Homeಮುಖಪುಟನೇಮಕಾತಿಯಲ್ಲಿ ಹಿನ್ನಡೆ ಕಾರಣ: ಹೊಸ ಸಿಬಿಐ ನಿರ್ದೇಶಕರ ಅಧಿಕಾರವಧಿ ಕಡಿತಕ್ಕೆ ಮುಂದಾದ ಕೇಂದ್ರ?

ನೇಮಕಾತಿಯಲ್ಲಿ ಹಿನ್ನಡೆ ಕಾರಣ: ಹೊಸ ಸಿಬಿಐ ನಿರ್ದೇಶಕರ ಅಧಿಕಾರವಧಿ ಕಡಿತಕ್ಕೆ ಮುಂದಾದ ಕೇಂದ್ರ?

ಸುಪ್ರೀಂ ಕೋರ್ಟ್ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ ಸಿಬಿಐ ನಿರ್ದೇಶಕರಿಗೆ ಕನಿಷ್ಠ ಎರಡು ವರ್ಷಗಳ ಅವಧಿ ನಿಗಧಿಪಡಿಸಿವೆ.

- Advertisement -
- Advertisement -

ಫೆಬ್ರವರಿಯಿಂದ ಖಾಲಿಯಿದ್ದ ಸಿಬಿಐ ನಿರ್ದೇಶಕರ ಹುದ್ದೆಗೆ ಕಳೆದ ತಿಂಗಳು 1985ರ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ತ್ರಿಸದಸ್ಯ ಸಮಿತಿಯು ನೇಮಕ ಮಾಡಿತ್ತು. ಇದು ಪ್ರಧಾನಿ ನರೇಂದ್ರ ಮೋದಿಯವರಿಗೆ ಇರಿಸುಮುರಿಸು ತಂದಿತ್ತು ಏಕೆಂದರೆ ಕೇಂದ್ರ ಸರ್ಕಾರವು ಸಿದ್ದಪಡಿಸಿದ್ದ ಪಟ್ಟಿಯಲ್ಲಿ ಗಡಿ ಭದ್ರತಾ ಪಡೆ ಮುಖ್ಯಸ್ಥ ರಾಕೇಶ್ ಅಸ್ತಾನಾ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಮುಖ್ಯಸ್ಥ ವೈ.ಸಿ. ಮೋದಿ ಅವರ ಹೆಸರುಗಳಿದ್ದವು. ಈ ಇಬ್ಬರೂ ಬಿಜೆಪಿಗೆ ಆಪ್ತರಾಗಿದ್ದರು ಎನ್ನಲಾಗಿದೆ. ಆದರೆ ಮುಖ್ಯ ನ್ಯಾಯಮೂರ್ತಿ ರಮಣ ಅವರು, “ಈ ಸ್ಥಾನಕ್ಕೆ ಆರು ತಿಂಗಳಿಗಿಂತ ಕಡಿಮೆ ಅವಧಿಯ ಸೇವೆಯನ್ನು ಹೊಂದಿರುವ ಪೊಲೀಸ್ ಅಧಿಕಾರಿಯನ್ನು ಪರಿಗಣಿಸಬಾರದು” ಎಂದು ಒತ್ತಾಯಿಸಿದ್ದರಿಂದ ಕೇಂದ್ರ ತಯಾರಿಸಿದ್ದ ಪಟ್ಟಿಯು ಹಿನ್ನಲೆಗೆ ಸರಿದಿತ್ತು.

ಈಗ ಕೇಂದ್ರ ಸರ್ಕಾರ ಅವರ ಅಧಿಕಾರವಧಿಯಲ್ಲಿ ಕಡಿತಗೊಳಿಸುವ ಮೂಲಕ ಮತ್ತೊಂದು ರೀತಿಯಲ್ಲಿ ಹೊಸ ಸಿಬಿಐ ನಿರ್ದೇಶಕರಿಗೆ ತೊಂದರೆ ಕೊಡಲು ಮುಂದಾಗಿದೆ ಎಂದು ದಿ ವೈರ್ ವಿಸ್ತೃತ ವರದಿ ಮಾಡಿದೆ. ಸಾಮಾನ್ಯವಾಗಿ ನಿರ್ದೇಶಕರ ಅಧಿಕಾರವಧಿ 2 ವರ್ಷಗಳಿದ್ದರೂ ಸಹ ಇವರ ನೇಮಕಾತಿಯಲ್ಲಿ ಮುಂದಿನ ಆದೇಶದವರೆಗೆ ಎಂದು ಸೇರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೇ 25 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ ಟಿಪ್ಪಣಿಯಲ್ಲಿ, “ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಶಿಫಾರಸು ಮಾಡಿದ ಸಮಿತಿಯ ಆಧಾರದ ಮೇಲೆ, ಐಪಿಎಸ್ (ಎಂಹೆಚ್ 1985: ಶ್ರೀ ಸುಬೋಧ್ ಕುಮಾರ್ ಜೈಸ್ವಾಲ್ ಅವರ ನೇಮಕಕ್ಕೆ ಅನುಮೋದನೆ ನೀಡಿದೆ), ಸಿಬಿಐನ ನಿರ್ದೇಶಕರಾಗಿ, ಕಚೇರಿಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳವರೆಗೆ ಅಥವಾ ಯಾವುದು ಮೊದಲಿನದೋ ಅಂತಹ ಮುಂದಿನ ಆದೇಶದವರೆಗೆ” ಎಂದು ಬರೆಯಲಾಗಿದೆ.

ಸಿಬಿಐ ಹೊಸ ನಿರ್ದೇಶಕರ ಅಧಿಕಾರಾವಧಿಯನ್ನು ಏಕೆ ಅನಿಯಂತ್ರಿತವಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಪ್ರಶ್ನೆಗೆ ಅದು ಉತ್ತರ ನೀಡಿಲ್ಲ. ಸುಬೋಧ್ ಕುಮಾರ್ ಜೈಸ್ವಾಲ್ ಅವರ ಮೊದಲು, ನರೇಂದ್ರ ಮೋದಿ ಸರ್ಕಾರವು ಹಿಂದಿನ ಮೂರು ಸಿಬಿಐ ಮುಖ್ಯಸ್ಥರಾದ ಅನಿಲ್ ಸಿನ್ಹಾ, ಅಲೋಕ್ ವರ್ಮಾ ಮತ್ತು ರಿಷಿ ಕುಮಾರ್ ಶುಕ್ಲಾ ಅವರ ನೇಮಕಾತಿಗಳನ್ನು ಹಿಂದಿನ ಮಾನದಂಡಗಳ ಮೇಲೆ ಮಾಡಿದ್ದರು. ಅಂದರೆ ಅವರ ಅಧಿಕಾರವದಿ 2 ವರ್ಷ ಇತ್ತು ಮತ್ತು ಆಗ ಮುಂದಿನ ಆದೇಶದವರೆಗೆ ಎಂಬ ಷರತ್ತು ಇರಲಿಲ್ಲ. ಆದರೆ ಹೀಗೆಕೆ ಎಂಬ ಪ್ರಶ್ನೆ ಎದ್ದಿದೆ.

ಈ ಆದೇಶಕ್ಕೆ ಪ್ರತಿಕ್ರಿಯೆಯಾಗಿ, ಹರಿಯಾಣ ಮೂಲದ ವಕೀಲ ಮತ್ತು ಆರ್‌ಟಿಐ ಕಾರ್ಯಕರ್ತ ಹೇಮಂತ್ ಕುಮಾರ್ ಅವರು ಜೂನ್ 4 ರಂದು ಡಿಒಪಿಟಿಗೆ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಂದಿನ ಆದೇಶದವರೆಗೆ ಎಂಬ ಪದಗಳನ್ನು ಏಕೆ ಸೇರಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.

ಅವರ ಪ್ರಶ್ನೆಗೆ ಪ್ರತಿಯಾಗಿ ಜೂನ್ 14 ರಂದು “ನೀವು ಕೇಳಿದ ಮಾಹಿತಿಯು ಪ್ರಶ್ನೆ / ಸ್ಪಷ್ಟೀಕರಣ ಸ್ವರೂಪದ್ದಾಗಿದೆ ಮತ್ತು ಸ್ಪಷ್ಟೀಕರಣ ಅಥವಾ ವ್ಯಾಖ್ಯಾನಿಸುವುದು ಆರ್‌ಟಿಐ ಕಾಯ್ದೆ, 2005 ರ ವಿಭಾಗ 2 (ಎಫ್) ಅಡಿಯಲ್ಲಿ ವ್ಯಾಖ್ಯಾನಿಸಲಾದ ಮಾಹಿತಿಯ ವ್ಯಾಪ್ತಿಯನ್ನು ಮೀರಿದೆ, ಹಾಗಾಗಿ ಉತ್ತರಿಸಲು ಬರುವುದಿಲ್ಲ” ಎಂಬ ಪ್ರತ್ಯುತ್ತರ ಬಂದಿದೆ.

ಅಲ್ಲದೆ ಕುಮಾರ್ ಅವರು ಅರ್ಜಿಯಲ್ಲಿ “ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ, 1946 ರ ಸೆಕ್ಷನ್ 4 ಬಿ (ಐ) ಪ್ರಕಾರ, ಸಿಬಿಐ ನಿರ್ದೇಶಕರು, ತಮ್ಮ ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ವ್ಯತಿರಿಕ್ತವಾಗಿ ಏನಾದರೂ ಇದ್ದರೂ, ಅವರು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಅಧಿಕಾರವನ್ನು ಮುಂದುವರಿಸುತ್ತಾರೆ” ಎಂದಿರುವುದನ್ನು ಎತ್ತಿ ತೋರಿಸಿದ್ದಾರೆ.

ಉತ್ತರಕ್ಕೆ ಪ್ರತಿಕ್ರಿಯಿಸಿದ ಕುಮಾರ್, ತಾನು ಎಂದಿಗೂ ಸ್ಪಷ್ಟೀಕರಣವನ್ನು ಕೇಳಲಿಲ್ಲ ಆದರೆ ಸಿಬಿಐ ನಿರ್ದೇಶಕರ ಅಧಿಕಾರಾವಧಿಯನ್ನು ನಿರ್ದಿಷ್ಟಪಡಿಸಲು ಇಲಾಖೆಯ ಆದೇಶದಲ್ಲಿ ಬಳಸಲಾದ ಪದಗಳ ಬಗ್ಗೆ ಮಾತ್ರ ವಿವರಗಳನ್ನು ಕೋರಿದ್ದೇನೆ ಎಂದು ಹೇಳಿದ್ದಾರೆ.

1997 ರ ಡಿಸೆಂಬರ್‌ನಲ್ಲಿ, ವಿನೀತ್ ನರೈನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸಿಬಿಐ ನಿರ್ದೇಶಕರ ಕನಿಷ್ಠ ಅಧಿಕಾರಾವಧಿಯು ಎರಡು ವರ್ಷಗಳು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ಕೇಂದ್ರ ಸರ್ಕಾರ ಅದನ್ನು ಉಲ್ಲಂಘಿಸುತ್ತಿದೆ ಎಂದು ಕುಮಾರ್ ಆರೋಪಿಸಿದ್ದಾರೆ.

ಸಿಬಿಐ ನಿರ್ದೇಶಕರ ನೇಮಕಾತಿಯನ್ನು ಮೂರು ಸದಸ್ಯರ ಸಮಿತಿಯು ನಿರ್ಧರಿಸುತ್ತದೆ. ಅದರಲ್ಲಿ ಪ್ರಧಾನ ಮಂತ್ರಿ ಆ ಸಮಿತಿಯ ಅಧ್ಯಕ್ಷರಾದರೆ, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಿಸುವ ಸದಸ್ಯರು ಮತ್ತು ಪ್ರತಿಪಕ್ಷದ ನಾಯಕರು ಇರುತ್ತಾರೆ.

ಒಟ್ಟಾರೆ ಈ ಪ್ರಕರಣದಲ್ಲಿ ತಾನು ಬಯಸಿದವರು ಸಿಬಿಐ ನಿರ್ದೇಶಕರಾಗದ ಕಾರಣ ಕೇಂದ್ರ ಸರ್ಕಾರ ಅವರ ಅಧಿಕಾರಾವಧಿಯನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂಬ ಆರೋಪಗಳಿಗೆ ಪುಷ್ಟಿ ಕೊಡುವಂತೆ ನಡೆದುಕೊಳ್ಳುತ್ತಿದೆ ಎಂಬುದನ್ನು ಮೇಲಿನ ಆಧಾರಗಳು ಸೂಚಿಸುತ್ತವೆ.

ಕೃಪೆ: ದಿ ವೈರ್


ಇದನ್ನೂ ಓದಿ: ಸಿಬಿಐ ಮುಖ್ಯಸ್ಥರಾಗಿ ಆಯ್ಕೆಯಾದ ಸುಬೋಧ್ ಕುಮಾರ್ ಜೈಸ್ವಾಲ್; ಕೇಂದ್ರಕ್ಕೆ ಹಿನ್ನಡೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...