Homeಅಂಕಣಗಳುತೀಸ್ತಾ - ಧರ್ಮಗ್ಲಾನಿಯಾದಾಗ ದಿಢೀರನೇ ಎತ್ತಿದ ಅವತಾರ ಅಲ್ಲ

ತೀಸ್ತಾ – ಧರ್ಮಗ್ಲಾನಿಯಾದಾಗ ದಿಢೀರನೇ ಎತ್ತಿದ ಅವತಾರ ಅಲ್ಲ

ತೀಸ್ತಾರ ಸಂವಿಧಾನದ ಕಾಲಾಳು ಪುಸ್ತಕಕ್ಕೆ ಅಮೀನ್ ಮಟ್ಟುರವರು ಬರೆದ ಮುನ್ನುಡಿ

- Advertisement -
- Advertisement -

| ದಿನೇಶ್ ಅಮೀನ್ ಮಟ್ಟು |

ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕದ ಹೆಸರು ‘ಸಂವಿಧಾನದ ಕಾಲಾಳು’. ತೀಸ್ತಾ ಸೆಟ್ಲ್‍ವಾಡ್‍ರ ಈ ಪುಸ್ತಕದ ಕನ್ನಡದ ಅನುವಾದಕ್ಕೆ ದಿನೇಶ್ ಅಮೀನ್ ಮಟ್ಟು ಅವರು ಬರೆದಿರುವ ಮುನ್ನುಡಿ, ನಾನುಗೌರಿ.ಕಾಂ ಓದುಗರಿಗಾಗಿ

ಪತ್ರಕರ್ತನಾಗಿರುವ ಕಾರಣಕ್ಕಾಗಿಯೂ ತೀಸ್ತಾ ನನ್ನ ಪಾಲಿಗೆ ಕುತೂಹಲಕಾರಿ ವ್ಯಕ್ತಿತ್ವ. ಜರ್ನಲಿಸ್ಟ್ ಮತ್ತು ಆಕ್ಟಿವಿಸ್ಟ್ ಗಳ ಪಾತ್ರಗಳನ್ನು ಗುರುತಿಸುವ ಲಕ್ಷ್ಮಣ ರೇಖೆ ಸದಾ ವಿವಾದಾತ್ಮಕ. ಗೌರಿ ಲಂಕೇಶ್ ಅವರಿಂದ ಹಿಡಿದು ರವೀಶ್ ಕುಮಾರ್‍ವರೆಗೆ ಬಹಳಷ್ಟು ಪತ್ರಕರ್ತರ ಸುತ್ತ ಇಂತಹ ಪ್ರಶ್ನೆಗಳು ಎದ್ದಿವೆ. ನಾನೇನು ಈಗ ಪೂರ್ಣಕಾಲಿಕ ಪತ್ರಕರ್ತನಲ್ಲದೆ ಇದ್ದರೂ “ನೀವು ಮೊದಲಿದ್ದ ಹಾಗಿಲ್ಲ, ಜರ್ನಲಿಸ್ಟ್ ಆಗಿಯೇ ಉಳಿಯಬೇಕಿತ್ತು, ಯಾಕೋ ನೀವು ಆಕ್ಟಿವಿಸ್ಟ್ ಆಗ್ತಿದ್ದೀರಿ’’ ಎಂದು ನನ್ನ ಕೆಲವು ಹಿತೈಷಿಗಳು ನನ್ನ ಮೇಲಿನ ಪ್ರೀತಿಯಿಂದಲೇ ಆಕ್ಷೇಪಿಸುವುದುಂಟು. ನಾನೇನು ತೀಸ್ತಾ ಅವರಂತೆ ಹೋರಾಟವನ್ನೇ ಬದುಕಾಗಿ ಮಾಡಿಕೊಂಡವನಲ್ಲ, ಹೋರಾಟಗಾರರ ಬೆಂಬಲಿಗ ಅಷ್ಟೆ. ಆಗೆಲ್ಲ ನನಗೆ ಸಮರ್ಥನೆಗೆ ಒದಗಿಬರುವುದು ತೀಸ್ತಾ.

ಗುಜರಾತ್ ಕೋಮುಗಲಭೆಯ ದಿನಗಳಲ್ಲಿ ಅತ್ಯಾಚಾರಕ್ಕೀಡಾಗಿದ್ದ ಬಿಲ್ಕಿಸ್ ಬಾನು ಎಂಬ ಹೆಣ್ಣುಮಗಳಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶ ದೇಶದ ಗಮನ ಸೆಳೆಯಿತು. ನೆನಪಿನ ಮರೆಗೆ ಸರಿದುಹೋಗಿದ್ದ ಬಿಲ್ಕಿಸ್ ಬಾನು ಒಮ್ಮಿಂದೊಮ್ಮಲೇ ಎಲ್ಲರ ಹುಡುಕಾಟದ ಕೇಂದ್ರ ವ್ಯಕ್ತಿಯಾದರು. ಅನಕ್ಷರಸ್ಥೆಯಾಗಿದ್ದರೂ ಬುದ್ದಿವಂತೆಯಾಗಿದ್ದ, ಅಸಹಾಯಕಳಾಗಿದ್ದರೂ ಸ್ವಾಭಿಮಾನಿಯಾಗಿದ್ದ ಬಿಲ್ಕಿಸ್ ಬಾನು ಮುಖದಲ್ಲಿಯೂ ಹೋರಾಟದಲ್ಲಿ ಗೆದ್ದ ಖುಷಿ ಇತ್ತು. ಪ್ರಭುತ್ವದ ದೈತ್ಯ ಶಕ್ತಿಯನ್ನು ಎದುರು ಹಾಕಿಕೊಂಡು ಇಷ್ಟೊಂದು ದೀರ್ಘ ಕಾಲ ಆಕೆ ನಡೆಸಿದ್ದ ಹೋರಾಟ ಅಷ್ಟು ಸುಲಭದ್ದಾಗಿರಲಿಲ್ಲ.

‘ಗುಜರಾತ್ ಅಭಿವೃದ್ಧಿ ಮಾದರಿ’ ಎಂಬ ಕಣ್ಕಟ್ಟು ಕೂಡಾ, ಗುಜರಾತ್ ಸಂತ್ರಸ್ತರ ಅಂತ್ಯವಿಲ್ಲದ ಗೋಳಿನ ಕತೆ ಹೊರ ಜಗತ್ತಿಗೆ ಕೇಳದಂತೆ ಮಾಡಲು ಬಾರಿಸಲಾಗುತ್ತಿರುವ ಢಂಗುರ ಎನ್ನುವುದು ಇಂದು ಸ್ಪಷ್ಟವಾಗಿದೆ. ಹದಿನೇಳು ವರ್ಷಗಳ ಹಿಂದೆ ನಡೆದಿರುವ ಗುಜರಾತ್ ಕೋಮುಗಲಭೆ ನಮಗೆ ನೆನಪಾಗುವುದು ಆಗಾಗ ಹೊರಬೀಳುತ್ತಿರುವ ನ್ಯಾಯಾಲಯದ ತೀರ್ಪುಗಳಿಂದ ಇಲ್ಲವೇ, ಚುನಾವಣಾ ಭಾಷಣಗಳಲ್ಲಿ ಸಿಡಿಯುವ ನಂಜಿನ ಎಂಜಲ ಹನಿಗಳ ಮೂಲಕ ಮಾತ್ರ. ಆ ಗಲಭೆಯಲ್ಲಿ ನೊಂದು-ಬೆಂದು ಹೋದ ಸಂತ್ರಸ್ತರಿಗೆ ನ್ಯಾಯ ಸಿಕ್ಕಾಗ ಖುಷಿಪಡುತ್ತೇವೆ, ನ್ಯಾಯ ಸಿಗದೆ ಇದ್ದಾಗ ಪ್ರಭುತ್ವಕ್ಕೆ, ನ್ಯಾಯಾಂಗಕ್ಕೆ ಶಾಪ ಹಾಕಿ, ಅಲ್ಲಿಲ್ಲಿ ಗೊಣಗಾಡಿ ಮರೆತು ಬಿಡುತ್ತೇವೆ.

ಆದರೆ, ಒಂದಷ್ಟು ಜನಪರ ಜೀವಗಳು ಹೋರಾಟದ ಕಿಡಿಗಳಾಗಿ ಇಷ್ಟು ವರ್ಷಗಳ ಕಾಲವೂ ಸಂತ್ರಸ್ತರ ಜತೆ ನಿಂತು ಪ್ರತಿರೋಧದ ಕುಲುಮೆಯ ಬೆಂಕಿ ಆರದಂತೆ ನೋಡಿಕೊಂಡಿರುವ ಕಾರಣಕ್ಕಾಗಿಯೇ ಇಂತಹ ಸಣ್ಣ ಸಣ್ಣ ಯಶಸ್ಸುಗಳನ್ನಾದರೂ ಕಾಣಲು ಸಾಧ್ಯವಾಗುತ್ತಿದೆ ಎನ್ನುವುದನ್ನು ಮರೆಯುತ್ತೇವೆ. ಇಂತಹದ್ದೊಂದು ಹೋರಾಟದ ಕಿಡಿ ತೀಸ್ತಾ ಸೆತಲ್ವಾಡ್. ಈ ಹೆಣ್ಣು ಮಗಳು ಇಲ್ಲದೆ ಹೋಗಿದ್ದರೆ ಗೋಧ್ರೋತ್ತರ ಗುಜರಾತ್ ಹೇಗಿರುತ್ತಿತ್ತು? ಕೋಮು ದಂಗೆಯಲ್ಲಿ ನೊಂದು-ಬೆಂದ ಸಾವಿರಾರು ಸಂಖ್ಯೆಯ ನೊಂದವರ ಸ್ಥಿತಿ ಏನಾಗಿರುತ್ತಿತ್ತು? ನರೇಂದ್ರ ಮೋದಿ ಮತ್ತು ಅವರ ಸಂಗಾತಿಗಳು ಕಟ್ಟಿ ದೇಶದ ಮುಂದಿಡುತ್ತಿದ್ದ ಸುಳ್ಳಿನ ಸೌಧಗಳು ಹೇಗಿರುತ್ತಿದ್ದವು ಎನ್ನುವುದನ್ನು ಕಲ್ಪಿಸಿಕೊಂಡರೆ ಈ `’ಸಂವಿಧಾನದ ಕಾಲಾಳು’’ ಗುಜರಾತ್ ಸಂತ್ರಸ್ತರಿಗಾಗಿ ನಡೆಸುತ್ತಾ ಬಂದಿರುವ ಹೋರಾಟದ ಮಹತ್ವ ಅರ್ಥವಾಗಬಹುದು.

ಈಗಲೂ ನರೇಂದ್ರ ಮೋದಿಯವರ 56 ಇಂಚಿನ ಎದೆಯೊಳಗೆ ಯಾರಾದರೂ ಇಣುಕಿ ನೋಡಿದರೆ ಅಲ್ಲಿರುವ ಶತ್ರುಗಳ ಪಟ್ಟಿಯಲ್ಲಿ ಮೊದಲ ಹೆಸರು ತೀಸ್ತಾದ್ದೇ ಇರಬಹುದು. ನಿರಂತರವಾದ ಮಾನಸಿಕ ಕಿರುಕುಳ, ದೈಹಿಕ ಬೆದರಿಕೆ, ಸುಳ್ಳು ಮೊಕದ್ದಮೆಗಳು, ಒಬ್ಬಂಟಿಯನ್ನಾಗಿ ಮಾಡುವ ಹುನ್ನಾರ, ಹೆಜ್ಜೆ ಹೆಜ್ಜೆಗೂ ಸೋಲಿನ ಆತಂಕ-ಅಸಹಾಯಕತೆ, ವಿಶ್ವಾಸದ್ರೋಹ ಇವೆಲ್ಲವುಗಳ ಹೊರತಾಗಿಯೂ ತೀಸ್ತಾ ತನ್ನ ದನಿ ಉಡುಗಿ ಹೋಗದಂತೆ ಕಾಯ್ದುಕೊಂಡು ಬಂದಿರುವುದು ಹೇಗೆ ಎನ್ನುವುದನ್ನು ಯೋಚನೆ ಮಾಡಿದರೆ ಆಶ್ಚರ್ಯವಾಗುತ್ತದೆ. ಜತೆಗೆ, ಸುರಂಗದ ಕೊನೆಯಲ್ಲೊಂದು ಬೆಳಕು ಕೂಡಾ ಕಾಣಿಸುತ್ತದೆ. ಸಮಾಜ ನಾವು ಆತಂಕಪಡುವಷ್ಟು ಕೆಟ್ಟದಾಗಿಲ್ಲ, ಒಳ್ಳೆಯ ಉದ್ದೇಶಗಳಿಗೆ ಕೈಜೋಡಿಸುವ ಸಜ್ಜನ ಧೈರ್ಯವಂತರೂ ಇದ್ದಾರೆ ಎಂಬ ಭರವಸೆ ಮೂಡಿಸುತ್ತದೆ. ಹೋರಾಟಕ್ಕೊಂದು ಸ್ಪೂರ್ತಿ ಕಾಣಿಸುತ್ತದೆ.

ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತಲೂ ಅದು ಬರದಂತೆ ತಡೆಗಟ್ಟುವುದಕ್ಕೆ ಆದ್ಯತೆ ನೀಡಬೇಕೆನ್ನುತ್ತಾರೆ. ಹೌದು, 1984ರ ಸಿಖ್ ಗಲಭೆಯ ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ, ಬಾಬರಿ ಮಸೀದಿ ಧ್ವಂಸವನ್ನು ತಡೆದಿದ್ದರೆ, 1992ರ ಮುಂಬೈ ಗಲಭೆಯ ಅಪರಾಧಿಗಳನ್ನು ಜೈಲಿಗೆ ಅಟ್ಟಿದ್ದರೆ, 2002ರ ಗುಜರಾತ್ ಗಲಭೆ ನಡೆಯುತ್ತಿರಲಿಲ್ಲವೇನೋ? ಇದೇ ಪ್ರಶ್ನೆಗಳ ಸರಣಿಗೆ ಗುಜರಾತ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀಸ್ತಾ ಸೆತಲ್ವಾಡ್ ಎಂಬ ಒಬ್ಬ ಹೆಣ್ಣುಮಗಳು ಎತ್ತುತ್ತಿದ್ದ ಆತಂಕದ ದನಿಗೆ ಕಿವಿಯಾಗಿದ್ದರೆ? ಎಂಬ ಪ್ರಶ್ನೆಯನ್ನು ಸೇರಿಸಬಹುದೇನೋ

ಈ ವೈಫಲ್ಯಗಳೆಲ್ಲ ನಮ್ಮ ಮೇಲೆ ನಾವೇ ಮಾಡಿಕೊಂಡ ಗಾಯಗಳು. ಈ ಸರಣಿ ವೈಫಲ್ಯವನ್ನು ಎಲ್ಲಿಯಾದರೂ ತಡೆದು ನಿಲ್ಲಿಸಬೇಕಿತ್ತಲ್ಲಾ? ಅಂತಹದ್ದೊಂದು ಪ್ರಯತ್ನವನ್ನು ಗುಜರಾತ್ ಗಲಭೆ ನಡೆಯುವುದಕ್ಕಿಂತ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ತೀಸ್ತಾ ತನ್ನ ಮೂಲ ಅವತಾರವಾಗಿದ್ದ ಪತ್ರಕರ್ತೆಯ ಬುದ್ದಿ ಬಳಸಿ ಸಂಗ್ರಹಿಸಿದ್ದ ದಾಖಲೆಗಳು ಮತ್ತು ಅದರ ಆಧಾರದಲ್ಲಿ ಮಾಡಿದ್ದ ವರದಿಗಳನ್ನು ಕಟ್ಟಿಕೊಂಡು ದೇಶದ ಖ್ಯಾತ ನ್ಯಾಯವಾದಿಗಳ ಮನೆಮನೆ ಅಲೆದಿದ್ದರು. “ಗುಜರಾತ್ ಕಡೆ ಗಮನಕೊಡಿ, ಅಲ್ಲೊಂದು ಅಗ್ನಿಪರ್ವತ ಕುದಿಯುತ್ತಿದೆ’’ ಎಂದು ಹಿರಿಯ ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು ಎಚ್ಚರಿಸಿದ್ದರು.

ತೀಸ್ತಾ ಧರ್ಮಗ್ಲಾನಿಯಾದಾಗ ದಿಢೀರನೇ ಎತ್ತಿದ ಅವತಾರ ಅಲ್ಲ. ಮೂಲತಃ ಗುಜರಾತ್‍ನಿಂದ ಮುಂಬೈಗೆ ವಲಸೆ ಬಂದ ಕುಟುಂಬದಲ್ಲಿ ಹುಟ್ಟಿದ್ದ ತೀಸ್ತಾಗೆ ಆ ರಾಜ್ಯದ ಜತೆ ಕೌಟುಂಬಿಕ ಮತ್ತು ಸ್ನೇಹದ ಒಡನಾಟವಿತ್ತು, ಗುಜರಾತ್ ಅರ್ಥವಾಗುತ್ತಿತ್ತು. ಈ ಹಿನ್ನೆಲೆಯ ಕಾರಣದಿಂದಾಗಿಯೇ ಯಾವುದೋ ದೊಡ್ಡ ದುರಂತಕ್ಕೆ ಅಣಿಯಾಗುತ್ತಿರುವ ನೆಲದ ದನಿ ಅವರಿಗೆ ಕೇಳತೊಡಗಿತ್ತು. ಇತರರೂ ಅದನ್ನು ಕೇಳಿಸಿಕೊಂಡಿದ್ದರೇ?

ಮಹಾತ್ಮ ಗಾಂಧೀಜಿ ಬದುಕಿದ್ದ ಗುಜರಾತ್ ರಾಜ್ಯವನ್ನು ನಾವು ಬಹುತೇಕರು ನೋಡಿಲ್ಲ. ನರೇಂದ್ರ ಮೋದಿ ಬದುಕಿದ್ದ ಗುಜರಾತನ್ನು ನೋಡುತ್ತಿದ್ದೇವೆ. ಅದನ್ನು ಸ್ವಲ್ಪ ಸಮೀಪದಿಂದ ನೋಡಿದವರಲ್ಲಿ ನಾನೂ ಒಬ್ಬ. ಗೋಧ್ರಾ ಘಟನೆ ನಡೆದ ನಾಲ್ಕು ದಿನಗಳ ನಂತರ ಮೊದಲ ಬಾರಿ ನಾನು ಗುಜರಾತ್‍ಗೆ ಹೋಗಿ ವರದಿ ಮಾಡಿದ್ದೆ. ಅದರ ನಂತರ ನಡೆದ ಎರಡು ವಿಧಾನಸಭಾ ಚುನಾವಣಾ ಸಮಯದಲ್ಲಿ ಹೋಗಿ ಸಮೀಕ್ಷೆಯನ್ನೂ ಮಾಡಿದ್ದೆ. ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುವ ಗುಜರಾತ್ ಈಗಲೂ ನನ್ನಂತಹವರ ಕುತೂಹಲದ ಕೇಂದ್ರ.

ದಕ್ಷಿಣ ಕನ್ನಡದಿಂದ ಬಂದ ಕಾರಣಕ್ಕಾಗಿಯೋ ಏನೋ ಗುಜರಾತ್ ರಾಜ್ಯದ ಒಳ-ಹೊರಗುಗಳು ಬಹಳ ಬೇಗೆ ನನಗೆ ಅರ್ಥವಾಗತೊಡಗಿದ್ದವು. ಗುಜರಾತಿನಂತೆಯೇ ಹಿಂದುತ್ವದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿರುವುದು ದಕ್ಷಿಣ ಕನ್ನಡ. ಆ ಜಿಲ್ಲೆಯ ಹಿಂದುತ್ವದ ಪ್ರಯೋಗಶಾಲೆ ಉದ್ಘಾಟನೆಗೊಂಡಿದ್ದು ಕೂಡಾ ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ. ಜಾತಿಧರ್ಮ ಮೀರಿ ಕೂಡಿ ಕಟ್ಟಿದ ಸೌಹಾರ್ದದ ಮನೆಯನ್ನು ಮುರಿಯುವ ಕೆಲಸ ಆ ದಿನಗಳಲ್ಲಿಯೇ ಪ್ರಾರಂಭವಾಗಿತ್ತು. ಮೇಲ್ನೋಟಕ್ಕೆ ಅಲ್ಲಿ ನಡೆಯುತ್ತಿರುವುದು ಹಿಂದು-ಮುಸ್ಲಿಮ್ ಸಂಘರ್ಷಕ್ಕೆ ತಯಾರಿ ಎಂದು ಅನಿಸುತ್ತಿದ್ದರೂ ಅದರ ಆಳದಲ್ಲಿ ರಾಜಕೀಯ ಮತ್ತು ವ್ಯಾಪಾರದ ಲಾಭ-ನಷ್ಟಗಳ ಲೆಕ್ಕಾಚಾರ ಇತ್ತು. ಇದು ಆಗ ಮಾತ್ರವಲ್ಲ ಈಗಲೂ ಬಹಳ ಮಂದಿಗೆ ಗೊತ್ತಾಗುತ್ತಿಲ್ಲ.

ಗುಜರಾತ್ ಮತ್ತು ದಕ್ಷಿಣ ಕನ್ನಡದ ಜನ, ಅವರ ಬದುಕು, ಭಾವ, ಸ್ವಭಾವ ಸಂಸ್ಕೃತಿಗಳಲ್ಲಿ ಅನೇಕ ಸಾಮ್ಯತೆಗಳಿವೆ. ಈ ನೋಟವನ್ನು ಇನ್ನಷ್ಟು ಆಳ-ವಿಸ್ತಾರಕ್ಕೆ ಹಿಗ್ಗಿಸಿದರೆ ಸಂಘ ಪರಿವಾರ ಯಾಕೆ ತನ್ನ ಹಿಂದುತ್ವದ ರಾಜಕೀಯದಲ್ಲಿ ಯಶಸ್ವಿಯಾಗಿದೆ ಎನ್ನುವುದೂ ಅರ್ಥವಾಗುತ್ತದೆ. ಈ ಎರಡು ಪ್ರದೇಶಗಳ ಮುಖ್ಯ ಗುರುತು ವ್ಯಾಪಾರ. ಸಾಮಾನ್ಯವಾಗಿ ವ್ಯಾಪಾರಿಗಳು ಲಾಭ ಇಲ್ಲದೆ ಪ್ರೀತಿ-ಜಗಳ ಎರಡನ್ನೂ ಮಾಡುವುದಿಲ್ಲ. ಹೊಂದಾಣಿಕೆ ಅವರ ದೊಡ್ಡ ಶಕ್ತಿ. ಈ ಸ್ವಭಾವದ ಬಲದಿಂದಲೇ ಗುಜರಾತಿಗಳಂತೆ ದಕ್ಷಿಣ ಕನ್ನಡದವರೂ ಕೂಡಾ ದೇಶಾದ್ಯಂತ ಹರಡಿಕೊಂಡಿದ್ದಾರೆ, ವಿದೇಶದಲ್ಲಿಯೂ. ನೆಲೆನಿಂತ ಊರುಗಳ ಭಾಷೆ ಕಲಿತು ಅಲ್ಲಿನ ಸಂಸ್ಕೃತಿಯಲ್ಲಿ ಒಂದಾಗಿ ದಾನ-ದೇಣಿಗೆ ನೀಡುತ್ತಾ ಹೊಂದಿಕೊಂಡು ಬದುಕುತ್ತಿದ್ದಾರೆ.

2002ರ ಕೋಮುದಂಗೆಯಲ್ಲಿ ಗುಜರಾತ್‍ನ ಪೂರ್ವ ತುದಿಯ ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳು ರಣರಂಗವಾಗಿ ಹೋಗಿತ್ತು. ಗೋಧ್ರಾ ಕೂಡಾ ಪಂಚಮಹಲ್ ಜಿಲ್ಲೆಗೆ ಸೇರಿದ್ದು. ಅಹಮದಾಬಾದ್ ನಗರ ಹೊರತುಪಡಿಸಿದರೆ ಗೋಧ್ರೋತ್ತರ ಗಲಭೆಯಿಂದ ಅತೀ ಹೆಚ್ಚಿನ ಸಾವು-ನೋವು, ಆಸ್ತಿ ನಷ್ಟ ಸಂಭವಿಸಿದ್ದು ಈ ಎರಡು ಜಿಲ್ಲೆಗಳಲ್ಲಿ. ಕೋಮುದಂಗೆಯಲ್ಲಿ ಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದವರು ಇದೇ ಆದಿವಾಸಿ ಯುವಕರು. ಸಂಘ ಪರಿವಾರದ ಮೋಡಸ್ ಆಪರೆಂಡಿಯೇ ಹಾಗೆ. ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಮೊದಲು ಕಣ್ಣು ಹಾಕುವುದು ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶದ ಮೇಲೆ. ಬುಡಕಟ್ಟು ಜನಾಂಗದ ಜನ ರಾಮ, ಕೃಷ್ಣ, ಲಕ್ಷ್ಮಿ-ಸರಸ್ವತಿಗಳನ್ನು ಆರಾಧನೆ ಮಾಡದೆ ತಮ್ಮದೇ ದೈವ-ದೇವರುಗಳಲ್ಲಿ ತಲ್ಲೀನವಾಗಿದ್ದರೂ, ಅವರು ಸ್ವಭಾವದಲ್ಲಿ ಬಹಳ ರಿಲಿಜೀಯಸ್ ಆಗಿರುತ್ತಾರೆ. ಚುನಾವಣಾ ಸಮೀಕ್ಷೆಗೆ ಹೋಗಿದ್ದಾಗ ನಾನು ಮುಖ್ಯವಾಗಿ ಬುಡಕಟ್ಟು ಜನಾಂಗದ ಬಾಹುಳ್ಯ ಇರುವ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳಲ್ಲಿ ಬಹಳಷ್ಟು ಸುತ್ತಾಡಿದ್ದೆ. ಅಲ್ಲಿನ ಜನ ಆದಿವಾಸಿ ದೇವತೆಗಳಾದ ಬಾಬೋ ಪಿತೋರೋ, ಇತೆಲಾನ್, ಮಾಕಾಳಿ ಮೊದಲಾದ ಆದಿವಾಸಿ ದೇವತೆಗಳ ಹೆಸರು ಹೇಳುತ್ತಿದ್ದಾಗ ನನಗೆ ನನ್ನೂರಿನ ಕೋರ್ದಬ್ಬು, ಪಂಜುರ್ಲಿ, ಜುಮಾದಿ ಭೂತಗಳ ನೆನಪಾಗುತ್ತಿತ್ತು. ಆದರೆ ಆಗಲೇ ಅಲ್ಲಿನ ಆದಿವಾಸಿಗಳ ಮನೆಗಳಲ್ಲಿ ರಾಮ, ಕೃಷ್ಣ, ಲಕ್ಷ್ಮಿ ಸರಸ್ವತಿಗಳ ಪೋಟೊಗಳು ನೇತಾಡತೊಡಗಿದ್ದವು (ದಕ್ಷಿಣ ಕನ್ನಡದಂತೆ). ಆಸಾರಾಮ್ ಬಾಪು, ಜಯಶ್ರೀ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಸಾವಿರಾರು ಜನ ಸೇರುತ್ತಿದ್ದರು.

ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ನೆಲೆಯಾಗಿದ್ದ ಆದಿವಾಸಿ ಬಾಹುಳ್ಯದ ಪ್ರದೇಶಗಳಲ್ಲಿ ವನವಾಸಿ ಕಲ್ಯಾಣ ಪರಿಷತ್‍ಗಳ ಶಾಖೆಗಳ ಜಾಲ ಹರಡತೊಡಗಿತ್ತು. ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಕುರುಡರಂತೆ ಬೆಂಬಲಿಸಿಕೊಂಡು ಬಂದವರು ಆದಿವಾಸಿಗಳು. ರಾಜ್ಯದ ಜನಸಂಖ್ಯೆಯ ಶೇಕಡಾ 17ರಷ್ಟಿರುವ ಆದಿವಾಸಿಗಳನ್ನು ಒಳಗೊಂಡಿದ್ದ `ಖಾಮ್’ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಮ್) ಕೂಟವನ್ನು ಕಟ್ಟಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಶಕ್ತಿ ತುಂಬಿದ್ದವರು ಮುಖ್ಯಮಂತ್ರಿಯಾಗಿದ್ದ ಮಾಧವ್ ಸಿಂಗ್ ಸೋಳಂಕಿ. ಮೂವತ್ತು ವರ್ಷಗಳ ಹಿಂದೆ ಸಂಘ ಪರಿವಾರ ಈ “ಖಾಮ್’’ ಕೂಟವನ್ನು ಮುರಿಯುವ ಹೊಣೆ ಹೊರಿಸಿದ್ದು ಆ ಕಾಲದಲ್ಲಿ ಸಂಘ ಪರಿವಾರದ ಕಣ್ಮಣಿಗಳಾಗಿದ್ದ ಶಂಕರ್ ಸಿಂಗ್ ವಘೇಲಾ ಮತ್ತು ನರೇಂದ್ರ ಮೋದಿಯವರಿಗೆ. ಕ್ಷತ್ರಿಯರನ್ನು ಸೆಳೆಯಲು ವಘೇಲಾ ನಾಡಿನತ್ತ ಹೊರಟರೆ, ಆದಿವಾಸಿಗಳಿಗೆ ಹಿಂದೂ ದೀಕ್ಷೆ ಕೊಡಲು ಮೋದಿ ಕಾಡಿನತ್ತ ಹೊರಟಿದ್ದರು. ಅದರ ರಾಜಕೀಯ ಫಲ 1995ರಲ್ಲಿಯೇ ಸಿಕ್ಕಿತ್ತು.

ಈ ಅವಧಿಯಲ್ಲಿಯೇ ತೀಸ್ತಾ ಸೆತಲ್ವಾಡ್ ಗುಜರಾತ್ ಕಡೆ ಕಣ್ಣು ಹಾಯಿಸಿದವರು. ಪತ್ರಕರ್ತೆಯಾಗಿದ್ದ ತೀಸ್ತಾ ಸೆತಲಾಡ್ 1992ರ ಮುಂಬೈ ಕೋಮುಗಲಭೆಯನ್ನು ವಿಸ್ತಾರವಾಗಿ ವರದಿ ಮಾಡಿದವರು. ಆಗಲೇ ದೇಶ ಸಾಗುತ್ತಿರುವ ಹಾದಿ ಅವರಿಗೆ ಕಾಣಿಸತೊಡಗಿತ್ತು. ಗುಜರಾತ್‍ಗೆ ಹೋಗಿ ಬಂದಾಗೆಲ್ಲ ಯಾವುದೋ ದುರಂತಕ್ಕೆ ಅಣಿಯಾಗುತ್ತಿರುವ ಹಾಗೆ ಅಲ್ಲಿ ನಡೆಯುತ್ತಿರುವ ಸಿದ್ದತೆಗಳು ಅವರನ್ನು ಆತಂಕಕ್ಕೀಡುಮಾಡಿತ್ತು. ಆದರೆ ಆ ದುರಂತವನ್ನು ತಪ್ಪಿಸಲಾಗದ ನೋವು ಅವರ ನೆನಪುಗಳ ದಾಖಲೆಯುದ್ದಕ್ಕೂ ಕಾಣಿಸಿಕೊಂಡಿದೆ.
ಗುಜರಾತ್ ಗಲಭೆಯ ಹಿಂದಿನ-ಇಂದಿನ ಸ್ಥಿತಿಗತಿಯ ಚಿತ್ರವನ್ನು ಕಟ್ಟಿಕೊಡುವುದರ ಜೊತೆಯಲ್ಲಿ ತೀಸ್ತಾ ಅವರ ನೆನಪುಗಳ ಈ ಪುಸ್ತಕ ಹೋರಾಟಗಾರರ ಪಾಲಿನ ಕೈಪಿಡಿಯಂತಿದೆ. ಇದರಲ್ಲಿ ಸಮಾಜಕ್ಕೆ ಕೈಲಾದುದನ್ನು ಮಾಡಬೇಕೆಂದು ತುಡಿಯುತ್ತಿರುವ ಎಲ್ಲರೂ ಕಲಿಯಬೇಕಾದ ಅನೇಕ ಪಾಠಗಳಿವೆ. ಸಾಮಾನ್ಯವಾಗಿ ಶೋಷಕರು, ಪಿತೂರಿಗಾರರು, ದುಷ್ಟರು ನಿರ್ದಯಿಗಳಾಗಿರುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಶೋಷಿತರು, ನ್ಯಾಯಪಾಲಕರು, ಸತ್ಯವಂತರು, ಜನಪರ ಕಾಳಜಿ ಉಳ್ಳವರು ನೇರಾನೇರ ನಡೆಯ ಭಾವುಕರಾಗಿರುತ್ತಾರೆ. ಒಮ್ಮೊಮ್ಮೆ ನಮ್ಮ ದೌರ್ಬಲ್ಯವಾಗುವ ಭಾವುಕತೆ ಹೋರಾಟವನ್ನೂ ದುರ್ಬಲಗೊಳಿಸುತ್ತದೆ.

ಭಾರತದ ಮೊದಲ ಅಟಾರ್ನಿ ಜನರಲ್ ಎಂ.ಸಿ.ಸೆತಲ್ವಾಡ್ ಅವರ ಮೊಮ್ಮಗಳಾದ ತೀಸ್ತಾ ಅವರಿಗೆ ನ್ಯಾಯಾಲಯದ ಮೇಲಿನ ಗಟ್ಟಿಯಾದ ನಂಬಿಕೆಯಿಂದಾಗಿಯೇ ಅವರು ಭಾವುಕರಾಗಿ “ತೂತೂ-ಮೈಮೈ’’ ಚರ್ಚೆಯಲ್ಲಿ ಕಳೆದುಹೋಗದೆ ಪ್ರಾರಂಭದಿಂದಲೂ ತನ್ನ ಹೋರಾಟವನ್ನು ನ್ಯಾಯಾಲಯದ ಮೂಲಕವೇ ನಡೆಸಲು ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ. ಅವರ ಹೋರಾಟದ ಹಲವಾರು ಯಶಸ್ಸುಗಳಿಗೆ ಅವರು ಬಳಸಿಕೊಂಡ ಕಾನೂನಿನ ಅಸ್ತ್ರ ಕೂಡಾ ಕಾರಣ. ಪ್ರತಿಭಟನೆ, ಘೇರಾವ್, ಬಂದ್-ಹರತಾಳಗಳು ಈಗಲೂ ಹೋರಾಟದ ಕಣಕ್ಕೆ ಒಂದು ವಿಸ್ತಾರವಾದ ಭೂಮಿಕೆಯನ್ನು ಸಿದ್ದಪಡಿಸಿಕೊಡಬಹುದು. ಅಂತಿಮವಾಗಿ ನ್ಯಾಯ ಪಡೆಯಬೇಕಾಗಿರುವುದು ನ್ಯಾಯಾಲಯದ ಮೂಲಕವೇ ಎನ್ನುವುದನ್ನು ತೀಸ್ತಾ ಆರಂಭದ ದಿನಗಳಲ್ಲಿಯೇ ಅರಿತುಕೊಂಡಂತೆ ಕಾಣುತ್ತಿದೆ. ಇದು ಸಾಮಾಜಿಕ ಹೋರಾಟಗಾರರೆಲ್ಲರೂ ಕಲಿಯಬೇಕಾಗಿರುವ ಪಾಠವೂ ಹೌದು.

ಇದನ್ನು ಓದಿ: ಸಂವಿಧಾನದ ಕಾಲಾಳು : ತೀಸ್ತಾ ಸೆತಲ್ವಾಡ್ ನೆನಪುಗಳು

ಪತ್ರಕರ್ತೆಯಾಗಿ ತನ್ನ ಪಾಡಿಗೆ ವರದಿಗಳನ್ನು ಮಾಡುತ್ತಾ ಬೈಲೈನ್‍ಗಳಿಗೆ ರೋಮಾಂಚನಗೊಳ್ಳುತ್ತಾ ಹಾಯಾಗಿದ್ದ ತೀಸ್ತಾ ಅವರ ಅಂತಃಸಾಕ್ಷಿಯನ್ನು ವೃತ್ತಿಯ ಆರಂಭದ ದಿನಗಳಲ್ಲಿಯೇ ಮುಂಬೈನ ಭಿವಂಡಿ ಕೋಮುಗಲಭೆ ಕಲಕಿ ಬಿಡುತ್ತದೆ. 1992ರ ಮುಂಬೈ ಗಲಭೆಯ ನಂತರ ಕೇವಲ “ನಿಷ್ಪಕ್ಷಪಾತ’’ ವರದಿ ಮಾಡುತ್ತಾ ಇರುವುದು ಅಸಾಧ್ಯವೆನಿಸಿಬಿಡುತ್ತದೆ. ಅದರ ನಂತರ ಅವರು ತನ್ನ ಆಕ್ಟಿವಿಸ್ಟ್ ಪಾತ್ರಕ್ಕೆ ಬೇಕಾದಷ್ಟು ಪತ್ರಕರ್ತೆಯನ್ನು ಮಾತ್ರ ತನ್ನೊಳಗೆ ಇರಿಸಿಕೊಂಡು ಮುಂದುವರಿಯುತ್ತಾರೆ. ಇದರಿಂದಾಗಿ ಮಾಧ್ಯಮ ಕ್ಷೇತ್ರಕ್ಕೆ ಎಷ್ಟು ನಷ್ಟವಾಗಿದೆಯೋ ಗೊತ್ತಿಲ್ಲ, ಸಮಾಜಕ್ಕೆ ಮಾತ್ರ ಲಾಭವಾಗಿದೆ. ಮಾಧ್ಯಮ ಕ್ಷೇತ್ರ ಈಗಿರುವ ಇಳಿಜಾರಿನ ಹಾದಿಯನ್ನು ನೋಡಿದರೆ ಆ ಕ್ಷೇತ್ರದ ಮೇಲಿನ ಭರವಸೆ ನನಗೂ ಉಳಿದಿಲ್ಲ. ಇದನ್ನು ಬಹಳ ಬೇಗ ಅನುಭವದಿಂದ ಕಂಡುಕೊಂಡವರು ತೀಸ್ತಾ. ತೀಸ್ತಾ ನೆನಪುಗಳನ್ನು ಸಾಮಾಜಿಕ ಕಾರ್ಯಕರ್ತೆಯ ಹೋರಾಟದ ಕತೆಯಾಗಿ ಮಾತ್ರವಲ್ಲ ಪತ್ರಕರ್ತೆಯೊಬ್ಬರ ತನಿಖಾ ವರದಿಯಂತೆಯೂ ಓದಿಕೊಂಡು ಹೋಗಬಹುದು ಎನ್ನುವುದೇ ಇದರ ವೈಶಿಷ್ಟ್ಯ.

ಸತ್ಯಾ ಎಸ್

ಕೊನೆಯದಾಗಿ ಇದನ್ನು ಅನುವಾದಿಸಿರುವ ಸತ್ಯಾ ಎಸ್ ಕೂಡಾ ಪತ್ರಕರ್ತೆಯ ಪೂರ್ಣಕಾಲಿಕ ವೃತ್ತಿಯಿಂದ ಹೊರಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗಿರುವವರು. ಈ ಹಿನ್ನೆಲೆ ಅವರ ಅನುವಾದ ಕಾರ್ಯಕ್ಕೆ ನೆರವಾಗಿದೆ. ಮೂಲ ಪಠ್ಯದ ಆತ್ಮಕ್ಕೆ ಧಕ್ಕೆಯಾಗದ ರೀತಿಯಲ್ಲಿ, ತೀಸ್ತಾ ಅವರೇ ಕನ್ನಡದಲ್ಲಿ ಬರೆದಿದ್ದಾರೇನೋ ಎಂದು ಅಂದುಕೊಳ್ಳುವಷ್ಟು ಸರಾಗವಾಗಿ ಓದಿಸಿಕೊಂಡು ಹೋಗುವ ಹಾಗೆ ಅವರು ಪಠ್ಯವನ್ನು ಅನುಭವಿಸಿ ಅನುವಾದಿಸಿದ್ದಾರೆ. ನಾನು ಎಷ್ಟೇ ತಪ್ಪಿಸಿಕೊಳ್ಳುವ ಪ್ರಯತ್ನ ಪಟ್ಟರೂ ಅಪಾರವಾದ ತಾಳ್ಮೆಯಿಂದ, ಪ್ರೀತಿಯ ಒತ್ತಾಯದಿಂದ ಬೆನ್ನು ಹತ್ತಿ ಈ ನಾಲ್ಕು ಮಾತುಗಳನ್ನು ನನ್ನಿಂದ ಬರೆಸಿದ್ದಾರೆ. ವಿಳಂಬಕ್ಕಾಗಿ ಕ್ಷಮೆ ಇರಲಿ, ಬರೆಸಿದ್ದಕ್ಕಾಗಿ ಧನ್ಯವಾದಗಳು.

ಎಪ್ರಿಲ್ 2019

ದಿನೇಶ್ ಅಮಿನ್ ಮಟ್ಟು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...