ಭಾರತ ಇಂದು ಸ್ವಾತಂತ್ರ್ಯ ಗಣರಾಜ್ಯ. ಆದರೆ ಸ್ವಾತಂತ್ರ್ಯ ಎಂಬುದು ಭಾರತಕ್ಕೆ ಅಷ್ಟು ಸುಲಭವಾಗಿ ಧಕ್ಕಿದ್ದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಈ ಹೋರಾಟದ ಇತಿಹಾಸದ ಉದ್ದಕ್ಕೂ ಬೆವರು ರಕ್ತ ಹರಿಸಿದ ಹಾಗೂ ತಮ್ಮ ಜೀವವನ್ನೆ ಪಣಕ್ಕಿಟ್ಟವರ ಸಂಖ್ಯೆ ಅಗಣಿತ. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹೋರಾಟಗಾರರು ತಮ್ಮ ಪ್ರಾಣವನ್ನೇ ಭಾರತಾಂಬೆಯ ಪಾದಗಳಿಗೆ ಅರ್ಪಿಸಿದ್ದಾರೆ. 1947 ಆಗಸ್ಟ್ 15 ರ ಸ್ವತಂತ್ರ ಭಾರತದ ಕನಸು ನನಸಾದ ಕಥೆಯನ್ನು ಅಷ್ಟು ಸುಲಭಕ್ಕೆ ವಿವರಿಸುವುದೂ ಕಷ್ಟವೇ.
ಆದರೆ ಹಿಂಸೆ ಬೆವರು ರಕ್ತ ಹಾಗೂ ಜೀವಕೊಟ್ಟು ಪಡೆದ ಸ್ವಾತಂತ್ರ್ಯವನ್ನು ಭಾರತೀಯರು ಸಾಕಾರ ಪಡಿಸಿಕೊಂಡರೆ ಎಂದು ಒಮ್ಮೆ ನಮ್ಮ ಸಾಕ್ಷಿ ಪ್ರಜ್ಞೆಯನ್ನು ನಾವು ಪ್ರಶ್ನಿಸಿಕೊಂಡರೆ ನಮಗೆ ಸಿಗುವ ಉತ್ತರ ಬಹುತೇಕ ಶೂನ್ಯವೇ.. ರಕ್ತ ಹರಿಸಿ ಪಡೆದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಬೇಕಾದ ಜವಾಬ್ದಾರಿಯನ್ನು ಅಂದು ಹೊತ್ತಿದ್ದವರು ನಮ್ಮದೇ ರಾಜಕಾರಣಿಗಳು. ಆದರೆ ದುರಾದೃಷ್ಟವಶಾತ್ ದಿನಕಳೆದಂತೆ ಮೌಲ್ಯಾಧಾರಿತ ರಾಜಕಾರಣ ಕಣ್ಮರೆಯಾಯಿತು.
ನಿಸ್ವಾರ್ಥದಿಂದ ದೇಶಕ್ಕಾಗಿ ದುಡಿದ ನಾಯಕರ ಜಾಗದಲ್ಲಿ ಸ್ವಹಿತಾಶಕ್ತಿಯ ಸ್ವಾರ್ಥಪರ ಚಿಂತನೆಯ ಜನರ ಸಂದಣಿ ಹೆಚ್ಚಿತು. ಪರಿಣಾಮ ಒಂದು ಕಾಲಕ್ಕೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತೀಯ ರಾಜಕಾರಣ ವ್ಯವಸ್ಥೆ ಬರುಬರುತ್ತಾ ಭ್ರಷ್ಟಾಚಾರದ ಕೂಪವಾಗಿ ಬೆಳೆದ ಕಥೆ ನಮ್ಮ ಕಣ್ಣ ಮುಂದೆಯೇ ಇದೆ. ಪ್ರಾಮಾಣಿಕ ರಾಜಕಾರಣಿಗಳು ತೀರಾ ವಿರಳವಾಗುತ್ತಿರುವ ಇಂತಹಾ ದಿನಗಳಲ್ಲಿ ನಾವು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಹೆಸರೆಂದರೆ “ಕಾಮರಾಜ್”.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ನಂತರ ರಾಷ್ಟ್ರೀಯ ರಾಜಕಾರಣದಲ್ಲೂ ಹೆಸರು ಮಾಡಿದ “ಪೆರುಂದಲೈವರ್ ಕಾಮರಾಜರ್” ಭಾರತದ ಸ್ವಾತಂತ್ರ್ಯದ ಪ್ರಾಮಾಣಿಕ ಸಾಕಾರಕ್ಕಾಗಿ ಈಗಿನ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾಗಬೇಕಾದ ವ್ಯಕ್ತಿತ್ವ. ಇಂದು ಕಾಮರಾಜ್‌ರವರ ಜನ್ಮದಿನ. ಅವರ 117ನೇ ಜನ್ಮದಿನಾಚರಣೆಯ ಸಂದರ್ಭರಲ್ಲಿ ಅವರ ಕುರಿತ ಕೆಲವು ಮಾಹಿತಗಳು ಇಲ್ಲಿವೆ.
ಬಡತನದಿಂದ ಮುಖ್ಯಮಂತ್ರಿ ಗಾದಿಯವರೆಗೆ
1903 ಜುಲೈ 15ರಂದು ತಮಿಳುನಾಡಿನ ವಿರುಧುನಗರ್ನವಲ್ಲಿ ಕುಮಾರಸಾಮಿ ನಾಡಾರ್ ಹಾಗೂ ಶಿವಗಾಮಿ ಅಮ್ಮಾಳ್ ಅವರ ಮಗನಾಗಿ ಜನಿಸುವ ಕಾಮರಾಜರ್ ಬಡತನದಲ್ಲಿ ಬೆಳೆದುಬಂದವರು.
ಸಾಮಾಜಿಕ ಅಸಮಾನತೆ ಹಾಗೂ ಬಡತನದಿಂದ ಕಾಮರಾಜ್ ಕುಟುಂಬ ನಲುಗಿತ್ತು. ಅಲ್ಲದೆ ಕಾಮರಾಜ್ ತಮ್ಮ 12ನೇ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಂದೆಯ ಮರಣದಿಂದ ಮನೆ ಜವಾಬ್ದಾರಿ ವಹಿಸಲು ಮುಂದಾಗುವ ಅವರು ಪ್ರಾಥಮಿಕ ಶಾಲೆಗೆ ಶಿಕ್ಷಣ ಮುಗಿಸಿ ತನ್ನ ಸ್ವಂತ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.
1919ರಲ್ಲಿ ಜಲಿಯನ್ ವಾಲಾಬಾಗ್ನಿಲ್ಲಿ ನಡೆದ ಹತ್ಯಾಕಾಂಡದ ವಿಚಾರ ತಿಳಿಯುವ ಕಾಮರಾಜ್ ಒಡಲಾಳದಲ್ಲಿ ಆಂಗ್ಲರ ವಿರುದ್ಧ ಕ್ರೋಧಾಗ್ನಿ ಹೊರಹೊಮ್ಮುತ್ತದೆ. ಪರಿಣಾಮ ಅತ್ಯಂತ ಚಿಕ್ಕ ವಯಸ್ಸಿಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕುವ ಅವರು 1920ರಲ್ಲಿ ಗಾಂಧಿ ಆರಂಭಿಸಿದ್ದ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗುತ್ತಾರೆ. 16ನೇ ವಯಸ್ಸಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವವನ್ನು ಪಡೆಯುತ್ತಾರೆ. 1930ರ ಏಪ್ರಿಲ್ನಿಲ್ಲಿ ವೇದಾರಣ್ಯದಲ್ಲಿ ಗಾಂಧಿ ಆರಂಭಿಸಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಗೂ ಗುರಿಯಾಗುತ್ತಾರೆ. ನಂತರ ನಡೆಯುವ ಅನೇಕ ಚಳುವಳಿಗಳಲ್ಲಿ ಭಾಗವಹಿಸುವ ಕಾಮರಾಜ್ 5 ಬಾರಿ ಸುಮಾರು 8 ವರ್ಷಕ್ಕೂ ಅಧಿಕ ದಿನ ಜೈಲು ವಾಸದಲ್ಲೇ ಕಳೆಯುತ್ತಾರೆ.
ಕಾಮರಾಜ್‌ರು ಜೈಲಿನಲ್ಲಿದ್ದಾಗ ಅವರ ಅಜ್ಜಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲೂ ಸಹ ಪೆರೋಲ್ನಸಲ್ಲಿ ಹೊರಬರಲು ಅವರು ಒಪ್ಪುವುದಿಲ್ಲ. ಕಾರಣ ಅವರು ಯಾವ ಹಂತದಲ್ಲೂ ಬ್ರಿಟೀಷರಿಂದ ಸಹಾಯ ಪಡೆಯಲು ಇಚ್ಚಿಸಿರಲಿಲ್ಲ.
ತನ್ನ ಕಠಿಣ ಪರಿಶ್ರಮ ಹಾಗೂ ಪಕ್ಷ ನಿಷ್ಠೆಯಿಂದ 1940ರಲ್ಲಿ ಮದ್ರಾಸ್‌ನ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವ ಕಾಮರಾಜ್ ಅಲ್ಲಿಂದ ಸುಮಾರು 14 ವರ್ಷಗಳ ಕಾಲ ಆ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. 1954ರಲ್ಲಿ ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗುತ್ತಾರೆ. ಇಡೀ ಭಾರತದಲ್ಲಿ ಆಂಗ್ಲಭಾಷೆ ಗೊತ್ತಿಲ್ಲದೆಯೂ ಮುಖ್ಯಮಂತ್ರಿಯಾದ ಏಕೈಕ ನಾಯಕ ಎಂಬುದು ಅವರ ಹೆಗ್ಗಳಿಕೆಯೇ ಸರಿ. 1954ರಲ್ಲಿ ಮುಖ್ಯಮಂತ್ರಿಯಾಗುವ ಅವರು ನಂತರ ಸುಮಾರು 3 ಅವಧಿಗೆ 9 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
6ನೇ ತರಗತಿಯಷ್ಟೇ ಓದಿದ್ದ ಕಾಮರಾಜರ್ ಆ ಕಾಲದಲ್ಲೇ ಅದ್ಭುತ ಆಡಳಿತಗಾರ ಎಂದು ಹೆಸರುಗಳಿಸಿದ್ದರು. ಅಲ್ಲದೆ ಇಡೀ ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ ಎಂದು ಕೇಂದ್ರ ಸರ್ಕಾರವೇ ಕಾಮರಾಜ್ ಆಡಳಿತಕ್ಕೆ ಪ್ರಶಸ್ತಿಪತ್ರ ನೀಡಿತ್ತು. ಮುಂದೆ ತಮ್ಮ ಪ್ರಾಮಾಣಿಕ ದುಡಿಮೆ ಹಾಗೂ ದಕ್ಷತೆಯಿಂದ ತಮಿಳುನಾಡು ಜನರಿಂದ “ಪೆರುಂದಲೈವರ್” ಎಂಬ ಬಿರುದಿಗೂ ಪಾತ್ರರಾದರು.
ಶಿಕ್ಷಣದ ಪ್ರಗತಿಗಾಗಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಅಪರೂಪದ ವ್ಯಕ್ತಿತ್ವ
ಕೇವಲ 6ನೇ ತರಗತಿಯಷ್ಟೇ ಓದಿದ್ದ ಕಾಮರಾಜರ್‌ಗೆ ತಮ್ಮ ರಾಜ್ಯ ಶಿಕ್ಷಣದಲ್ಲಿ ದೇಶದಲ್ಲೇ ಅಗ್ರಸ್ಥಾನಕ್ಕೇರಬೇಕು ಎಂಬ ಮಹತ್ವಾಕಾಂಕ್ಷೆಯಿತ್ತು. ಅಲ್ಲದೆ ಶಿಕ್ಷಣದ ವ್ಯಾಪಾರಿಕರಣವನ್ನು ಬಲವಾಗಿ ಖಂಡಿಸಿದ್ದ ಇವರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಾಕಷ್ಟು ಶ್ರಮವಹಿಸಿದ್ದರು. ಮಕ್ಕಳು ಶಾಲೆಗಾಗಿ ಮೂರು ಕಿ.ಮೀ ಗಿಂತ ಹೆಚ್ಚು ದೂರ ಕ್ರಮಿಸಬಾರದು ಎಂದು ಹೇಳುತ್ತಿದ್ದ ಅವರು ಪ್ರತಿ ಗ್ರಾಮಕ್ಕೊಂದು ಪ್ರಾಥಮಿಕ ಶಾಲೆ ಹಾಗೂ ಪ್ರತಿ ಪಂಚಾಯಿತಿಗೊಂದು ಹೈಸ್ಕೂಲ್ ತೆರೆಯಲು ಉದ್ದೇಶಿಸಿದ್ದರು.
ಇಂತಹ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಕಾಮರಾಜ್ ತನ್ನ ಕಾಲದಲ್ಲಿ ತಮಿಳುನಾಡಿನಲ್ಲಿ ಹಳೆ ಶಾಲೆಗಳ ದುರಸ್ಥಿಯ ಜತೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಹೊಸ ಶಾಲೆಯನ್ನು ತೆರೆಯುವ ಮೂಲಕ ಇಡೀ ದೇಶವೇ ನಿಬ್ಬೆರಗಾಗುವಂತಹಾ ಸಾಧನೆ ಮಾಡಿದ್ದರು. ಆದರೆ ಮಕ್ಕಳು ಶಾಲೆಗೆ ಬರಲಿಲ್ಲ. ಹಸಿವು ಬಡತನ ಹಾಗೂ ಬಾಲ ಕಾರ್ಮಿಕ ಪದ್ಧತಿಯ ಕಾರಣದಿಂದಲೇ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬ ಸತ್ಯ ಅರಿತ ಅವರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಹಾಕುವ ಹಾಗೂ ಸಮವಸ್ತ್ರ ನೀಡುವ ಯೋಜನೆಯನ್ನು ಜಾರಿಗೆ ತಂದರು.

“ಹಸಿವಿನೊಂದಿಗೆ ಮಕ್ಕಳು ಶಾಲೆಗೆ ಬಂದರೆ ಆ ಪಾಪ ನಮ್ಮನ್ನು ಸುಮ್ಮನೆ ಬಿಡುತ್ತಾ” ಎಂದು ಆಗಿಂದಾಗ್ಗೆ ತಮ್ಮ ಅಧಿಕಾರಿಗಳ ಬಳಿ ಹೇಳುತ್ತಿದ್ದ ಕಾಮರಾಜ್ ತಮ್ಮ ಮಹತ್ವಾಕಾಂಕ್ಷೆಯ ಕನಸನ್ನು ತಮ್ಮ ಕಠಿಣ ಪರಿಶ್ರಮದ ಮೂಲಕ ಸಾಕಾರಗೊಳಿಸಿದರು. ನಂತರ ಇಡೀ ತಮಿಳಿಗರಿಂದ “ರಾಜ್ಯದಲ್ಲಿ ಶಿಕ್ಷಣದ ಕಣ್ಣು ತೆರೆಸಿದ ಕಾಮರಾಜ್” ಎಂಬ ಪ್ರಶಂಶೆಗೆ ಪಾತ್ರರಾದರು. ಇಡೀ ಭಾರತದಲ್ಲಿ 11ನೇ ತರಗತಿಯವರೆಗೆ ಉಚಿತ ಶಿಕ್ಷಣ ಹಾಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಹಾಕುವ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಹಿರಿಮೆ ಅವರದ್ದು.
ನವ ತಮಿಳುನಾಡಿನ ನಿರ್ಮಾತೃ
ಅಭಿವೃದ್ಧಿಯಲ್ಲಿ ತಮಿಳುನಾಡನ್ನು ದೇಶದ ಮೊದಲ ರಾಜ್ಯವನ್ನಾಗಿಸಬೇಕು ಎಂಬ ಕನಸು ಹೊಂದಿದ್ದ ಕಾಮರಾಜ್ ರಾಜ್ಯದಲ್ಲಿ ಕೃಷಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟ ಒತ್ತು ನೀಡಿದರು. ಇವರ ಕಾಲದಲ್ಲೇ ತಮಿಳುನಾಡಿನಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾದವು. ಕೃಷಿ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಭನೆ ಸಾಧಿಸುವ ನಿಟ್ಟಿನಲ್ಲಿ ಭವಾನಿ ಅಣೆಕಟ್ಟು, ಪರಂಬಿ ಕುಳಂ ಹಾಗೂ ಸಾತನೂರ್ ಅಣೆಕಟ್ಟುಗಳು ಸೇರಿದಂತೆ ಹತ್ತಾರು ನೀರಾವರಿ ಯೋಜನೆಗಳು ಇವರ ಕಾಲದಲ್ಲೇ ಆರಂಭವಾಯಿತು ಎಂಬುದು ಉಲ್ಲೇಖಾರ್ಹ
ಕಾಮರಾಜ್ ಅವರಿಗೆ ಪಕ್ಷದ ಮೇಲೆ ಸಾಕಷ್ಟು ನಿಷ್ಠೆಯುಳ್ಳವರಾಗಿದ್ದರು. ಇದೇ ಕಾರಣಕ್ಕೆ ರಾಷ್ಟ್ರಾದ್ಯಂತ ಕಾಂಗ್ರೆಸ್ ತನ್ನ ಮೊದಲಿನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಅವರು 1963 ರಲ್ಲಿ ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಪಕ್ಷವನ್ನು ಬಲಪಡಿಸಲು ಮುಂದಾಗುತ್ತಾರೆ. ಪಂಡಿತ್ ನೆಹರು ಅವರನ್ನು ರಾಷ್ಟ್ರೀಯ ಕಾಂಗ್ರೆಸ್‌ಗೆ ಅಧ್ಯಕ್ಷರನ್ನಾಗಿಸುತ್ತಾರೆ. ಹೀಗೆ ಪದವಿಯ ಮೇಲೆ ಆಸೆ ಇಲ್ಲದ ಸರಳ ವ್ಯಕ್ತಿತ್ವದ ಕಾಮರಾಜ್ ಅವರಿಗೆ ನೆಹರೂ ಮರಣದ ನಂತರ ಪ್ರಧಾನಿಯಾಗುವ ಸುವರ್ಣಾವಕಾಶ ತಾನಾಗಿಯೇ ಅರಸಿ ಬಂದಿತ್ತು. ಆದರೆ ಪದವಿ ಆಸೆಗೆ ಬಲಿಯಾಗದ ಅವರು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಪ್ರಧಾನಿಯನ್ನಾಗಿಸಿದ್ದರು.
ದೇಶ ಕಂಡ ಅಪರೂಪದ ಸರಳ ಸಜ್ಜನ ವ್ಯಕ್ತಿ ಹಾಗೂ ರಾಜಕಾರಣಿ
ಕಾಮರಾಜ್ ದೇಶ ಕಂಡ ಅಪರೂಪದ ಸಜ್ಜನ ಹಾಗೂ ಸರಳ ವ್ಯಕ್ತಿ. ಮದುವೆಯಾದರೆ ಸ್ವಾರ್ಥ ಚಿಂತನೆ ಹುಟ್ಟುತ್ತದೆ ಎಂಬ ಕಾರಣಕ್ಕೆ ದೇಶ ಸೇವೆಗಾಗಿ ಮದುವೆಯನ್ನೇ ಮಾಡಿಕೊಳ್ಳದೆ ಕೊನೆವರೆಗೂ ಬಡ ಜನರಿಗಾಗಿ ದುಡಿದರು. ತಾನು ಮೂರು ಬಾರಿ ಮುಖ್ಯಮಂತ್ರಿಯಾದರೂ ತನಗಾಗಿ ಒಂದು ರೂಪಯಿಯನ್ನೂ ಕೂಡಿಟ್ಟಿರಲಿಲ್ಲ. ತನ್ನ ತಾಯಿಗಾಗಿ ಮನೆಯಲ್ಲಿ ನೀರಿನ ನಳವನ್ನು ಸಹ ಹಾಕಿಸಿಕೊಟ್ಟಿರಲಿಲ್ಲ. ಇವರ ತಾಯಿ ಕೊನೆವರೆಗೂ ಬೀದಿಯ ನಳವನ್ನೇ ಉಪಯೋಗಿಸಿದ್ದರು.

ಕೊನೆ ಉಸಿರಿರುವ ತನಕ ಬಡ ಜನರಿಗಾಗಿ, ಅವರ ಬದುಕಿಗಾಗಿ, ದೇಶದ ಅಭಿವೃದ್ಧಿಗಾಗಿ ದುಡಿದ ಕಾಮರಾಜ್ 1975 ಅಕ್ಟೋಬರ್ 2 ರಂದು ತೀರಿಕೊಂಡಾಗ ಪತ್ತೆಯಾದ ಅವರ ಆಸ್ತಿಯ ಪ್ರಮಾಣ ಎಷ್ಟು ಗೊತ್ತಾ..? ಕೇವಲ ಮೂರು ಜತೆ ಜುಬ್ಬಾ ಹಾಗೂ ಅವರ ಜುಬ್ಬಾದಲ್ಲಿದ್ದ 27 ರೂಪಾಯಿ ಹಣ ಅಷ್ಟೇ. ಮೂರು ಬಾರಿ ಮುಖ್ಯಮಂತ್ರಿಯಾದವರು ಇಡೀ ರಾಜ್ಯದಲ್ಲಿ ತನಗಾಗಿ ತುಂಡು ಜಾಗವಿರಲಿ ಒಂದು ಮನೆಯನ್ನೂ ಸಹ ಖರೀದಿಸಿರಲಿಲ್ಲ.
ಸಾಯುವ ತನಕ ಇಷ್ಟು ಸರಳವಾಗಿ ಬದುಕಿ ಜನಸೇವೆ ಮಾಡಿದ ಮತ್ತೊಬ್ಬ ಸಜ್ಜನ ರಾಜಕೀಯ ವ್ಯಕ್ತಿತ್ವ ಸಿಗುವುದು ನಮಗೆ ತೀರಾ ವಿರಳ. ಒಂದೇ ಒಂದು ಸಲ ಕಾರ್ಪೋರೇಟರ್ ಆದರೆ ತಮ್ಮ ಹೆಸರಲ್ಲಿ ದೊಡ್ಡ ದೊಡ್ಡ ಬಂಗಲೆ ಎಬ್ಬಿಸುವವರು ಮೂರು ತಲೆಮಾರಿಗಾಗುವಷ್ಟು ಹಣ ಕೂಡಿಡುವವರ ನಡುವೆ ಕಾಮರಾಜರ್ ಅಂತಹ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಬೇಕಾದ ಅವಶ್ಯಕತೆ ಇದೆ. ಅದೇರೀತಿ ಜನಸಾಮಾನ್ಯರು ಸಹ ಇಂತಹವರ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ.
ಇದನ್ನೂ ಓದಿ: ಕೀಲಾರ ಟೆಂಟ್ ಹೌಸ್-2: ಟೇಸ್ಟ್ ಆಫ್ ಚೆರ್ರಿ: ನೋವು –ವಿಷಾದಗಳ ಶೋಧದ ಜೊತೆಗೆ ಉದುರಿದ ಚೆರ್ರಿ ಹಣ್ಣುಗಳ ರುಚಿ


