ಅಮೆರಿಕಾ ಮೂಲದ ಖ್ಯಾತ ವಾಹನ ತಯಾರಿಕಾ ಕಂಪೆನಿ ಫೋರ್ಡ್ ಮೋಟಾರ್ಸ್ ಭಾರತದಲ್ಲಿ ತನ್ನ ಉತ್ಪಾದಕ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ನಂತರ ಭಾರತದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತಿರುವ ಅಮೆರಿಕಾದ ಮೂರನೇ ವಾಹನ ತಯಾರಕ ಕಂಪೆನಿಯಾಗಿದೆ ಫೋರ್ಡ್ ಮೋಟಾರ್ಸ್!.
ಫೋರ್ಡ್ ಮೋಟಾರ್ಸ್‌ಗೆ ಗುಜರಾತ್(ಸನಂದ್) ಹಾಗೂ ತಮಿಳುನಾಡಿ(ಚೆನ್ನೈ)ನಲ್ಲಿ ಎರಡು ಉತ್ಪಾದಕ ಘಟಕಗಳಿವೆ. ಈ ಎರಡೂ ಘಟಕಗಳು ಬಂದ್ ಆಗಲಿವೆ ಎಂದು ಕಂಪೆನಿ ಹೇಳಿದೆ. ಭಾರತದಲ್ಲಿ ಕಂಪನಿಯು 2 ಬಿಲಿಯನ್ ಡಾಲರ್ನಷ್ಟು ನಷ್ಟವನ್ನು ಅನುಭವಿಸಿದೆ, ಹೀಗಾಗಿ ಭಾರತದಿಂದ ನಾವು ಹೊರ ಹೋಗುತ್ತಿದ್ದೇವೆ ಎಂದು ಫೋರ್ಡ್ ಹೇಳಿದೆ. ಕಂಪೆನಿಯು ಈ ಹಿಂದೆ ಭಾರತದ ಎರಡು ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.
ಇದನ್ನೂ ಓದಿ: ಉದ್ಯೋಗ ನಷ್ಟದ ಪರಿಣಾಮ ಚಿನ್ನದ ಮೇಲಿನ ಸಾಲದಲ್ಲಿ ಶೇ. 77ರಷ್ಟು ಹೆಚ್ಚಳ
ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಗುಜರಾತ್‌ನ ಘಟಕದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದರೆ, 2022 ರ ಎರಡನೆ ತ್ರೈಮಾಸಿಕದಲ್ಲಿ ತಮಿಳುನಾಡಿನ ಘಟಕದಲ್ಲೂ ತನ್ನ ಕಾರ್ಯಾಚರಣೆಯನ್ನು ಫೋರ್ಡ್ ನಿಲ್ಲಿಸಲಿದೆ ಎಂದು ಕಂಪೆನಿ ಹೇಳಿದೆ.
ಭಾರತದ ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿದ್ದರಿಂದ ಅಮೆರಿಕಾದ ಕಂಪೆನಿಗಳಾದ ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ಕಂಪೆನಿಗಳು ಈ ಹಿಂದೆಯೆ ಭಾರತವನ್ನು ತೊರೆದಿದ್ದವು. ಇದೀಗ ಫೋರ್ಡ್ ಕೂಡಾ ತನ್ನ ಉತ್ಪಾದನೆಯನ್ನು ನಿಲ್ಲಿಸಲು ಮುಂದಾಗಿದೆ.
ವಿಶ್ವದ ಐದನೇ ಅತಿದೊಡ್ಡ ಕಾರು ತಯಾರಕ ಕಂಪೆನಿಯಾಗಿರುವ ಫೋರ್ಡ್, ಭಾರತವನ್ನು ಪ್ರವೇಶಿಸಿದ ಮೊದಲ ಪ್ರಮುಖ ಜಾಗತಿಕ ಆಟೋ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದು 1 ಬಿಲಿಯನ್ ಡಾಲರ್‌ನ ಆರಂಭಿಕ ಹೂಡಿಕೆಯೊಂದಿಗೆ 1996 ರಲ್ಲಿ ಆರಂಭಗೊಂಡಿತ್ತು. ತನ್ನ ಉದ್ಯಮ ಉತ್ತುಂಗದಲ್ಲಿ ಇದ್ದಾಗ ಕಂಪೆನಿಯು ಭಾರತದಲ್ಲಿ 14,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. ಪ್ರಸ್ತುತ ಕಂಪೆನಿಯು ಭಾರತದ ಮಾರುಕಟ್ಟೆಯಿಂದ ಹೊರಹೋಗುತ್ತಿರುವುದರಿಂದ ಸುಮಾರು 4,000 ಉದ್ಯೋಗಗಳು ನಷ್ಟವಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ


