Homeಕಥೆಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

ಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

- Advertisement -
- Advertisement -

1. ದಿನಪತ್ರಿಕೆಯ ದಿನಚರಿ

ವ್ಯಕ್ತಿಯೊಬ್ಬ ದಿನಪತ್ರಿಕೆಯನ್ನು ಕೊಂಡುಕೊಂಡ ಮೇಲೆ ಅದನ್ನು ತನ್ನ ಕಂಕುಳಲ್ಲಿ ಸಿಕ್ಕಿಸಿಕೊಂಡು, ಬಸ್ ಏರುತ್ತಾನೆ. ಆ ದಿನಪತ್ರಿಕೆ ಕಂಕುಳಲ್ಲಿ ಇನ್ನೂ ಹಾಗೆ ಇರುವಾಗಲೇ, ಅರ್ಧ ಗಂಟೆಯ ನಂತರ ಆ ವ್ಯಕ್ತಿ ಬಸ್‌ನಿಂದ ಇಳಿಯುತ್ತಾನೆ.

ಪ್ಲಾಜ್ಹಾವೊಂದರ ಬೆಂಚ್ ಮೇಲೆ ಆ ದಿನಪತ್ರಿಕೆಯನ್ನು ಎಸೆದಾಗ ಅದು ಅದೇ ದಿನಪತ್ರಿಕೆಯಾಗಿ ಉಳಿಯದೆ, ಮುದ್ರಣಗೊಂಡಿರುವ ಹಾಳೆಗಳ ರಾಶಿಯಾಗುತ್ತದೆ.

ಅದು ಬೆಂಚಿನ ಮೇಲೆ ತಾನಾಗಿಯೇ ಕೇವಲ ಒಂದು ನಿಮಿಷ ಬಿದ್ದುಕೊಂಡಿದೆಯಷ್ಟೇ, ಯುವ ಬಾಲಕನೊಬ್ಬ ಅದನ್ನು ಕಂಡು, ಓದಿದಾಗ ಮುದ್ರಿತ ಹಾಳೆಗಳು ರಾಶಿ ಮತ್ತೆ ದಿನಪತ್ರಿಕೆಯಾಗಿ ಬದಲಾಗುತ್ತದೆ, ಮತ್ತೆ ಆತ ಅಲ್ಲೇ ಬಿಟ್ಟುಹೋದಮೇಲೆ ಅದು ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ.

ಏಕಾಂಗಿಯಾಗಿ ಅದು ಬೆಂಚಿನ ಮೇಲೆ ಒಂದು ನಿಮಿಷ ಕೂತಿದೆಯಷ್ಟೇ, ಮುದುಕಿಯೊಬ್ಬಳು ಅದನ್ನು ಕಂಡು ಓದಿದಾಗ ಅದು ಮತ್ತೆ ಮುದ್ರಿತ ಹಾಳೆಗಳಿಂದ ದಿನಪತ್ರಿಕೆಯಾಗಿ ಬದಲಾಗುತ್ತದೆ, ಅಲ್ಲೇ ಬಿಟ್ಟು ಎದ್ದ ನಂತರ ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ. ಆದರೆ ಆ ಮುದುಕಿ ಅದನ್ನು ಮನೆಗೆ ಎತ್ತುಕೊಂಡು ಹೊರಡುತ್ತಾಳೆ, ಹಾಗೆ ಮಾಡುವಾಗ ಮಾರ್ಗ ಮಧ್ಯದಲ್ಲಿ ಒಂದು ಕೆಜಿ ಬೀಟ್‌ರೂಟ್‌ಗಳನ್ನು ಕಟ್ಟಿಕೊಳ್ಳಲು ಅದನ್ನು ಬಳಸುತ್ತಾಳೆ. ಇಷ್ಟೆಲ್ಲಾ ರೂಪಾಂತರಗಳ ನಂತರವೂ ಆ ದಿನಪತ್ರಿಕೆಯ ಯೋಗ್ಯ ಉಪಯೋಗವಿಷ್ಟೇ.

2. ಪ್ರಗತಿ ಮತ್ತು ಪ್ರತಿಗಾಮಿತನ

ಜೇನುನೊಣಗಳು ತೂರಿಹೋಗಬಹುದಾದ ಗಾಜಿನ ಬಗೆಯನ್ನು ಅವರು ಅನ್ವೇಷಿಸಿದರು. ಜೇನುನೊಣ ಬಂದು ಗಾಜನ್ನು ತಲೆಯಿಂದ ನೂಕಿದರೆ ಮತ್ತೊಂದು ಬದಿಯಿಂದ ಹೊರಹೊಮ್ಮುತ್ತಿತ್ತು. ಇದು ಜೇನುನೊಣದ ಕಡೆಯಿಂದ ಅತೀವ ಸಂತಸಕ್ಕೆ ಕಾರಣವಾಗಿತ್ತು.

ಆ ಗಾಜಿನಲ್ಲಿ ಯಾವ ಗಿಮಿಕ್ ಬಳಸಲಾಗಿತ್ತು ಅಥವಾ ಅದು ಫೈಬ್ರಾಯ್ಡ್ ಆಗಿದ್ದರಿಂದ ಆ ಫೈಬರ್‌ಗಳಲ್ಲಿ ಫ್ಲೆಕ್ಸಿಬಲಿಟಿ ಏನಿತ್ತು ಎಂದು ತಿಳಿಯದೆ ಇದ್ದರಿಂದ, ಒಳಹೋದ ಜೇನುನೊಣ ಹೊರಬರಲಾರದು ಅಥವಾ ಹೊರಹೋಗಿದ್ದು ಒಳಬರಲಾರದ್ದು ಎಂಬುದನ್ನು ಪತ್ತೆಹಚ್ಚಿನ ಹಂಗೇರಿಯಾದ ವಿಜ್ಞಾನಿಯೊಬ್ಬರಿಂದ ಎಲ್ಲವೂ ಸರ್ವನಾಶವಾಯಿತು. ಆ ಕೂಡಲೇ, ಒಳಗೆ ಸಕ್ಕರೆ ಅಚ್ಚು ಇಟ್ಟು ಜೇನುನೊಣಗಳನ್ನು ಹಿಡಿಯುವ ಬೋನನ್ನು ಕಂಡುಹಿಡಿದರು ಮತ್ತು ಅದರಿಂದ ಆ ಜೇನುನೊಣಗಳು ನರಳಿ ಸತ್ತವು. ಇನ್ನೂ ಉತ್ತಮ ಅದೃಷ್ಟ ಇರಬೇಕಿದ್ದ ಈ ಪ್ರಾಣಿಗಳ ಜೊತೆಗೆ ಮೂಡಬಹುದಿದ್ದ ಸಂಭವನೀಯ ಭ್ರಾತೃತ್ವ ಕೊನೆಯಾದದ್ದು ಹೀಗೆ.

3. ಒಂದು ನಿಜವಾದ ಕಥೆ

ಒಬ್ಬ ಧೀಮಂತ ವ್ಯಕ್ತಿ ತನ್ನ ಕನ್ನಡಕವನ್ನು ನೆಲದ ಮೇಲೆ ಬೀಳಿಸಿದ್ದರಿಂದ, ಅದು ನೆಲದ ಟೈಲ್ಸ್‌ಗೆ ಬಡಿದಾಗ, ಒಂದು ಭಯಾನಕ ಸದ್ದನ್ನು ಮೂಡಿಸಿತು. ಅವನ್ನು ಎತ್ತಿಕೊಳ್ಳಲು ಆ ಧೀಮಂತ ವ್ಯಕ್ತಿ ಕೆಳಕ್ಕೆ ಬಗ್ಗಿದಾಗ, ಆ ಗಾಜು ಬಹಳ ದುಬಾರಿಯದ್ದಾದ್ದರಿಂದ, ಬಹಳ ದುಗುಡದಿಂದಿದ್ದ, ಆದರೆ ಯಾವುದೋ ಅದ್ಭುತ ಪವಾಡದಿಂದ ಅವುಗಳನ್ನು ತಾನು ಒಡೆದುಹಾಕಿಲ್ಲ ಎಂಬುದನ್ನು ಅತ್ಯಾಶ್ಚರ್ಯದಿಂದ ಕಂಡುಕೊಳ್ಳುತ್ತಾನೆ.

ಈಗ ಈ ಧೀಮಂತ ವ್ಯಕ್ತಿ ತನ್ನಷ್ಟಕ್ಕೇ ತುಂಬುಮನಸ್ಸಿನ ಧನ್ಯವಾದ ಹೇಳಿಕೊಂಡು ಮತ್ತು ಈಗ ನಡೆದಿರುವುದು ಒಂದು ಸ್ನೇಹಪೂರ್ವಕ ಎಚ್ಚರಿಕೆ ಎಂಬುದನ್ನು ಅರ್ಥಮಾಡಿಕೊಂಡು, ಕನ್ನಡಕದ ಅಂಗಡಿಗೆ ನಡೆದು, ಕನ್ನಡಕ್ಕಾಗಿ ಎರಡು ಹೊದಿಕೆಯ ಸಂರಕ್ಷಣೆ ಇರುವ ಚರ್ಮದ ಚೀಲವನ್ನು ಕೊಂಡು, ಮುನ್ನೆಚ್ಚರಿಕೆ ವಹಿಸುವುದು ಎಲ್ಲದ್ದಕ್ಕಿಂತ ಮುಖ್ಯವಾದದ್ದು ಎಂಬಿತ್ಯಾದಿಯಾಗಿ ಅಂದುಕೊಳ್ಳುತ್ತಾನೆ. ಒಂದು ಗಂಟೆಯ ನಂತರ ಆ ಚರ್ಮದ ಹೊದಿಕೆ ಇದ್ದ ಚೀಲ ಕೆಳಗೆ ಬೀಳುತ್ತದೆ, ಯಾವುದೇ ಆತಂಕವಿಲ್ಲದೆ ಅದನ್ನು ಎತ್ತಿಕೊಳ್ಳಲು ಬಗ್ಗಿದಾಗ, ಗಾಜು ಚೂರುಚೂರಾಗಿರುವುದನ್ನು ಕಂಡುಕೊಳ್ಳುತ್ತಾನೆ. ಸೃಷ್ಟಿಕರ್ತನ ವಿನ್ಯಾಸ ತರ್ಕಕ್ಕೆ ನಿಲುಕದ್ದು ಎಂದೂ ಮತ್ತು ವಾಸ್ತವದಲ್ಲಿ ಪವಾಡ ಈ ಕ್ಷಣವಷ್ಟೇ ನಡೆದಿದೆ ಎಂದು ಅರ್ಥಮಾಡಿಕೊಳ್ಳಲು ಈ ಧೀಮಂತ ವ್ಯಕ್ತಿಗೆ ತುಸು ಸಮಯ ಹಿಡಿಯುತ್ತದೆ.

4. ಕಚೇರಿಯಲ್ಲಿ

ಕೊನೆಯ ಕಾಮಾವನ್ನೂ ಬಿಡದಂತೆ ತನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯಕ್ತಿಗಳಲ್ಲಿ ನನ್ನ ನಂಬಿಕಸ್ಥ ವೈಯಕ್ತಿಕ ಕಾರ್ಯದರ್ಶಿಯೂ ಒಬ್ಬಳು. ಸರಣಿ ಆದೇಶಗಳನ್ನು ದಾಟಿ, ಬೇರೆಯವರ ಸ್ಥಾನಗಳನ್ನು ಅತಿಕ್ರಮಿಸಿ, ಹಾಲಿನ ಗ್ಲಾಸಿನಲ್ಲಿ ಬಿದ್ದಿರುವ ಒಂದು ಸಣ್ಣ ಕೂದಲನ್ನು ತೆಗೆಯಲು ಐದೂ ಬೆರಳನ್ನು ಅದ್ದುವುದೇನೆಂದರೆ ನಿಮಗೆ ತಿಳಿದಿರಬೇಕು.

ನನ್ನ ಕಚೇರಿಯಲ್ಲಿ ನನ್ನ ನಂಬಿಕಸ್ಥ ಕಾರ್ಯದರ್ಶಿ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಅಥವಾ ನೋಡಿಕೊಳ್ಳಲು ಇಚ್ಛಿಸುತ್ತಾಳೆ. ನಮ್ಮನಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ಸ್ನೇಹಪೂರ್ವಕ ಜಗಳಗಳನ್ನು ಮಾಡುತ್ತಾ, ನಾವು ದಿನವನ್ನ ಖುಷಿಯಿಂದ ಕಳೆಯುತ್ತೇವೆ, ನಾವುಗಳು ನಗುನಗುತ್ತಾ ಪರಸ್ಪರ ನಿರ್ಲಕ್ಷ್ಯ ಮಾಡಿಕೊಳ್ಳುತ್ತೇವೆ, ನಂತರ ಒಬ್ಬರ ಕೆಲಸದಲ್ಲಿ ಮತ್ತೊಬ್ಬರು ಮೂಗುತೂರಿಸುವುದಿದೆ, ಒಬ್ಬರಿಗೊಬ್ಬರು ರೇಗಿಸುವುದಿರುತ್ತದೆ, ಅದರಿಂದ ಅವಾಕ್ಕಾಗುವುದಿದೆ, ಆಕ್ರಮಿಸಿಕೊಳ್ಳುವುದು ಮತ್ತು ಅದರಿಂದ ಬಿಡುಗಡೆಗೊಳಿಸುವುದೂ ಕೂಡ. ಆದರೆ ಆಕೆಗೆ ಎಲ್ಲದ್ದಕ್ಕೂ ಸಮಯವಿದೆ, ಕಚೇರಿಯ ಮೇಲೆ ಸ್ವಾಮ್ಯ ಸಾಧಿಸುವುದಕ್ಕೆ ಪ್ರಯತ್ನಿಸುವದಷ್ಟೇ ಅಲ್ಲದೆ, ಚಾಕಚಕ್ಯತೆಯಿಂದ, ತನ್ನೆಲ್ಲಾ ಕೆಲಸಗಳನ್ನು ಪೂರೈಸುತ್ತಾಳೆ. ಉದಾಹರಣೆಗೆ ಪದಗಳನ್ನೇ ತೆಗೆದುಕೊಳ್ಳಿ, ಅವುಗಳನ್ನು ಉತ್ತಮಪಡಿಸುವುದು, ಕೈಬಿಡುವುದು, ಒಂದು ಕ್ರಮದಲ್ಲಿ ಜೋಡಿಸುವುದು, ಅವುಗಳನ್ನು ಚೆನ್ನಾಗಿ ನೋಡಿಕೊಂಡು ದಿನನಿತ್ಯದ ಕೆಲಗಳಿಗೆ ಸಿದ್ಧಪಡಿಸುವುದು, ಇವುಗಳನ್ನು ಮಾಡದ ದಿನವೇ ಇಲ್ಲ.

ಯಾವುದೋ ಒಂದು ಕಳಪೆ ವಿಶೇಷಣ ನನ್ನ ಬಾಯಿಂದ ಜಾರಿತು ಎಂದರೆ – ಅವೆಲ್ಲಾ ನನ್ನ ಕಾರ್ಯದರ್ಶಿಯ ಪರಿಧಿಯಾಚೆಗೇ ನಡೆಯುವುದು, ಮತ್ತು ಒಂದು ಮಟ್ಟದ ನಿರ್ದಿಷ್ಟತೆಯಲ್ಲಿ ಹೇಳುವುದಾದರೆ ನನ್ನ ಪರಿಧಿಯಾಚೆಗೇ – ಏಕೆಂದರೆ ಆಕೆ ಸದಾ ತನ್ನ ಪೆನ್ಸಿಲ್ ಜೊತೆಗೆ ಸಿದ್ಧರಿರುತ್ತಾಳೆ, ಆ ವಿಶೇಷಣವನ್ನು ಹಿಡಿದು ಕೊಲ್ಲುವುದಕ್ಕೆ. ಕೆಟ್ಟ ಚಟ ಅಥವಾ ಉದಾಸೀನದಿಂದಾಗಿ, ಆ ಪದ ಹೇಗೋ ಉಳಿದ ವಾಕ್ಯದ ಜೊತೆ ಕೂಡಿಕೊಂಡು ಬದುಕುವುದಕ್ಕೆ ಆಕೆ ಎಂದಿಗೂ ಬಿಡುವುದಿಲ್ಲ. ಆಕೆಯನ್ನು ತನ್ನಷ್ಟಕ್ಕೆ ಬಿಟ್ಟರೆ, ಆ ಕ್ಷಣದಲ್ಲಿ ಆಕೆಯ ಪಾಡಿಗೆ ಬಿಟ್ಟುಬಿಟ್ಟರೆ, ಹಾಳೆಗಳನ್ನು ಕೋಪದಲ್ಲಿ ಮುದುರಿ ಕಸದ ಡಬ್ಬಿಗೆ ಬಿಸಾಕುತ್ತಾಳೆ. ಅವಳದ್ದು ಎಷ್ಟು ದೃಢಮನಸ್ಸು ಎಂದರೆ, ನಾನು ವ್ಯವಸ್ಥಿತವಾದ ಬದುಕು ಬದುಕುತ್ತಿದ್ದೇನೆ ಮತ್ತು ಯಾವುದೇ ಮುನ್ಸೂಚನೆಯಿಲ್ಲದ ನಡೆ, ಆಕೆಯನ್ನು ಎದ್ದುಕೂರುವಂತೆ ಮಾಡಿ, ಎಲ್ಲಾ ಕಿವಿ, ಬಾಲ, ಮತ್ತು ಮೂಗು ನಿಮಿರುವಂತೆ ಮಾಡಿ, ಗಾಳಿಯಲ್ಲಿ ಕುರಿಯ ಕೊರಳಿನ ಗಂಟೆ ಅಲ್ಲಾಡುವಂತೆ ಮಾಡಿಬಿಡುತ್ತದೆ.

ನಾನು ಕೆಲವೊಮ್ಮೆ ಅಸತ್ಯದಿಂದ ನಡೆದುಕೊಳ್ಳಬೇಕಾಗುತ್ತದೆ, ಮತ್ತು ನಾನು ವರದಿಯೊಂದನ್ನು ಸಂಪಾದಿಸುತ್ತಿರುವ ನೆಪದಲ್ಲಿ, ಅವುಗಳ ತುಂಟಾಟದಿಂದ ಮತ್ತು ಅವುಗಳ ನೆಗೆತದಿಂದ ಮತ್ತು ಅವುಗಳ ಕೋಪಪೀಡಿತ ಜಗಳದಿಂದ ನನ್ನನ್ನು ಸಂತಸಪಡಿಸುವ ಪದಗಳನ್ನು, ಕಂದು ಮತ್ತು ಹಸಿರು ಬಣ್ಣದ ಕೆಲವು ಹಾಳೆಗಳಲ್ಲಿ ತುಂಬಬೇಕಾಗುತ್ತದೆ. ನನ್ನ ನಂಬಿಕಸ್ಥ ಕಾರ್ಯದರ್ಶಿ, ಅದರ ಮೇಲೆ ಎರಗಲು ಸಿದ್ಧಳಿದ್ದರೂ, ಬಹುತೇಕ ವಿಚಲಿತಳಾಗಿರುವ ಕಾರಣಕ್ಕೆ, ಕಚೇರಿಯನ್ನು ಒಪ್ಪಓರಣ ಮಾಡುತ್ತಿರುತ್ತಾಳೆ. ಉಲ್ಲಾಸದಾಯಕವಾಗಿ ಒಂದು ಪದ್ಯ ಮೂಡುತ್ತಿರುವ ಮಧ್ಯದಲ್ಲಿ, ತನಗೆ ಒಪ್ಪಿಗೆಯಿಲ್ಲ ಎಂಬಂತೆ ಉಗ್ರವಾಗಿ ಕಿರುಚುವುದು ನನಗೆ ಕೇಳಿಸತ್ತೆ, ಆಗ ನಿಷೇಧಿತ ಪದಗಳಗಾಗಿ ನನ್ನ ಪೆನ್ಸಿಲ್ ನಾಗಾಲೋಟದಿಂದ ಓಡುತ್ತೆ, ಆಕೆ ಅವುಗಳನ್ನು ಅಷ್ಟೇ ನಿಷ್ಠೆಯಿಂದ ಅಳಿಸುತ್ತಾಳೆ, ಅಸ್ತವ್ಯಸ್ತಿವಿರುವುವನ್ನು ವ್ಯವಸ್ಥಿತಗೊಳಿಸುತ್ತಾಳೆ, ಕತ್ತರಿಸುತ್ತಾಳೆ, ಅದನ್ನು ಸ್ವಚ್ಛಗೊಳಿಸುತ್ತಾಳೆ, ಅದನ್ನು ಕಾಂತಿಯುತಗೊಳಿಸುತ್ತಾಳೆ, ಆದರೆ ಈ ದುಗುಡ, ನಾಲಿಗೆ ಮೇಲಿನ ಈ ವಿಶ್ವಾಸಘಾತುಕತನದ ರುಚಿ, ತನ್ನ ಕಾರ್ಯದರ್ಶಿಯನ್ನು ಎದುರಿಸುವ ಬಾಸ್‌ನ ಮುಖಚರ್ಯೆ ಹೊರತುಪಡಿಸಿ, ಇನ್ನು ಉಳಿದುಕೊಂಡಿದ್ದು ಬಹುಶಹ ಚೆನ್ನಾಗಿರಬಹುದು.

(ಕನ್ನಡಕ್ಕೆ): ಗುರುಪ್ರಸಾದ್ ಡಿ ಎನ್

ಹೂಲಿಯೋ ಕೋರ್ಟಾಜಾರ್

ಹೂಲಿಯೋ ಕೋರ್ಟಾಜಾರ್
ಖ್ಯಾತ ಸ್ಪಾನಿಶ್ ಬರಹಗಾರ ಮತ್ತು ಕವಿ. ’ಹಾಪ್‌ಸ್ಕಾಚ್’, ’ಬ್ಲೋ ಅಪ್ ಅಂಡ್ ಅದರ್ ಸ್ಟೋರೀಸ್’, ’ದ ವಿನ್ನರ್ಸ್’, ’ಎಂಡ್ ಆಫ್ ಗೇಮ್’ ಕೋರ್ಟಾಜಾರ್‌ನ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆಗಳನ್ನು ಅವರ ಅತಿ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದ ’ಕ್ರೋನೋಪಿಯೋಸ್ ಅಂಡ್ ಫಾಮಾಸ್’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...