ನಿವೃತ್ತ ಮುಖ್ಯ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯರಾದ ರಂಜನ್ ಗೊಗೊಯ್‌ರವರಿಗೆ ಕೇಂದ್ರ ಸರ್ಕಾರವು ‘Z+ ವಿಐಪಿ’ ಶ್ರೇಣಿಯ ಭದ್ರತೆ ಒದಗಿಸಿದೆ.
ಈ ಮೊದಲು ಅವರು ದೆಹಲಿ ಪೊಲೀಸ್ ರಕ್ಷಣೆ ಪಡೆದಿದ್ದರು. ಈಗ ಒದಗಿಸಿರುವ ಭದ್ರತೆಯಿಂದ ಅವರು ದೇಶಾದ್ಯಂತ ಸಂಚರಿಸುವಾಗ ಸಿಆರ್‌ಪಿಎಫ್‌ನ ಸಶಸ್ತ್ರ ಪಡೆಗಳು ಅವರಿಗೆ ಭದ್ರತೆ ನೀಡಲಿವೆ.
Former CJI Ranjan Gogoi gets Z+ security for movement across India. CRPF has been asked to provide him with security. pic.twitter.com/yjI5BbaXGg
— ANI (@ANI) January 22, 2021
8-12 ಜನ ಸಶಸ್ತ್ರ ಸಿಆರ್‌ಪಿಎಫ್ ಕಮ್ಯಾಂಡೋಗಳು ರಂಜನ್ ಗೊಗೊಯ್‌ರವರಿಗೆ ಭದ್ರತೆ ಒದಗಿಸಲಿದ್ದು ಪ್ರಯಾಣ ಮತ್ತು ಮನೆ ಎರಡೂ ಕಡೆ ರಕ್ಷಣೆ ಒದಗಿಸಲಿವೆ ಎನ್ನಲಾಗಿದೆ. ಸಿಆರ್‌ಪಿಎಫ್ ವಿಐಪಿ ಭದ್ರತೆ ಪಡಯುತ್ತಿರುವ 63ನೇ ವ್ಯಕ್ತಿ ಗೊಗೊಯ್ ಆಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ಗೊಗೊಯ್‌ರವರು 2019ರ ನವೆಂಬರ್ ತಿಂಗಳಿನಲ್ಲಿ ನಿವೃತ್ತರಾದರು. ನಂತರ ಅವರನ್ನು ಕೇಂದ್ರ ಸರ್ಕಾರವು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತು.
ಕೆಲದಿನಗಳ ಹಿಂದೆ ಕಾಂಗ್ರೆಸ್‌ನ ತರುಣ್ ಗೊಗೊಯ್‌ರವರು “ತಮಗಿರುವ ಆಂತರಿಕ ಮಾಹಿತಿಗಳ ಪ್ರಕಾರ ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಜಿ ಸಿಜೆಐ ರಂಜನ್ ಗೊಗೊಯ್‌ರವರನ್ನು ಕಣಕ್ಕಿಳಿಸಲಿದೆ” ಎಂಬ ಹೇಳಿಕೆ ನೀಡಿದ್ದರು. ಆದರೆ ಅದನ್ನು ನಿರಾಕರಿಸಿದ ಗೊಗೊಯ್ ನನಗೆ ಅಂತಹ ಬಯಕೆಯಿಲ್ಲ, ಆ ರೀತಿಯ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಲು ನಾನು ರಾಜಕಾರಣಿಯಲ್ಲ. ಯಾರೂ ಕೂಡ ನಾನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೆಸರಿಸಿಲ್ಲ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.
ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಅವಕಾಶವೆಂದು ಭಾವಿಸಿ ರಾಜ್ಯಸಭಾ ಸದಸ್ಯತ್ವನ್ನು ಒಪ್ಪಿಕೊಂಡೆ. ನಾನು ಪ್ರಜ್ಞಾಪೂರ್ವಕವಾಗಿಯೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮಕರಣವನ್ನು ಆರಿಸಿಕೊಂಡೆ. ಏಕೆಂದರೆ ಅದು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುತ್ತದೆ. ಅಂದ ಮಾತ್ರಕ್ಕೆ ನಾನು ರಾಜಕಾರಣಿಯೇ ಎಂದು ಅವರು ಪ್ರಶ್ನಿಸಿದ್ದರು.
ಇದನ್ನೂ ಓದಿ: ನಾನು ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ: ಮಾಜಿ ಸಿಜೆಐ ರಂಜನ್ ಗೊಗೊಯ್


