ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ಮುಸ್ಲಿಂ ವೃದ್ಧನ ಮೇಲೆ ಚಿತ್ರಹಿಂಸೆ ನೀಡಿರುವ ಘಟನೆಯ ಕುರಿತು ಟ್ವೀಟ್ ಮಾಡಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟ್ವಿಟರ್, ಹಲವಾರು ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರು ಸೇರಿದಂತೆ ಒಟ್ಟು 9 ಹೆಸರುಗಳ ಮೇಲೆ ಗಾಜಿಯಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತ ವೃದ್ಧ ಅಬ್ದುಲ್ ಸಮದ್ ಎಂಬವರು ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆಟೋದಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಕಾಡಿನೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಚಾಕುವಿನಲ್ಲಿ ವೃದ್ದನ ಗಡ್ಡ ಕತ್ತರಿಸಿ, ಕೋಲಿನಿಂದ ಹಲ್ಲೆ ಮಾಡುತ್ತಿರುವುದನ್ನು ವಿಡಿಯೋ ವೈರಲ್ ಆಗಿತ್ತು.
ಘಟನೆಯ ಬಗ್ಗೆ ಸ್ವತಃ ವೃದ್ದನೆ ಅಳುತ್ತಾ ಮಾಹಿತಿ ನೀಡಿದ್ದರು. ಅದರಲ್ಲಿ, “ನನ್ನ ಹೆಸರು ಚೌದರಿ ಅಬ್ದುಲ್ ಸಮದ್ ಎಂದಾಗಿದ್ದು, ದೆಹಲಿ ಗಡಿಯ ಗಾಝಿಯಾಬಾದ್‌ನ ಲೋನಿಯಲ್ಲಿ ನನ್ನ ಮೇಲೆ ದಾಳಿ ನಡೆದಿದೆ. ಅಲ್ಲಿ ಇಬ್ಬರು ಆಟೋದವರು ನನ್ನ ಮುಖಕ್ಕೆ ರುಮಾಲನ್ನು ಮುಚ್ಚಿ ಕರೆದುಕೊಂಡು ಹೋದರು. ಬಳಿಕೆ ನನಗೆ ಹೊಡೆಯಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಕಾಡಿಗೆ ಕರೆದುಕೊಂಡುಹೋಗಿ ಒಂದು ಕೋಣೆಯಲ್ಲಿಟ್ಟರು. ಅವರು ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು, ನಾನು ಯಾ ಅಲ್ಲಾಹ್ ಎಂದು ಕೂಗಿದರೆ ಹೊಡೆಯುತ್ತಿದ್ದರು. ಪಿಸ್ತೂಲ್ ಹಣೆಗೆ ಇಟ್ಟಿದ್ದು, ನನ್ನ ಮೇಲೆ ಭೀಕರ ಹಲ್ಲೆ ನಡೆಸಿದ್ದು, ನಾವು ಮುಸ್ಲಿಮರಿಗೆ ಹಲ್ಲೆ ನಡೆಸಿದ್ದೇವೆ… ನನ್ನ ಗಡ್ಡವನ್ನು ಕಿತ್ತರು ಎಂದು” ಎಂದು ಹೇಳುವುದನ್ನು ಕಾಣಬಹುದಾಗಿದೆ.
ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಎಂಬಲ್ಲಿ ಜೂನ್ 05 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಆದರೆ ಘಟನೆಯಲ್ಲಿ ಯಾವುದೇ “ಕೋಮು ಆಯಾಮ” ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲೀಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜಕ್ಕೆ ಒಂದು ಕಳಂಕ : ರಾಹುಲ್ ಗಾಂಧಿ
ಗಾಜಿಯಾಬಾದ್ ಪೊಲೀಸರು ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಆಯೂಬ್, ಸಬಾ ನಖ್ವಿ, ಡಿಜಿಟಲ್ ಮಾಧ್ಯಮ ಸಂಸ್ಥೆಯಾದ ದಿ ವೈರ್, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ, ಶಮಾ ಮೊಹಮ್ಮದ್ ಮತ್ತು ಟ್ವಿಟರ್ ಇಂಕ್ ಮತ್ತು ಟ್ವಿಟರ್ ಇಂಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಘಟನೆಯ ಬಗೆಗಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಕೋಮು ಬಣ್ಣವನ್ನು ಹಚ್ಚಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹಾಕಲಾಗಿದೆ. “ಕೋಮು ಭಾವನೆಗಳನ್ನು ಪ್ರಚೋದಿಸುವ ಸ್ಪಷ್ಟ ಉದ್ದೇಶದಿಂದ ಟ್ವೀಟ್‌ಗಳನ್ನು ಹಂಚಿಕೊಳ್ಳಲಾಗಿದೆ” ಎಂದು ಎಫ್‌ಐಆರ್ ಹೇಳುತ್ತದೆ.
ಒಕ್ಕೂಟ ಸರ್ಕಾರದ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸಾಮಾಜಿಕ ಜಾಲತಾಣವೊಂದರ ವಿರುದ್ದ ದಾಖಲಾದ ಮೊದಲ ಪ್ರಕರಣವಾಗಿದೆ ಇದು. ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಸರ್ಕಾರದ ಮೂಲಗಳು ಬುಧವಾರ ಹೇಳಿವೆ.
“ಇದರಿಂದಾಗಿ ಇತರ ಪ್ರಕಾಶನ ಸಂಸ್ಥೆಯಂತೆ ಟ್ವಿಟರ್ ಕೂಡಾ ಭಾರತೀಯ ಕಾನೂನಿನ ಪ್ರಕಾರ ಪ್ರಕರಣವನ್ನು ಎದುರಿಸಬೇಕಾಗಬಹುದು. ಯಾಕೆಂದರೆ ಅವರು ಪ್ರಕರಣದ ವೀಡಿಯೊವನ್ನು ‘ತಿರುಚಲ್ಪಟ್ಟ ವಿಡಿಯೊ’ ಎಂದು ಅದನ್ನು ಗುರುತಿಸದ ಮಾಡದ ಕಾರಣಕ್ಕೆ ದಂಡನೆಯನ್ನು ಎದುರಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಸದ್ದಿಲ್ಲದೇ CAA ಜಾರಿಗೊಳಿಸುತ್ತಿದೆ: ಸುಪ್ರೀಂನಲ್ಲಿ IUML ಪ್ರಶ್ನೆ
ಆದರೆ ಮಂಗಳವಾರ ಸಂಜೆ, ಟ್ವಿಟರ್ ಒಕ್ಕೂಟ ಸರ್ಕಾರದ ಹೊಸ ಕಾನೂನುಗಳ ಪ್ರಕಾರ ಮಧ್ಯಂತರವಾಗಿ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಿಸಿದೆ ಎಂದು ಹೇಳಿದೆ.
ಈ ಬಗ್ಗೆ ಒಕ್ಕೂಟದ ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅವರು, “ಯುಪಿಯಲ್ಲಿ ನಡೆದಿದೆ ಎನ್ನಲಾಗಿರುವ ನಕಲಿ ಸುದ್ದಿಗಳ ವಿರುದ್ಧದ ಹೋರಾಟದಲ್ಲಿ ಟ್ವಿಟರ್‌ನ ಅನಿಯಂತ್ರಿತತೆಗೆ ಉದಾಹರಣೆಯಾಗಿದೆ. ಟ್ವಿಟರ್ ತನ್ನ ಫ್ಯಾಕ್ಟ್ ಚೆಕ್ ಕಾರ್ಯವಿಧಾನದಲ್ಲಿ ಉತ್ಸಾಹದಿಂದ ಕೂಡಿದ್ದರೂ, ಯುಪಿ ಘಟನೆಯಂತಹ ಅನೇಕ ಸಂದರ್ಭಗಳಲ್ಲಿ ಅದು ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಹಾಗೂ ಗೊಂದಲಕ್ಕೊಳಗಾಗಿದೆ. ಇದು ಸುಳ್ಳು ಮಾಹಿತಿಯ ವಿರುದ್ಧ ಹೋರಾಡುವಲ್ಲಿ ಅದರ ಅಸಂಗತತೆಯನ್ನು ಸೂಚಿಸುತ್ತದೆ” ಎಂದು ಅವರು ಹೇಳಿದ್ದಾರೆ.
What happened in UP was illustrative of Twitter’s arbitrariness in fighting fake news. While Twitter has been over enthusiastic about its fact checking mechanism, it’s failure to act in multiple cases like UP is perplexing & indicates its inconsistency in fighting misinformation.
— Ravi Shankar Prasad (@rsprasad) June 16, 2021
ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಸೂಫಿ ಅಬ್ದುಲ್ ಸಮದ್ ಮಾರಾಟ ಮಾಡಿದ ಕೆಲವು ತಾಯತಗಳು ಕೆಲಸ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಹಿಂದೂ ಮತ್ತು ಮುಸ್ಲಿಮ್ ಧರ್ಮಿಯರಾದ ಆರು ಜನರು ಅವರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜೈಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ, ಗಡ್ಡ ಕಿತ್ತು ಚಿತ್ರಹಿಂಸೆ
“ಯುಪಿಯ ಬುಲಂದ್‌ಶಹರ್ ನಿವಾಸಿ ಅಬ್ದುಲ್ ಸಮದ್ ಎಂಬ ವೃದ್ಧನ ಮೇಲೆ ಕೆಲವರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈ ಘಟನೆಯ ಬಗ್ಗೆ ಮತ್ತಷ್ಟು ತನಿಖೆ ಮಾಡಿದಾಗ, ಸಂತ್ರಸ್ತ ವೃದ್ದನೂ ಜೂನ್ 5 ರಂದು ಲೋನಿ ಗಡಿ ಪ್ರದೇಶದಿಂದ ಬಂದಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ತಾಯತಗಳನ್ನು ತಯಾರಿಸುವ ಅಬ್ದುಲ್ ಸಮದ್ ಅವರು ಅಲ್ಲಿಂದ ಹಾಜಿಪುರ ಗ್ರಾಮಕ್ಕೆ ತೆರಳಿದ್ದಾರೆ. ಅವರಿಗೆ ಈಗಾಗಲೇ ಆರೋಪಿಗಳು ಯಾರೆಂದು ತಿಳಿದಿತ್ತು. ಅವರ ಮೇಲೆ ಅಸಮಾಧಾನಗೊಂಡಿದ್ದ ಆರೋಪಿಗಳೇ ಅವರನ್ನು ಕರೆದಿದ್ದರು. ಈಗಾಗಲೇ ಹಲವರ ಬಂಧನಗಳನ್ನು ನಡೆಸಲಾಗಿದೆ” ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿ ಇರಾಜ್ ರಾಜಾ ವಿಡಿಯೊವೊಂದರಲ್ಲಿ ಹೇಳಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ.
थाना लोनी बार्डर क्षेत्रान्तर्गत हुई घटना में #GhaziabadPolice द्वारा की गई कठोर कार्यवाही- 03 अभियुक्त गिरफ्तार ।
उक्त सम्बन्ध में पुलिस अधीक्षक, ग्रामीण की वीडियो बाईट।@Uppolice https://t.co/IIcMJIvn46 pic.twitter.com/ZGHGQIpXsh— GHAZIABAD POLICE (@ghaziabadpolice) June 15, 2021
ಟ್ವಿಟರ್ ಮತ್ತು ಇತರ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಮುಂತಾದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕಾ!


