ವಿನಾಕಾರಣ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು ಪ್ರಯಾಣಿಕರ ಜೀವಕ್ಕೆ ಬೆದರಿಕೆಯೊಡ್ಡಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿ, ವಿಮಾನ ಪ್ರಯಾಣದಿಂದ ನಿಷೇಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲನ್ನು ತೆರೆದಿರುವುದನ್ನು, ಕ್ಷಮೆ ಕೇಳಿದ್ದನ್ನು ಕೇಂದ್ರ ವಿಮಾನಯಾನ ಸಚಿವರೇ ಸ್ಪಷ್ಟಪಡಿಸಿರುವಾಗ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ ಬಿಜೆಪಿ ಮುಖಂಡ ಸಿ.ಟಿ ರವಿ ಸುಳ್ಳು ಪೋಣಿಸುತ್ತಿರುವುದೇಕೆ? ಕುಚೇಷ್ಟೆ ಮಾಡಿದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿ, ವಿಮಾನ ಪ್ರಯಾಣದಿಂದ ನಿಷೇಧಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತೇಜಸ್ವಿ ಸೂರ್ಯ ವಿಮಾನದ ತುರ್ತು ಬಾಗಿಲನ್ನು ತೆರೆದಿರುವುದನ್ನು, ಕ್ಷಮೆ ಕೇಳಿದ್ದನ್ನು ಕೇಂದ್ರ ವಿಮಾನಯಾನ ಸಚಿವರೇ ಸ್ಪಷ್ಟಪಡಿಸಿರುವಾಗ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತೆ @CTRavi_BJP ಸುಳ್ಳು ಪೋಣಿಸುತ್ತಿರುವುದೇಕೆ?
ಕುಚೇಷ್ಟೆ ಮಾಡಿದ @Tejasvi_Surya ವಿರುದ್ಧ ಪ್ರಕರಣ ದಾಖಲಿಸಿ, ವಿಮಾನ ಪ್ರಯಾಣದಿಂದ ನಿಷೇಧಿಸಬೇಕು.
— Karnataka Congress (@INCKarnataka) January 20, 2023
ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇದ್ದ ಕಾರಣಕ್ಕೆ ಅನಾಹುತ ತಪ್ಪಿದೆ. ಅವರು ಡೋರ್ ಸ್ವಲ್ಪ ಓಪನ್ ಇದೆ ನೋಡಿ ಎಂದು ಹೇಳಿದ್ದೇ ಅಪರಾಧವಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸುವ ಮೂಲಕ ತೇಜಸ್ವಿ ಸೂರ್ಯರವರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಘಟನೆ ಬಗ್ಗೆ ಮಾತನಾಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, “ಸತ್ಯಗಳನ್ನು ನೋಡುವುದು ಬಹಳ ಮುಖ್ಯ. ವಿಮಾನವು ಇನ್ನೂ ನೆಲದ ಮೇಲೆ ಇದ್ದಾಗ ಅವರು ಆಕಸ್ಮಿಕವಾಗಿ ತುರ್ತು ನಿರ್ಗಮನ ಬಾಗಿಲು ತೆರೆದಿದ್ದಾರೆ. ಇದರ ನಂತರ ಎಲ್ಲಾ ತಪಾಸಣೆಯ ನಂತರ ವಿಮಾನವನ್ನು ಟೇಕ್ ಆಫ್ ಮಾಡಲು ಅನುಮತಿಸಲಾಯಿತು. ತನ್ನ ತಪ್ಪಿಗೆ ಅವರು ಕ್ಷಮೆಯನ್ನೂ ಕೇಳಿದ್ದಾರೆ” ಎಂದು ಹೇಳಿದ್ದಾರೆ.
“ಘಟನೆ ಬಗ್ಗೆ ಸ್ವತಃ ತೇಜಸ್ವಿ ಸೂರ್ಯ ಅವರೇ ಪೈಲಟ್ ಮತ್ತು ಸಿಬ್ಬಂದಿಗೆ ತಿಳಿಸಿದ್ದಾರೆ. ಡಿಜಿಸಿಎ ತನಿಖೆ ನಡೆಸಿದಂತೆ ಸಂಪೂರ್ಣ ಪ್ರೋಟೋಕಾಲ್ ಅನುಸರಿಸಲಾಗಿದೆ. ಎಲ್ಲಾ ತಪಾಸಣೆಯ ನಂತರವೇ ವಿಮಾನ ಹಾರಾಡಿತ್ತು. ಘಟನೆಯಿಂದ ಉಂಟಾದ ವಿಳಂಬಕ್ಕೆ ಸೂರ್ಯ ಅವರೇ ಕ್ಷಮೆಯಾಚಿಸಿದ್ದಾರೆ” ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಅನುಮತಿಯಿಲ್ಲದೆ ತುರ್ತು ನಿರ್ಗಮನಗಳನ್ನು ತೆರೆದ ಪ್ರಯಾಣಿಕರ ವಿರುದ್ಧ ವಿಮಾನಯಾನ ಸಂಸ್ಥೆಯು ಪೊಲೀಸ್ ದೂರು ದಾಖಲಿಸಿರುವ ಘಟನೆ ಈ ಹಿಂದೆ ಹಲವು ಬಾರಿ ನಡೆದಿತ್ತು. ಆದರೆ ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಘಟನೆ ನಡೆದು ಒಂದು ತಿಂಗಳು ಕಳೆದರೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ತಾನು ಎಸಗಿದ ಕಿಡಿಗೇಡಿತನದ ಬಗ್ಗೆ ನಂತರ ಸಂಸದ ತೇಜಸ್ವಿ ಸೂರ್ಯ ಅವರು ಲಿಖಿತ ಕ್ಷಮಾಪಣೆ ಪತ್ರವನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ಆದರೂ ವಿಮಾನಯಾನ ಸಂಸ್ಥೆಯ ಅವರ ವಿರುದ್ಧ ಯಾವುದೇ ಹೆಚ್ಚಿನ ತನಿಖೆಯನ್ನು ನಡೆಸದೆ, ಅದೇ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಸಂಸದನ ಕುಚೇಷ್ಠೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ; ಬಿಜೆಪಿ ಸೇರಿ, ಇಲ್ಲವೇ ಬುಲ್ಡೋಜರ್ ದಾಳಿ ಎದುರಿಸಿ: ಕಾಂಗ್ರೆಸ್ಸಿಗರಿಗೆ ಮಧ್ಯ ಪ್ರದೇಶ ಬಿಜೆಪಿ ಸಚಿವನ ಬಹಿರಂಗ ಬೆದರಿಕೆ


