ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜು.23) ತಮ್ಮ ಏಳನೇ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಬಜೆಟ್, ಮುಂದಿನ ಐದು ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯನ್ನು ರೂಪಿಸುವ ಕ್ರಿಯಾ ಯೋಜನೆ ಎಂದು ಪರಿಗಣಿಸಲಾಗಿದೆ.
ಇಂದಿನ ಬಜೆಟ್‌ನಲ್ಲಿ, ಮಧ್ಯಮ ವರ್ಗದವರಿಗೆ ದೊಡ್ಡ ಕೊಡುಗೆಯ ರೂಪದಲ್ಲಿ ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳ ಅಡಿಯಲ್ಲಿ ಮೂಲ ವಿನಾಯಿತಿ ಮಿತಿಗಳಲ್ಲಿ ಹೆಚ್ಚಳವನ್ನು ನಿರ್ಮಲಾ ಸೀತಾರಾಮನ್ ಘೋಷಿಸುವ ನಿರೀಕ್ಷೆಯಿದೆ.
ಬಜೆಟ್ ಹೊಸ ಉತ್ಪಾದನಾ ಸೌಲಭ್ಯಗಳಿಗೆ ತೆರಿಗೆ ಪ್ರೋತ್ಸಾಹವನ್ನು ನೀಡುವ ಸಾಧ್ಯತೆಯಿದೆ. ನಿರುದ್ಯೋಗ ಹೆಚ್ಚಳದಿಂದಾಗಿ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗುತ್ತಿರುವ ಕೇಂದ್ರ ಸರ್ಕಾರ, ಈ ಬಾರಿಯಾದರೂ ಉದ್ಯೋಗ ಸೃಷ್ಟಿ ಕಡೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯವಾಗಿದೆ.
ವಿತ್ತ ಸಚಿವರು ಸದೃಢ ಬಜೆಟ್ ಮಂಡಿಸಲಿದ್ದಾರೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಭರವಸೆಗಳು ಜನ ಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ನಿನ್ನೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.
ಕೇಂದ್ರ ಬಜೆಟ್ 2024 ಜುಲೈ 30ರಂದು ಅಂಗೀಕಾರವಾಗುವ ಸಾಧ್ಯತೆಯಿದೆ. ವಿರೋಧ ಪಕ್ಷದ ನಾಯಕರು ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಕ್ಷೇತ್ರಗಳಲ್ಲಿನ ಬೆಳವಣಿಗೆಯ ಕೊರತೆ ಮತ್ತು ಕೃಷಿ ಸಂಕಷ್ಟದ ಪ್ರಸ್ತಾಪ ಮಾಡಿ ಸರ್ಕಾರವನ್ನು ಪ್ರಶ್ನಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಧನ್ಯಾ ರಾಜೇಂದ್ರನ್ ವಿರುದ್ಧದ ಅವಹೇಳನಕಾರಿ ವಿಡಿಯೋ, ಪೋಸ್ಟ್‌ಗಳನ್ನು ತೆಗೆದುಹಾಕಲು ಹೈಕೋರ್ಟ್ ಆದೇಶ


