ಹಿಮಾಚಲ ಪ್ರದೇಶದ ಮೂರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಆಡಳಿತರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ನಾಲ್ಕು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಬೇರಿ ಭಾರಿಸಿದೆ. ಮಂಡಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಸ್ಪರ್ಧಿಸುವ ಕುರಿತು ಚರ್ಚೆಗಳು ಎದ್ದಿದ್ದವು. ಕೊನೆ ಕ್ಷಣದಲ್ಲಿ ಬಿಜೆಪಿಯು ಬೇರೆಯವರಿಗೆ ಟಿಕೆಟ್ ನೀಡಿದರೂ ಬಹಳಷ್ಟು ಜನ ಕಂಗನಾ ಹೆಸರಲ್ಲಿ ಮತ ಕೇಳಿದ್ದರು. ಆದರೆ ಆ ಕ್ಷೇತ್ರದಲ್ಲಿಯೂ ಬಿಜೆಪಿ ಸೋಲನ್ನು ಅನುಭವಿಸಿದೆ.
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಇದು ಆಡಳಿತರೂಢ ಬಿಜೆಪಿಗೆ ದೊಡ್ಡ ಹೊಡೆತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಸಿಎಂ ಜೈರಾಂ ಠಾಕೂರ್, ಸೋಲನ್ನು ಸ್ವೀಕರಿಸುತ್ತೇನೆ, ನಾನೇ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುತ್ತೇನೆ ಎಂದಿದ್ದಾರೆ.
जनमत को स्वीकार करता हूँ।
आज मण्डी लोकसभा सहित अर्की,जुब्बल-कोटखाई व फतेहपुर विधानसभा उपचुनावों के नतीजे सामने आए है।
मैं जनता के निर्णय को स्वीकार करता हूँ, कॉंग्रेस के विजेता प्रत्याशियों को बधाई।
हम हार पर मंथन करेंगे व आगामी रूपरेखा बनाएंगे,जो कमी रही है उसकी भरपाई करेंगे।
— Jairam Thakur (@jairamthakurbjp) November 2, 2021
ಇಂದು ಕಾಂಗ್ರೆಸ್ ಗೆದ್ದಿರುವುದರಿಂದ 2022ರ ಚುನಾವಣೆಯಲ್ಲಿಯೂ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಧ್ಯಂತರ ಚುನಾವಣೆಗಳಲ್ಲಿ ಸೋತ ಪಕ್ಷವು ಅಂತಿಮ ಚುನಾವಣೆಯಲ್ಲಿ ಗೆಲ್ಲುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ ಕಾಂಗ್ರೆಸ್ 4 ಲಕ್ಷ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿತ್ತು. ಬಿಜೆಪಿಯ ರಾಮ್ ಸ್ವರೂಪ್ ಶರ್ಮಾ ವಿಜಯಿಯಾಗಿದ್ದರು. ಆದರೆ ಅವರು 2021ರ ಮಾರ್ಚ್‌ನಲ್ಲಿ ನಿಧನ ಹೊಂದಿದ್ದರು. ಹಾಗಾಗಿ ಅಲ್ಲಿ ಕಾಂಗ್ರೆಸ್‌ನ ಮಾಜಿ ಸಿಎಂ ವೀರಭದ್ರ ಸಿಂಗ್‌ರವರ ಪತ್ನಿ ಪ್ರತಿಭಾ ಸಿಂಗ್ ಈ ಬಾರಿ ಕಣಕ್ಕಿಳಿದಿದ್ದರು. ಅವರು ಗೆಲುವು ಸಾಧಿಸಿದ್ದಾರೆ.
ಕಂಗನಾ ರಾಣಾವತ್ ಮಂಡಿ ಜಿಲ್ಲೆಯಲ್ಲಿಯೇ ಬೆಳೆದವರು. ಮುಂಬೈನಲ್ಲಿ ನೆಲೆಸಿದರೂ ಆಗಾಗ್ಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಬಿಜೆಪಿ ಪರವಾಗಿ ಹಲವಾರು ಬಾರಿ ಹೇಳಿಕೆ ನೀಡಿದ್ದರು.
ಮುಂಬೈನಲ್ಲಿ ಆಕೆಯ ಅನಧಿಕೃತ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಕಂಗನಾ ಮುಗಿಬಿದ್ದಿದ್ದರು. ಆಗ ಬಿಜೆಪಿ ಅವರ ಬೆಂಬಲಕ್ಕೆ ನಿಂತಿತ್ತು. ಆದರೆ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಕಂಗನಾ ವಿರುದ್ಧ ಯುದ್ಧವನ್ನೇ ಸಾರಿತ್ತು. ನಂತರ ಒಕ್ಕೂಟ ಸರ್ಕಾರವು ಕಂಗನಾಗೆ ಭಾರೀ ಭದ್ರತೆ ಒದಗಿಸಿತ್ತು.
ಕಂಗನಾ ಹೋರಾಟ ನಿರತ ರೈತರನ್ನು ಅವಮಾನಿಸಿ ಹೇಳಿಕೆ ನೀಡಿದ್ದರು. ಟ್ವಿಟರ್, ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಹಾಗಾಗಿ ಅವರ ವಿರುದ್ಧ ಕರ್ನಾಟಕ ಸೇರಿದಂತೆ ಹಲವೆಡೆ ದೂರುಗಳು ದಾಖಲಾಗಿವೆ. ಟ್ವಿಟರ್ ಕಂಗನಾರನ್ನು ಬ್ಯಾನ್ ಮಾಡಿದೆ.

ಈಗ ಹಿಮಾಚಲ ಪ್ರದೇಶದ ಫತೇಪುರ್, ಆರ್ಕಿ ಮತ್ತು ಜುಬ್ಬಲ್ ಕೋತ್ಕೈ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗ: ಹಾನಗಲ್‌ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್


