Homeಮುಖಪುಟಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು.

ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗೋವಾ, ಪುದುಚೇರಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ ಸೇರಿದಂತೆ ಒಟ್ಟು 10 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಒಂದು ಮತ್ತು ಎರಡನೇ ಹಂತದ ಎಸ್‌ಐಆರ್‌ನಲ್ಲಿ ಬರೋಬ್ಬರಿ 5 ಕೋಟಿ 65 ಲಕ್ಷಕ್ಕಿಂತ ಅಧಿಕ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ವರದಿಗಳು ಹೇಳುತ್ತವೆ.

ಇತ್ತೀಚೆಗೆ (2025 ಮತ್ತು 2026) ಚುನಾವಣೆ ನಡೆದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಚುನಾವಣೆಯ ಬಳಿಕ ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ತಮ್ಮ ಮತದಾನದ ಹಕ್ಕು ಕಳೆದುಕೊಂಡ ಜನರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಅವರಿಗೆ ಮುಂದೇನು ಎಂಬ ಚಿಂತೆ ಶುರುವಾಗಿದೆ.

ಎಸ್‌ಐಆರ್ ನಡೆಸುವಾಗ ಕೇಂದ್ರ ಸರ್ಕಾರ ಇದು ನಾಗರಿಕತ್ವವನ್ನು ನಿರ್ಧರಿಸುವ ಅಥವಾ ಪರಿಶೀಲಿಸುವ ಪ್ರಕ್ರಿಯೆಯಲ್ಲ, ಬದಲಿಗೆ ಇದು ಕೇವಲ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಕಾರ್ಯಾಚರಣೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿತ್ತು.

ಕೆಲವು ವಿರೋಧ ಪಕ್ಷಗಳು ಮತ್ತು ಸಂಘಟನೆಗಳು ಎಸ್‌ಐಆರ್‌ ಪ್ರಕ್ರಿಯೆಯನ್ನು ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ಮಾದರಿಯ ನಾಗರಿಕತ್ವ ತಪಾಸಣೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಚುನಾವಣಾ ಆಯೋಗವು, ಮತದಾರರ ಪಟ್ಟಿಯಲ್ಲಿ ಯಾವುದೇ ವಿದೇಶಿ ಪ್ರಜೆಗಳು ಅಥವಾ ಅನರ್ಹರು ಇರಬಾರದು ಎಂಬುದು ಸಂವಿಧಾನದ ಆಶಯವಾಗಿದೆ. ಹೀಗಾಗಿ, ಎಸ್‌ಐಆರ್ ಅಡಿಯಲ್ಲಿ ನಡೆಯುವ ಪರಿಶೀಲನೆಯು ಕೇವಲ ಚುನಾವಣಾ ಅರ್ಹತೆಯನ್ನು ನಿರ್ಧರಿಸಲು ಮಾತ್ರ ಸೀಮಿತವಾಗಿದೆಯೇ ಹೊರತು, ಯಾವುದೇ ವ್ಯಕ್ತಿಯ ನಾಗರಿಕತ್ವವನ್ನು ಕಸಿದುಕೊಳ್ಳಲು ಅಥವಾ ದೇಶದಿಂದ ಹೊರಗಟ್ಟಲು (Deportation) ಅಲ್ಲ ಎಂದು ಹೇಳಿತ್ತು.

ಕೇಂದ್ರ ಸರ್ಕಾರ ಕೂಡ ಸಂಸತ್ತಿನಲ್ಲಿ (ರಾಜ್ಯಸಭೆ) ಮತ್ತು ಸುಪ್ರೀಂ ಕೋರ್ಟ್ ವಿಚಾರಣೆಗಳ ವೇಳೆ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಇಡೀ ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನಬದ್ಧ ಚೌಕಟ್ಟಿಗೆ ಒಳಪಟ್ಟಿದೆ ಎಂದು ಪ್ರತಿಪಾದಿಸಿತ್ತು.

ಎಸ್‌ಐಆರ್‌ನ ಮೂಲ ತತ್ವವು ಸಂವಿಧಾನದ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಆಧರಿಸಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿತ್ತು. ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದೇ ಇದರ ಉದ್ದೇಶವಾಗಿದೆ ಎಂದಿತ್ತು.

ಸಂವಿಧಾನದ ವಿಧಿ 324 ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1950 ರ ಸೆಕ್ಷನ್ 21 ರ ಅಡಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ಶುದ್ಧೀಕರಿಸುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಕೇಂದ್ರ ಸರ್ಕಾರ ಬೆಂಬಲಿಸಿತ್ತು.

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಮೇಲಿನ ಹೇಳಿಕೆ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಪ್ರಕಾರ, ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲ್ಪಟ್ಟವರು ಈಗಲೂ ಭಾರತದ ನಾಗರಿಕರು.

ಇಲ್ಲಿ ಗಮನಾರ್ಹ ವಿಷಯವೆಂದರೆ, ಮೃತರದ್ದು, ಸ್ಥಳಾಂತರಗೊಂಡವರದ್ದು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ಇರುವ ಹೆಸರುಗಳನ್ನು ಮಾತ್ರ ಎಸ್ಐಆರ್ ವೇಳೆ ತೆಗೆದು ಹಾಕಿದ್ದೇವೆ ಎಂದು ಚುನಾವಣಾ ಆಯೋಗ ಪದೇ ಪದೇ ಹೇಳಿಕೊಂಡು ಬಂದಿದೆ. ಆದರೆ, ಪ್ರಸ್ತುತ ಜೀವಂತ ಇರುವ, ಸ್ಥಳಾಂತರಗೊಳ್ಳದ ಮತ್ತು ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಣಿಯಾಗಿರದ ಅನೇಕರು ಮತದಾರರ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಇದರಿಂದ ಎಸ್‌ಐಆರ್ ಪ್ರಕ್ರಿಯೆಯೇ ಸರಿಯಾಗಿ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಮತ ಹಕ್ಕು ಹೋಯ್ತು ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಎಸ್‌ಐಆರ್‌ನಿಂದ ವಿವಿಧ ರಾಜ್ಯಗಳ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಈಗಾಗಲೇ ಕಳೆದುಕೊಂಡಿದ್ದಾರೆ. ಈಗ ಸರ್ಕಾರಿ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಬಿಹಾರ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ಅಧಿಕೃತವಾಗಿ ಹೇಳಿವೆ. ಹಾಗಾಗಿ, ಮುಂದೆ ಭಾರತದ ನಾಗರಿಕತ್ವ ಕೂಡ ಕಳೆದುಕೊಳ್ಳುವ ಆತಂಕ ಜನ ಸಾಮಾನ್ಯರಿಗೆ ಎದುರಾಗಿದೆ.

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲ್ಪಟ್ಟವರು ಪಡಿತರ ಮತ್ತು ಇತರ ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ. ಮುಂದಿನ ಹಂತದಲ್ಲಿ ಇಂತಹ ವ್ಯಕ್ತಿಗಳ ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸಹ ರದ್ದುಗೊಳಿಸಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿರುವುದಾಗಿ ವರದಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿಯೂ ಸಹ ಎಸ್‌ಐಆರ್‌ ಮೂಲಕ ಮತದಾರರ ಪಟ್ಟಿಯಿಂದ ಹೊರಬಿದ್ದ ಮಹಿಳೆಯರಿಗೆ ಅಲ್ಲಿನ ‘ಅನ್ನಪೂರ್ಣ ಭಂಡಾರ್’ ಯೋಜನೆಯ ಸೌಲಭ್ಯವನ್ನು ನಿಲ್ಲಿಸುವುದಾಗಿ ಅಲ್ಲಿನ ನೂತನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಾಮಾಜಿಕ ಕಲ್ಯಾಣ ಸಚಿವೆ ಅಗ್ನಿಮಿತ್ರ ಪಾಲ್ ಘೋಷಿಸಿದ್ದಾರೆ.

ಜೂನ್ 1 ರಿಂದ ಯೋಜನೆ ಜಾರಿಗೂ ಮುನ್ನ ಕಡ್ಡಾಯವಾಗಿ ಫಲಾನುಭವಿಗಳ ಪಟ್ಟಿಯ ವಿಶ್ಲೇಷಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ಸಂಪೂರ್ಣವಾಗಿ ಡಿಲೀಟ್ ಆದವರಿಗೆ ಮತ್ತು ಪ್ರಸ್ತುತ ತಮ್ಮ ಹೆಸರು ಕೈಬಿಟ್ಟಿರುವ ಕುರಿತು ಟ್ರಿಬ್ಯುನಲ್‌ಗಳಲ್ಲಿ ಮೇಲ್ಮನವಿ ಸಲ್ಲಿಸಿ ವಿಚಾರಣೆ ಬಾಕಿ ಇರುವ ಮಹಿಳೆಯರಿಗೂ ಸದ್ಯದ ಮಟ್ಟಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಮುಂದೆ ಬಿಜೆಪಿ ಆಡಳಿತ ಇತರ ರಾಜ್ಯಗಳು ಕೂಡ ಈ ರೀತಿ ಘೋಷಿಸುವ ಸಾಧ್ಯತೆ ಇದೆ. ಇದರಿಂದ, ಈಗಾಗಲೇ ಮತದಾನದ ಹಕ್ಕು ಕಳೆದುಕೊಂಡವರು ಸರ್ಕಾರಿ ಸೌಲಭ್ಯದ ಅವಕಾಶವನ್ನೂ ಕಳೆದುಕೊಂಡಾಯಿತು. ಈ ಮೂಲಕ ಅವರು ದ್ವಿತೀಯ ದರ್ಜೆಯ ನಾಗರಿಕರಾಗಿ ಆಯಿತು. ಮುಂದೆ ಇದನ್ನೇ ಮುಂದಿಟ್ಟು ದೇಶದಿಂದ ಹೊರದಬ್ಬಿದರೂ ಅಚ್ಚರಿಯಿಲ್ಲ.

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೊರಗಿಟ್ಟಿರುವುದು ಅನರ್ಹರನ್ನಲ್ಲವೇ? ಹೀಗಿರುವಾಗ ಚಿಂತೆ ಏಕೆ ಎಂಬ ಪ್ರಶ್ನೆ ಕೆಲವರಿಗೆ ಮೂಡಬಹುದು. ಇದಕ್ಕೆ ಉತ್ತರ ಕಂಡುಕೊಳ್ಳಲು ಪಶ್ಚಿಮ ಬಂಗಾಳದ ಎಸ್‌ಐಆರ್‌ನ ಬಗ್ಗೆ ಒಂದು ಬಾರಿ ಪರಾಮರ್ಶೆ ಮಾಡಿಕೊಳ್ಳಬೇಕು. ತಾರ್ಕಿಕ ವೈರುಧ್ಯ (logical Discrepancy) ಎಂಬ ಹೊಸ ಪ್ರಕ್ರಿಯೆಯನ್ನು ಪರಿಚಯಿಸಿ, ಸಣ್ಣ ಪುಟ್ಟ ಅಕ್ಷರ ತಪ್ಪುಗಳ ಕಾರಣಕ್ಕೆ ಅರ್ಹ ಮತದಾರರನ್ನು ಹೇಗೆ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂಬುವುದು ಗೊತ್ತಾಗುತ್ತದೆ.

ದಾಖಲೆಯಲ್ಲಿ ಸಣ್ಣ ಅಕ್ಷರ ತಪ್ಪಿದೆ ಎಂಬ ಕಾರಣಕ್ಕೆ ಭಾರತೀಯ ನಾಗರಿಕರಾದವರ ಮತದಾನದ ಹಕ್ಕನ್ನು ಕಿತ್ತುಕೊಂಡು, ಈಗ ಅದನ್ನೇ ನೆಪವಾಗಿಸಿ ಸರ್ಕಾರಿ ಸೌಲಭ್ಯದಿಂದಲೂ ಹೊರಗಿಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ?

ಭಾರತದ ನಾಗರಿಕರಾದ ಎಲ್ಲರಿಗೂ ಇಲ್ಲಿನ ಸರ್ಕಾರಗಳ ಸೌಲಭ್ಯಗಳು ತಲುಪಬೇಕು. ಅದು ನಿರಾಕರಿಸುವುದಾದರೆ ಸರ್ಕಾರ ಅವರನ್ನು ಭಾರತದ ನಾಗರಿಕರು ಎಂದು ಪರಿಗಣಿಸಿಲ್ಲ ಎಂದರ್ಥವಲ್ಲವೇ? ಹಾಗಿದ್ದರೆ, ಮತದಾರರ ಪಟ್ಟಿಯ ಶುದ್ದೀಕರಣ ಎಂದು ಎಸ್‌ಐಆರ್‌ ಹೆಸರಿನಲ್ಲಿ ಚುನಾವಣಾ ಆಯೋಗ ನಡೆಸಿರುವುದು ನಾಗರಿಕತ್ವ ಪರಿಶೀಲನೆಯೇ? ಅಂತಹ ಅಧಿಕಾರ ಆಯೋಗಕ್ಕೆ ಇದೆಯೇ? ನಾಗರಿಕತ್ವ ಪರಿಶೀಲನೆಯೇ ನಡೆಸಲಾಗಿದೆ ಅಂದುಕೊಂಡರೂ..ದಾಖಲೆಗಳಿರುವ ಜನರ ನಾಗರಿಕತ್ವ ಕಿತ್ತುಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇದು ಸಂವಿಧಾನದ ಆದೇಶಗಳಿಗೆ ವಿರುದ್ದವಲ್ಲವೇ? ಇಂತಹ ಅನ್ಯಾಯವನ್ನು ನಾಗರಿಕರು ಒಪ್ಪಿಕೊಳ್ಳಬೇಕಾ?

ಎಸ್‌ಐಆರ್ ಮೂಲಕ ಲಕ್ಷಾಂತರ ಅರ್ಹ ಮತದಾರರನ್ನು ಹೊರಗಿಟ್ಟು ಚುನಾವಣೆ ನಡೆಸಿರುವುದೇ ಸಂವಿಧಾನದ ಆಶಯಗಳಿಗೆ ವಿರುದ್ದ. ಕಾನೂನು ಹೋರಾಟದಲ್ಲೂ ಜನರಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಹಾಗಾದರೆ, ಜನರು ಯಾರಲ್ಲಿ ನ್ಯಾಯ ಕೇಳಬೇಕು? ತಮ್ಮ ನಾಗರಿಕತ್ವನ್ನು ಕಳೆದುಕೊಂಡು ಈ ದೇಶದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಾಗಿ ಇರಬೇಕಾ? ವಿದೇಶಿಗರು, ಅಕ್ರಮ ವಲಸಿಗರು ಎಂದು ಹೊರದಬ್ಬಿದರೆ ದೇಶ ಬಿಟ್ಟು ಹೋಗಲು ಸಿದ್ದರಾಗಿರಬೇಕಾ? ಈ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ಎಸ್‌ಐಆರ್ ಕೇವಲ ಮತದಾರರ ಪಟ್ಟಿಯ ಶುದ್ದೀಕರಣ ಎಂದು ಹೇಳುತ್ತಾ ಲಕ್ಷಾಂತರ ಜನರ ಮತದಾನದ ಹಕ್ಕು ಕಿತ್ತುಕೊಂಡ ಬಳಿಕ, ಈಗ ಸರ್ಕಾರಿ ಸೌಲಭ್ಯವನ್ನು ಕೊಡುವುದಿಲ್ಲ ಎಂದು ಘೋಷಣೆ ಮಾಡಿಯಾಗಿದೆ. ನಾಳೆ ಹಠಾತ್ ಆಗಿ ಎಸ್‌ಐಆರ್‌ನಲ್ಲಿ ಹೊರಬಿದ್ದವರು ಭಾರತದ ನಾಗರಿಕರಲ್ಲ ಎಂದರೆ ಏನು ಮಾಡಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...