Homeಮುಖಪುಟಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

- Advertisement -
- Advertisement -

ಈ ದೇಶದ ನಾಗರಿಕರನ್ನು ಅತಿ ಹೆಚ್ಚು ಬಾಧಿಸುವ, ಅವರ ದಿನನಿತ್ಯ ಜೀವನಕ್ಕೆ ಹತ್ತಿರದ ಸಂಬಂಧವಿರುವ ಪೊಲೀಸ್ ವ್ಯವಸ್ಥೆಯನ್ನು ಭಾರತದ ಚಿತ್ರೋದ್ಯಮಗಳು ನೈಜ ರೀತಿಯಲ್ಲಿ ಪ್ರತಿನಿಧಿಸಿದ್ದು ಬಹಳ ಕಡಿಮೆ. ಇರುವ ಸಮಸ್ಯೆಗಳನ್ನೆಲ್ಲಾ ತೋಳುಬಲದಿಂದ ಪರಿಹರಿಸುವ ಏಕವ್ಯಕ್ತಿ ಮ್ಯಾಸ್ಕುಲೈನ್ ಶಕ್ತಿಯಾಗಿ (ಸೂಪರ್ ಹೀರೋ) ಪೊಲೀಸ್ ಅಧಿಕಾರಿಯನ್ನು ಅತಿ ಸಾಮಾನ್ಯವೇನೋ ಎಂಬಂತೆ ಚಿತ್ರೀಕರಿಸಿದ ಅವಾಸ್ತವ ಒಂದು ಕಡೆಯಾದರೆ, ಭ್ರಷ್ಟಾಚಾರ ಮತ್ತು ಲಂಚಗುಳಿತನಗಳಿಗೆ ಪ್ರತಿಬಿಂಬ ಪೊಲೀಸರು ಮತ್ತು ಪೊಲೀಸ್ ವ್ಯವಸ್ಥೆ ಎಂಬ ಚಿತ್ರಣವನ್ನು ಇಲ್ಲಿನ ಬಹುತೇಕ ಸಿನಿಮಾ ರಂಗಗಳು ಕಟ್ಟಿಕೊಟ್ಟಿವೆ. ಸೂಪರ್ ಹೀರೋ ಚಿತ್ರಣಕ್ಕಂತೂ ವಾಸ್ತವಕ್ಕಿಂತ ಹೆಚ್ಚಾಗಿ ಕಪೋಲ ಕಲ್ಪಿತ ಸಂಗತಿಗಳೇ ವಸ್ತುವಾದರೆ, ಎರಡನೆಯ ಬಗೆಯ ಚಿತ್ರಣ ವಾಸ್ತವಕ್ಕೆ ಹತ್ತಿರವಿದ್ದರೂ ಅದಕ್ಕೆ ಕಾರಣಗಳನ್ನು ಶೋಧಿಸಿರುವ, ಅವಲೋಕಿಸಿರುವ, ವಿಶಾಲ ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿರುವ ಸಿನಿಮಾಗಳು ವಿರಳವೇ.

ಇನ್ನು ಪೊಲೀಸ್ ವ್ಯವಸ್ಥೆಯಲ್ಲಿರುವ ವಿವಿಧ ಶೇಡ್‌ಗಳನ್ನು ಚಿತ್ರಿಸುವ, ಒಂದೊಳ್ಳೆ ಅಧ್ಯಯನದ ಮಾದರಿಯಲ್ಲಿ ಪೊಲೀಸ್ ಕಥೆಗಳನ್ನು ಹೇಳಿದ ಸಿನಿಮಾಗಳೂ ಕೂಡ ಬೆರೆಳೆಣಿಕೆಯಷ್ಟೇ. 2015ರಲ್ಲಿ ಬಿಡುಗಡೆಯಾದ ತಮಿಳು ಚಿತ್ರರಂಗದ ‘ವಿಸಾರಣೈ’ ಪೊಲೀಸ್ ದೌರ್ಜನ್ಯವನ್ನು ನೈಜತೆಗೆ ಹತ್ತಿರವಾಗಿ ಕಟ್ಟಿಕೊಟ್ಟ ಸಿನಿಮಾವಾಗಿ ಮೂಡಿಬಂದಿತ್ತು. ಅದೇ ರೀತಿಯಲ್ಲಿ ಇತ್ತೀಚೆಗೆ ತೆರೆಕಂಡ ‘ಜೈಭೀಮ್’ ಕೂಡ ಅಂತಹುದೇ ಒಂದು ಥೀಮ್ ಹೊಂದಿತ್ತು. ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಾಥಮಿಕ ಸಂಗತಿಗಳನ್ನೂ ತಿಳಿಯದೆ ಓತಪ್ರೇತವಾಗಿ ಪೊಲೀಸ್ ಪಾತ್ರಗಳನ್ನು ಮೂಡಿಸಿ, (ಫಿಕ್ಷನ್ ಕೂಡ ನಂಬಿಕೆಗೆ ಅರ್ಹವಾಗಿರಬೇಕು ಅಲ್ಲವೇ), ಅದನ್ನು ಪ್ರತಿನಿಧಿಸುವ ಸಿನಿಮಾಗಳೇ ಹೆಚ್ಚಿರುವಾಗ ಈ ಬೆರಳೆಣಿಕೆಯ ಪ್ರಯೋಗಗಳ ಮಹತ್ವ ನಮಗೆ ಅರ್ಥವಾದೀತು. ಹಾಗೆಯೇ ಮಲಯಾಳಂ ಸಿನಿಮಾ ‘ತೊಂಡಿಮುಥಾಲಂ ದೃಕ್‌ಸಾಕ್ಷಿಯಂ’ನಲ್ಲಿ ಕೂಡ (2017) ಪೊಲೀಸರನ್ನು ಕಟ್ಟಿಕೊಟ್ಟ ರೀತಿ ವಾಸ್ತವಕ್ಕೆ ಹತ್ತಿರವಾಗಿತ್ತು.

ಈಗ 2021 ಡಿಸೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ತೆರೆಕಂಡ (ಈಗ ‘ಆಹಾ’ ಒಟಿಟಿ ವೇದಿಕೆಯಲ್ಲಿದೆ) ಫ್ರಾಂಕ್ಲಿನ್ ಜಾಕೋಬ್ ಅವರ ಚೊಚ್ಚಲ ಸಿನಿಮಾ ‘ರೈಟರ್’, ಪೊಲೀಸ್ ವ್ಯವಸ್ಥೆಯನ್ನು ಹೊಸದೊಂದು ನೆಲೆಯಲ್ಲಿ ಶೋಧಿಸಲು ಮುಂದಾಗಿದೆ. ಬ್ರಿಟಿಷ್ ವಸಾಹತಶಾಹಿ ಕಾಲದ, ಸಾಮಾನ್ಯ ಜನರ ‘ನಿಯಂತ್ರಣ ಮತ್ತು ದಮನ’ ಕಲ್ಪನೆಯನ್ನು ಉಳಿಸಿಕೊಂಡಿರುವ ಇಂದಿನ ಪೊಲೀಸ್ ವ್ಯವಸ್ಥೆ, ಇಲ್ಲಿನ ಸಮಾಜದ ಎಲ್ಲಾ ಪೂರ್ವಾಗ್ರಹಗಳನ್ನು ತನ್ನೊಳಗೆ ಸೇರಿಸಿಕೊಂಡು, ಜನಸ್ನೇಹಿಯಾಗದೆ, ಆಂತರಿಕವಾಗಿ ವಿಧೇಯತೆ-ಶ್ರೇಣೀಕರಣದ ಹಿಡಿತದಲ್ಲಿ ಬಳಲುತ್ತಿರುವುದರಿಂದ ಆಗುತ್ತಿರುವ ಅಪಾಯಗಳನ್ನು, ಈ ಸಿನಿಮಾ ತಂಗರಾಜು ಪಾತ್ರದ ಮೂಲಕ ಎಳೆಎಳೆಯಾಗಿ ಬಿಡಿಸುತ್ತಾ ಚಿತ್ರಿಸುತ್ತದೆ. ಕಥಾ ಸಂವಿಧಾನದ ರೋಚಕತೆಯ-ಕುತೂಹಲತೆಯ ಅವಶ್ಯಕತೆಯನ್ನು ಎಲ್ಲಿಯೂ ಬಿಟ್ಟುಕೊಡದೆ, ಸಮಾಜದ ಅವಿಭಾಜ್ಯ ಅಂಗವಾಗಿರುವ ಪೊಲೀಸ್ ವ್ಯವಸ್ಥೆ, ಅಧಿಕಾರವನ್ನು-ಅಧಿಕಾರಸ್ಥರನ್ನು ಕಾಯುವ ಸಂಸ್ಥೆಯಾಗಿಹೋಗಿರುವುದರ ವಿರುದ್ಧ ಬೋಲ್ಡ್ ಆದ ಸ್ಟೇಟ್‌ಮೆಂಟ್ ಮಾಡತ್ತೆ ರೈಟರ್.

ಪಾತ್ರವೊಂದನ್ನು ಗಹನವಾಗಿ ಕಟ್ಟಿಕೊಡುವ ಮೂಲಕವೇ ಒಂದು ಕಥೆ ಹೇಳುವುದನ್ನು ಫ್ರಾಂಕ್ಲಿನ್ ಜಾಕೋಬ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ತಮಿಳುನಾಡಿನ ತ್ರಿಚಿಯ ಪೊಲೀಸ್ ಠಾಣೆಯೊಂದರಲ್ಲಿ ರೈಟರ್ ಕೆಲಸ ಮಾಡುತ್ತಿರುವ ತಂಗರಾಜು (ಸಮುದ್ರಕಣಿ) ಸಂಕೀರ್ಣ ಸ್ವಭಾವದ (ವೃತ್ತಿ ಮತ್ತು ವೈಯಕ್ತಿಕವಾಗಿ) ವ್ಯಕ್ತಿ. ತಾನು ಕೆಲಸ ಮಾಡುತ್ತಿರುವ ಪೊಲೀಸ್ ಠಾಣೆಯಲ್ಲಿ ಕ್ರೈಮ್ ರೇಟ್ 98%ಕ್ಕಿಂತಲೂ ಹೆಚ್ಚಾಗಲು ಬಿಡದಂತೆ, ಮೇಲಧಿಕಾರಿಯ ಆದೇಶವನ್ನು ಶಿರಸಾವಹಿಸಿ ಪಾಲಿಸಿ, ಪ್ರಕರಣಗಳನ್ನು (ಚಿನ್ನದ ಸರ-ಮೋಟಾರ್ ವೆಹಿಕಲ್ ಕಳ್ಳತನದ ತರಹದವು) ಸುಳ್ಳುಸುಳ್ಳೇ ಕ್ಲೋಸ್ ಮಾಡುವ, ಅದಕ್ಕಾಗಿ ದೂರುದಾರರನ್ನು ಕನ್ವಿನ್ಸ್ ಮಾಡುವ ಪ್ರಾಬ್ಲಂ ಸಾಲ್ವರ್ ಈತ. ಆದರೆ ಅದೇ ಸಮಯದಲ್ಲಿ ತನ್ನ ಸಹೋದ್ಯೋಗಿ ಪೊಲೀಸರನ್ನು ಅದರಲ್ಲೂ ತನ್ನ ಕೆಳಗಿನ ರ‍್ಯಾಂಕ್‌ನ ಪೊಲೀಸರನ್ನೂ ಪ್ರೀತಿಯಿಂದ ಕಾಣುವ ಅಂತಃಕರಣದ ವ್ಯಕ್ತಿ. ಅಲ್ಲದೆ ಎರಡು ದಶಕಗಳ ಕಾಲ ಪೊಲೀಸ್ ಯೂನಿಯನ್‌ಗಾಗಿ ಹೋರಾಟ ಮಾಡುತ್ತಿರುವ, ಅದಕ್ಕಾಗಿ ಪೊಲೀಸ್ ಇಲಾಖೆ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿರುವ ಮತ್ತು ಮೇಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿ. ತನ್ನ ಈ ಪ್ರಾಬ್ಲಂ ಸಾಲ್ವಿಂಗ್, ಕೆಲಸದಲ್ಲಿನ ದಕ್ಷತೆ ಹಾಗೂ ತನ್ನ ಆತ್ಮಸಾಕ್ಷಿಗೆ ಒಪ್ಪದೆ ಇದ್ದರೂ ವ್ಯವಸ್ಥೆಯ ಜೊತೆಗೆ ಹೊಂದಿಕೊಂಡು ಹೋಗುವ ಗುಣದ-ಕೆಲಸದ ಕಾರಣದಿಂದ, ಒಬ್ಬ ಯುವಕನನ್ನು ತಾನೂ ಊಹಿಸಲೂ ಇರದ ಸಂಕಷ್ಟಕ್ಕೆ ನೂಕಿದಾಗ, ತಂಗರಾಜುವಿನಲ್ಲಾಗುವ ಬದಲಾವಣೆಯೇ ಚಿತ್ರದ ಪ್ರಧಾನ ಕಥಾವಸ್ತು. ಇದರಿಂದ ತಂಗರಾಜುಗೆ ವಿಮೋಚನೆ ಸಾಧ್ಯವೇ? ಸಮಯ ಮೀರಿದ ಮೇಲೆ ಆ ವಿಮೋಚನೆ ರೂಪ ಯಾವುದಾಗಿರುತ್ತದೆ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್.

ತಂಗರಾಜು ಪಾತ್ರದ ವೃತ್ತಿ ಜೀವನದ ಚಿತ್ರಣದ ಜೊತೆಗೆ ಆತನ ವೈಯಕ್ತಿಕ ಜೀವನವನ್ನು ಕಟ್ಟಿಕೊಟ್ಟಿರುವುದು ಕೂಡ ಅಷ್ಟೇ ಸಂಕೀರ್ಣವಾಗಿದೆ. ಮೊದಲನೆಯ ಹೆಂಡತಿಯ ಜೊತೆಗೆ ಮಗುವಾಗಿಲ್ಲ ಎಂಬ ಕಾರಣಕ್ಕೆ ಎರಡನೇ ಮದುವೆಯಾಗಿದ್ದಾನೆ. ಮಗ, ಇಬ್ಬರು ಹೆಂಡತಿಯರ ಜೊತೆಗೆ ಒಟ್ಟಿಗೆ ಇದ್ದರೂ ತನಗಿಂತ ತುಂಬಾ ಕಿರಿಯಳಾದವಳನ್ನು ಮದುವೆಯಾದ ಬಗ್ಗೆ ಪಾಶ್ಚಾತ್ತಾಪದವಿದೆ. ‘ಯಾರೋ ಹೇಳಿದರು ಎಂದು ಯೋಚಿಸದೆ ಮದುವೆಯಾದೆ’ ಎಂಬ ಆತ್ಮನಿವೇದನೆ ಮಾಡಿಕೊಳ್ಳುತ್ತಾನೆ. ವೃತ್ತಿಯ ಜೀವನದಲ್ಲಿರುವಂತೆಯೇ ವೈಯಕ್ತಿಕ ಜೀವನದಲ್ಲಿಯೂ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡು ಹೇಗೋ ಹೊಂದಿಕೊಂಡು ಹೋಗುವ ತಂಗರಾಜು ಗುಣವನ್ನು ಮುಖ್ಯ ಕತೆಗೆ ಬೆಸೆಯಲು ನಿರ್ದೇಶಕ ಪರಿಣಾಮಕಾರಿಯಾಗಿದ್ದಾರೆ.

ಸಿನಿಮಾದ ಎರಡನೇ ಮುಖ್ಯ ಎಳೆ ಮದ್ರಾಸ್ ಯೂನಿವರ್ಸಿಟಿಯಲ್ಲಿ ಕಲಿಯುತ್ತಿರುವ, ಪೊಲೀಸ್ ವ್ಯವಸ್ಥೆಯಲ್ಲಿ ಆತ್ಮಹತ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ದೇವಕುಮಾರ್ (ಹರಿ ಕೃಷ್ಣನ್) ಕಥೆ. ಪೊಲೀಸ್ ವ್ಯವಸ್ಥೆ ಹೇಗೆ ದಮನಿತ ಸಮುದಾಯದ ವ್ಯಕ್ತಿಗಳನ್ನು ‘ಫಿಕ್ಸ್’ ಮಾಡುತ್ತದೆಂಬ ಕಥೆಯನ್ನು ಸ್ಕಿಲ್‌ಫುಲ್ ಆಗಿ ಪ್ರಧಾನ ಎಳೆಗೆ ಜೋಡಿಸುತ್ತಾರೆ ಜಾಕೋಬ್. ಕ್ರಿಶ್ಚಿಯನ್ ದಲಿತ ಸಮುದಾಯದ ಮೊದಲ ಪೀಳಿಗೆಯ ಅಕ್ಷರಸ್ಥ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಯಲು ಈಗ ಸಾಧ್ಯವಾಗಿದ್ದರೂ, ಹೇಗೆ ಪೊಲೀಸ್ ದೌರ್ಜನ್ಯದ ಎದುರು ಅಸಹಾಯಕನಾಗಿ ಒಬ್ಬಂಟಿಯಾಗುತ್ತಾನೆ ಎಂಬುದನ್ನು ಯಾರಿಗಾದರೂ ಕಾಡುವಂತೆ ಚಿತ್ರಿಸಲಾಗಿದೆ. ಅಧಿಕಾರಶಾಹಿ, ದಲಿತರನ್ನು ಕಾಣುವ ರೀತಿ, ಅದರಲ್ಲಿ ತಂಗರಾಜು ಅಂತಹವರು ದಾಳವಾಗುವುದು ಈ ಎಲ್ಲಾ ಅಂಶಗಳಿಂದ ಕಥೆ ಕುತೂಹಲವನ್ನು ಉಳಿಸಿಕೊಂಡು ಮುಂದುವರಿಯುತ್ತದೆ. ದೇವಕುಮಾರ್ ಊರಿನ ದೃಶ್ಯಗಳು, ತನ್ನ ಅಣ್ಣ ಕ್ಸೇವಿಯರ್ ಪ್ರೀತಿ, ಅತ್ತಿಗೆಯ ಹತಾಶೆ, ಅಣ್ಣ ಇಬ್ಬರನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುವುದೆಲ್ಲಾ ಕಥೆಗೆ ಇನ್ನಷ್ಟು ತೀವ್ರತೆಯನ್ನು ತಂದುಕೊಡುತ್ತವೆ.

ಸುಮಾರು 15 ನಿಮಿಷಗಳ ಸಣ್ಣ ಅವಧಿಯಲ್ಲಿ ಮೂಡಿ ಬಂದಿದ್ದರೂ, ಅಷ್ಟೇ ಸಶಕ್ತವಾಗಿರುವ ಮೂರನೇ ಎಳೆ, ಪೊಲೀಸ್ ವ್ಯವಸ್ಥೆಯ ಶ್ರೇಣೀಕರಣದ ಸಮಸ್ಯೆ ಕೇವಲ ಆಫೀಸರ್ ರ‍್ಯಾಂಕಿಂಗ್‌ನ ಪ್ರತಿಷ್ಠೆಯಲ್ಲಿ ಮಾತ್ರ ಇರದೆ, ಅದರೊಳಗೆ ಅಸಹ್ಯಕರ ಜಾತಿ ವ್ಯವಸ್ಥೆ ಕೂಡ ಅಂತರ್ಗತವಾಗಿರುವುದನ್ನು ಪರಿಣಾಮಕಾರಿಯಾಗಿ ತೋರಿಸಿ ಮುಖ್ಯ ಕಥೆಗೆ ಜೋಡಿಸಲಾಗಿದೆ. ತಂದೆ ಜಟಕಾ ಗಾಡಿ ಹೊಂದಿದ್ದ ಕಾರಣದಿಂದ ಕುದುರೆ ಓಡಿಸುವುದನ್ನು ಕಲಿತಿರುವ ಶರಣ್ಯ (ಇನೆಯ) ಅಶ್ವಾರೋಹಿ ದಳಕ್ಕೆ ಅರ್ಜಿ ಹಾಕಿದರೂ ಜಾತಿಯ ಕಾರಣಕ್ಕಾಗಿ ಡಿಸಿ ತ್ರಿವೇದಿ ಶರ್ಮ (ಕವಿನ್ ಜೇ ಬಾಬು) ಆಕೆಯನ್ನು ತಿರಸ್ಕರಿಸುತ್ತಾನೆ. ‘ಪೊಲೀಸ್ ಇಲಾಖೆ ನನ್ನ ಅಪ್ಪನ ಕಾಲದಿಂದಲೂ ಇರುವುದೇ ಹೀಗೆ, ನಿನ್ನ ಕೋಪವನ್ನು ಕಡಿಮೆ ಮಾಡಿಕೋ’ ಎಂದು ತನ್ನ ಸಹೋದ್ಯೋಗಿ ತಿಳಿಹೇಳಿದರೂ ಕೇಳದೆ, ಡಿಸಿ ಕಾರು ಬರುವಾಗ ಕುದುರೆ ಏರಿ ಆತನ ಕಾರಿನ ಮುಂದೆ ಕುದುರೆಯನ್ನು ಜಿಗಿದು ನಿಲ್ಲಿಸುವ ದೃಶ್ಯ ಮೈನವಿರೇಳಿಸುವಂತಿದೆ. ಘನತೆಯ ಪ್ರತೀಕವಾಗಿದೆ. ನಂತರ ಅದು ಡಿಸಿಯ ಕ್ರೌರ್ಯಕ್ಕೆ ಕಾರಣವಾಗುತ್ತದೆ.

ಹೀಗೆ ಜಾತಿಯ ಕಾರಣದಿಂದ, ಅಧಿಕಾರದ ಮದದ ಕಾರಣದಿಂದ, ಸಾಮಾನ್ಯರ ಶೋಷಣೆಗೆ ನಿಂತು ಅಂತರಂಗ ಶಿಥಿಲವಾಗಿರುವ ಪೊಲೀಸ್ ವ್ಯವಸ್ಥೆಗೆ ಅಗತ್ಯವಿರುವ ಚಿಕಿತ್ಸೆಯನ್ನು ಮನಗಾಣಿಸಲೇನೋ ಎಂಬಂತೆ ಬಹಳ ‘ಕ್ರಿಟಿಕಲ್’ ಆದ ಸಮಯದಲ್ಲಿ ಜಾಕೋಬ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತಂಗರಾಜು ಮಗನಿಗೆ ಊಟಕೊಡಲು ಹೆಂಡತಿಯ ಜೊತೆಗೆ ಶಾಲೆಗೆ ಹೋದಾಗ ಮಗ ಅಸಹನೆಯಿಂದ ಇವರನ್ನು ಏಕೆ ಕರೆದುಕೊಂಡು ಬಂದೆ ಎನ್ನುವ ದೃಶ್ಯ, ತಂಗರಾಜುವಿನ ಪಶ್ಚಾತಾಪವನ್ನು ತೋರಿಸಲು ಮಾಡಿದ್ದರೂ, ಇಡೀ ಸಿನಿಮಾದಲ್ಲಿ ಇದೊಂದೆ ಬಹಳ ಕ್ಲೀಷೆಯಾದ ಮತ್ತು ವೀಕ್ ಆದ ದೃಶ್ಯ ಅನ್ನಿಸುವುದು. ಅದೊಂದನ್ನು ಬಿಟ್ಟರೆ ಪ್ರತಿ ದೃಶ್ಯವನ್ನೂ, ಪ್ರತಿ ಸಂಭಾಷಣೆಯನ್ನು ಸಮಚಿತ್ತದಿಂದ ಬರೆದು, ನೋಡುಗನ ಮನಸ್ಸಿನೊಳಗೆ ನಿಧಾನಕ್ಕೆ ಇಳಿಯುವಂತೆ ಚಿತ್ರೀಕರಿಸುವ ಬಗೆ ಅಪ್ಯಾಯಮಾನವಾಗಿದೆ. ಜೈಲಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ರಾಜನ ಪಾತ್ರ (ಹಿಂದೆ ಸಣ್ಣಪುಟ್ಟ ಕಳ್ಳತನ ಮಾಡಿ ಬದುಕುತ್ತಿದ್ದ) ಕೂಡ ಇಡೀ ಸಿನಿಮಾಕ್ಕೆ ಮುಖ್ಯವಾಗುತ್ತದೆ. ಸಿನಿಮಾ ನೋಡುಗರ ಅಂತಃಕರಣವನ್ನು ಬಡಿದೆಬ್ಬಿಸಿ ಇಡೀ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಬೇಕಿರುವ, ಸಾಮಾನ್ಯ ಜನರನ್ನು ಪ್ರೀತಿಯಿಂದ ಕಾಣಬೇಕಿರುವೆಡೆಗೆ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಕೊನೆಗೆ ಒಂದು ದುರಂತದ ಅಂತ್ಯವಿದ್ದರೂ, ಸಿನಿಮಾದ ಮೊದಲ ದೃಶ್ಯದಲ್ಲಿ ತಂಗರಾಜುವಿನ ಸಹಾಯಕನಾಗಿ ಪೊಲೀಸ್ ಠಾಣೆ ಸೇರಿಕೊಳ್ಳುವ ಅರಿವು (ದಿಲೀಪ್), ಕಟ್ಟಕಡೆಯ ದೃಶ್ಯದಲ್ಲಿ ತಂಗರಾಜುವಿನ ಯೂನಿಯನ್ ಪ್ರಕರಣವನ್ನು ಪ್ರತಿನಿಧಿಸಲು ಕೋರ್ಟ್‌ಗೆ ಹೋಗುವುದರಿಂದ ಪಾಸಿಟಿವ್ ನೋಟ್‌ನಲ್ಲಿ ಮುಗಿಯುತ್ತದೆೆ. ನಮ್ಮ ದಿನನಿತ್ಯದ ಜೀವನವನ್ನು ಬಾಧಿಸುವ ವ್ಯವಸ್ಥೆಗಳ ಜೊತೆಗೆ ಕೇವಲ ಹೊಂದಾಣಿಕೆ-ರಾಜಿ ಮಾಡಿಕೊಂಡಿರಷ್ಟೇ ಸಾಲದು, ಆ ವ್ಯವಸ್ಥೆಯ ಅನ್ಯಾಯಗಳ ಎದುರು ಹೋರಾಡಬೇಕಾದ ಅಗತ್ಯದ ಅರಿವನ್ನು ಬಡಿದೆಬ್ಬಿಸುವ ರೀತಿಯಲ್ಲಿ ಆ ದೃಶ್ಯ ಭಾಸವಾಗುತ್ತದೆ.

– ಗುರುಪ್ರಸಾದ್ ಡಿ ಎನ್
ನ್ಯಾಯಪಥ-ನಾನುಗೌರಿ ಸಂಪಾದಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಲುವು ಬದಲಿಸಿದ ಸಿಪಿಐ(ಎಂ) : ವಿಎಸ್ ಅಚ್ಯುತಾನಂದನ್ ಅವರ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ನಿರ್ಧಾರ

ತನ್ನ ದೀರ್ಘಕಾಲದ ಸೈದ್ಧಾಂತಿಕ ನಿಲುವಿಗಿಂತ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಐ(ಎಂ), ಪಕ್ಷದ ದಂತಕಥೆ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಮರಣೋತ್ತರವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರ್ಧರಿಸಿದೆ. ಕಮ್ಯುನಿಸ್ಟರು ಆಡಳಿತ ಅಥವಾ...

2024ರ ಪ್ರತಿಭಟನೆ ದಮನ ಪ್ರಕರಣ: ಬಾಂಗ್ಲಾದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಹಬೀಬುರ್ ರೆಹಮಾನ್‌ಗೆ ಮರಣದಂಡನೆ

ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶ ನ್ಯಾಯಾಲಯವು ಸೋಮವಾರ ಢಾಕಾದ ಮಾಜಿ ಪೊಲೀಸ್ ಮುಖ್ಯಸ್ಥ ಮತ್ತು ಇಬ್ಬರು ಹಿರಿಯ ಸಹೋದ್ಯೋಗಿಗಳಿಗೆ ಮರಣದಂಡನೆ ವಿಧಿಸಲಾಗಿದೆ.  ರಾಜಧಾನಿಯ...

ಕೇರಳ, ತಮಿಳುನಾಡು, ಪ. ಬಂಗಾಳದ 32 ಮಂದಿಗೆ ‘ಪದ್ಮ’ ಪ್ರಶಸ್ತಿ : ವಿಧಾನಸಭೆ ಚುನಾವಣೆ ಮೇಲೆ ಬಿಜೆಪಿ ಕಣ್ಣು?

ಗಣರಾಜ್ಯೋತ್ಸವದ ಮುನ್ನಾದಿನದಂದು ಘೋಷಿಸಲಾದ 131 'ಪದ್ಮ ಪ್ರಶಸ್ತಿ'ಗಳಲ್ಲಿ, 38 ಪ್ರಶಸ್ತಿಗಳು ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯ ಪಾಲಾಗಿವೆ. ದೇಶದ ಎರಡನೇ ಅತ್ಯುನ್ನತ...

‘ಏಕರೂಪ ಭಾರತವನ್ನಲ್ಲ, ಏಕೀಕೃತ ಭಾರತವನ್ನ ಸಂಭ್ರಮಿಸೋಣ’: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 

ಚೆನ್ನೈ: ಗಣರಾಜ್ಯೋತ್ಸವವನ್ನು ಏಕರೂಪ ಭಾರತದಂತಲ್ಲದೇ ಏಕೀಕೃತ ಭಾರತವಾಗಿ ಆಚರಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ ನೀಡಿದ್ದಾರೆ.  ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ಟಾಲಿನ್, "ಏಕರೂಪದ ಭಾರತವಲ್ಲ, ಏಕೀಕೃತ ಭಾರತವನ್ನು...

ಗಣರಾಜ್ಯೋತ್ಸವ ಪರೇಡ್ : ಸಿಆರ್‌ಪಿಎಫ್ ಪುರುಷರ ತುಕಡಿ ಮುನ್ನಡೆಸಿ ಗಮನಸೆಳೆದ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ

ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಅರೆಸೈನಿಕ ಪಡೆಯ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯವರಾದ...

ಉತ್ತರಾಖಂಡ: ಸೂಫಿ ಕವಿ ಬಾಬಾ ಬುಲ್ಲೆ ಶಾ ಅವರ ಮಂದಿರವನ್ನು ಧ್ವಂಸಗೊಳಿಸಿದ ಹಿಂದೂ ರಕ್ಷಣಾ ದಳದ ದುಷ್ಕರ್ಮಿಗಳು

ಉತ್ತರಾಖಂಡದ ಮಸ್ಸೂರಿಯಲ್ಲಿರುವ 18 ನೇ ಶತಮಾನದ ಸೂಫಿ ಕವಿ ಬಾಬಾ ಬುಲ್ಲೆಹ್ ಷಾ ಅವರ ದೇವಾಲಯವನ್ನು ಶುಕ್ರವಾರ ಹಿಂದೂ ರಕ್ಷಾ ದಳದೊಂದಿಗೆ ಸಂಪರ್ಕ ಹೊಂದಿರುವವರು ಧ್ವಂಸಗೊಳಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ. "ಜೈ...

ಅಕ್ಷರಧಾಮ ದೇವಾಲಯ ದಾಳಿ ಪ್ರಕರಣ: 6 ವರ್ಷಗಳ ನಂತರ ಮೂವರ ಮುಸ್ಲಿಂ ವ್ಯಕ್ತಿಗಳನ್ನು ಖುಲಾಸೆಗೊಳಿಸಿದ ಅಹಮದಾಬಾದ್ ಪೋಟಾ ನ್ಯಾಯಾಲಯ

ಅಕ್ಷರಧಾಮ ದೇವಾಲಯದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮೂವರು ಮುಸ್ಲಿಂ ಪುರುಷರನ್ನು ಕಳೆದ ವಾರ ಅಹಮದಾಬಾದ್‌ನ ವಿಶೇಷ ಭಯೋತ್ಪಾದನಾ ತಡೆ ಕಾಯ್ದೆ (ಪೋಟಾ) ನ್ಯಾಯಾಲಯವು ಖುಲಾಸೆಗೊಳಿಸಿದ್ದು, ವರ್ಷಗಳ ಕಾನೂನು ಪ್ರಕ್ರಿಯೆಗಳ ನಂತರ...

ಡಿಜಿ-ಐಜಿಪಿ ಎಂ.ಎ ಸಲೀಂ ವಿರುದ್ಧ ಸುಳ್ಳಾರೋಪ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು

ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ (ಡಿಜಿ-ಐಜಿಪಿ) ಎಂ.ಎ ಸಲೀಂ ಅವರ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ದ ಬೆಂಗಳೂರಿನ ಸೈಬರ್ ಅಪರಾಧ ಪೊಲೀಸರು...

ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದ: ಬಿಎಂಡಬ್ಲ್ಯು, ವೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಜ್ ಮೇಲಿನ ಸುಂಕ ಶೇ. 110 ರಿಂದ ಶೇ. 40ಕ್ಕೆ ಇಳಿಕೆಯಾಗುವ ಸಾಧ್ಯತೆ

ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ. 110 ರಿಂದ ಶೇ. 40 ಕ್ಕೆ ಇಳಿಸಲು ಭಾರತ ಯೋಜಿಸಿದೆ, ಇದು ದೇಶದ ವಿಶಾಲ ಮಾರುಕಟ್ಟೆಯಲ್ಲಿ ಇದುವರೆಗಿನ ಅತಿದೊಡ್ಡ ಆರಂಭವಾಗಿದೆ,...

ಗಣರಾಜ್ಯೋತ್ಸವ : ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣ ಯಥಾವತ್ ಓದಿದ ರಾಜ್ಯಪಾಲ ಗೆಹ್ಲೋಟ್

ಸಂವಿಧಾನವು ತನ್ನ ಮೊದಲ ಅನುಚ್ಛೇದದಲ್ಲಿಯೇ ಭಾರತವನ್ನು ಒಂದು ರಾಜ್ಯಗಳ ಒಕ್ಕೂಟ ಎಂದು ಘೋಷಿಸುತ್ತದೆ. ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಿಸುವುದು ನಮ್ಮ ಸಂವಿಧಾನದ ನಿರ್ಮಾತೃಗಳ ಕನಸಾಗಿತ್ತು. ಆ ಕನಸಿಗೆ ಕುಂದುಂಟಾಗದಂತೆ ನಮ್ಮ...