Homeಕಥೆಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ 'ಒಂದು ಕುರ್ಚಿಯ ಸಾವು'

ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

- Advertisement -
- Advertisement -

ನಾನಿರಾಕಿಲ್ಲಾಂದ್ರೆ ಇರಕಿಲ್ಲ ಈ ಮನ್ಯಾಗೆ, ಜೀವ ತೇದೂ ತೇದೂ ಸಾಕಾಗದೆ, ಇರಾಬರಾವ್ಕೆಲ್ಲಾ ಬೇಸಾಕೀ ಬೇಸಾಕಿ ನಾನೇ ಸೀದು ಕರುಕ್ಲಾಗೋದೆ, ಅದೇನ್ ಸುಖ ಉಣ್ಣಕೇಂತ ತಂದಿಲ್ಲಿಗ್ ಕೊಟ್ನೋ ಕಾಣೆ ಆ ಅಣ್ಣ; ಅಣ್ಣ ಬೇವರ್ಸಿ ಅಂತ ಅತ್ತಿಗೆ ದಿನಾ ಆಡೋ ರಾಗ ಕೇಳ್ನಾರ್ದೆ, ಎಲ್ರೂ ಕಿವೀನೂ ಸೋತ ಒಂದು ದಿನ ನಮ್ ಮನೇನೂ ಭಾಗ ಆಗಾಕ್ ಬಂತು.

ನೆಂಟ್ರುಗೆಲ್ಲಾ ಯಾರ್ದಾನಾ ಮನೆ ಭಾಗ ಆಯ್ತದೆ ಅಂದ್ರೆ ಅದೊಂತರಾ ಟೆಂಟಿಗೆ ಹೊಸಾ ಸಿನ್ಮಾ ಬಂದೋಟು ಕುಸಿ. ಆಚೀಚೆ ಮನೆ ಗಂಡುಸ್ರು ಒತ್ತಾರೆನೆ ಎದ್ದು, ಮೂಲೆ ಪೆಟ್ಗೆಲ್ ಮಡ್ಗಿದ್ದ, ಇದ್ದ ಒಂದು ಪಂಚೆನ ಸಂದಾಗ್ ಕೊಡ್ವಿ, ಎಗ್ಲುಮೇಲ್ ಆಕ್ಕಂಡು ನಾನೂ ನ್ಯಾಯ ಯೋಳೋ ಗೌಡ್ನೆಯ ಅನ್ನ ತರ ಮೊಕ ಮ್ಯಾಕ್ ಮಾಡ್ಕಂಡು, ನಮ್ಮನೇ ಮುಂದೇನೇ ಅಕಡಿಕೂ ಇಕಡಿಕೂ ಓಡಾಡ್ತಿದ್ರು. ಪಕ್ಕದ್ ಮನೆ ಆಕಾಶವಾಣಿ ಗೌರಕ್ಕ ಅಂತೂ ಎದ್‌ಎದ್ದೋಳೇ ಬಂದ್ ನಮ್ಮನೆ ಪಡ್ಸಾಲೆಲ್ ಕೂತೋಳು ಅಳ್ಳಾಡಿರ್ಲಿಲ್ಲ. ಅಂತೂ ಒತ್ತಾರೆಒತ್ಗೆ ಅವ್ರು ಇವ್ರೂ ಎಲ್ರೂ ಸೇಕಂಡು ಹಿಕ್ಮತ್ ಮಾಡಿ ಪಾಲ್ ಮಾಡೇ ಬುಟ್ರು. ಅವರವ್ರೇ ಗುಸಪುಸ ಪಿಸಪಿಸ ಮಾತಾಡ್ಕಂಡ್ರು, ಕೊನೆಗೆ ನಮ್ಮೂರ್ ನ್ಯಾಯಸ್ಥ ಅನುಸ್ಕಂಡಿದ್ದ ಹೊಟ್ಟೆಪ್ಪ ಎದ್ ನಿಂತು ಪಂಚೆ ಸರ್‌ಮಾಡ್ಕಂಡು ಪಾಲ್ ಪಾರೀಕತ್ತನ್ನ ತನಿಗ್ ತಿಳ್ದಂಗೆ ಹೇಳ್ದ.

ಅವರ ನಿರ್ಧಾರದಂತೆ ಮದುವೆಯಾಗದೇ ಇದ್ದ ನನ್ನ ಪಾಲಿಗೆ ಬಂದದ್ದು ನಾಲ್ಕು ಗುಂಟೆ ಬಗೈರ್ ಹುಕುಂ ಜಮೀನು ಮತ್ತೆ ಅವ್ವಂಗೆ ತೌರಿನ ಮನೆಯಿಂದ ಸಿಕ್ಕಿದ್ದ ಬಳ್ಳುಳ್ಳಿ ಮನೆ ಅಷ್ಟೆ. ಇವ್ನಿಗೆ ಸಾಲವನ್ನೇನೂ ಹೊರೆಯಾಗಿಸಿಲ್ಲ ಅನ್ನುವ ಕಾರಣಕ್ಕೆ ಮತ್ತು ಹೆಂಡ್ರು ಮಕ್ಳಿಲ್ಲದ್ ಗುಂಡ್ರುಗೋವಿಗ್ಯಾಕೆ ಅಂತ್ಲೋ ಏನೋ ಪಾತ್ರೆ ಪಗಡೆ ಯಾವನ್ನೂ ನನಗೆ ಹಂಚುವ ಜರೂರತ್ತೇ ಯಾರಿಗೂ ಕಾಣ್ಲಿಲ್ಲ. ಹಿತ್ತಾಳೆ ಹಂಡೆ, ತಾಮ್ರದ ತಪ್ಲೆ, ಈಚ್ಲು ಚಾಪೆ ಇಂತ ಮುಖ್ಯ ಅನ್ನೋ ಬಹಳಷ್ಟನ್ನ ಈಗಾಗ್ಲೇ ಅತ್ಗೆ ಹಿಂದಿನ ಬೀದಿಯಲ್ಲೇ ಇದ್ದ ತನ್ನ ತವರು ಮನೆಗೆ ಸಾಗಿಸಿ ಆಗಿತ್ತು. ಅಣ್ತಮ್ಮಂದ್ರು ತಮ್‌ಮುಂದೆ ಅಳಿದುಳಿದ ಪಾತ್ರೆಪಗ್ಡಿ, ಅಕ್ಕಿ ರಾಗಿ, ಖಾರಪುಡಿ ಇಂತವ ತಂದು ಸುರಿದು ಹಂಚುವ ಡ್ರಾಮ ಶುರುವಾಯ್ತು.

ಮೈಸೂರಲ್ ಓದಕೇಂತ ಇದ್ದಿದ್ಕೋ, ಕತೆ ಕಾದಂಬರಿ ಓದಿದ ಪ್ರಭಾವದಿಂದ್ಲೋ, ತಲೆಲೊಂದಿಷ್ಟು ಆದರ್ಶ ಗೀದರ್ಶ ಅಂತ ತುಂಬ್ಕಂಡಿದ್ಕೋ ಏನೋ, ನಾನು ಮಾತುಕತೆಯ ಮಧ್ಯ ಎದ್‌ನಿಂತು ಎದೆ ಉಬ್ಸಿ ಮನೆಯ ಯಾವ ವಸ್ತುವನ್ನೂ ನಂಗೆ ಹಂಚುವುದು ಬೇಡ, ಎಲ್ಲಾ ಅಣ್ಣನಿಗೇ ಇರಲಿ ಎಂದು ದೊಡ್ದಾಗಿ ಘೋಷಿಸ್ದೆ. ಇದರಿಂದ ಅವರ ಮುಖದ ಮೇಲೆ ನಾನ್ ಮಾಡಿದ್ ತ್ಯಾಗದ ಖುಷಿ ಕಾಣ್ತದೇನೋ ಅಂತ ನೋಡ್ದೆ, ಬದ್ಲಿಗೆ ಅವ್ರ್ ಮುಕದ್ ಮ್ಯಾಲೆ ಇದ್ಯಾವ್ ಘನಂದಾರಿ ಕೆಲ್ಸ ಅನ್ನತರ ಭಾವ ಇದ್ದಿದ್ ನೋಡಿ ತೆಪ್ಪಗ್ ಕುತ್ಕಂಡೆ.

ಏನೂ ಬೇಡವೇ ಬೇಡವೆಂದು ಮನಸು ಇಳೇ ಬಿಟ್ಟಿದ್ದ ನನಗೆ ಅದ್ಯಾಕೋ ಪಡಸಾಲೆಯ ನಡುವೆ ಇದ್ದ, ಅಜ್ಜನೂ ಅಪ್ಪನೂ, ಮತ್ತೆ ಇವರ್ಯಾರೂ ಇಲ್ಲದ್ ನೋಡ್ಕಂಡ್ ಅವ್ವನೂ ಕುತ್ಕತಿದ್ದ ಮರದ ಚೌಕಾಕಾರದ ಕುರ್ಚಿನ ಮಾತ್ರ ಬಿಡಕಾಗ್ಲಿಲ್ಲ. ಅದ್ಯಾಕೋ ಅದು ನನಗೇ ಸಿಗ್ಬೇಕು ಅನ್ನೋ ಮೋಹ ಮೂಡಿಸ್ಬಿಡ್ತು. ಎದ್ದು ನಿಂತೋನೆ ಆ ಕುರ್ಚಿಯೊಂದು ನನಗಿರಲಿ ಅಂದೆ. ಎಲ್ರೂ ಒಬ್ರು ಮಕ ಒಬ್ರು ನೋಡ್ಕಂಡ್ರು. ಕೋಣೆಲ್ ಕೂತಿದ್ ಅತ್ತಿಗೆ ತಿವಿದ ತಿವಿತಕ್ಕೆ ಅರ್ಥ ಮಾಡಿಕೊಂಡ ಅಣ್ಣನ 10 ವರ್ಷದ ಮಗ ಬಸವ ಓಡೋಗಿ ಆ ಕುರ್ಚಿಯ ಮೇಲೆ ಕುತ್ಕಂಡವ್ನೇ ಉಹು, ಇದು ನಂಗೆ ಬರ್ಕಳಕ್ ಬೇಕು, ನಾ ಕೊಡಕಿಲ್ಲ ಅನ್ನದಾ!?

ಅಲ್ಲಿಗಂಟ ನನಗೆ ಯಾವ್ದೂ ತಲೆಗ್ ಹತ್ತಿರ್ಲಿಲ್ಲ, ಬಸವ ಕುರ್ಚಿ ಮೇಲೆ ಕುತ್ಗಂಡೇಟ್ಗೆ ಅದೇನ್ ರೋಷ ಬಂತೋ, ಹಾಳ್ಗೇರಿದೂ ತ್ಯಾಗಗೀಗ, ಸಣ್ಣುಡ್ಗ ಅಂತ ಯಾವ್ದ್ನೂ ನೋಡ್ದೆ, ಎದ್ ಹೋಗಿ ಬಸವನ್ನ ದರದರ ಅಂತ ಎಳ್ದು ನೆಲಕ್ ಕುಕ್ರುಸ್ದವ್ನೇ, ಇವಾಗಿನ್ ತೆಲ್ಗು ಪಿಚ್ಚರಿನ್ ಬಾಹುಬಲಿ ತರ ಆ ಕುರ್ಚಿನ ಒತ್ಗಂಡಿದ್ದೆಯ ಸೀದಾ ದೆವ್ವ ಮೆಟ್ಗಂಡವ್ನಂಗೆ ನನ್ ಭಾಗುದ್ ಮನೆಗೆ ಬಂದ್ಬಿಟ್ಟಿದ್ದೆ.

ಅವತ್ತಿಂದ ಊರಿಗ್ ಹೋದಾಗೆಲ್ಲಾ ಆ ಖಾಲಿಬಿದ್ದು ಗವ್ವಂತಿದ್ದ ಮನೇಲಿ ಒಂಟಿ ಪಿಶಾಚಿ ತರ ಇದ್ದ ನಾನು ಮತ್ತೆ ಆ ಕುರ್ಚಿಯೊಂದೇ ನನ್ ಜೊತಿಗ್ ಮಾತಿಗ್ ಸಿಗ್ತಿದ್ ನೆಂಟ ಅಂತ ಆಯ್ತು.

ಆವತ್ತೊಂದಿನ ಫ್ರೆಂಡ್ ರಾಕೇಶ ಬೇಡ ಕಣ್ಲಾ ಅಂದ್ರೂ ಬಿಡ್ದೆ ವಸಿ ಜಾಸ್ತೀನೇ ಕುಡ್ಸಿದ್ದ. ಕುಡ್ದಿದ್ದು ಸಾಲ್‌ಲಿಲ್ಲ ಅಂತ ಇನ್ನೊಂದು ಕ್ವಾಟ್ರೂ, ಒಂದ್ ಕುಷ್ಕನು ಕವರಿಗ್ ಕಟ್ಟಿಸ್ಕಂಡ್ ತಂದೆ. ಮನಿಗ್ ಬತ್ತಿದ್ದಂಗೆ ದೆವ್ವ ಹೊಕ್ಕೋನಂತೆ ಗಂಟ್ಲಿಗ್ ಸುರ್ಕಂಡೆ.

ಚೋತಾ… ಯಾಕ್ಲಾ ಈಟೊಂದ್ ಕುಡ್ದಿಯಾ… ಸಾಕ್ ಬಾ ಮಗಾ ಮಲಕ್ಕ ಅಂತ ಅವ್ವ ಕರುದಂಗಾತು, ಅವ್ವ ಹೆಂಗ್ ಕರೀತಾಳೆ! ಅವ್ಳು ಸತ್ತು ಏಟೊಂದ್ ವರ್ಸಾದೊ!? ತಿರುಗ್ ನೋಡ್ದೆ, ಎದ್ರುಗೆ ಕುರ್ಚಿ ಒಂದ್ ಬುಟ್ರೆ ಯಾರೂ ಇಲ್ಲ!

ಅಂಗೇ ಜೋಂಪತ್ತುದಂಗಾತು, ತಲೆ ಗೋಡೆಗ್ ಕೊಟ್ಟಿದ್ದೆ ಜಾಡ್ಸ್ ಒದಿತೀನ್ ನೋಡ್ ಮಗ್ನೇ, ಏಳ್ಲಾ ಮೇಕೆ, ಓಗ್ ಬಿದ್ಕಂಡ್ರೆ ಸರಿ ಅಂತ ಅಪ್ಪ ಬೈದ, ತಡಬಡಾಯ್ಸಿ ಎದ್ದೆ, ಸುತ್ಮುತ್ತ ನೋಡ್ದೆ, ಅವ್ವುಂಗಿತ ಮುಂಚೇನೇ ಶಿವನ್ ಪಾದ ಸೇರ್ಕಂಡಿದ್ ಅಪ್ಪ ಇವತ್ತೆಲ್ಲಿಂದ ಮಾತಾಡ್ತಾವ್ನೆ!? ಯಾಕೋ ತಲೆ ಕೆಟ್ಟಂಗಾಯ್ತು. ತತ್ ಅಂತ ತಲೆ ಕೊಡ್ವಿ ತೂರಾಡ್ತಾ ಎದ್ದೋನೇ ಸೀದಾ ಹೋಗಿ ಕುರ್ಚಿ ಮೇಲ್ ಕುಕ್ರುಸ್ದೆ.

ಅಗಳಾ… ಈ ಕುರ್ಚಿಗೇನಾಗದೇ! ಅವ್ವುನ್ ತೊಡಯಂಗೆ ಮೆತ್ ಮೆತ್ತುಗ್ ಸಿಗ್ತಾಯ್ತೆ… ಅದರ ಆರಾಮ್ ಕೈಗಳು ನನ್ನನ್ನ ಹಂಗೇ ಮೆಲ್ಲುಕೆ ಸೆಳ್ದು, ಮಡ್ಲಿಗ್ ಎಳ್ಕತಾ ಅವೆ. ಏನಾಗ್ತಿದೆ ಅರ್ತಾನೇ ಆಗ್ಲಿಲ್ಲ. ನೋಡ್ತಾನೋಡ್ತಾ ಇದ್ದಂಗೆ ಕುರ್ಚಿಯ ಕೈಗಳು ಅವ್ವನ ಕೈಗಳಾದ್ವು, ಹಣೆ ಸವರಿ, ಸೆರಗ್ನಿಂದ ಬೆವರೊರ್ಸಿ, ಒಚ್ಚರಿಕ್ ಮಲ್ಗುಸ್ಕಂಡು ಮೆಲ್ಲುಗ್ ತಟ್ಟಕ್ ಶುರ್ವಚ್ಕಂಡ್ಳು ಅವ್ವ… ತಲೆ ಗಿರ್ರಂತು ನಂಗೆ. ಇದ್ರವ್ವುನ್ ಅಂತ ಒಂದ್ಸಲ ತಲೆ ಕೊಡ್ವಿ ಕಣ್ಣ ಅಗ್ಲಿಸಿ ನೋಡವತ್ಗೆ ಅದು ಮೊದ್ಲಿನ್ತರ ಬರೀ ಕುರ್ಚೀನೇ ಆಗೈತೆ! ಅಯ್ಯೋ ನನ್ ಬುದ್ಧಿಗ್ ಹಳೇ ಎಕ್ಡುದಲ್ ಒಡ್ಯಾ… ಜಾಸ್ತಿ ಎಣ್ಣೆ ಉಯ್ಕಂಡ್ರೆ ಇಂಗೆಯ ಅಂತ ಬೈಕಂಡ್ ಕುರ್ಚಿಗೆ ಒರಿಕ್ಕಂಡೆ.

ಈ ಸಲ ಇನ್ನೂ ವಿಚಿತ್ರ ಆಯ್ತು… ಆ ಕುರ್ಚಿ ನಿಧಾನುಕ್ ಬೆಳೀತಾಬೆಳೀತಾ ಅಪ್ಪನ ಹೆಗಲಾಗೋಯ್ತು! ನಾ ಅದ್ರು ಮೇಲ್ ಕುಂತಿದಿನಿ. ಚೋತಾ ಬದ್ರ ಕಲ್ಲಾ… ಗಟ್ಟಿ ಇಡ್ಕಾ ನನ್ ತಲೆಯ, ಒಂದ್ ರವುಂಡ್ ಜಾತ್ರೆಯ ಸುತ್ಕ ಬತ್ತಿನಿ ಅಷ್ಟೆಯ, ಆಮೇಕೆ ದೋವ್ರ್ ಕಾಣ್ಲಿಲ್ಲ… ತೇರ್ ಕಾಣ್ಲಿಲ್ಲ ಅಂತ ಏನಾರ ರಾಗ ತಗ್ದೇ ನರಾ ಕಿತ್ತಾಕ್ತೀನಿ ಆಟೆಯ ಅಂದ ಅಪ್ಪ. ಭಯಕ್ಕೆ ಚಡ್ಡಿ ಒಳ್ಗಿಂದ ಕಿತ್ಕಂಡ ಉಚ್ವೆ ಅಪ್ಪುನ್ ಹೆಗ್ಲು ನೆನ್ಸಾಕ್ತು. ಸಿಟ್ಟಿಗೆದ್ದ ಅಪ್ಪ ನನ್ನ ತೆಗ್ದು ರೊಯ್ಯಂತ ನೆಲುಕ್ ಒಗ್ದಿದ್ದೇ, ದರಾದರಾಂತ ಎಳ್ಕಂಡ್ ಒಂಟ… ‘ಅಪ್ಪೋ ಬುಡಪ್ಪೋ’ ಅಂತ ಕೈ ಕೊದ್ರಕೋಯ್ತಿನಿ ಆಯ್ತಿಲ್ಲ… ಇದೇನ್ ಕನ್ಸೋ ನಿಜ್ವೋ ಅಂತ ಅರ್ಥ ಆಗೋ ಅಷ್ಟ್ರಲ್ಲಿ… ಕುರ್ಚಿಲಿ ನನ್ನ ಯಾರೋ ಹಿಂದುಕ್ ಎಳ್ದಂಗಾಯ್ತು. ಈ ವ್ಯಾಕ್ಯೂಮ್ ಕ್ಲೀನರ್ ಒಳಿಕೆ ಸೆಳೆಯೋ ಕಸದ್ ತರ ನನ್ನೂ ಕುರ್ಚಿ ಕಡಿಕೆ ಎಳದಂಗಾಗಿ ರೊಯ್ಯಂತ ಸೀದಾ ಒಳೀಕ್ ಎಳ್ಕಂಡೋಯ್ತಾಯ್ತೆ… ಗಾಬ್ರಿ ಆಗಿ ಕೈಗೆ ಏನಾರ ಸಿಗ್ತದಾ ಅಂತ ಕೈಗೊಳ ಗಬ್ರಾಡ್ದೆ, ಏನಾದ್ರೂ ಇದ್ರಲ್ವಾ ಕೈಗ್ ಸಿಗಕೆ, ಹಾರರ್ ಸಿನ್ಮಾದಲ್ ದೆವ್ವ ಕ್ರೂರ ಪ್ರಾಣಿನೋ, ಕರೀ ವೇಷಾನೋ ಎಳ್ಕಾ ಹೋಗುತ್ತಲ್ಲಾ ಹಂಗೇ ಸರ್ರಂತ ಜಾಕಂಡ್ ಹೋದವ್ನೇ, ಸೀದಾ ಹೋಯ್ತಾ ಹೋಯ್ತಾ ಕುರ್ಚಿ ಒಳೀಕ್ ಒಂಟೇ ಹೋದೆ.

ನಿಧಾನುಕ್ ನನ್ ಕೈಗಳು ಕುರ್ಚಿಯ ಕೈಗಳಂಗೆ ಬಾಗಿದವು. ಕಾಲು ಮಂಡಿಯ ಭಾಗಕ್ಕೆ ನೇರ ಬಗ್ಗಿ ಕುರ್ಚಿಯ ಕಾಲಂಗಾದ್ವು, ಬೆನ್ನು ಕುರ್ಚಿಯ ಹಿಂಭಾಗವಾಯ್ತು, ಯಾವುದೋ ಮ್ಯಾಜಿಕ್ ತರಾ ನಾನೇ ಕುರ್ಚಿನೇ ಆಗೋದೆ. ಇಲ್ಲಿಂದ ಶುರ್ವಾಯ್ತು ನೋಡಿ ನನ್ ಪೀಕ್ಲಾಟ, ಕಕ್ರಮಕ್ರು ಇಡ್ದಂಗಾಯ್ತು…

ಯಾರಿದೀರ… ಕುರ್ಚಿ ಒಳ್ಗಿದೀನಿ, ಪ್ಲೀಸ್ ನನ್ ಹೊರಿಕ್ ತಗಿರಿ ಅಂತ ಅರ್ಚ್ಕಂಡೆ, ಬಡ್ಕಂಡೆ… ನನ್ ದನೀನೇ ಹೊರೀಕ್ ಬರ್ಲಿಲ್ಲ. ಇದೇ ಒದ್ದಾಟ್ದಲ್ಲಿ ಕೋಳಿಕೂಗೋ ಹೊತ್ತಾತು, ವರ್ತ್ನೆ ಹಾಲು ಕೊಡಕ್ ಮನೆಗ್ ಬಂದ ಬಂಗಾರಕ್ಕುಂಗ್ ನನ್ ಒದ್ರಾಟ ಕೇಳ್ಳೇ ಇಲ್ಲ, ಹಾಲಿನ್ ಚೊಂಬ್ ತಂದ ಅವ್ಳು ಲೋ ಚೇತಾ, ಹಾಲಿಟ್ಟಿದಿನಿ ಕುರ್ಚಿಮೇಲೆ ನೋಡ್ಕ ಅಂದೋಳೇ ನನ್ ತೊಡೆ ಮೇಲ್ ಚೊಂಬಿಟ್ಟು ಹೊಂಟೇ ಓದ್ಲು. ನಾನ್ ಬರೀ ಅಕ್ಕೋ ಅಕ್ಕೋ ಅಂತ ಬಡ್ಕಂಡಿದ್ದೇ ಬಂತು.

ಅವತ್ತೆಲ್ಲಾ ಅರೆತೆರೆದ ಬಾಗಿಲಿನ ಆಚೆಗೆ ಯಾರದೇ ನೆರಳು ಕಂಡರೂ, ಯಾರೇ ಸುಳಿದರೂ ನನ್ನ ಇಲ್ಲಿಂದ ಬಿಡ್ಸಿ, ನಾನು ಈ ಕುರ್ಚಿ ಒಳ್ಗ್ ಸಿಗಾಕ್ಕಂಡಿದಿನಿ, ಕಾಪಾಡಿ ಅಂತ ಕೂಗ್ದೆ, ಅರುಚ್ದೆ, ಗೋಳಾಡ್ದೆ, ಬಡ್ಕಂಡ್ ಬಡ್ಕಂಡ್ ಸುಸ್ತಾಗಿ, ದನಿ ಅಡಗಿ, ಗಂಟ್ಲಿಗೆ ಇನ್ನಾಗಲ್ಲ ಅನ್ಸಿ ಸುಮ್ನಾಗೋದೆ.

ರಾತ್ರಿ ಆಯ್ತು, ಕಣ್ಣೆಳ್ಕ ಓಗಿ ಮಲ್ಕಬುಟ್ಟಿದಿನಿ ಅನ್ಸುತ್ತೆ, ಇದ್ಕಿದ್ದಂಗೆ ಎಚ್ಚರ ಆಯ್ತು, ಏನಾಗಿದೆ ಅಂತ ಅರ್ಥ ಆಗಕೆ ಒಂದಿಷ್ಟೊತ್ ಬೇಕಾಯ್ತು. ಹಂಗೇ ನನ್ ಕಡೆ ನೋಡ್ಕಂಡೆ, ನೋಡ್ತಿನಿ… ನಿಜಕ್ಕೂ ನಾನ್ ಕುರ್ಚಿನೇ ಆಗೋಗಿದಿನಿ, ಈಗ ನೋಡಕೆ ಕುರ್ಚಿಯಂಗೆ ಕಾಣ್ತಿದ್ರೂನೂ ನಾನೀಗ ಚೇತನಾನೇ ಆಗಿದಿನಿ, ಅತ್ತಿತ್ತ ಚಲಿಸಬಹುದು, ಕೈಕಾಲಾಡಿಸಬಹುದು, ಹೊಟ್ಟೆ ಹಸಿತಿದೆ, ತೊಡೆ ಮೇಲೆ ಹಾಲಿತ್ತಲ್ಲ ಗಟಗಟಾಂತ ಕುಡ್ಕಂಡೆ, ಹಂಗೇ ಹಿಂದುಕ್ ಜರುಕ್ಕಂಡೆ, ಗೋಡೆಗೆ ಒರಿಕ್ಕಳನ ಅಂತ. ಏನ್ ಆಶ್ಚರ್ಯ! ನಾನು ಹಂಗೇ ಗೋಡೆ ಒಳಕ್ಕೇ ಹೋಗ್ತಿದಿನಿ, ಗೋಡೆ ನನ್ನ ತಡೀತಿಲ್ಲ. ಹಂಗೇ ಜರುಗ್ ಜರುಗ್ತಾ ಗೋಡೇನ್ ಹಾಯ್ದು ಹಿಂದಿದ್ದ ಕೋಣೆವಳಿಕ್ ಹೋಗಿದ್ದೆ! ಅಂದ್ರೇ ನಾನೀಗ ಗೋಡೆಯ ಒಳಗೂ ತೂರಬಲ್ಲೆ… ಯಪ್ಪಾ! ನನ್ನ ಎದುರಿಗೆ ಸಿಗುವ ಯಾವ ಘನ ವಸ್ತುವೂ ತಡ್ಯಕಿಲ್ಲ, ಅದ್ರೊಳಗೆ ನುಗ್ಗಿ ಮುಂದುಕೋಗ್ಬಹುದು. ಇದೇನಾಯ್ತಾದೆ? ಒಂತರಾ ಮೊದ್‌ಮೊದ್ಲು ಇದ್ರ ಮಕಮೂತಿ ಅರ್ತಾಗ್ಲಿಲ್ಲ, ಗಾಬ್ರಿ ಆಯ್ತು, ಬತ್ತಾಬತ್ತಾ ಮಜಾ ಅನ್ಸಕ್ ಶುರ್ವಾಯ್ತು, ಗೋಡೆ ಹಾಯ್ದು ಹಿತ್ತಲಿಗೋದೆ, ಬಾಗ್ಲು ತೆಗಿದೆ ಅದ್ರೊಳ್ಗೇ ತೂರ್ಕಂಡು ಆಚಿಕೋದೆ. ಪಕ್ಕದ್ಮನೆ ಕಾಂಪೌಂಡಲ್ ತೂರ್ಕಂಡ್ ಮುಂದಕ್ಕೋದೆ, ವಡ್ಗಲ್ಲಪ್ಪನ್ ಮನೆ ಕಬ್ಣುದ್ ಗೇಟು, ಆಳೆತ್ರದ್ ಗೋಡೆ ನನ್ ತಡೀಲೆ ಇಲ್ಲ. ಮನೆ ಗೋಡೆ ದಾಟ್ದೆ, ಅದು ಅವ್ರ ಬೆಡ್ರೂಮ್ ಅಂತ ಕಾಣ್ತದೆ, ಅವನ ಹೆಂಡ್ರು ತನ್ನ ಕಾಲ್ನ ಆ ವಯ್ಯನ್ ಮ್ಯಾಲ್ ಏಕಂಡ್ ಮಲ್ಗಿದ್ಲು. ಹನ್ಮಂತ ಲಂಕಾ ಪಟ್ಣದ ರಾಣಿ ವಾಸ ಹೊಕ್ಕಾಗ ಆದ ಪರಿಸ್ಥಿತಿ ಆಗೋಯ್ತು. ಗಾಬ್ರಿ ಬಿದ್ದು ಹೊರ್ಗಡಿಕ್ ಬಂದ್ಬುಟ್ಟೆ… ಅಲ್ಲಿಂದ ಸೀದಾ ಮನೆಗ್ ಬಂದ್ ಕುಕ್ರುಸ್ಕಂಡೆ. ತಲೆಲಿ ಈಗ ಈ ಹೊಸಾ ಬದಲಾವಣೆಯ ಬಗ್ಗೆ, ಅದರ ಸಾಧ್ಯತೆಗಳ ಬಗ್ಗೆ ಒಳ್ಳೆ, ಕೆಟ್ಟ, ಫ್ಯಾಂಟಸಿಯ ಹಂಗೇ ಪೋಲಿಪೋಲಿಯ ಅನೇಕ ವಿಚಾರಗಳು ಬರ್ತಾ ಹೋದ್ವು. ಬೆಳಕರೀತಾ ಹೋದಂಗೆ ಮತ್ತೆ ಕಾಲುಗಳೆಲ್ಲಾ ಮೊದಲಿನಂಗೇ ಸೆಟೆತುಕೊಳ್ಳತೊಡಗಿದವು. ತಲೆಕೊಡ ನೋಡ್ದೆ, ನಿಧಾನವಾಗಿ ಕಾಲುಗಳು ಕೊರಡಿನಂತಾಗಿ ನಾನು ಮತ್ತೆ ಕುರ್ಚಿಯಾಗಿ ನೆಲಕ್ಕೆ ಬೇರು ಬಿಟ್ಟಂಗಾಗಿ ಅದೇ ಕುರ್ಚಿ ಆಗಿ ಬದಲಾದೆ.

ಬೆಳಗ್ಗೆ ಹತ್ಗಂಟೆ ಆಗಿರ್ಬೋದು, ಅಣ್ಣನ ಮಗ ಬಸವ ಹೊರಗ್ ಆಟ ಆಡ್ತಿದ್ದೋನು ಬಾಗಿಲು ಅರ್ಧಂಬರ್ಧ ತೆಗ್ದಿರದ್ ನೋಡಿದಾನೇ ಅನ್ಸುತ್ತೆ ಮೆಲ್ಲುಕ್ ಒಳಿಕ್ ಬಂದ. ಬಂದೋನೆ ಭಯ, ಕುತೂಹಲದ ಕಣ್ಣಿಂದ ಮನೇನೆಲ್ಲಾ ಒಂದ್ಸಾರಿ ನೋಡ್ದ. ಕುರ್ಚಿ ಕಣ್ಣಿಗ್ ಬಿದ್ದೇಟ್ಕೆ ಓಡ್ ಬಂದ್ ಮೇಲ್ ಕುತ್ಕಂಡ… ಚಿಕ್ಕಪ್ಪಾ ಚಾಕಿ ಕೊಡು ಅಂತ ಸಣ್ಣುಡುಗ್ನಲ್ ತೊಡೆಮೇಲ್ ಕುತ್ಕಂಡ್ ಒಸ್ಯನಲ್ಲ ಹಂಗಾಯ್ತು. ಕುರ್ಚಿನ ಸವುರ್ದ, ಹಿಂದುಕ್ ಒರುಕ್ಕಂಡ್ ಕುತ್ಕಂಡ, ರಾಜನ ಠೀವಿಲಿ ಕಾಲ್ಮೇಲ್ ಕಾಲಾಕಿ ಕುತ್ಕಂಡ, ಅವನ ಪುಟಾಣಿ ಕೈಗಳು ನನ್ ಮೈನೆಲ್ಲಾ ತಡವಿದಂತಾಯ್ತು… ಒಂದಲ್ಲಾ ಒಂದಿನ ಚಿಕ್ಕಪ್ಪುಂತವ ಈ ಕುರ್ಚಿನ ಕಿತ್ಕಂಡೇ ಕಿತ್ಕತಿನಿ ಇದು ನನ್ನ ಪ್ರತಿಜ್ಞೆ ಅಂತ ಸ್ಟೈಲಾಗ್ ಡೈಲಾಗ್ ಒಡ್ದ. ನಂಗೆ ನಗು ಬಂದ್ಬುಡ್ತು, ಅವನ ಮೇಲ್ ಇದ್ದಿದ್ ಕೋಪ ಎಲ್ಲ ಇಳ್ದೋಯ್ತು. ತಗಂಡೋಗ್ಲಾ ಬಸವಾ ಇವತ್ಲೇಯ ಅಂದೆ. ಅವನಿಗೆ ನನ್ ಮಾತು ಕೇಳುಸ್ಲೇ ಇಲ್ಲ… ಹೊರಗೆ ಯಾರೋ ಬಸ್ವಾ ಅಂದಂಗಾಯ್ತು, ಇವ್ನು ಡುರ್ರ್‍ಅರ್ರ್‍… ಅಂತ ಬಸ್ ಬಿಟ್ಕಂಡ್ ಪೂರ್ತಿ ಬಾಗ್ಲು ತಕ್ಕಂಡ್ ಓಡೇಬಿಟ್ಟ.

ಸಂಜೆ ಆಯ್ತು. ಆಚೆಕಡೆ ಅಣ್ಣ ಹೊಲ್ತಾವಿಂದ ಬಂದ ಅನ್ಸುತ್ತೆ, ಗೂಟಕ್ ದನ ಕಟ್ದೋನು ಬಾಗ್ಲು ತಗ್ದಿರದ್ ನೋಡುದ್ನೋ ಏನೋ, ಒಳಿಕ್ ಬಂದ. ಅವನ್ನ ನೋಡ್ತಿದ್ದಂಗೆ ನಂಗ್ ಪಿತ್ತ ನೆತ್ತಿಗೇರ್ತು. ನೆನ್ನೆ ಬೀರಪ್ಪುನ್ತಾವ ನನ್ನ ಹಾಳ್ ಬಾವಿಗ್ ತಳ್ತಿನಿ ಅಂತ ಕೊಚ್ಕತಿದ್ನಂತೆ. ಕತ್ರುಸಾಕ್ಬುಡನ ಅನ್ಕಂಡಿದ್ದೆ ನಾನುವೆ. ಒಳಕ್ ಬಂದೋನು ಕತ್ಲೆಗೆ ನಿಧಾನುಕ್ ಕಣ್ ಅಡ್ಜಸ್ಟ್ ಮಾಡ್ಕಂಡು ಒಂದ್ ರೌಂಡ್ ಮನೆನೆಲ್ಲಾ ನೋಡ್ದ, ಗೋಡೆಮೇಲೆ ಒಂದ್ ಪೋಟ ನೇತಾಕಿತ್ತು, ನಾವ್ ಸಣ್ಣೋರಿದ್ದಾಗ ಜಾತ್ರೆಲಿ ತಗ್ಸಿದ್ ಅದು. ದೂಳಿಡ್ದು, ಸರ್ಯಾಗ್ ಕಾಣ್ತಾನೇ ಇರ್ತಿರ್ಲಿಲ್ಲ. ಅದನ್ನ ಮೆಲ್ಲಕ್ ಸವರ್ದ… ಸೀದಾ ಬಂದೋನೆ ಸೋತವನ ತರ ಕುರ್ಚಿ ಮೇಲ್ ಕುತ್ಕಂಡ. ಒಂದಿಷ್ಟೊತ್ತು ಸುಮ್ಮುನ್ ಕುಂತೇ ಇದ್ದ. ನಾನು ನಿಧಾನುಕ್ಕೆ ಅಣ್ಣಾ ಅಂದೆ. ಅವನ್ಗೆ ಕೇಳ್ಳೇ ಇಲ್ಲ. ಒಂದ್ ಕಾಲ್ ಮೇಲುಕ್ಕೆತ್ತಿ ಅರ್ಧ ಕುಕ್ರುಗಾಲಲ್ ಕುತ್ಕಂಡಂಗ್ ಕುತ್ಕಂಡ. ಪಂಚೆ ಎತ್ತಿ ಚಡ್ಡಿ ಒಳ್ಗಿಂದ ಬೀಡಿಕಟ್ಟು ತೆಗ್ದಾ! ಎಲಾ ಇವ್ನಾ ಇವನು ಯಾವಾಗಿಂದ ಇವೆಲ್ಲಾ ಕಲ್ತ? ಹೊರ್ಗಡೆ ಎಲ್ರು ಮುಂದೆ ಒಳ್ಳೇನ್ ತರ ಪೋಸ್ ಕೊಡ್ತಿಯಲ್ಲೋ ಅಂತ ತಿವ್ದೆ, ಅವನಿಗೆ ಕೆಂದ್ಲೇ ಇಲ್ಲ. ಏನೂ ತೋಚದೆ ಸುಮ್ನಾದೆ. ಅದ್ಯಾವ್ ದರಿದ್ರ ಬೀಡಿ ಸೇದ್ತಿದ್ನೋ ಉಸುರು ಕಟ್ಟಕ್ ಶುರ್ವಾಯ್ತು, ಕೆಮ್ತಾ ಸಿಗ್ರೇಟ್ ಅಂತ ಒಂದದೆ ಗೊತ್ತಾ? ಅದ ಸೇದ್ಲಾ ಅಣ್ಣ ಅಂದೆ, ಅವನ್ಗೇನ್ ಕೇಳ್ತದಾ! ಸರಬರ ಸರಬರ ಸದ್ದಾದಂಗಾಯ್ತು, ನೋಡ್ತಿನೀ ಅಳ್ತಾವ್ನೆ ಅಣ್ಣ! ಲೋ ಚೋತಪ್ಪಾ ಯಾಕ್ಲಾ ನೀನೀಟ್ ಒಳ್ಳೇನು, ನನ್ ಒಟ್ಟೆ ಉರ್ಸಕೇ ಒಳ್ಳೇನಾದೇನ್ಲಾ, ಸಣ್ ಉಡುಗ್ನಿಂದ್ಲೂ ನಿಂಗ್ ಒಸೀ ಹಿಂಸೆ ಕೊಟ್ಟಿದೀನ್ಲಾ? ನಿಂತಾವ ಚಕ್ಲಿ, ಪೆಪ್ರುಮೆಂಟು ಕಿತ್ಕತಿದ್ದೆ, ಜೋಳ ಕತ್ರುಸ್ವಾಗ ಬೇಕಂತ ನನ್ ಕೈಯ ನಾನೇ ಕುಯ್ಕಂಡು ನೀನ್ ಕೂದೇಂತ ಅವ್ವುಂಗ್ ಹೇಳಿ ಒಡುಸ್ತಿದ್ದೆ, ನಂಗಿಂತ ನೀನ್ ಬುದ್ವಂತ ಅಂತ ಅನ್ಸಿದ್ ಒಟ್ಟೆಕಿಚ್ಗೆ ಉದ್ಕೂ ನಿನ್ಮೇಲ್ ವಿಷ ಕಾಕಂಡೇ ಬಂದೆ, ಒಂದಿನಾನಾರ ನನ್ ಬೈನಿಲ್ವಲ್ಲಾ ನೀನು, ಯಾಕ್ಲಾ ಬೈಲಿಲ್ಲ, ಬೈಲಾ, ಎಲ್ಲಿದೀಲಾ, ಬಾರ್ಲಾ ಅಂತ ಗಟ್ಟಿಯಾಗಿ ಒದುರ್ತಾ, ಕುರ್ಚಿಯ ಕೈಗಳ್ನ ಗಟ್ಯಾಗ್ ಹಿಡ್ಕಂಡು ಬೋರಾಡ್ದ, ನಾನು ದಂಗಾಗೋದೆ. ಅವನ್ ಕೈನ ನಿಧಾನುಕ್ ಅಮುಕ್ತಾ ಬೆನ್ನು ಸವರಿ ಸಮಾಧಾನುದ್ ಮಾತಾಡ್ದೆ, ಅವನಿಗೆ ಅವ್ಯಾವೂ ತಲುಪಲೇ ಇಲ್ಲ…

ಎತ್ತಾಗೋದ್ರಿ ಸಾಯಕೇ ಅಂತ ಆಚಿಂದ ಅತ್ಗೆ ದನಿ ಕೇಳಿದ್ದೇ ತಡ, ಬಂದೆ ಇರೇ ಇವ್ಳೇ ಅಂತ ಕುರ್ಚಿ ನೂಕಿ ಎದ್ ಒಂಟೋದ. ತಲೆ ಕೆಟ್ಟು ಕೆರ ಆಗೋಯ್ತು ನಂದು. ಮನ್ಸು ಕೆಸ್ರು ಗದ್ದೆ ತರ ಅಟ್ಲು ಆಗೋಯ್ತು, ಅತ್ತೆ… ಅತ್ತೇ… ಅತ್ತೇ.., ಅಳ್ತಾನೇ ಇದ್ದೆ.

ವಸಿ ಒತ್ತಾದ್ಮೇಲೆ ನಿಧಾನುಕ್ಕೆ ಬಾಗ್ಲತ್ರ ಯಾರ್ದೋ ನೆರ್ಳು ಕಾಣ್ತು. ಜೊತೆಗೇ ಡೇರೆ ಹೂವಿನ್ ಗಮ್ಮನ್ನ ಪರಿಮಳನೂ ಬಂತು. ಯಾರೂಂತ ನೋಡುದ್ರೆ ನಮ್ ಸುಬ್ಬತ್ತೆ ಮಗ್ಳು ಚಂದ್ರಿ! ಇವ್ಳ್ಯಾಕ್ ಬಂದ್ಲು? ನೋಡ್ತಾ ಇದ್ದೆ… ಸೀದಾ ಬಂದೋಳ್ ಬಂದೋಳೆ ಕುರ್ಚಿ ಮೇಲ್ ಕುತ್ಕಳದಾ! ಎಲ್ಲಾ ಒಂದೇ ಸಲ ಬಾಯಿಗ್ ಬಂದಂಗ್ ಆಗೋಯ್ತು ನಂಗೆ, ಎದೆ ನಗಾರಿ ತರ ಒಡ್ಕಳಕ್ ಶುರ್ವಾಯ್ತು. ನಂಗ್ ನೆನ್ಪಿರಂಗೆ ಆರ್ನೇ ಕ್ಲಾಸಲ್ ಇದ್ದಾಗ್ಲಿಂದ್ಲೂ ನಂಗ್ ಅವಳಂದ್ರೆ ಬಾಳ ಇಷ್ಟ. ಕದ್ದೂ ಕದ್ದೂ ದೂರ್ದಿಂದ್ಲೇ ನೋಡ್ತಿದ್ದೆ, ಹತ್ರುಕ್ ಹೋಗಿ ವಿಷ್ಯ ಹೇಳವಾ ಅಂದ್ರೆ ಅವ್ಳ ಅಪ್ಪುಂದು ಸಾವ್ಕಾರುನ್ ಗತ್ತು ನನ್ ಮಗುಂದು ತೊಡೆ ನಡುಗುಸ್ತಿತ್ತು.

ತೊಡೆ ಇವಾಗ್ಲೂ ನಡ್ಗಕ್ ಶುರ್ವಾದ್ವು, ಅವ್ಳು ನಿಧಾನುಕ್ ಅವ್ಳ್ ಕೈನ ನನ್ ಕೈ ಮ್ಯಾಕಿಟ್ಳು, ಒಮ್ಮೆ ಜರುಗಿ ಸರಿಯಾಗಿ ಒತ್ತರಿಸಿ, ಕುರ್ಚಿಗೆ ಒರಿಕ್ಕಂಡಂಗೆ ಕುತ್ಕಂಡ್ಲು… ಶಿವನೇ… ನಾನ್ ಸತ್ತೆ! ಆ ಸ್ವಲ್ಪ ದಪ್ಪನೆಯ ಮಕಮಲ್ಲಿನಂತಹಾ ದೇಹ, ಅವಳ ಗುಂಗುರು ಕೂದಲಿನಿಂದ ಬಂದ ಸೀಘೆಯ ಘಮ, ಕಣ್ಸೆಳೆವ ಎದೆ, ಯಪ್ಪಾ ಕದ್ದು ನೋಡಿದ ಸಿನಿಮಾದಲ್ಲಿದ್ದ ಲುಕ್ಸ್. ಲೈಕ್ ಅಮೇಜಿಂಗ್… ಫೀಲಿಂಗ್ ಲೈಕ್ ಹೆವನ್ ಇತ್ಯಾದಿ ಎಲ್ಲಾ ಉದ್ಗಾರಗಳೂ ಒಮ್ಮೆಲೇ ಗುದ್ದಿಕೊಂಡು ಹೊರಬರತೊಡಗಿದವು. ಹಾಗೇ… ಅವಳನ್ನ ತಬ್ಬಿದೆ, ಮುದ್ದಾಡಿದೆ, ಅವಳ ತೋಳನ್ನು ಸವರಿದೆ, ನಿಧಾನಕ್ಕೆ ಅವಳ ಕೂದಲನ್ನ ಬೆನ್ನ ಮೇಲಿಂದ ಸರಿಸಿ, ನುಣ್ಣನೆಯ ಬೆನ್ನ ಸ್ಲೇಟಿನ ಮೇಲೆ ಅ ಆ ಇ ಈ… ಪದ, ನಾಮಪದ, ಸಂಧಿ ಸಮಾಸ ಕವನಗಳನ್ನೆಲ್ಲಾ ಬರೆದೆ. ಅವಳ ಕುತ್ತಿಗೆಯ ಮೇಲಿದ್ದ ಬೆವರಿನ ಹನಿಯನ್ನ ಹೊಕ್ಕುಳ ತುದಿಯವರೆಗೆ ಜಾರಿಸಿ ತಂದೆ, ಜೋರಾಗಿ ತಬ್ಬಿ, ನೀನಂದ್ರೆ ನಂಗೆ ಪ್ರಾಣ ಕಣೇ… ಮದ್ವೇ ಆಗ್ತೀಯಾ? ಅಂತ ಇನ್ನೇನ್ ಕೇಳ್ಬೇಕು… ಜಿಂಕೆ ನೆಗ್ದಂಗೆ ನೆಗ್ದು ಗೆಜ್ಜೆ ಸದ್ದು ಮಾಡ್ಕೋತಾ ಓಡಿ ಹೋಗೇಬಿಟ್ಳು, ನಾನು ಪ್ರಜ್ಞೆ ತಪ್ಪಿ ಬಿದ್ದೋದೆ.

ಎಲ್ಲೋ ಯಾರೋ ಗುಸುಗುಸು ಅಂತಿದಾರೆ, ಸುಗಂದ್ರಾಜ, ಊದ್ಬತ್ತಿ ಗಮ್ಮಂತಾವೆ, ಅದ್ಯಾರೋ ಬಿಕ್ಕಳಿಸ್ತಾ ಅಳ್ತಾವ್ರೆ, ಮುಸಮುಸ ಅಂತ ಸೊರಬರ ಅಂತ ಅಳ್ತಾವ್ರೆ. ಮದ್ವೆನಾರ ಆಗ್ನಿಲ್ಲ… ಹಂಗೇ ಒಂಟೋಗ್ಬುಟ್ಟಾ ನನ್ನಪ್ನೇ ಅನ್ನೋ ಪಕ್ಕುದ್ಮನೆ ಪಾರವ್ವುನ್ ದನಿ ಕೇಳ್ತಾದೆ… ಹಾಲ್ಟಟಾಕ್ ಆಗಿರ್ಬೇಕ್ ಕಣ್ಲಾ ಅಂತಾವ್ನೆ ಆಕಡೆ ಮನೆ ಹುಡ್ಗ, ನಿಧಾನುಕ್ ಕಷ್ಟಾಪಟ್ ನೋಡ್ತಿನಿ… ಅದೇ ಕುರ್ಚಿಯ ಮೇಲೆ ಹೂಗಳ ರಾಶಿಯ ನಡುವೆ ಬಿಗಿಯಾಗಿ ಬಿಗ್ದಿದ್ರು ನನ್ ದೇಹನ…

ನಾ ಸತ್ತಿಲ್ಲ ಬಿಡೀ ಬಿಡೀ ಅಂತ ಬಡ್ಕೋಬೇಕಂತ ನನಗೆ ಅನಿಸಲೇ ಇಲ್ಲ, ನನ್ನೊಳ್ಗೆ ನಾನು ನಿಜ್ವಾಗ್ಲೂ ಸತ್ತೋಗಿದ್ದೆ.

ದಯಾ ಗಂಗನಘಟ್ಟ

ದಯಾ ಗಂಗನಘಟ್ಟ ( ದಾಕ್ಷಾಯಿಣಿ)
ವೃತ್ತಿಯಿಂದ ಸರ್ಕಾರಿ ಉದ್ಯೋಗಿ ಹವ್ಯಾಸಿ ಬರಹಗಾರ್ತಿ.


ಇದನ್ನೂ ಓದಿ: ಭಾನುವಾರದ ಓದು; ವಿ ಆರ್ ಕಾರ್ಪೆಂಟರ್ ಹೊಸ ಕಥೆ ‘ರೌಡಿಶೀಟರ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...