‘ಹೀಗೂ ಉಂಟೇ’ ಅನ್ನುವ ಕಾರ್ಯಕ್ರಮ ಟೀವಿಲಿ ನೀವು ನೋಡಿರುತ್ತೀರಿ. ನೋಡಿಲ್ಲವಾದಲ್ಲಿ ಅಟ್ಲೀಸ್ಟ್ ಕೇಳಿರುತ್ತೀರಿ. ಇಂದು ದೇಶಾದ್ಯಂತ ರಾಜಕೀಯ ದಿವಾಳಿಕೋರತನ ಒಂದು ಕಡೆಯಾದರೆ, ಇನ್ನೊಂದೆಡೆ ಜನರ ಭುಗಿಲೆದ್ದ ಆಕ್ರೋಶ. ಈ ದೇಶವನ್ನೆಂದೂ ಒಡೆಯಲು ಬಿಡೆವೆಂಬ ಹಠ. ಇಂದು ದೇಶದ ಮೂಲೆಮೂಲೆಯಲ್ಲಿಯೂ ಕಿವಿಗೆ ಅಪ್ಪಳಿಸುತ್ತಿದೆ. ಮಾರಿಕೊಂಡುಹೋದ ಮೀಡಿಯಾ, ಮಾರಿಕೊಳ್ಳಲೆಂದೇ ಇರುವ ಜನಪ್ರತಿನಿಧಿಗಳು, ಜನರ ಹೋರಾಟ ಮುಗಿಲಿಗೇರಿದೆ. ಈ ಸುನಾಮಿಯನ್ನು ಹಿಡಿದಿಡಲು ದೇಶದ ಆಡಳಿತ ಪೊಲೀಸರನ್ನು ಛೂಬಿಟ್ಟಿದೆ. ಅವರಿಗಿಷ್ಟಬಂದಂತೆ ಕೊಲೆ, ಸುಲಿಗೆ, ಮಾರಣಹೋಮ ಉತ್ತರ ಪ್ರದೇಶದಲ್ಲಾದರೆ, ಸಾಕಷ್ಟು ಕಡೆ ಜನರ ಮೇಲೆ ಇಲ್ಲದ ಕೇಸುಗಳನ್ನು ಜಡಿಯಲಾಗುತ್ತಿದೆ. ಬೆಂಗಳೂರಲ್ಲೂ ಈಗಾಗಲೇ ಸಾಕಷ್ಟು ಯುವಕ-ಯುವತಿಯರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. ಇಂದು ಜನಪರ ವಕೀಲರಿಗೆ ಕೊರತೆಯಿಲ್ಲ, ಎಲ್ಲರಿಗೂ ಬೇಲ್ ಪಡೆಯಲಾಗಿದೆ.
ಜೆಎನ್‍ಯುನಲ್ಲಿ ಪೊಲೀಸರ ಸುಪರ್ದಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದ ವಿರುದ್ಧದ ಹೋರಾಟ ದೇಶದ ಮೂಲೆಮೂಲೆ ತಲುಪಿದೆ. ಶಹೀನ್‍ಬಾಗ್ ದೆಹಲಿಯಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ತಲೆ ಎತ್ತುತ್ತಿವೆ. ಮೈಸೂರಿನಲ್ಲಿಯೂ ಅತ್ಯಂತ ಶಾಂತಿಯುತವಾದ ಪ್ರತಿಭಟನೆ ಎಲ್ಲರ ಗಮನ ಸೆಳೆದಿತ್ತು. ಯಾವುದಾದರೊಂದು ಕಾರಣಕ್ಕಾಗಿ ಕಾಯುತ್ತಿದ್ದ ಮಾರಿಕೊಂಡುಹೋದ ಮೀಡಿಯಾ ನಳಿನಿ ಬಾಲಕುಮಾರ್ ಹಿಡಿದಿದ್ದ “free Kashmir”ಪೋಸ್ಟರನ್ನು ತೋರಿಸಿ ದೇಶವನ್ನೇ ಒಡೆದುಬಿಟ್ಟಳೆಂಬಂತೆ ತೋರಿಸಿದ್ದಾರೆ. ಆ ವಿಡಿಯೋ ಆಧಾರದಲ್ಲಿ ಹುಡುಗಿಯ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಪೊಲೀಸರು ಹೂಡಿದ್ದು ಈ ದೇಶದ ಆಡಳಿತ ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ವಿಷಯ ಎಲ್ಲರಿಗೂ ಕಾಣುತ್ತಿದೆ.
ಈ ದೇಶದಲ್ಲಿ ಅತ್ಯಂತ ಸುಲಭವಾಗಿ ಬಳಕೆಯಾಗುವ ಕಾನೂನು “ದೇಶದ್ರೋಹ”. ಯಾವುದೇ ವಿಷಯಕ್ಕಾಗಲಿ ಆಡಳಿತ ವರ್ಗವನ್ನು ವಿಮರ್ಶಿಸಿದರೆ ಅದು ಯಾರೇ ಆಗಲೀ ‘ದೇಶದ್ರೋಹ’ ಎಂಬ ಪಟ್ಟ ಕಟ್ಟಲಾಗುತ್ತದೆ. ಯು.ಆರ್ ಅನಂತಮೂರ್ತಿಯಾಗಲೀ, ಗೌರಿಯಾಗಲೀ, ಈ ಕೆಲದಿನಗಳ ಹಿಂದೆಯಷ್ಟೇ ದೇಶದ ಇತಿಹಾಸತಜ್ಞ ರಾಮಚಂದ್ರ ಗುಹಾ ಆಗಲಿ… ಎಲ್ಲರ ಮೇಲೂ ಕೂರಿಸವ ಸುಲಭವಾದ ಗೂಬೆಯದು.
ಮೈಸೂರಿನ ಪೊಲೀಸರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ಮಾನವ ಹಕ್ಕು ಹೋರಾಟಗಾರ್ತಿ ಪ್ರೊ. ರತಿರಾವ್‍ರನ್ನು ಕಾಡಿದ್ದನ್ನು ನೋಡಿದ್ದೇವೆ.

ನಳಿನಿ ಬಾಲಕುಮಾರ್ ಹಿಡಿದ ಪೋಸ್ಟರ್‍ನಲ್ಲಿದ್ದ “free Kashmir”ಅದು ಹೇಗೆ ದೇಶದ್ರೋಹವಾಯಿತು? ಆ ವಿಷಯವನ್ನು ಸುಪ್ರೀಂಕೋರ್ಟಿನವರು ಹೇಳಿಲ್ಲವೇ? ಕಾಶ್ಮಿರ ಜನರ ಮೇಲೆ ಹೇರಿರುವ ನಿರ್ಬಂಧ, ನಡೆಯುತ್ತಿರುವ ಹಿಂಸೆಯ ಬಗ್ಗೆ ಇಡೀ ಪ್ರಪಂಚವೇ ಭಾರತದ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಫೋನಿಲ್ಲದೇ, ಇಂಟರ್‍ನೆಟ್ ಇಲ್ಲದೇ, ಯಾವುದೇ ಸಂಪರ್ಕವಿಲ್ಲದೇ ಈ ದೇಶದ ಒಂದು ಇಡೀ ರಾಜ್ಯವನ್ನು ಬಂಧಿಸಿರುವ ವಿಷಯದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಾದ ನಡೆಯುತ್ತಿದೆ.
CAA, NRC ಹಾಗೂ NPRವಿರುದ್ಧದ ಯಾವುದೇ ಪ್ರತಿಭಟನೆಯನ್ನು ಸಹಿಸದ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ನಳಿನಿ ಬಾಲಕುಮಾರ್ ಮೇಲೆ ಹಾಕಿದ ಮೊಕದ್ದಮೆಯೂ ಅದೇ ರೀತಿಯದು. ಒಂದು ರೀತಿ ಮಿಕ್ಕ ಪ್ರತಿಭಟನಾಕಾರರಿಗೆ ಎಚ್ಚರಿಸುವ ಮಾರ್ಗ.
ದುರಂತವೆಂದರೆ ಮೊಕದ್ದಮೆ ದಾಖಲಿಸಿದ ಮೇಲೆ ಮೈಸೂರು ವಕೀಲರ ಸಂಘ ತೆಗೆದುಕೊಂಡ ನಿರ್ಣಯ. ನಳಿನಿಗೆ ಯಾರೂ ಮೈಸೂರಿನಲ್ಲಿ ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನ. ವಕೀಲರ ಸಂಘಗಳ ಇಂಥಾ ನಿಲುವು ಇದು ಹೊಸತೇನಲ್ಲ. ತಿಂಗಳ ಹಿಂದೆಯಷ್ಟೇ ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಹೈದರಾಬಾದ್, ಮೆಹಬೂಬ್‍ನಗರ್ ಮತ್ತಿತರ ಜಿಲ್ಲೆಗಳ ವಕೀಲರ ಸಂಘಗಳು ಆರೋಪಿಗಳಿಗೆ ನಾವು ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನಗಳನ್ನು ತೆಗೆದುಕೊಂಡಿದ್ದವು. ಅದೆಷ್ಟು ಸರಿ? ಈ ದೇಶದ ಸಂವಿಧಾನ ಹೇಳುತ್ತದೆ “ಯಾವುದೇ ವ್ಯಕ್ತಿಯ ವಿರುದ್ಧ ಅಪರಾಧ ಸಾಬೀತಾಗದ ಹೊರತು ಶಿಕ್ಷಿಸಲಾಗದು ಹಾಗೂ ಯಾವುದೇ ಆರೋಪಿಗೆ ತನ್ನ ಆಯ್ಕೆಯ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕನ್ನು ಕೊಡಲಾಗಿದೆ.”
ಈ ದೇಶದ ಪ್ರತಿಯೊಬ್ಬ ವಕೀಲ ‘ಯಾವುದೇ ಭೇದ-ಭಾವ ಮಾಡದೇ, ತಾರತಮ್ಯ ತೋರದೇ ವೃತ್ತಿ ನಡೆಸುವುದಾಗಿ’ ಪ್ರಮಾಣವಚನ ಮಾಡಿರುತ್ತಾರೆ. ಇವು ಪ್ರಜಾಸತ್ತೆಯನ್ನು ನಿರ್ಧರಿಸುವ ಬುನಾದಿಗಳು. ಕಳ್ಳನೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅತ್ಯಾಚಾರವೇ ಮಾಡಿರಲಿ, ದೌರ್ಜನ್ಯ ಮಾಡಿರಲಿ, ಮೋಸ ಮಾಡಿರಲಿ, ಭ್ರಷ್ಟನಾಗಿರಲಿ., ಪ್ರತಿಯೊಬ್ಬನಿಗೂ ತನ್ನ ಆಯ್ಕೆಯ ವಕೀಲನನ್ನು ನೇಮಿಸಿಕೊಳ್ಳುವ ಹಕ್ಕಿದೆ.
ಅಜ್ಮಲ್ ಕಸಬ್‍ನಂಥಾ ಆತಂಕವಾದಿಗೂ ಆಯ್ಕೆಯ ವಕೀಲನನ್ನು ನೇಮಿಸಿ, ವಿಚಾರಣೆ ನಡೆಸಿ, ತೀರ್ಪನ್ನು ಕೊಟ್ಟು, ಮೇಲ್ಮನವಿಗೆ ಅವಕಾಶ ಮಾಡಿಕೊಟ್ಟು ಕೊನೆಯಲ್ಲಿ ಶಿಕ್ಷೆ ನೀಡಲಾಯಿತು. ವಕೀಲರ ಸಂಘಗಳು ಈ ರೀತಿ ತೀರ್ಮಾನ ತೆಗೆದುಕೊಳ್ಳುವುದು ಸಮಂಜಸವಲ್ಲವೆಂದು ಈ ದೇಶದ ನುರಿತ ನ್ಯಾಯಾಧೀಶರು, ನ್ಯಾಯವಾದಿಗಳು ಸಾಕಷ್ಟು ಸಲ ಹೇಳಿದ್ದಾರೆ.
ಇಂದು ನಳಿನಿಗೆ 170ಕ್ಕೂ ಹೆಚ್ಚು ವಕೀಲರು ಬೇರೆಬೇರೆ ಜಿಲ್ಲೆಗಳಿಂದ ಮೈಸೂರಿಗೆ ಬಂದು ಆಕೆಗೆ ಬೆಂಬಲವಾಗಿ ನಿಂತಿದ್ದು ಒಂದು ಆರೋಗ್ಯಪೂರ್ಣ ಬದಲಾವಣೆಯಾಗಿದೆ. ಈ ದೇಶದಲ್ಲಿ ಉನ್ನಾವ್ ರೇಪ್ ಪ್ರಕರಣದ ಆರೋಪಿಗೆ, ಕಥುವಾ ಹಸುಗೂಸಿನ ರೇಪ್ ಆರೋಪಿಗಳಿಗೆ, ಗಣಿ ಹಗರಣಗಳ ಆರೋಪಿಗಳಿಗೆ, ದೇಶ ಲೂಟಿಮಾಡಿ ರಕ್ತ ಹೀರಿಹೋದ ನೀರವ್ ಮೋದಿಗಳಿಗೆ, ವಿಜಯ್ ಮಲ್ಯರುಗಳಿಗೆ, ಮೆಹುಲ್ ಚೋಕ್ಸಿಗಳಿಗೆ, ನೂರಾರು ರಾಜಕಾರಣಿಗಳಿಗೆ ವಕಾಲತ್ತು ವಹಿಸಲು ಇಲ್ಲದ ತಕರಾರು ಒಂದು ಚಿಕ್ಕ ಪೋಸ್ಟರ್ ಇಡಿಗೆ ಹುಡುಗಿಗೆ ಅಂಥಾ ಸಹಾಯ ನೀಡುವುದಿರಲಿ ಹಿಂಜರಿಕೆ ತೋರಿದ್ದು ಎಷ್ಟು ಸಮಂಜಸ?
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಮೂಲಭೂತ ಹಕ್ಕು. ಪ್ರಜಾಸತ್ತೆ ಮೂಲಸ್ತಂಭವದು. ಅದರಿಂದಲೇ ನಮ್ಮ ಎಲೆಕ್ಷನ್ ಸಾಧ್ಯ. ಅದರಿಂದಲೇ ನನ್ನ ನೀತಿಗಳು, ನಮ್ಮ ಪತ್ರಿಕೋದ್ಯಮ, ನಮ್ಮ ವೃತ್ತಿಯ ಆಯ್ಕೆಯ ಸ್ವಾತಂತ್ರ್ಯ, ನಮ್ಮ ಧರ್ಮಶ್ರದ್ಧೆಯ ಸ್ವಾತಂತ್ರ್ಯ, ನಮ್ಮ ಸಂಘಜೀವನದ ಸ್ವಾತಂತ್ರ್ಯ ಸಾಧ್ಯವಾಗಿರುವುದು. ಅದಕ್ಕಾಗಿಯೇ ಇಂದು ಹೋರಾಟ ನಡೆಯುತ್ತಿರುವುದು. ಅದು ಕೇವಲ CAA, NRC ಹಾಗೂ NPR ವಿರುದ್ಧ ಮಾತ್ರವೆಂದು ತಿಳಿದುಕೊಂಡರೇ ಅದು ಅಪ್ಪಟ ಮೂರ್ಖತನ.
(ಲೇಖಕರು ಪ್ರಗತಿಪರ ಚಿಂತಕರು ಮತ್ತು ಬೆಂಗಳೂರು ಹೈಕೋರ್ಟ್ ವಕೀಲರು)


