ನಾಲ್ಕು ವರ್ಷದ ಬಾಲಕಿಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪದ ಮೇಲೆ ಮಲತಾಯಿಯನ್ನು ಬೆಳಗಾವಿಯ ಎಪಿಎಂಸಿ ಠಾಣೆ ಪೊಲೀಸರು ಗುರುವಾರ (ಜ.23) ಬಂಧಿಸಿದ್ದಾರೆ.
ಕಳೆದ ವರ್ಷ (2024) ಮೇ ತಿಂಗಳಲ್ಲಿ ನಡೆದಿದ್ದ ಬಾಲಕಿಯ ಕೊಲೆ ವಿಚಾರ, ವೈದ್ಯಕೀಯ ವರದಿಗಳು ಸಾವಿನ ಕಾರಣವನ್ನು ಬಹಿರಂಗಪಡಿಸಿದ ನಂತರ ಗುರುವಾರ ಬೆಳಕಿಗೆ ಬಂದಿದೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಬೆಳಗಾವಿಯ ವಡ್ಗಾಂವ್ ನಿವಾಸಿ ಸಪ್ನಾ ನವಿಯ ಚಿತ್ರಹಿಂಸೆಯಿಂದ ಬಾಲಕಿ ಸಮೃದ್ಧಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ, ಸಪ್ನಾ ಮಗುವನ್ನು ಕೊಲ್ಲುವ ಉದ್ದೇಶದಿಂದ ನಿರಂತರ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಗೊತ್ತಾಗಿತ್ತು. ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಹಲ್ಲೆಯಿಂದ ಸಾವನ್ನಪ್ಪಿದ್ದಾಗಿ ಬಹಿರಂಗಪಡಿಸಿದ ತಕ್ಷಣ, ನಾವು ಸಪ್ನಾಳನ್ನು ಆಕೆಯ ಮನೆಯಿಂದ ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಾಲಕಿಯ ತಂದೆ ರಾಯಣ್ಣ ನವಿ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳ ಹಿಂದೆ ತನ್ನ ಮೊದಲ ಪತ್ನಿಯ ಮರಣದ ನಂತರ ಸಪ್ನಾಳನ್ನು ಮದುವೆಯಾಗಿದ್ದರು. ಬಾಲಕಿ ಎರಡು ವರ್ಷದವಳಿದ್ದಾಗ ಆಕೆಯ ತಾಯಿಯನ್ನು ಅತ್ತೆ-ಮಾವಂದಿರು ಕೊಲೆ ಮಾಡಿರುವ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ.
ರಾಯಣ್ಣ ಸಪ್ನಾಳನ್ನು ಮದುವೆಯಾದ ಬಳಿಕ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಹೆಣ್ಣು ಮಗುವಿನೊಂದಿಗೆ ವಾಸಿಸುತ್ತಿದ್ದರು. ಅವರು ಸಿಆರ್‌ಪಿಎಫ್ ಸಿಬ್ಬಂದಿಯಾದ ಕಾರಣ ಛತ್ತೀಸ್‌ಗಢದಲ್ಲಿ ನಿಯೋಜನೆಗೊಂಡಿದ್ದರು. ಎರಡನೇ ಹೆಂಡತಿ ಮತ್ತು ಮಗುವನ್ನು ಆಗಾಗ ಭೇಟಿಯಾಗಲು ಆಗುತ್ತಿರಲಿಲ್ಲ. ಮಗುವಿನೊಂದಿಗೆ ಇದ್ದ ಸಪ್ನಾ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಅಂತಿಮವಾಗಿ ಮಗು ಸಾವನ್ನಪ್ಪಿದೆ ಎಂದು ವರದಿ ವಿವರಿಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಿದಾಗ, ಆಕೆಯ ಅಜ್ಜಿ (ರಾಯಣ್ಣನ ಮೊದಲ ಪತ್ನಿಯ ಪೋಷಕರು) ಎಪಿಎಂಸಿ ಪೊಲೀಸರಿಗೆ ದೂರು ನೀಡಿದ್ದರು. ಹುಡುಗಿಯ ಮಲತಾಯಿ ಆಕೆಗೆ ಚಿತ್ರಹಿಂಸೆ ನೀಡಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಆರಂಭದಲ್ಲಿ ಪೊಲೀಸರು ಬಾಲಕಿಯ ಸಾವು ಅಸಹಜ ಎಂದು ಎಫ್‌ಐಆರ್ ದಾಖಲಿಸಿದ್ದರು. ಈ ಕಾರಣದಿಂದ ಸಪ್ನಾ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿಯ ಸಾವಿನ ನಿಜವಾದ ಕಾರಣ ಬಹಿರಂಗವಾದ ನಂತರ ಗುರುವಾರ ಸಪ್ನಾಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ | ಏಳು ವರ್ಷದ ಬಾಲಕನನ್ನು ₹4 ಲಕ್ಷಕ್ಕೆ ಮಾರಿದ್ದ ನಾಲ್ವರ ಬಂಧನ


