ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರು ‘ಶಿಕ್ಷಕರ ನೇಮಕಾತಿ ಹಗರಣ’ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದರು. ಅವರನ್ನು ಶುಕ್ರವಾರ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 86 ವರ್ಷದ ಚೌಟಾಲಾ ಈಗಾಗಲೇ ಪೆರೋಲ್ ಮೇಲೆ ಹೊರಗಿದ್ದರು. ಶುಕ್ರವಾರ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ತಿಹಾರ್ ಜೈಲಿಗೆ ತಲುಪಿದ್ದು, ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಅಗತ್ಯವಾದ ಔಪಚಾರಿಕತೆಯನ್ನು ಪೂರೈಸಿದ ನಂತರ, ಚೌಟಾಲಾ ಅವರನ್ನು ಬಿಡುಗಡೆ ಮಾಡಲಾಗಿದೆ” ಎಂದು ದೆಹಲಿ ಕಾರಾಗೃಹದ ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್ ಎಂದು ಹೇಳಿದ್ದಾರೆ.
ಕಳೆದ ತಿಂಗಳು ದೆಹಲಿ ಸರ್ಕಾರವು, ಹತ್ತು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದು ಒಂಬತ್ತುವರೆ ವರ್ಷಗಳ ಶಿಕ್ಷೆಯನ್ನು ಪೂರೈಸಿದರಿಗೆ ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಆರು ತಿಂಗಳ ಶಿಕ್ಷೆಯನ್ನು ಕಡಿತ ಮಾಡಿತ್ತು.
ಇದನ್ನು ಓದಿ: ಮಠಾಧೀಶರನ್ನು ಖರೀದಿಸಿ ಅಧಿಕಾರ ಹಿಡಿದವರು ಹೆಚ್ಚು ದಿನ ಇರಲ್ಲ: ಬಿಎಸ್‌ವೈ ವಿರುದ್ಧ ಯತ್ನಾಳ್ ಆರೋಪ
“ಚೌಟಾಲಾ ಈಗಾಗಲೇ ಒಂಬತ್ತು ವರ್ಷ ಮತ್ತು ಒಂಬತ್ತು ತಿಂಗಳ ಶಿಕ್ಷೆಯನ್ನು ಅನುಭವಿಸಿದ್ದು, ಅವರು ಜೈಲಿನಿಂದ ಹೊರಬರಲು ಅರ್ಹರಾಗಿದ್ದಾರೆ” ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಟಾಲಾ ಅವರನ್ನು 2013 ರಲ್ಲಿ ಜೈಲಿಗೆ ಹಾಕಲಾಗಿತ್ತು.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅವರು ಮಾರ್ಚ್ 26, 2020 ರಿಂದ ತುರ್ತು ಪೆರೋಲ್‌ನಲ್ಲಿದ್ದರು. ಫೆಬ್ರವರಿ 21, 2021 ರಂದು ಅವರು ಶರಣಾಗಬೇಕು ಎಂದು ನಿರ್ಧರಿಸಲಾಗಿತ್ತಾದರೂ, ನಂತರ ಹೈಕೋರ್ಟ್ ಅವರ ಪೆರೋಲ್ ಅನ್ನು ವಿಸ್ತರಿಸಿತ್ತು.
2000 ರಲ್ಲಿ 3,206 ಕಿರಿಯ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ ಪ್ರಕರಣದಲ್ಲಿ ಓಂ ಪ್ರಕಾಶ್ ಚೌಟಾಲಾ, ಅವರ ಪುತ್ರ ಅಜಯ್ ಚೌತಲಾ ಮತ್ತು ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಸೇರಿದಂತೆ 53 ಮಂದಿಯನ್ನು ಶಿಕ್ಷೆಗೊಳಪಡಿಸಲಾಗಿದೆ. ಇವರೆಲ್ಲರಿಗೂ ವಿಶೇಷ ಸಿಬಿಐ ನ್ಯಾಯಾಲಯವು 2013 ರ ಜನವರಿಯಲ್ಲಿ ವಿವಿಧ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಓಂ ಪ್ರಕಾಶ್ ಚೌಟಾಲ ಅವರು ಭಾರತದ ಮಾಜಿ ಉಪ ಪ್ರಧಾನಮಂತ್ರಿ ಚೌಧರಿ ದೇವಿಲಾಲ್ ಅವರ ಮಗನಾಗಿದ್ದು, ಇವರ ಮೊಮ್ಮಗ ದುಶ್ಯಂತ್ ಚೌಟಾಲಾ ಅವರು ಪ್ರಸ್ತುತ ಹರಿಯಾಣದ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಇದನ್ನು ಓದಿ: ರಾಜ್ಯ ಬಿಜೆಪಿ ಘಟಕದ ಬಿರುಕು, ಮುಂದಿನ ಚುನಾವಣೆಯಿಂದ ಉತ್ತರಾಖಂಡ ಸಿಎಂ ಸ್ಥಾನಕ್ಕೆ ಕುತ್ತು ಸಾಧ್ಯತೆ


