತಿತ್ತು ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬಂದಿವೆ.

ಈಗ ಕಾಲ ಬದಲಾಗಿದೆ. ಅಸೆಂಬ್ಲಿ ಎಲೆಕ್ಷನ್ ಮುಗಿದೋಗಿದೆ, ಎಂಪಿ ಎಲೆಕ್ಷನ್ ಕೂಡಾ ಖತಂ ಆಗಿದೆ. ಏನಿಲ್ಲವೆಂದರು ಇನ್ನು ಮೂರು ವರ್ಷ ಕರ್ನಾಟಕದಲ್ಲಿ ಗಂಭೀರ ಚುನಾವಣೆಗಳ್ಯಾವುವೂ ನಡೆಯುವುದಿಲ್ಲ. ಈಗ ಯಡಿಯೂರಪ್ಪರನ್ನು ಸೈಡ್‍ಲೈನ್ ಮಾಡಿ ಸಂತೋಷ್‍ರನ್ನು ಪ್ರತಿಷ್ಠಾಪಿಸಿಬಿಟ್ಟರೆ ಮೂರು ವರ್ಷ ಕಳೆಯುವುದರೊಳಗೆ ಜನ ಆದ ಗಾಯವನ್ನು ಮರೆತು ನಾರ್ಮಲ್ ಆಗಿರುತ್ತಾರೆ. ಅದಕ್ಕೆ ಬೇಕಾದ ಅಧಿಕಾರದ ಗಿಮಿಕ್ಕುಗಳನ್ನು ಮಾಡಿದರೆ ಸಾಕು. ಉತ್ತರ ಪ್ರದೇಶ ಯೋಗಿ ಆದಿತ್ಯನಾಥರಿಗೆ ಕಚ್ಚಿಕೊಂಡಂತೆ ಕರ್ನಾಟಕ ಸಂತೋಷ್`ಜಿ’ಗೆ ಒಗ್ಗಿಬಿಡುತ್ತೆ ಅನ್ನೋದು ಸಂಘ ಪರಿವಾರದ ಲೆಕ್ಕ. ಹಾಗಾಗಿಯೇ ಇಷ್ಟುದಿನ ತೆರೆಮರೆಯಲ್ಲಿದ್ದ ಸಂತೋಷ್ ಬೆಳಕಿಗೆ ಬರಲು ಶುರು ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಯಡಿಯೂರಪ್ಪ ಶಿಫಾರಸ್ಸು ಮಾಡಿದ್ದ ತೇಜಸ್ವಿನಿ ಅನಂತ್‍ಕುಮಾರ್ ಬದಲಿಗೆ ಕೊನೇ ಕ್ಷಣದಲ್ಲಿ ತನ್ನ ಶಿಷ್ಯ ತೇಜಸ್ವಿ ಸೂರ್ಯನಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೇಟ್ ಕೊಡಿಸಿರುವ ಸಂತೋಷ್ ಅತ್ತ ಅನಂತ್ಕುಮಾರ್ ಮೇಲಿದ್ದ ತನ್ನ ಸ್ವಜಾತಿ ದುಷ್ಮನಿ, ಇತ್ತ ಯಡಿಯೂರಪ್ಪ ಮೇಲಿರುವ ಪವರ್ ಪೊಲಿಟಿಕ್ಸ್ ಹಗೆತನವನ್ನು ನಾಜೂಕಾಗಿ ಈಡೇರಿಸಿಕೊಂಡಿದ್ದಾರೆ.

ಇಂತಹ ಆಂತರಿಕ ಆಗುಹೋಗುಗಳು, ಯಡಿಯೂರಪ್ಪನವರಿಗೆ ಮುಂಬರಲಿರುವ ದುಸ್ಥಿತಿಗಳ ಅಂದಾಜು ಸಿಕ್ಕಿರುವುದರಿಂದಲೇ ಆರ್.ಅಶೋಕ್‍ನಂತಹ ಯಡಿಯೂರಪ್ಪ ಹಿಂಬಾಲಕರೂ “ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನೂ ಆಕಾಂಕ್ಷಿ” ಎಂದು ಯಡಿಯೂರಪ್ಪನವರ ಬಗ್ಗೆ ಯಾವ ಅಳುಕಿಲ್ಲದೆ ಹೇಳಿಕೆ ನೀಡುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಒಂದನ್ನಂತೂ ನಿಸ್ಸಂಶಯವಾಗಿ ಸ್ಪಷ್ಟಪಡಿಸುತ್ತಿವೆ. ಬಿಜೆಪಿ ಮತ್ತದರ ಮಾತೃಸಂಸ್ಥೆ ಅಂಗಳದಲ್ಲಿ ಬ್ರಾಹ್ಮಣರಿಗೇ ಅಂತಿಮ ಮಣೆ, ಯಡಿಯೂರಪ್ಪನಂತಹ ಪ್ರಭಾವಿ ಲಿಂಗಾಯತ ನಾಯಕರಿಗೂ ದುರಂತ ವಿದಾಯವೇ ಕೊನೆ!!!

*************************************************

ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿಯಲು ಓದಿ.

ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?