Homeಅಂಕಣಗಳುತಾತ್ಸಾರ ತೊರೆದು ಸ್ವಾಯತ್ತತೆಗಾಗಿ - ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ

ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ

- Advertisement -
- Advertisement -

65ನೆ ಕನ್ನಡ ರಾಜ್ಯೋತ್ಸವನ್ನು ಆಚರಿಸಿ ಮುಗಿಸಿದ್ದೇವೆ. ಸಂಭ್ರಮದಿಂದ ಆಚರಿಸಿದೆವೇ? ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ವತಿಯಿಂದ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆಯ ಕಳೆಗುಂದಿದ್ದಲ್ಲ – ನಮಗೆ ತಿಳಿದಿರುವ ಹಾಗೆ ಕಳೆದ ಕೆಲವು ವರ್ಷಗಳಿಂದ ಒಂದಲ್ಲ ಒಂದು ವಿಷಯ ಹಿಡಿದುಕೊಂಡು ಕರ್ನಾಟಕದ ಈ ಸಂಭ್ರಮಕ್ಕೆ ಕರಾಳ ಛಾಯೆ ಮೂಡುವಂತೆ ಮಾಡಲಾಗುತ್ತಿದೆ. ‘ಒಂದು ರಾಷ್ಟ್ರ ಒಂದು ಬಾವುಟ’ ಎಂದು ಈ ಸಂಭ್ರಮದಲ್ಲಿ ಕರ್ನಾಟಕದ ವಿಶಿಷ್ಟ ಬಾವುಟ ಹಾರಿಸಬಾರದು ಎಂಬ ಭಾವನಾತ್ಮಕ ದಬ್ಬಾಳಿಕೆಯಿಂದ ಹಿಡಿದು, ನವೆಂಬರ್ ಮಾಸದ ಆಸುಪಾಸಿನಲ್ಲೆ ಉಲ್ಬಣವಾಗುವ ನೆರೆಗೆ ಪರಿಹಾರ ನೀಡುವುದಕ್ಕೆ ಒಕ್ಕೂಟ ಸರ್ಕಾರವನ್ನು ಅಂಗಲಾಚುವ ಪರಿಸ್ಥಿತಿ, ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯಲ್ಲಿ ಕಡಿತ ಮತ್ತು ವಿಳಂಬ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ವಿಷಯಗಳು ಸಂಭ್ರಮದ ಹೊತ್ತಿನಲ್ಲಿಯೂ ಚಿಂತೆಗೀಡುಮಾಡಿವೆ. ಇದು ಕೇವಲ ಕರ್ನಾಟಕದ ಸಮಸ್ಯೆಯಾಗಿ ಉಳಿದಿಲ್ಲ. ಹಲವು ರಾಜ್ಯಗಳ ಒಕ್ಕೂಟವನ್ನು ಸ್ಥಾಪಿಸಿ, ಭಾಷಾವಾರು ಪ್ರಾಂತ್ಯಗಳನ್ನು ರಚಿಸಿ, ಯೂನಿಯನ್ ಮತ್ತು ರಾಜ್ಯ ಸರ್ಕಾರಗಳಾಗಿ ವಿಂಗಡಿಸಿದ ಮೇಲೆ, ಅಧಿಕಾರ ಹಂಚಿಕೆಯ ವಿಷಯದಲ್ಲಿ, ರಾಜ್ಯಗಳ ವಿತ್ತೀಯ ಸ್ವಾಯತ್ತತೆಯ ವಿಷಯಗಳಲ್ಲಿ ಹೆಚ್ಚೆಚ್ಚು ಪ್ರಜಾಸತ್ತಾತ್ಮಕವಾದ ವಿಕೇಂದ್ರೀಕರಣದೊಂದಿಗೆ ಉದಾರವಾದಿಯಾಗಬೇಕಿದ್ದ ಯೂನಿಯನ್ ಸರ್ಕಾರ(ಗಳು), ದಬ್ಬಾಳಿಕೆಯ ತಂತ್ರ ಬಳಸಿ ಎಲ್ಲ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವತ್ತ ಮುಂದುವರೆದಿರುವುದು ಈ ಹೊತ್ತಿನ ನಿಜವಾದ ಆತಂಕ.

ಯೂನಿಯನ್ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ ಸಂಬಂಧವಾಗಿ ಎದ್ದಿರುವ ಹಲವು ವ್ಯಾಜ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ಕರ್ನಾಟಕದ್ದೂ ಕೊಡುಗೆಯಿದೆ. ಅದರಲ್ಲಿ ಪ್ರಮುಖವಾದದ್ದು – ಆರ್ಟಿಕಲ್ 356ಅನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುತ್ತಿದ್ದ ವಿದ್ಯಮಾನಕ್ಕೆ ಒಂದು ಮಟ್ಟದ ಅಡೆತಡೆ ಒಡ್ಡಲು ಸಫಲವಾದದ್ದು. 1989ರಲ್ಲಿ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡದೆ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದ ಒಕ್ಕೂಟ ಸರ್ಕಾರದ ಅಧಿಕಾರ ದುರುಪಯೋಗ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವರು ಬೊಮ್ಮಾಯಿ. ಆರ್ಟಿಕಲ್ 356 ಬಳಕೆ ಒಕ್ಕೂಟ ಸರ್ಕಾರದ ಸಾರ್ವಭೌಮ ಅಧಿಕಾರ ಅಲ್ಲ ಎಂದಿದ್ದ ಸುಪ್ರೀಂಕೋರ್ಟ್, ಮುಂದೆ ಅಂತಹ ಯಾವುದೇ ನಿರ್ಣಯ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ ಎಂದಿತ್ತು. ಅಲ್ಲದೆ ವಿರಳ ಸಂದರ್ಭಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಅವಶ್ಯಕತೆ ಬಂದಾಗ, ಮುನ್ನ ಪಾಲಿಸಬೇಕಾದ ಹಲವು ನಿಯಮಗಳನ್ನು ಹಾಕಿತ್ತು. ಬೊಮ್ಮಾಯಿ ಪ್ರಕರಣದ ಮೊದಲು ಅಂದರೆ 1950ರಿಂದ 1990ರ ಅವಧಿಯೊಳಗೆ ಒಕ್ಕೂಟ ಸರ್ಕಾರ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಿದ್ದು ಬರೋಬ್ಬರಿ 83 ಬಾರಿ. 1991ರಿಂದ 2010ರವರೆಗೆ 27 ಬಾರಿ ಮತ್ತು 2010 ರಿಂದ 2016 ರವರೆಗೆ 7 ಬಾರಿ. ಒಕ್ಕೂಟ ಸರ್ಕಾರದ ಅಧಿಕಾರದ ಓವರ್‌ರೀಚ್ ಇನ್ನೂ ನಿಂತಿಲ್ಲವಾದರೂ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದ ಈ ಟ್ರೆಂಡ್ ಇಳಿಮುಖವಾಗುತ್ತಿರುವ ಲಕ್ಷಣಗಳಂತೂ ಗೋಚರಿಸುತ್ತವೆ. ವಜಾ ಮಾಡಲಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ ಮತ್ತೆ ಪುನರ್‌ಸ್ಥಾಪನೆ ಮಾಡಿದ ಹಲವು ಉದಾಹರಣೆಗಳಿವೆ. ಇಷ್ಟೆಲ್ಲಾ ಚರ್ಚೆ-ವ್ಯಾಜ್ಯಗಳು ನಡೆದಿದ್ದರೂ 2016ರಲ್ಲಿ ನರೇಂದ್ರ ಮೋದಿ ಸರ್ಕಾರ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆರ್ಟಿಕಲ್ 356ನ್ನು ವಿಧಿಸಿತ್ತು ಎನ್ನುವುದು ದುರಂತ. (ಎರಡೂ ಸಂದರ್ಭದಲ್ಲಿ ಕೋರ್ಟ್ ಆ ಹೇರಿಕೆಗಳನ್ನು ವಜಾ ಮಾಡಿತ್ತು.)

1978ರಲ್ಲಿ ಪಶ್ಚಿಮ ಬಂಗಾಳದ ಎಡಪಂಥದ ಸರ್ಕಾರ ರಾಜ್ಯದ ಅಧಿಕಾರವನ್ನು ಜಿಲ್ಲೆಗಳಿಗೆ ಮತ್ತು ಗ್ರಾಮಗಳಿಗೆ ವಿಕೇಂದ್ರೀಕರಿಸಿದ ಯೋಜನೆಯ ನಂತರ 1983ರಲ್ಲಿ ಕರ್ನಾಟಕದಲ್ಲಿ ಜನತಾ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್‌ಸಾಬ್ ಅವರ ಮುಂದಾಳತ್ವದಲ್ಲಿ, ಅವರ ಕಾಳಜಿ ಮತ್ತು ಕಳಕಳಿಯೊಂದಿಗೆ ಜಿಲ್ಲಾಪರಿಷತ್ತು, ಗ್ರಾಮ ಪಂಚಾಯತಿಗಳ ಸ್ಥಾಪನೆ ದೇಶಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿತ್ತು. ಜಾರಿ ಮಾಡುವ ಹೊತ್ತಿನಲ್ಲಿ ಹಲವು ಆರಂಭಿಕ ಲೋಪದೋಷಗಳನ್ನು ಇದು ಹೊಂದಿತ್ತಾದರೂ, ಮುಂದಿನ ಹಲವು ಸರ್ಕಾರಗಳು ಈ ವಿಕೇಂದ್ರೀಕರಣದಿಂದ ಸೃಷ್ಟಿ ಆಗಿದ್ದ ಜಿಲ್ಲಾ ಮಟ್ಟದ ಮತ್ತು ಗ್ರಾಮ ಮಟ್ಟದ ಅಧಿಕಾರ ಕೇಂದ್ರಗಳ ಬಲಗಳನ್ನು ಕುಂದಿಸಿದವು ಎಂಬುದರ ಹೊರತಾಗಿಯೂ ಪ್ರಜಾಪ್ರಭುತ್ವದ ತಾತ್ವಿಕತೆಯ ದೃಷ್ಟಿಯಿಂದ ಇದು ಅಗ್ರಪಂಕ್ತಿಯ ಆಲೋಚನೆಯಾಗಿತ್ತು ಮತ್ತು ಕಾರ್ಯಕ್ರಮವಾಗಿತ್ತು.

PC : Sahilonline.net

ಹೀಗೆ ಹಲವು ವಿಷಯಗಳಲ್ಲಿ ಇತರ ದಕ್ಷಿಣ ರಾಜ್ಯಗಳಂತೆ ವಿಕೇಂದ್ರೀಕರಣದ ಚಾಂಪಿಯನ್ ಆಗಬೇಕಿದ್ದ ಕರ್ನಾಟಕ 21ನೇ ಶತಮಾನದ ಆರಂಭಕ್ಕೆ ತೀವ್ರ ಕೇಂದ್ರೀಕೃತ ಒಕ್ಕೂಟ ಸರ್ಕಾರದ ನೀತಿಗಳಿಗೆ ಅದರಲ್ಲೂ ವಿತ್ತೀಯ ನೀತಿಗಳಿಗೆ ಪ್ರತಿರೋಧ ತೋರಲಾಗದೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸವಾಗಿದೆ.

ಭಾರತದ ಪ್ರಜಾಪ್ರಭುತ್ವಕ್ಕೆ 72 ವರ್ಷ ಮತ್ತು ಭಾಷಾವಾರು ಪ್ರಾಂತ್ಯವಾಗಿರುವ ಕರ್ನಾಟಕಕ್ಕೆ 65 ವರ್ಷ. ಉದಾತ್ತ ದೃಷ್ಟಿಕೋನದಿಂದ ರಚಿಸಿದ್ದ ಸಂವಿಧಾನವನ್ನು ಕೆಲವು ಸರ್ವಾಧಿಕಾರಿ ಧೋರಣೆಯ ರಾಜಕೀಯ ಮುಖಂಡರು ವ್ಯಾಖ್ಯಾನಿಸಿದ ಮತ್ತು ಅನ್ವಯಿಸಿದ ರೀತಿಗೆ ಹಲವು ಬಾರಿ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆಯ ವಿಷಯವಾಗಿ ಬಿಕ್ಕಟ್ಟು ಎದ್ದಿದೆ. ಚರ್ಚೆ-ವಾಗ್ವಾದ-ವ್ಯಾಜ್ಯಗಳು ಆಗಿವೆ.

ಆದರೆ ಇದು ಸಣ್ಣ ಕಾಲಾವಧಿಯೂ ಅಲ್ಲ. ಬಹುತೇಕ ಇಷ್ಟೇ ಸಮಯದಲ್ಲಿ ದೇಶದ ಒಂದು ದೊಡ್ಡ ವಲಯದ ಜನಸಂಖ್ಯೆಗೆ, ಧಾರ್ಮಿಕ ರಾಷ್ಟ್ರೀಯತೆಯ ಅಮಲು ಹತ್ತಿಸಿ, ಪ್ರಾದೇಶಿಕತೆಯನ್ನು, ವೈವಿಧ್ಯತೆಯನ್ನು, ಬಹುತ್ವವನ್ನು ವಿರೋಧಿಸಲು ಕೊನೆಗೆ ತಮ್ಮ ನೆಲಮೂಲದ ಸಂಸ್ಕೃತಿಯನ್ನೇ ನಿರ್ಲಕ್ಷಿಸುವುದನ್ನು ಕಲಿಸಿಕೊಟ್ಟ ಒಂದು ದುಷ್ಟ ವರ್ಗದ ಪ್ರಣಾಳಿಕೆ ಯಶಸ್ವಿಯಾಗಿದೆ. ಇದರಿಂದ ಎಚ್ಚರಿಕೆಯೂ ಪಾಠವೂ ನಮ್ಮದಾಗಬೇಕಿದೆ.

2020ರ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಇಂದು ಕರ್ನಾಟಕದ ನಾಗರಿಕರು ನಿಜವಾಗಿಯೂ ಎಚ್ಚೆತ್ತಿದ್ದಾರೆಯೇ? ದಶಕಗಳಿಂದ ನಡೆಯುತ್ತಿರುವ ಹಿಂದಿ ಹೇರಿಕೆಯ ಅಪಾಯ ಅವರಿಗೆ ಇಂದು ಮನದಟ್ಟಾಗಿದೆಯೇ? ಹಿಂದಿ ಹೇರಿಕೆಯ ಜತೆಗೆ ನಮ್ಮ ನೆಲಮೂಲದ ಹಲವು ಸಂಸ್ಕೃತಿಗಳನ್ನು ಸಪಾಟು ಮಾಡುತ್ತಿರುವ ಮತೀಯ ರಾಷ್ಟ್ರೀಯತೆಯ ಅಪಾಯ ಜನಕ್ಕೆ ತಿಳಿಯುತ್ತಿದೆಯೇ? ಯಾವುದೇ ರಾಜ್ಯ ವಿತ್ತೀಯ ಸ್ವಾಯತ್ತತೆ ಕಳೆದುಕೊಂಡರೆ, ತಮ್ಮ ಮೂಲ ಅಗತ್ಯಗಳಿಗಾಗಿ ಸದಾ ಒಕ್ಕೂಟ ಸರ್ಕಾರದ ಮುಂದೆ ಕೈಯೊಡ್ಡಬೇಕಾದ ಸಂದರ್ಭ ಬರುವುದರ ಬಗ್ಗೆ – ಕೇಂದ್ರೀಕೃತ ವ್ಯವಸ್ಥೆ ಏಕಪಕ್ಷೀಯವಾಗಿ ಮಾಡುವ ಆರ್ಥಿಕ ತಪ್ಪುಗಳಿಂದಾಗುವ (ಡಿಮಾನೆಟೈಸೇಶನ್ – ಏಕರೂಪ ತೆರಿಕೆಯ ಕಂಟಕ ಇತ್ಯಾದಿ) ದುಷ್ಪರಿಣಾಮಗಳಿಂದ ರಾಜ್ಯದ ಜನತೆಗೆ ಅದರಲ್ಲೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಹೆಚ್ಚು ಹೊರಯಾಗಲಿದೆ ಎಂಬ ತಿಳಿವು ಮೂಡಿದೆಯೇ? ಕೆಲವು ಎನ್‍ಫೋರ್ಸ್‍ಮೆಂಟ್ ಸಂಸ್ಥೆಗಳ ಭಯವನ್ನು ಮುಂದುಮಾಡಿ ರಾಜ್ಯ ಸರ್ಕಾರಗಳನ್ನು ಅಧೀನರನ್ನಾಗಿ ಮಾಡಿಕೊಂಡಿರುವ ಮತ್ತು ಸದಾ ಭಯದಲ್ಲಿ ವ್ಯವಹರಿಸುವಂತೆ ಮಾಡಿರುವ ಈ ಕೇಂದ್ರೀಕೃತ ವ್ಯವಸ್ಥೆಯ ಮಾದರಿ ಅತ್ಯುತ್ತಮ ಗವರ್ನೆನ್ಸ್‌‌ಗೆ ಬಾಧಕವಾಗಿದೆ ಎಂಬುದು ಗಮನಕ್ಕೆ ಬಂದಿದೆಯೆ? ಇಂತಹ ಪ್ರಶ್ನೆಗಳ ಜೊತೆಗೆ ನಾವು ಇಂದು ಕನ್ನಡ ರಾಜ್ಯೋತ್ಸವವನ್ನು ಕನ್ನಡ-ಕರ್ನಾಟಕದ-ರಾಜ್ಯಗಳ ಹಕ್ಕುಗಳ ಅರಿವಿನ ಮಾಸವಾಗಿ ಆಚರಿಸಬೇಕಾದ ತುರ್ತು ಬಂದಿದೆ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...