Homeಮುಖಪುಟಕೆ.ಆರ್ ಪೇಟೆ ಬಿಜೆಪಿ ಶಾಸಕ ನಾರಾಯಣಗೌಡರು ಅರಣ್ಯ ನುಂಗಿದರೇ?

ಕೆ.ಆರ್ ಪೇಟೆ ಬಿಜೆಪಿ ಶಾಸಕ ನಾರಾಯಣಗೌಡರು ಅರಣ್ಯ ನುಂಗಿದರೇ?

ಅರಣ್ಯ ಭೂಮಿ ಹಗರಣವು ಅವರ ಇಮೇಜುಗಳನ್ನು ಅಳಿಸಿ ಹಾಕಿ, ‘ನಾರಾಯಣಗೌಡರೆಂದರೆ ಹೀಗಾ?’ ಎಂಬ ಅಭಿಪ್ರಾಯ ಮೂಡುವಂತಾಗಿದೆ. ಹಗರಣವನ್ನು ಬಿಚ್ಚಿಡುತ್ತಿರುವವರು ಎಲ್ಲಾ ದಾಖಲೆಗಳ ಸಮೇತ ಮುಂದಿಡುತ್ತಿರುವುದರಿಂದ ಬೆನಿಫಿಟ್ ಆಫ್ ಡೌಟ್‍ಗೂ ಆಸ್ಪದವಿಲ್ಲದಂತಾಗಿದೆ.

- Advertisement -
- Advertisement -

ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರು, ಕೆ.ಆರ್.ಪೇಟೆಯಲ್ಲಿ ಗೆದ್ದು ಬಂದನಂತರ ಹಗರಣವೊಂದು ಬೆಳಕಿಗೆ ಬಂದಿದೆ. ಕೂಡಲೇ ಸಚಿವರಾಗಲು ಹವಣಿಸುತ್ತಿದ್ದ ಅವರ ಮಂತ್ರಿ ಪದವಿ ಆಕಾಂಕ್ಷೆಯ ಕೊರಳಿಗೆ ಈ ಹಗರಣವು ಸುತ್ತಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ವನ್ಯಜೀವಿ ಸಂರಕ್ಷಣಾ ಮೀಸಲು ಅರಣ್ಯ ಭೂಮಿಯನ್ನು ನುಂಗಲು ಹೊರಟಿದ್ದಾರೆ ಎನ್ನುವ ಸುದ್ದಿಯ ಬೆನ್ನುಹತ್ತಿ ಹೋದಾಗ ಹಲವು ಸಂಗತಿಗಳು ಬಿಚ್ಚಿಕೊಳ್ಳತೊಡಗಿದವು.

ಮುಂಬೈನಲ್ಲಿ ಹೋಟೆಲ್ ನಡೆಸುತ್ತಿದ್ದ ಕೆ.ಸಿ.ನಾರಾಯಣಗೌಡರು ಕೆ.ಆರ್.ಪೇಟೆಯ ಶಾಸಕರಾದದ್ದೇ ಒಂದು ದಂತಕಥೆಯಂತಿದೆ. ನಾಗಮಂಗಲ ಕೆ.ಆರ್.ಪೇಟೆಗಳ ಬರಸೀಮೆಗಳಿಂದ ನೂರು ವರ್ಷಗಳ ಹಿಂದೆಯೇ ವಲಸೆ ಆರಂಭವಾಗಿತ್ತು. ಕನಕಪುರ, ಬೆಂಗಳೂರುಗಳಿಗಷ್ಟೇ ಅಲ್ಲದೇ ದೂರದ ಊಟಿ, ಮುಂಬೈಗಳಿಗೆ ಪ್ರತಿ ಹಳ್ಳಿಗಳಿಂದಲೂ ಜನರು ಹೋಗಿದ್ದರು. ಆ ರೀತಿ ಹೋದವರ ಸಾಹಸಗಾಥೆಗಳು ಈ ಕಡೆ ದೊಡ್ಡ ಸುದ್ದಿಯಾದದ್ದು ಕಡಿಮೆಯೇ. ಅಂತಹ ಕಡಿಮೆ ಕಥೆಗಳಲ್ಲಿ ನಾರಾಯಣಗೌಡರದ್ದೂ ಒಂದು. ಮುಂಬೈನಲ್ಲಿ ‘ಬೇಕಾದಷ್ಟು’ ಹಣ ಸಂಪಾದಿಸಿರುವ ಗೌಡರು ಕೆ.ಆರ್.ಪೇಟೆಯಲ್ಲಿ ಕೊಡುಗೈದಾನಿಯಾಗಿ ಹೆಸರು ಮಾಡತೊಡಗಿದ್ದು 2000ನೇ ಇಸವಿಯ ನಂತರವೇ.

ಅಂತಹ ನಾರಾಯಣಗೌಡರು ಗೆದ್ದರೆ ಭ್ರಷ್ಟಾಚಾರವನ್ನು ಮಾಡಿ ಸ್ವಂತಕ್ಕೆ ದುಡ್ಡು ಮಾಡಿಕೊಳ್ಳುವ ಅಗತ್ಯವೇ ಇಲ್ಲ; ಏಕೆಂದರೆ ಅವರದ್ದೇ ಬೇಕಾದಷ್ಟು ಸಂಪತ್ತು ಬಾಂಬೆಯಲ್ಲಿ ಕೊಳೆಯುತ್ತಾ ಬಿದ್ದಿದೆ ಎಂದೇ ಜನರು ನಂಬಿಕೊಂಡರು. ಅದಕ್ಕೆ ತಕ್ಕಂತೆ ಸ್ಥಳೀಯವಾಗಿ ಅವರು ಇತರ ರಾಜಕಾರಣಿಗಳ ರೀತಿಯಲ್ಲಿ ವಿಪರೀತ ದುಡ್ಡು ದುಡಿಯುತ್ತಿರುವುದೂ ಕಣ್ಣಿಗೆ ರಾಚಲಿಲ್ಲ. ಹಾಗಾಗಿಯೇ ಮೊದಲ ಸಾರಿ, ಅಂದರೆ 2013ರಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಕೃಷ್ಣ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗ ಗೆದ್ದದ್ದು ಮಾತ್ರವಲ್ಲದೇ, ಎರಡನೇ ಸಾರಿಯೂ ಗೆದ್ದು ಬಂದರು. ಎರಡೂ ಸಂದರ್ಭಗಳಲ್ಲಿ ದೇವೇಗೌಡರ ಕುಟುಂಬಕ್ಕೆ ಸಾಕಷ್ಟು ಹಣ ನೀಡಿಯೇ ಟಿಕೆಟ್ ಗಿಟ್ಟಿಸಿದರು ಎಂಬ ‘ಖ್ಯಾತಿ’ ಇದ್ದು, ಆ ಕಾರಣಕ್ಕೇ ಕೆ.ಸಿ.ನಾ.ಗೌಡರು ಸಿಡಿದೆದ್ದರು ಎಂಬ ಸುದ್ದಿಯೂ ಸಾಕಷ್ಟು ಚಲಾವಣೆಯಲ್ಲಿತ್ತು. ತಾನು ಕಷ್ಟಪಟ್ಟು ದುಡಿದು ಸಂಪಾದಿಸಿದ್ದೇನೆ ಮತ್ತು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂಬ ಇಮೇಜನ್ನು ಮೈಂಟೇನ್ ಮಾಡಿಕೊಂಡು ಬಂದಿರುವ ಗೌಡರದ್ದು, ದೊಡ್ಡಗೌಡರ ವಿರುದ್ಧದ ಸಾತ್ವಿಕ ಸಿಟ್ಟು ಎಂದು ಭಾವಿಸಿದ್ದವರೂ ಇದ್ದರು.

ಆದರೆ, ಈಗ ಅರಣ್ಯ ಭೂಮಿ ಹಗರಣವು ಅವೆಲ್ಲಾ ಇಮೇಜುಗಳನ್ನು ಅಳಿಸಿ ಹಾಕಿ, ‘ನಾರಾಯಣಗೌಡರೆಂದರೆ ಹೀಗಾ?’ ಎಂಬ ಅಭಿಪ್ರಾಯ ಮೂಡುವಂತಾಗಿದೆ. ಹಗರಣವನ್ನು ಬಿಚ್ಚಿಡುತ್ತಿರುವವರು ಎಲ್ಲಾ ದಾಖಲೆಗಳ ಸಮೇತ ಮುಂದಿಡುತ್ತಿರುವುದರಿಂದ ಬೆನಿಫಿಟ್ ಆಫ್ ಡೌಟ್‍ಗೂ ಆಸ್ಪದವಿಲ್ಲದಂತಾಗಿದೆ.

ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯು ಪಾಂಡವಪುರ ತಾಲೂಕಿನ ಚಿನಕುರಳಿ ಮತ್ತು ಮೇಲುಕೋಟೆ ಹೋಬಳಿಗಳಿಗೆ ಹೊಂದಿಕೊಂಡಂತಿದೆ. ಆ ಸರಹದ್ದಿನಲ್ಲಿರುವ ಮಾದಿಗರಹೊಸಹಳ್ಳಿ ಗ್ರಾಮದ ಎಲ್ಲೆಯಲ್ಲಿನ ಸ.ನಂ.14ರ 223.36 ಎಕರೆಯು 1982ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದೆ. ಇದು ಕೆ.ಆರ್.ಪೇಟೆ ವಲಯದ ರಾಯಸಮುದ್ರ ಗಸ್ತಿನ ಅರಣ್ಯ ಪ್ರದೇಶದ ‘ಸಿ’ ಮತ್ತು ‘ಡಿ’ ದರ್ಜೆಯ ಅರಣ್ಯ ಪ್ರದೇಶವಾಗಿರುತ್ತದೆ.

ಇದರಲ್ಲಿ ಸದರಿ ಗ್ರಾಮದ ಎಲ್ಲೆಗೆ ಸೇರಿದ ಅದೇ ಸರ್ವೆ ನಂ 14ರ 120.38 ಎಕರೆ ಜಮೀನನ್ನು 18.8.2010ರಲ್ಲಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಮೇಲುಕೋಟೆ ವನ್ಯಜೀವಿ ಸಂರಕ್ಷಣಾ ಮೀಸಲು ಅರಣ್ಯದ ಸುಪರ್ದಿಗೆ ಪಡೆಯುತ್ತಾರೆ. ಈ ಮೀಸಲು ಅರಣ್ಯಕ್ಕೆ ಸಾರ್ವಜನಿಕರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.
2013ರಲ್ಲಿ ಶಾಸಕರಾದ ನಂತರ ನಾರಾಯಣಗೌಡರು ಈ ಭೂಮಿಯ ಮೇಲೆ ಕಣ್ಣು ಹಾಕಿದರಾ ಎಂಬ ಸಂಶಯ ಬರುತ್ತದೆ. ಏಕೆಂದರೆ ಆ ಹೊತ್ತಿಗೆ ರಾಜ್ಯದೆಲ್ಲೆಡೆ ಸೋಲಾರ್ ಪ್ಲಾಂಟ್‍ಗಳಿಗೆ ಸರ್ಕಾರವು ವಿಶೇಷ ಉತ್ತೇಜನ ನೀಡುತ್ತಿತ್ತು. ಅದಕ್ಕೆ ಸರಿಯಾಗಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರೂ ಆದರು. ಅವರ ಜೊತೆಗಿನ ಸಂಬಂಧವನ್ನು ಕುದುರಿಸಿಕೊಂಡ ಗೌಡರು ತಮ್ಮದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್ ಸೋಲಾರ್ ಪ್ಲಾಂಟ್ ಹಾಕುವ ಪ್ಲಾನ್ ಮಾಡಿದರು.

ಸದರಿ ಅರಣ್ಯ ಪ್ರದೇಶದಲ್ಲಿ ಕೆಲವು ಭೂಮಿಗಳನ್ನು ರೈತರ ಹೆಸರಿಗೆ ಮಂಜೂರು ಮಾಡಲಾಗಿತ್ತು. ಆದರೆ, ಅರಣ್ಯ ಪ್ರದೇಶದ ಈ ಭಾಗದಲ್ಲಿ ಹೆಚ್ಚಿನವರು ಯಾವುದೇ ವ್ಯವಸಾಯ ಮಾಡುತ್ತಿರಲಿಲ್ಲ; ಹೆಸರಿಗೆ ಮಾತ್ರ ಅದು ಇವರದ್ದು ಎಂದಿದ್ದರೂ, ಉಳುಮೆ ಮಾಡಲು ಹೋಗಿರಲಿಲ್ಲವಾದ್ದರಿಂದ ಅರಣ್ಯ ಇಲಾಖೆಯವರೂ ತೊಂದರೆ ಕೊಡಲು ಹೋಗಿರಲಿಲ್ಲ. ಹಾಗಿದ್ದ ಮೇಲೆ ಇದಕ್ಕಿಂತ ಕಡಿಮೆ ಹಣಕ್ಕೆ ಬೇರೆಡೆ ಭೂಮಿ ಕೊಳ್ಳುವುದು ದುಬಾರಿಯಾಗಬಹುದು ಎಂದು ಲೆಕ್ಕಾಚಾರ ಹಾಕಿದ ಕೆ.ಸಿ.ನಾ.ಗೌಡರು ಭೂಮಿಯ ಕುರಿತು ಆಸಕ್ತಿ ತೋರಿರುವ ಸಾಧ್ಯತೆ ಇದೆ.

ಈ ಹೊತ್ತಿಗೆ ಅಲ್ಲಿನ ಕೆಲವು ರೈತರಿಂದ ಕೆ.ಆರ್.ನಗರ ತಾಲೂಕಿನ ಎಚ್.ಡಿ.ವೆಂಕಟೇಶ್ ಎಂಬುವವರು ಮರಳು ಬಿಸಿನೆಸ್‍ಗಾಗಿ ಜಮೀನು ಖರೀದಿಸಿದ್ದರೆಂದು ಹೇಳಲಾಗುತ್ತಿದೆ. ಆದರೆ, ಸದರಿ ಭೂಮಿಯು ಅರಣ್ಯ ಭೂಮಿಯಾಗಿದ್ದರಿಂದ ಅಲ್ಲಿ ಯಾವ ಚಟುವಟಿಕೆಗಳನ್ನು ಮಾಡುವುದೂ ಅವರಿಗೆ ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ಇಂತಹ ಭೂಮಿಗಳನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗುವುದು ಪ್ರಭಾವೀ ರಾಜಕಾರಣಿಗಳಿಗೆ ಮಾತ್ರ. ತಮ್ಮ ಅಧಿಕಾರದ ಬಲವನ್ನು ಉಪಯೋಗಿಸಿ ಅಂಥವರು ದಕ್ಕಿಸಿಕೊಳ್ಳುತ್ತಾರೆ. ಬಹುಶಃ ಕೆ.ಸಿ.ನಾ.ಗೌಡರೂ ಅದನ್ನೇ ಮಾಡಿದರು.

ಅವರು ಎಚ್.ಡಿ.ವೆಂಕಟೇಶ್‍ರಿಂದ 30.03.2016ರಂದು 24 ಎಕರೆ ಪಡೆದುಕೊಳ್ಳುವಾಗ ಮಾಡಿರುವ (ಪತ್ರಿಕೆಗೆ ಲಭ್ಯವಿರುವ ದಾಖಲೆಗಳಂತೆ) ವ್ಯವಹಾರದ ರೀತಿಯೇ ಹಲವು ಸಂದೇಹಗಳನ್ನು ಮೂಡಿಸುತ್ತದೆ. ಒಂದೆಡೆ ಈ ಭೂಮಿಯನ್ನು 999 ವರ್ಷಕ್ಕೆ ಭೋಗ್ಯ ಮಾಡಿಸಿಕೊಂಡಿದ್ದಲ್ಲದೇ, ಸದರಿ ಜಾಗದಲ್ಲಿ ಸೋಲಾರ್ ಪ್ಲಾಂಟ್ ಮಾಡುವುದಾಗಲೀ ಅಥವಾ ಇನ್ನೇನೇ ಮಾಡುವುದಕ್ಕೂ ನಮ್ಮ ತಕರಾರಿಲ್ಲ ಎಂದು ನಮೂದಿಸಿರುತ್ತಾರೆ. ಅದೇ ದಿನ ಅದೇ ಭೂಮಿಗೆ ಶುದ್ಧ ಕ್ರಯದ ಕರಾರುಪತ್ರವನ್ನೂ ಮಾಡಿಕೊಂಡಿದ್ದಾರೆ. ಭೋಗ್ಯವನ್ನು 5 ಲಕ್ಷ ರೂ.ಗಳಿಗೆಂದೂ, ಕ್ರಯವನ್ನು 27,60,000ರೂ.ಗಳಿಗೂ ಮಾಡಿಸಿಕೊಂಡಿದ್ದಾರೆ. ಸರ್ವೇ ನಂಬರ್ 31/34ರಲ್ಲಿ ಮೂರು ಎಕರೆ, ಸರ್ವೇ ನಂಬರ್ 31/ಪಿ 2ರಲ್ಲಿ ನಾಲ್ಕು ಎಕರೆ, ಸರ್ವೇ ನಂಬರ್ 31/23 ಪಿ 2ರಲ್ಲಿ ನಾಲ್ಕು ಎಕರೆ, ಸರ್ವೇ ನಂಬರ್ 31/26ರಲ್ಲಿ ನಾಲ್ಕು ಎಕರೆ, ಸರ್ವೇ ನಂಬರ್ 31/15 ಬ್ಲಾಕ್‍ರಲ್ಲಿ ನಾಲ್ಕು ಎಕರೆ, ಸರ್ವೇ ನಂಬರ್ 31/19 ಬ್ಲಾಕ್ ಪಿ1ರಲ್ಲಿ ಮೂರು ಎಕರೆ ಮತ್ತು ಸವೇ ನಂಬರ್ 31/ಜಿಯಲ್ಲಿ ಎರಡು ಎಕರೆಗಳನ್ನು ಈ ರೀತಿ ಪಡೆದುಕೊಂಡಿರುತ್ತಾರೆ.

ಅದರ ಜೊತೆಗೆ ಅವರ ಪತ್ನಿ ದೇವಕಿ ನಾರಾಯಣಗೌಡ ಹೆಸರಿನಲ್ಲಿ ಸದರಿ ಗ್ರಾಮದ ಸ.ನಂ.31ರ ಹಿಸ್ಸಾ 23ರಲ್ಲಿ 3ಎಕರೆ, ಸ.ನಂ.107ರಲ್ಲಿ 3ಎಕರೆ, ಸ.ನಂ.108ರಲ್ಲಿ 4ಎಕರೆ, ಸ.ನಂ.14 ಹಿಸ್ಸಾ ಜೆನಲ್ಲಿ 5ಎಕರೆ, ಸ.ನಂ.14ರ ಹಿಸ್ಸಾ ಐನಲ್ಲಿ 5ಎಕರೆ ಹಾಗೂ ಸ.ನಂ.14ರ ಹಿಸ್ಸಾ ಎಫ್‍ನಲ್ಲಿ 5 ಎಕರೆ 31.12.2016ರಲ್ಲಿ ಕರಾರು ಕ್ರಯವಾಗಿರುತ್ತದೆ.

ಮೊದಲನೆ ಮಗಳಾದ ಲೀನಾ ಅಲಿಯಾಸ್ ಕೋಯಿಲ್ ಎನ್ ಗೌಡರವರ ಹೆಸರಿಗೆ ಸ. ನಂ.31ರಲ್ಲಿನ ಹಿಸ್ಸಾ 9ರ 2ಎಕರೆ, ಹಿಸ್ಸಾ 40ರ 2ಎಕರೆ ದಿನಾಂಕ 06.2.2017ರಲ್ಲಿ ಕ್ರಯವಾಗಿದೆ. ಅದೇ ದಿನ ಮತ್ತೊಬ್ಬ ಮಗಳಾದ ನೇಹ ಎನ್ ಗೌಡರವರ ಹೆಸರಿಗೆ ಸದರಿ ಗ್ರಾಮದ ಸ.ನಂ. 31 ಹಿಸ್ಸಾ 3ರಲ್ಲಿ 2 ಎಕರೆ ಅದೇ ದಿನ ಕ್ರಯವಾಗಿದೆ.

ನಾರಾಯಣಗೌಡರ ಹೆಸರಿಗೆ ಪಡೆದುಕೊಂಡ ಜಮೀನುಗಳು ದುರಸ್ತಾಗಿರಲಿಲ್ಲ. ತಾವೇ ಅದನ್ನು ಕ್ರಯಕ್ಕೆ ಪಡೆದುಕೊಂಡರೆ ದುರಸ್ತು ಮಾಡಿಸಬೇಕಾಗುತ್ತದೆ. ಏಕೆಂದರೆ ಈಗಿನ ನಿಯಮದ ಪ್ರಕಾರ ದುರಸ್ತಾಗದೇ ರಿಜಿಸ್ಟರ್ ಆಗುವ ಸಾಧ್ಯತೆ ಇಲ್ಲ. ಹಾಗಾಗಿ 999 ವರ್ಷಕ್ಕೆ ಭೋಗ್ಯ ಎಂದೂ ಮಾಡಿಸಿಕೊಂಡಿರುವ ಉದ್ದೇಶ ಇದರ ಹಿಂದೆ ಇದ್ದಂತಿದೆ. ಸ್ಥಳೀಯರ ಪ್ರಕಾರ ಈ ರೀತಿ ಭೋಗ್ಯಕ್ಕೆ ತೆಗೆದುಕೊಂಡ ಜಮೀನಿನಲ್ಲಿದ್ದ, ಅಂದರೆ ಈ ವನ್ಯಜೀವಿ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ಮರಗಳನ್ನು ಕಡಿದುಹಾಕಲಾಗಿದೆ. ಅದನ್ನು ನಾರಾಯಣಗೌಡರು ಮತ್ತು ಅವರ ಹಿಂಬಾಲಕರೇ ಮಾಡಿಸಿದ್ದಾರೆನ್ನಲಾಗುತ್ತದೆ. ಅದಕ್ಕೆ ವಿರೋಧ ಬಂದಾಗ ನಿಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಫಾರೆಸ್ಟ್ ಅಫೆನ್ಸ್

30.3.2016ರಲ್ಲಿ ಭೋಗ್ಯ ಮತ್ತು ಕ್ರಯ ಕರಾರು ಮಾಡಿಕೊಂಡ ಜಮೀನಿನ ಅದೇ ಸರ್ವೇ ನಂಬರ್‍ಗಳ ವಿಚಾರ ನಂತರ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯವರ ಮುಂದೆ ಬರುತ್ತದೆ. 23.6.2016ರಲ್ಲಿ ಸರ್ವೇ ನಂಬರ್ 14ರ 223.36 ಎಕರೆ ಜಮೀನಿನ ಪೈಕಿ 120.38 ಎಕರೆಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಉಳಿದ ಜಮೀನಿನ ಕುರಿತು ಸರ್ಕಾರದ ನಿರ್ದೇಶನ ನಿರೀಕ್ಷಿಸಲಾಗಿದೆ ಎಂಬ ಷರಾವನ್ನು ಬರೆಯಲಾಗಿರುತ್ತದೆ. ಅಂದರೆ ಸದರಿ ಜಮೀನನ್ನು ಯಾರಿಗಾದರೂ ಅನುಕೂಲ ಮಾಡಿಸಿಕೊಡುವ ಉದ್ದೇಶದಿಂದ ಹೀಗೆ ಮಾಡಿರುವ ಅನುಮಾನ ಹುಟ್ಟುತ್ತದೆ. ಮತ್ತು ಅದಕ್ಕೆ ಕೇವಲ 3 ತಿಂಗಳ ಹಿಂದೆ ಅದೇ ಕ್ಷೇತ್ರದ ಶಾಸಕರು ಸದರಿ ಜಮೀನನ್ನು ಪಡೆದುಕೊಂಡಿರುವುದರಿಂದ ಅವರೇ ಕಾರಣವಾಗಿರಬಹುದು ಎಂದುಕೊಳ್ಳಲು ಕಾರಣಗಳಿವೆ.

ಕೆ.ಸಿ.ನಾರಾಯಣಗೌಡರು (ಅವರೇ ಪತ್ರಿಕೆಗೆ ಹೇಳಿದಂತೆ) ಮುಂಬೈನಲ್ಲಿ ಚಿಕ್ಕ ಉದ್ಯಮಿ. ಅಲ್ಲಿನ ಅಂಧೇರಿ ಈಸ್ಟ್‌ನಲ್ಲಿ ಹೋಟೆಲ್ ಸಾಲಿಟ‌ರ್‌ನ ಮಾಲೀಕರು. ಇದು ಮಾತ್ರ ಎಲ್ಲರಿಗೂ ಗೊತ್ತಿರುವ ಅಧಿಕೃತ ಸಂಗತಿ. ಆ ಹೋಟೆಲೊಂದರಿಂದ ಅವರ ಆದಾಯ ಬರುತ್ತಿದೆಯೇ ಎಂಬ ಪ್ರಶ್ನೆ ತೀರಾ ಈಚೆಗೆ ಕ್ಷೇತ್ರದಲ್ಲಿನ ಕಾರ್ಯಕರ್ತರಿಗೆ ಬಂದಿದೆ. ಚಿಕ್ಕಬಳ್ಳಾಪುರ ಹಾಗೂ ಸೋಲಾಪುರದಲ್ಲಿಯೂ ಅವರಿಗೆ ಆಸ್ತಿಯಿದೆ ಎಂಬ ವದಂತಿಗಳಿವೆಯಾದರೂ ಆಧಾರಗಳಿಲ್ಲ. ಕ್ಷೇತ್ರದಲ್ಲಿ ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಗೌಡರೂ ಗಟ್ಟಿಯಾಗಿ ಹೇಳುತ್ತಾರೆ. ಆದರೆ, ಉಪ್ಪಾರ್ ಕಂಪೆನಿಗೆ ನೀಡಿದ ಹೇಮಾವತಿ ಕಾಲುವೆಯಲ್ಲಿ 3 ಕೋಟಿ ಪಡೆದಿದ್ದಾರೆ ಎಂಬುದೂ ಸಹಾ ಕೇವಲ ಆರೋಪವೇ. ಅದೇನೇ ಇದ್ದರೂ, ಈ ಅರಣ್ಯ ಭೂಮಿಯ ವಿಚಾರದಲ್ಲಂತೂ ಎಲ್ಲವೂ ಕಾನೂನುಬದ್ಧವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.
ಆಶ್ಚರ್ಯದ ಸಂಗತಿಯೆಂದರೆ ಇವೆಲ್ಲವೂ ನಡೆದದ್ದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ. ನಾರಾಯಣಗೌಡರು ದೇವೇಗೌಡರ ಕುಟುಂಬಕ್ಕೆ ಅಷ್ಟೊಂದು ನಿಷ್ಠರಾಗಿಲ್ಲ ಮತ್ತು ಇತರ ಜೆಡಿಎಸ್‍ನವರಂತೆ ನಡೆದುಕೊಳ್ಳುವುದಿಲ್ಲ ಎಂಬುದು ಬಹಳ ಹಿಂದಿನಿಂದ ಇರುವ ಅಭಿಪ್ರಾಯವಾಗಿದೆ. ನಾರಾಯಣಗೌಡರ ಆರ್ಥಿಕ ಪರಿಸ್ಥಿತಿ ಮೇಲ್ನೋಟಕ್ಕೆ ತೋರಿಸಿಕೊಳ್ಳುವಷ್ಟು ಚೆನ್ನಾಗಿಲ್ಲವೆಂದೂ, ಹಾಗಾಗಿಯೆ ಶಾಸಕ ಸ್ಥಾನ ಪಡೆದುಕೊಂಡ ಮೇಲೆ ಹಣ ಮಾಡುವ ದಾರಿಗಳನ್ನು ಹುಡುಕಿರಬಹುದೆಂದೂ ಭಾವಿಸಲು ಹಲವು ಕಾರಣಗಳಿವೆ. ಅದಕ್ಕಾಗಿ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರ ಜೊತೆಗೆ ಸಖ್ಯದಿಂದಿದ್ದು ಅದೇ ಕಾರಣಕ್ಕೂ ಗೌಡರ ಕುಟುಂಬದಿಂದ ದೂರವಾಗಿರಬಹುದಾದ ಸಾಧ್ಯತೆಗಳಿವೆ.

ಮಿಕ್ಕಿದ್ದೆಲ್ಲಾ ಏನೇ ಇದ್ದರೂ, ಅರಣ್ಯಭೂಮಿಯ ವಿಚಾರದಲ್ಲಂತೂ ತನಿಖೆಯಾಗಲೇಬೇಕಿದೆ. ಅದರಲ್ಲೂ ಇದೀಗ ಅವರು ಆಡಳಿತ ಪಕ್ಷದ ಸದಸ್ಯರಾಗಿದ್ದು ಸಚಿವರಾಗುವ ಸಾಧ್ಯತೆಗಳೂ ಇವೆ. ಹೀಗಾಗಿ ಮತ್ತಷ್ಟು ಪ್ರಭಾವ ಬೀರುವ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ. ನಾರಾಯಣಗೌಡರೂ ಸೇರಿದಂತೆ 17 ಶಾಸಕರ ರಾಜೀನಾಮೆಯಿಂದಲೇ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಯಡಿಯೂರಪ್ಪನವರು ಹಲವು ಸಾರಿ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ನಿಷ್ಪಕ್ಷಪಾತ ಸೂಕ್ತ ತನಿಖೆ ನಡೆದರೆ ಮಾತ್ರ ಸತ್ಯವು ಹೊರಬರುವ ಸಾಧ್ಯತೆಗಳಿವೆ.

ಕೊಂಡಿದ್ದು ನಿಜ, ಅರಣ್ಯ ಭೂಮಿ ಅಂತ ಆದರೆ ವಾಪಸ್ಸು ಮಾಡುತ್ತೇನೆ: ಕೆ.ಸಿ.ನಾರಾಯಣಗೌಡ

ಈ ಆರೋಪಗಳ ಕುರಿತು ‘ನಾನುಗೌರಿ.ಕಾಂ’ ಕೆ.ಸಿ.ನಾರಾಯಣಗೌಡರನ್ನು ಮಾತಾಡಿಸಿತು. ‘ತಾಲೂಕಿಗೆ ಒಳ್ಳೆಯದಾಗಲಿ, 20 ಮೆಗಾವ್ಯಾಟ್‍ನ ಸೋಲಾರ್ ಪ್ಲಾಂಟ್ ಬರಲಿ ಅಂತ, ಮಾಜಿ ಶಾಸಕರ ಮಕ್ಕಳು ಅದೇ ಜಾಗದಲ್ಲಿ ನಡೆಸುತ್ತಿದ್ದ ಮರಳು ದಂಧೆ ನಿಲ್ಲಲಿ ಅಂತ ನಾನು ಅದನ್ನು ತೆಗೆದುಕೊಂಡೆ. ನನ್ನ ಮತ್ತು ನನ್ನ ಮಕ್ಕಳ ಹೆಸರಿನಲ್ಲಿ ಅದನ್ನು ಕೊಂಡಿದ್ದು ನಿಜ. ನಂತರ ನಾನು ಆ ಜಮೀನಿನ ಹತ್ತಿರ ಹೋಗಲೇ ಇಲ್ಲ. ಏಕೆಂದರೆ ಸೋಲಾರ್ ಪ್ಲಾಂಟ್ ಬೇರೆ ಅದ್ವಾನಿ ಗ್ರೂಪಿಗೆ ಸಿಕ್ಕಿತು. ಅವರೂ ಸಹಾ ಇದನ್ನು ಲೀಸಿಗೆ ತೆಗೆದುಕೊಳ್ಳಲಿಲ್ಲ.’
ಅರಣ್ಯ ಭೂಮಿಯಲ್ಲಿ 500ಕ್ಕೂ ಹೆಚ್ಚು ಮರ ಕಡಿದಿದ್ದೀರ ಅಂತ ಆರೋಪ ಇದೆಯಲ್ಲಾ?
ಟೋಟಲಿ ರಾಂಗ್. ಅವೆಲ್ಲಾ ಸುಳ್ಳು. ನಾನು ಆ ಜಮೀನೇ ನೋಡಿಲ್ಲ.
ನೀವು ಒಂದೇ ದಿನ, ಮಾರ್ಚ್ 30, 2016ರಂದು ಒಂದೇ ಜಾಗದ ವಿಚಾರಕ್ಕೆ ಭೋಗ್ಯಪತ್ರ ಮತ್ತು ಕ್ರಯಪತ್ರ ಮಾಡಿಕೊಂಡಿದ್ದೀರಿ. ಯಾಕೆ?
ಇಲ್ಲ ಗುರುಗಳೇ. ಅದು ಒಂದೇ ವ್ಯಕ್ತಿಗೆ ಸೇರಿದ ಬೇರೆ ಬೇರೆ ಜಮೀನು. ಸರಿಯಾಗಿ ನೀವು ಡಾಕ್ಯುಮೆಂಟ್ಸ್ ನೋಡಿ.
(ನಾರಾಯಣಗೌಡರು ಹೇಳಿದ ಹಾಗೆ ಮತ್ತೆ ದಾಖಲೆಗಳನ್ನು ಪರಿಶೀಲಿಸಲಾಗಿ, ಅವರು ಒಂದೇ ವ್ಯಕ್ತಿಗೆ ಸೇರಿದ ಒಂದೇ ಜಾಗಕ್ಕೇನೇ (ಒಟ್ಟು 7 ಐಟಂ ಸ್ವತ್ತುಗಳು) ಒಂದೇ ದಿನ ಭೋಗ್ಯಪತ್ರ ಮತ್ತು ಶುದ್ಧ ಕ್ರಯ ಕರಾರು ಪತ್ರವನ್ನು ಮಾಡಿಸಿರುವುದು ಇನ್ನೊಮ್ಮೆ ಸ್ಪಷ್ಟವಾಯಿತು)
ನೀವು ಈ ಜಮೀನಿನ ಭೋಗ್ಯ/ಕ್ರಯ ಕರಾರು ಮಾಡಿಕೊಂಡ ನಂತರ, 3 ತಿಂಗಳಲ್ಲಿ 120 ಎಕರೆಯನ್ನು ಅರಣ್ಯದಿಂದ ಕೈಬಿಡಲು ಪ್ರಭಾವ ಬೀರಿದ್ದೀರಿ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ.
ಖಂಡಿತಾ ಇಲ್ಲ. ಆ ರೀತಿ ಏನಾದರೂ ತಪ್ಪಾಗಿದ್ದರೆ, ನಾನು ಈ ಭೂಮಿಯನ್ನೇ ಸರೆಂಡರ್ ಮಾಡ್ತೀನಿ. ಇದುವರೆಗೆ ನಾನು ಕೆ.ಆರ್.ಪೇಟೆ ತಾಲೂಕಿನಲ್ಲಿ ಒಂದೇ ಒಂದು ಗೋಲ್‍ಮಾಲ್ ಮಾಡಿಲ್ಲ. ಬಾಂಬೆಯಲ್ಲಿ ನಾನೊಬ್ಬ ಚಿಕ್ಕ ಉದ್ಯಮಿ. ಸೇವೆ ಮಾಡಲು ಬಂದಿದ್ದೇನೆ. ಭೂಮಿ ಹೊಡೆದುಕೊಳ್ಳುವ ಅಗತ್ಯ ನನಗಿಲ್ಲ. ಬೇಕಾದರೆ ನೀವುಗಳು ಕರೆದಲ್ಲಿಗೆ ವಕೀಲರು ಮತ್ತು ಡಾಕ್ಯುಮೆಂಟ್ಸ್ ಜೊತೆಗೆ ಬರುತ್ತೇನೆ. ಅದೇನಾದರೂ ಅರಣ್ಯ ಭೂಮಿ ಆಗಿದ್ದರೆ ಅಲ್ಲೇ ಅಂಡರ್‍ಟೇಕಿಂಗ್ ಕೊಡ್ತೀನಿ.

ಅಧಿಕಾರ ದುರುಪಯೋಗ
ಸ್ಪಷ್ಟವಾಗಿದೆ: ರವಿಕೃಷ್ಣಾರೆಡ್ಡಿ

ಮಂಡ್ಯದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಮಾಡಿ ತನಿಖೆಗೆ ಆಗ್ರಹಿಸಿರುವ ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷರಾದ ರವಿಕೃಷ್ಣಾರೆಡ್ಡಿಯವರನ್ನೂ ನಾನುಗೌರಿ.ಕಾಂ ಮಾತಾಡಿಸಿತು.ಅವರ ಪ್ರಕಾರ ಇದರಲ್ಲಿ ಗಮನಿಸಬೇಕಾದ ಮೂರು ವಿಚಾರಗಳಿವೆ. ಮೊದಲನೆಯದ್ದು, ಇವರು ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲಿ ಒಟ್ಟು 6 ಎಕರೆ ಜಮೀನನ್ನು ಕೊಂಡಿದ್ದಾರೆ. ತಮ್ಮ ಎಲೆಕ್ಷನ್ ಅಫಿಡವಿಟ್‍ನಲ್ಲಿ ಅವರು ಅವಲಂಬಿತರು ಎಂದೇ ತೋರಿಸಿದ್ದಾರೆ. ಹಾಗಿದ್ದ ಮೇಲೆ ಅವರ ಹೆಸರಿನಲ್ಲಿ ಇವರೇ ಬೇನಾಮಿ ಮಾಡಿಕೊಂಡಿರುವುದಲ್ಲವಾ?

ಎರಡನೆಯದು, ಪೋಡಿಯಾಗದ ಜಮೀನನ್ನು ಇವರು ಹೇಗೆ ಕ್ರಯಕ್ಕೆ ತೆಗೆದುಕೊಳ್ಳುತ್ತಾರೆ? ಯಾರಿಗೆ ಯಾವಾಗ ಯಾವ ರೀತಿ ಗ್ರಾಂಟ್ ಆಯಿತೂ ಅಂತಲೂ ಪರಿಶೀಲಿಸದೇ ಶಾಸಕರೊಬ್ಬರು ಭೂಮಿಯನ್ನು ಕೊಂಡುಕೊಂಡರಾ? ಇದು ಕಾನೂನುಬಾಹಿರವಾದ ಕೆಲಸವಾಗಿದೆ. ಮೂರನೆಯದು, ಒಂದೇ ದಿನ ಸಬ್‍ರಿಜಿಸ್ಟ್ರಾರ್ ಒಂದೇ ಜಮೀನಿಗೆ ಭೋಗ್ಯಪತ್ರ ಮತ್ತು ಕ್ರಯಕರಾರು ಪತ್ರವನ್ನು ನೋಂದಣಿ ಮಾಡಿಸಿದ್ದಾರೆ. ಇದು ಹೇಗೆ ಸಾಧ್ಯ? ಅಂದರೆ ಇವರು ಅಕ್ರಮ ಮಾಡಿರುವುದಲ್ಲದೇ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...