Homeಮುಖಪುಟಭಾರತದ ನಿಜ ಸುಧಾರಣಾವಾದ ಪರಂಪರೆಯನ್ನು ಗುರುತಿಸಲು ಕಾರಣವಾದ ಗೇಲ್ ಆಮ್‌ವೆಟ್

ಭಾರತದ ನಿಜ ಸುಧಾರಣಾವಾದ ಪರಂಪರೆಯನ್ನು ಗುರುತಿಸಲು ಕಾರಣವಾದ ಗೇಲ್ ಆಮ್‌ವೆಟ್

- Advertisement -
- Advertisement -

ಅಪ್ರತಿಮ ವಿದ್ವಾಂಸರು ಹಾಗೂ ಫುಲೆ-ಅಂಬೇಡ್ಕರ್ ಚಿಂತನೆಯನ್ನು ಆಧರಿಸಿದ ಹೋರಾಟಗಳ ಸಿದ್ಧಾಂತವನ್ನು ಕಟ್ಟಿಕೊಟ್ಟ ಗೇಲ್ ಆಮ್‌ವೆಟ್ (Gail Omvedt) ಇತ್ತೀಚೆಗೆ ನಿಧನರಾದರು. ನಾನು ಅನೇಕ ಲೇಖನಗಳಲ್ಲಿ ಎಲಿನರ್ ಝೆಲಿಯಟ್ ಮತ್ತು ಗೇಲ್ ಆಮ್‌ವೆಟ್ ಅವರನ್ನು ದಲಿತ ಅಧ್ಯಯನಗಳ ’ದೊಡ್ಡವ್ವ-ಚಿಗವ್ವ’ ಎಂದೂ ಕರೆದಿದ್ದೇನೆ. ಅಲ್ಲದೆ ಅಪೂರ್ವವಾದ ಈ ಮಹಿಳಾ ವಿದ್ವಾಂಸರ ’ಕಳ್ಳುಬಳ್ಳಿಗೆ’ ಅನುಪಮಾ ರಾವ್ ಅವರನ್ನು ಸೇರಿಸಿದ್ದೇನೆ. ಈ ಮೂವರು ವಿದ್ವಾಂಸರು ಫುಲೆ, ಅಂಬೇಡ್ಕರ್ ಹಾಗೂ ಮಹಾರಾಷ್ಟ್ರದ ದಲಿತ-ಚಳವಳಿಗಳ ಬಗ್ಗೆ ಮಾಡಿದ ಸಂಶೋಧನೆಗಳು, ವಿಶ್ಲೇಷಣೆಗಳು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಗುಣಮಟ್ಟದ್ದವು. ಅದೇ ಹೊತ್ತಿಗೆ ಬಹು ಕ್ಲಿಷ್ಟವಾಗಿಬಿಟ್ಟಿರುವ ಬರಹದ ಮಾದರಿಯನ್ನು ಬಳಸದೆ ಸರಳವಾಗಿ ಆದರೆ ಸಾಂದ್ರವಾಗಿ ಬರೆಯುವ ವಿದ್ವಾಂಸರು ಇವರು. ನಾನು ಇವರ ಬರಹಗಳಿಂದ ಕಲಿತಿರುವುದು ಅಪಾರವಾಗಿರುವುದರಿಂದ ಅವರ ವಿದ್ಯಾರ್ಥಿಯೆಂದು ಹೆಮ್ಮೆಯಿಂದ  ಅಂದುಕೊಳ್ಳುತ್ತೇನೆ.

ಗೇಲ್ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿಗಾಗಿ ಸಂಶೋಧನೆ ಮಾಡಲು ಆಯ್ದುಕೊಂಡ ವಿಷಯ ಜೋತಿಬಾ ಫುಲೆ ಅವರು ಪ್ರಮುಖವಾಗಿ ಮುನ್ನಡೆಸಿದ ಜಾತಿವ್ಯವಸ್ಥೆ ವಿರೋಧಿ ಚಳವಳಿಗಳ ಸಂದರ್ಭವನ್ನು ಕುರಿತು. ಅದಕ್ಕಾಗಿ ಅವರು ಭಾರತಕ್ಕೆ ಬಂದು ಮಹಾರಾಷ್ಟ್ರದ ಹೋರಾಟಗಾರ್ತಿಯಾದ ಇಂದುತಾಯಿ ಪಾಟಿನಕರ್ ಅವರ ಜೊತೆಗೂಡಿದರು. ಮುಂದೆ ಭರತ ಪಾಟಿನ್‌ಕರ್ ಅವರನ್ನು ಮದುವೆಯಾಗಿ ಕಾಸೆಗಾಂವ್‌ನಲ್ಲಿ ನೆಲೆಸಿದರು. ಅನೇಕ ಕಾರ್ಮಿಕ, ಮಹಿಳಾ ದಲಿತ ಹೋರಾಟಗಳಲ್ಲಿ ಭಾಗಿಯಾದರು. ಮಾರ್ಕ್ಸ್‌ವಾದ ಮತ್ತು ಫುಲೆ-ಅಂಬೇಡ್ಕರ್ ಸಿದ್ಧಾಂತಗಳನ್ನು ವಿಮರ್ಶಾತ್ಮಕವಾಗಿಯೆ ಒಗ್ಗೂಡಿಸಿಕೊಂಡು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದರು. ಇವುಗಳಲ್ಲಿ ಅನೇಕ ಕೃತಿಗಳು ಸೈದ್ಧಾಂತಿಕವಾದ ಖಚಿತತೆ ಮತ್ತು ವಿಸ್ತಾರವಾದ ಓದು ಹಾಗೂ ಸಂಶೋಧನೆಗಳಿಂದಾಗಿ ಬೆಲೆಬಾಳುವ ಕೃತಿಗಳು. ಈ ಕೃತಿಗಳ ವಸ್ತು ವೈವಿಧ್ಯಪೂರ್ಣವಾದರೂ ಒಟ್ಟು ಬರಹದಲ್ಲಿ ಒಂದು ಸೈದ್ಧಾಂತಿಕ ಏಕಸೂತ್ರತೆಯಿದೆ. ಈ ಲೇಖನದಲ್ಲಿ ಈ ಕುರಿತು ಒಂದು ಟಿಪ್ಪಣಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ವಸಾಹತುಶಾಹಿ ಸಂದರ್ಭದಲ್ಲಿ ಶೂದ್ರರಿಗೆ ಶಿಕ್ಷಣ, ಮಹಿಳೆಯರಿಗಾಗಿ ಶಾಲೆಗಳು ಹಾಗೂ ಬ್ರಾಹ್ಮಣವಿರೋಧಿ ಪ್ರತಿಭಟನೆಗಳಿಂದಾಗಿ ಜೋತಿಬಾ ಫುಲೆ ಸಾಮಾಜಿಕ ಹೋರಾಟಗಾರರಾಗಿ ಪ್ರಸಿದ್ಧರು. ಆದರೆ ಅವರ ಬರಹ ಮತ್ತು ಚಿಂತನೆಗಳ ಬಗ್ಗೆ ವಿವರವಾದ ವಿಶ್ಲೇಷಣೆ ನಡೆದದ್ದು ತೀರ ತಡವಾಗಿ. ರೋಸಾಲಿಂಡ್ ಜಿ ಹ್ಯಾನ್‌ಲನ್‌ಳಂಥ ಸಂಶೋಧಕರಿಂದಾಗಿ ಜೋತಿಬಾ ಅವರ ಕುರಿತು ಚಾರಿತ್ರಿಕ ಹಾಗೂ ಸೈದ್ಧಾಂತಿಕ ಚರ್ಚೆಗಳು ಸಾಧ್ಯವಾದವು. ಈ ಚರ್ಚೆಗಳಿಗೆ ಒಂದು ಮೊನಚು ದೊರೆತದ್ದು ಗೇಲ್ ಆಮ್‌ವೆಟ್ ಅವರ ಬರಹಗಳಿಂದ. ಅವರ ಪ್ರಕಾರ ವಸಾಹತುಶಾಹಿ ಶಿಕ್ಷಣದಿಂದಾಗಿ ಆರಂಭವಾದ ಸಮಗ್ರ ಮಂಥನವೊಂದನ್ನು ಭಾರತೀಯ ಪುನರುಜ್ಜೀವನವೆಂದು ಕರೆದು ಅದನ್ನು ಭಾರತೀಯ ರಾಷ್ಟ್ರವಾದದೊಂದಿಗೆ ಮೇಳವಿಸಿಬಿಡುವುದು ತಪ್ಪು. ಈ ಪುನರುಜ್ಜೀವನಕ್ಕೆ ಎರಡು ವೈಚಾರಿಕ ಹಾಗೂ ಸಾಂಸ್ಕೃತಿಕ ಚಹರೆಗಳಿದ್ದವು.

ಒಂದು ರಾಜಾರಾಮ್ ಮೋಹನ್‌ರಾಯ್ ಅವರಂಥ ’ಭದ್ರಲೋಕ’ ಅಂದರೆ ಶಿಕ್ಷಿತ ಮೇಲ್ವರ್ಗ, ಮೇಲ್‌ಜಾತಿಗಳಿಂದ ಆರಂಭವಾದದ್ದು. ಇದು ಸತಿಪದ್ಧತಿ, ಬಾಲ್ಯವಿವಾಹ, ವಿಧವೆಯರ ಬವಣೆ, ಇಂಗ್ಲಿಷ್ ಹಾಗೂ ಆಧುನಿಕ ಶಿಕ್ಷಣದ ಅವಶ್ಯಕತೆ – ಇಂಥವುಗಳನ್ನು ತನ್ನ ಸಮಾಜಸುಧಾರಣೆಯ ಕಾರ್ಯಸೂಚಿಗಳನ್ನಾಗಿ ಆಯ್ದುಕೊಂಡಿತು. ಅನೇಕ ಧಾರ್ಮಿಕ, ಸಾಮಾಜಿಕ ಪದ್ಧತಿಗಳನ್ನು ಉಗ್ರವಾಗಿ ಟೀಕಿಸಿದರೂ ಬಹುಸಂಖ್ಯಾತ ಅಥವಾ ಯಜಮಾನ್ಯ ಭಾರತೀಯ ಸಂಸ್ಕೃತಿ ಹಾಗೂ ಧರ್ಮಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿತ್ತು. ವೇದ, ಉಪನಿಷತ್ತುಗಳು ಜಗತ್ತಿನ ಶ್ರೇಷ್ಠ ಧಾರ್ಮಿಕ ಕೃತಿಗಳು, ಒಂದು ಕಾಲದಲ್ಲಿ ವರ್ಣಾಶ್ರಮ ಹಾಗೂ ಜಾತಿಗಳು ಭಾರತೀಯ ಸಮಾಜದ ಸಾಮರಸ್ಯವನ್ನು ಕಾಪಾಡಿದ ರಚನೆಗಳು ಇತ್ಯಾದಿ ನಂಬಿಕೆಗಳು ಈ ವರ್ಗಕ್ಕೆ ಇದ್ದವು. ಹೀಗಾಗಿ ಒಂದು ಕಡೆಗೆ ಆಧುನಿಕತೆಯ ಪರವಾಗಿದ್ದರೂ, ಮೂಲದಿಂದ ಸ್ವಲ್ಪ ಪುನರುತ್ಥಾನವಾಗಿದ್ದರೂ, ಚರಿತ್ರೆ ಹಾಗೂ ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದವು. ಹೀಗಾಗಿ ಪಶ್ಚಿಮದ ಓರಿಯಂಟಲಿಸ್ಟರ ಹಾಗೆ ಇವರೂ ಕೂಡ ಶ್ರೇಷ್ಠ ಆರ್ಯ ಜನಾಂಗದವರಲ್ಲಿ ನಂಬಿಕೆ ಹೊಂದಿದ್ದು ಮಾತ್ರವಲ್ಲ ಬ್ರಾಹ್ಮಣರು ಆರ್ಯ ಜನಾಂಗದವರು ಎಂದೇ ನಂಬಿದ್ದರು.

ಶ್ರೇಷ್ಠ ಹಿಂದೂ ಸಂಸ್ಕೃತಿಯ ಅವಸಾನಕ್ಕೆ ಮುಸ್ಲಿಮ್ ದಾಳಿಕೋರರೇ ಕಾರಣವೆಂದೂ ನಂಬಿದ್ದರು. ಸ್ವತಃ ರಾಜಾರಾಮ ಮೋಹನ್‌ರಾಯ್ ಅವರು ಪರ್ಶಿಯನ್, ಅರೇಬಿಕ್ ಭಾಷೆಗಳ ಪಂಡಿತರಾಗಿದ್ದು ಇಸ್ಲಾಮ್‌ನ ಏಕದೇವೋಪಾಸನೆಯ ಬಗ್ಗೆ ಗೌರವ ಹೊಂದಿದ್ದರು. ಆದರೆ ಮಹಾರಾಷ್ಟ್ರದ ಸುಧಾರಣಾವಾದಿಗಳಾದ ಎಂ.ಜಿ. ರಾನಡೆ, ಲೋಕಮಾನ್ಯ ತಿಲಕ ಇವರೆಲ್ಲ ಹಿಂದೂ ಸಂಸ್ಕೃತಿ, ಧರ್ಮಗಳ ಪಾರಮ್ಯವನ್ನು ನಂಬಿದ್ದರು. ಭಾರತೀಯ ಎಂದರೆ ’ಹಿಂದೂ’ ಎನ್ನುವ ಸಮೀಕರಣವನ್ನು ಈ ಚಿಂತಕರು ಅನುಷ್ಠಾನಕ್ಕೆ ತಂದರು. ಅವರ ಸೌಮ್ಯವಾದಿ ಚಿಂತನೆಗಳೇ ಮುಂದೆ ಹಿಂದುತ್ವ ಚಿಂತನೆಗೆ ಆಧಾರವಾದವು. ಗೇಲ್ ಆಮ್‌ವೆಟ್ ಆಧಾರಸಹಿತ ವಾದಿಸುವಂತೆ ಇವರು ವರ್ಣಾಶ್ರಮವನ್ನು, ಜಾತಿವ್ಯವಸ್ಥೆಯನ್ನು ಸಿದ್ಧಾಂತದಲ್ಲಿ ಮತ್ತು ನಡವಳಿಕೆಯಲ್ಲಿ ವಿರೋಧಿಸಲಿಲ್ಲ. ಅಲ್ಲದೆ ಶೂದ್ರ ಹಾಗೂ ದಲಿತ ಧರ್ಮಗಳು, ನಂಬಿಕೆಗಳು ಇವುಗಳ ಪರಿಚಯವೇ ಅವರಿಗೆ ಇರಲಿಲ್ಲ.

ಅಂಬೇಡ್ಕರ್ ಅವರ ಬಗೆಗಿನ ತಮ್ಮ ಸುಂದರವಾದ ಕೃತಿಯಲ್ಲಿ ಆಮ್‌ವೆಟ್ ಗಾಂಧಿಯವರನ್ನು ಇದೇ ಚಿಂತನಾ ಪರಂಪರೆಯ ವಾರಸುದಾರರು ಎಂದು ಗುರುತಿಸುತ್ತಾರೆ. ವರ್ಣಾಶ್ರಮ ಹಾಗೂ ಜಾತಿಪದ್ಧತಿಗಳನ್ನು ಭಾರತೀಯ ಸಮಾಜದ ಸಾಮರಸ್ಯದ ಆಧಾರಗಳು ಎಂದು ಒಪ್ಪಿದ್ದ ಗಾಂಧಿ ಅಸ್ಪೃಶ್ಯತೆಯನ್ನು ತೀವ್ರವಾಗಿ ವಿರೋಧಿಸಿದರು. ಕ್ರಮೇಣವಾಗಿ ಜಾತಿವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಬದಲಾಯಿಸಿಕೊಂಡರು. ಆದರೆ, ಆ ಬದಲಾವಣೆ ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರದ ಕಲ್ಪನೆಯಲ್ಲಿ ಬಹಳ ಭಿನ್ನವೇನೂ ಆಗಿರಲಿಲ್ಲ. ಅಲ್ಲದೆ ಬ್ರಾಹ್ಮಣ ವಿರೋಧಿ ಶೂದ್ರ ಪರಂಪರೆಗಳ ಬಗ್ಗೆ ಅವರಿಗೆ ಪರಿಚಯವೂ ಇರಲಿಲ್ಲ.

ಭಾರತೀಯ ಪುನರುಜ್ಜೀವನದ ಇನ್ನೊಂದು ಧಾರೆಯೆಂದರೆ ಜೋತಿಬಾ ಫುಲೆಯವರ ಅಬ್ರಾಹ್ಮಣ್ಯ ಚಿಂತನೆ. ಈ ಚಿಂತನಾ ಮಾರ್ಗವು ಜಾತಿಯನ್ನು ಭಾರತೀಯ ಸಮಾಜದ ಅತಿ ಪ್ರಮುಖ ಲಕ್ಷಣ ಹಾಗೂ ಸಮಸ್ಯೆಯೆಂದು ಗುರುತಿಸುತ್ತದೆ. ಫುಲೆಯವರು ಕಟ್ಟಿಕೊಂಡ ಚರಿತ್ರಾ ರಚನೆಯ ಪ್ರಕಾರ ಶೂದ್ರ ಹಾಗೂ ರೈತಾಪಿ ಸಮುದಾಯದವರಾದ ಕುಣಬಿಗಳು ಭಾರತದ ಮೂಲನಿವಾಸಿಗಳು. ಹೊರಗಿನಿಂದ ಬಂದ ಆರ್ಯ ಆಕ್ರಮಣಕಾರರು ಇವರನ್ನು ಸೋಲಿಸಿ, ಅಪಾರ ಶೋಷಣೆಗೆ ಒಳಪಡಿಸಿ ಗುಲಾಮಗಿರಿಯನ್ನು ಅಸ್ತಿತ್ವಕ್ಕೆ ತಂದರು. ಇದು ಅಮೆರಿಕದ ಅಥವಾ ಪಶ್ಚಿಮದ ಮಾದರಿಯ ಗುಲಾಮಗಿರಿಯಲ್ಲ. ಇದು ಭಟ್‌ಜಿ (ಬ್ರಾಹ್ಮಣ ಪುರೋಹಿತಶಾಹಿ) ಶೇಟ್‌ಜಿ (ರೈತಾಪಿ ಜನರನ್ನು ಶೋಷಣೆ ಮಾಡುತ್ತಿದ್ದ ವ್ಯಾಪಾರಿವರ್ಗ) ವರ್ಗಗಳು ಜಂಟಿಯಾಗಿ ಅನುಷ್ಠಾನಕ್ಕೆ ತಂದ ಗುಲಾಮಗಿರಿ. ಇದರ ವಿಶೇಷತೆಯೆಂದರೆ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳನ್ನು ಗುಲಾಮಗಿರಿಯ ಸಾಧನಗಳನ್ನಾಗಿ ಬಳಸಿಕೊಳ್ಳಲಾಯಿತು. ಮನುಸ್ಮೃತಿಯಂಥ ಕೃತಿಗಳ ಸಹಾಯದಿಂದ ವರ್ಣಾಶ್ರಮದ ಆಧಾರದ ಮೇಲೆ ಈ ಗುಲಾಮಗಿರಿಯನ್ನು ಬಲಪಡಿಸಲಾಯಿತು. ಜೋತಿಬಾ ಅವರು ಬ್ರಿಟಿಷ್ ವಸಾಹತುಶಾಹಿಯ ಪರವಾಗಿದ್ದರು ಎಂದು ಸಂಪ್ರದಾಯವಾದಿಗಳು ಹೇಳುತ್ತಾರೆ.

ಆದರೆ ಜೋತಿಬಾ ಬ್ರಿಟಿಷ್ ವಸಾಹತುಶಾಹಿಯ ಶೋಷಿತ ಶಕ್ತಿಯನ್ನು ಗುರುತಿಸಿದರು ಮತ್ತು ಅದು ಶೂದ್ರ ದಲಿತರಿಗೆ ಶಿಕ್ಷಣ, ಏಕರೂಪಿ ಕಾಯಿದೆ ಹಾಗೂ ಒಂದು ಸೀಮಿತವಾದ ಆಧುನಿಕತೆಯನ್ನು ತಂದಿದ್ದನ್ನು ಸ್ವಾಗತಿಸಿದರು. ಆದರೆ ಹೊಸ ಸಂದರ್ಭದ ಪ್ರಯೋಜನ ಪಡೆದು ಇಂಗ್ಲಿಷ್ ಶಿಕ್ಷಣ ಪಡೆದು ಅಥವಾ ಪರಂಪರಾಗತ ಅಧಿಕಾರದಿಂದ ವಸಾಹತುಶಾಹಿಯ ಬೆಂಬಲಕ್ಕೆ ನೌಕರಶಾಹಿಯಾಗಿ ಭಟ್‌ಜಿ ವರ್ಗವು ನಿಂತಿದ್ದನ್ನು ಉಗ್ರವಾಗಿ ವಿರೋಧಿಸಿದರು. ವಸಾಹತುಶಾಹಿಯು ಸ್ಥಳೀಯ ಮುಂಚೂಣಿವರ್ಗದ ಬ್ರಾಹ್ಮಣ ಹಾಗೂ ಇತರ ಮೇಲ್ಜಾತಿಗಳಿಗೆ ಅಪಾರವಾದ ಅಧಿಕಾರವನ್ನು ಕೊಟ್ಟಿದ್ದನ್ನು ಜೋತಿಬಾ ಆ ಕಾಲದಲ್ಲಿಯೇ ಕರಾರುವಾಕ್ಕಾಗಿ ಗುರುತಿಸಿದರು. ಅಲ್ಲದೆ ಆಮ್‌ವೆಟ್ ಹೇಳುವಂತೆ ವಸಾಹತುಶಾಹಿ ಸರಕಾರವು ಶಿಕ್ಷಿತ ಮಧ್ಯಮವರ್ಗದ ಅಹವಾಲುಗಳನ್ನು ಕೇಳಿಸಿಕೊಳ್ಳುತ್ತಿತ್ತು.

ಆದರೆ ಪರಂಪರೆಯ ಗುಲಾಮಗಿರಿಯನ್ನೇ ಕಿತ್ತೆಸೆದು ಶಿಕ್ಷಣ, ಭೂಒಡೆತನ, ನೌಕರಿ ಇವನ್ನೆಲ್ಲ ಕೇಳುತ್ತಿದ್ದ ಶೂದ್ರ ವರ್ಗಗಳ ಕ್ರಾಂತಿಕಾರಿ ಬೇಡಿಕೆಗಳನ್ನು ದೂರವಿಟ್ಟಿತು. ಆಗತಾನೇ ಹುಟ್ಟು ಪಡೆಯುತ್ತಿದ್ದ ರಾಷ್ಟ್ರವಾದವನ್ನು ಜೋತಿಬಾ ಖಚಿತವಾಗಿ ಮೇಲ್ವರ್ಗಗಳ ಸಿದ್ಧಾಂತವಾಗಿ ಗುರುತಿಸಿದ್ದನ್ನು ಆಮ್‌ವೆಟ್ ವಿವರಿಸುತ್ತಾರೆ. ಜೋತಿಬಾ ತಮ್ಮ ’ಅಸೂದ್’ ಕೃತಿಯಲ್ಲಿ, “ಈಗ ಈ ಭಟ್‌ಜಿಗಳು ತಮ್ಮ ಧಾರ್ಮಿಕ ಖಡ್ಗವನ್ನು ಬಚ್ಚಿಟ್ಟುಕೊಂಡು, ಜಾತಿಗಳ ಅಸಮಾನತೆಯನ್ನು ಬಚ್ಚಿಟ್ಟು ರಾಷ್ಟ್ರದ ಬಗ್ಗೆ ಮಾತನಾಡತೊಡಗಿದ್ದಾರೆ” ಎಂದು ಹೇಳಿದ್ದನ್ನು ಉದ್ಧರಿಸುತ್ತಾರೆ. ಇದೇ ರಾಷ್ಟ್ರವಾದವು ಹಿಂದೂ ರಾಷ್ಟ್ರವಾಗಿ ಪರಿವರ್ತಿತವಾದದ್ದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅರ್ಥಮಾಡಿಕೊಂಡು ಜಾತಿವ್ಯವಸ್ಥೆಯನ್ನೇ ಕೇಂದ್ರಕ್ಕೆ ತಂದರು. ಜಾತಿವಿನಾಶವಿಲ್ಲದಿದ್ದರೆ ಸ್ವತಂತ್ರ ಭಾರತ ರಾಷ್ಟ್ರದಲ್ಲಿ ಬೌದ್ಧ ಧರ್ಮದ ಕ್ರಾಂತಿಯ ವಿರುದ್ಧ ಬ್ರಾಹ್ಮಣ್ಯದ ಪ್ರತಿಕ್ರಾಂತಿಯನ್ನು ಆರಂಭಿಸಿದ ವರ್ಗಗಳೇ ಅಧಿಕಾರಕ್ಕೆ ಬರುತ್ತಿವೆಯೆಂದು ಬಾಬಾಸಾಹೇಬ್ ಸರಿಯಾಗಿ ಗುರುತಿಸಿದರು. ಅವರು ಕೂಡ ಬ್ರಿಟಿಷ್ ಪರವಾಗಿದ್ದರು ಎನ್ನುವ ಅಪಪ್ರಚಾರವನ್ನು ಬಾಬಾಸಾಹೇಬರ ವಿರುದ್ಧ ಈಗಲೂ ನಡೆಯುತ್ತಿರುವುದನ್ನು ಗಮನಿಸಬಹುದು.

ಆಮ್‌ವೆಟ್ ಗಾಂಧಿಯವರನ್ನು ಹಿಂದೂ ರಾಷ್ಟ್ರವಾದದ ಸೌಮ್ಯ ಮುಖ್ಯವೆಂದು ಗುರುತಿಸಿ ಫುಲೆ-ಅಂಬೇಡ್ಕರ್ ಅವರ ಪರ್ಯಾಯ ರಾಷ್ಟ್ರವಾದಿ ಚಿಂತನೆಯನ್ನು ಸಮರ್ಥಿಸುತ್ತಾರೆ. ಇದನ್ನು ಒಪ್ಪದಿದ್ದವರೂ ಗಂಭೀರವಾಗಿ ಓದಲೇಬೇಕಾದ ಕೃತಿಗಳನ್ನು ಗೇಲ್ ಆಮ್‌ವೆಟ್ ಬರೆದಿದ್ದಾರೆ. ಅವುಗಳ ಮೂಲಕ ಆಧುನಿಕ ಭಾರತದ ಚರಿತ್ರೆಯ ರಚನೆ ಹಾಗೂ ರಾಷ್ಟ್ರವಾದದ ಚರ್ಚೆಗಳಲ್ಲಿ ಇರುವ ನ್ಯೂನತೆಗಳನ್ನು ಸಶಕ್ತವಾಗಿ ವಿಶ್ಲೇಷಿಸಿದ್ದಾರೆ. ಚರಿತ್ರೆಯ ರಚನೆಯಲ್ಲಿ ಸಬ್‌ಆಲ್ಟರ್ನ್ ಅಧ್ಯಯನಗಳ ನಂತರವೂ ಬಹುದೊಡ್ಡ ನ್ಯೂನತೆಗಳು ಉಳಿದುಕೊಂಡಿವೆ. ವಿಶೇಷವಾಗಿ ದಲಿತ ಸಮುದಾಯಗಳ ಅನುಭವಗಳನ್ನು ಮುನ್ನೆಲೆಗೆ ತರುವುದರಲ್ಲಿ ಕಂದಕಗಳೇ ಇವೆ.

ಗೇಲ್ ಆಮ್‌ವೆಟ್ ತಮ್ಮ ಸಂಶೋಧನೆಯನ್ನು ಫುಲೆ ಅವರಿಂದ ಆರಂಭಿಸಿದ್ದರೂ ಚರಿತ್ರೆಯ ಹಿಂದಿನ ಘಟ್ಟಗಳಲ್ಲಿನ ಭಕ್ತಿ ಪರಂಪರೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದರು. 5 ವರ್ಷಗಳ ಸಂಶೋಧನೆಯ ಫಲವಾಗಿ ಅವರು ಬರೆದ ‘Seeking Begumpura’ ಶ್ರೇಷ್ಠ ಕೃತಿಯಾಗಿದೆ. ದಲಿತ ಸಂತನಾಗಿದ್ದ ರವಿದಾಸ್ ತನ್ನ ಕನಸಿನ ಆದರ್ಶದ ನಗರವನ್ನು ’ಬೇಗಮ್‌ಪುರ’ ಅಂದರೆ ’ದುಃಖವಿಲ್ಲದ ನಗರ’ ಎಂದು ಕಲ್ಪಿಸಿಕೊಂಡಿದ್ದ. ಅವನ ಹಾಗೆಯೆ ಭಕ್ತಿ, ಅನುಭಾವ ಪರಂಪರೆಯ ಅನೇಕರು ತಮ್ಮ ಆಡಳಿತದ Utopiaಗಳನ್ನು ಕಟ್ಟಿಕೊಂಡರು. ಅದು ಅವರು ಕಂಡು ಅನುಭವಿಸಿದ ಜಗತ್ತಿನ ವಿಮರ್ಶೆಯೂ ಆಗಿತ್ತು, ಅವರ ಅಪೇಕ್ಷೆಯ ಆದರ್ಶ ಜಗತ್ತೂ ಆಗಿತ್ತು. ಇದನ್ನು ಕೇಂದ್ರದಲ್ಲಿಟ್ಟುಕೊಂಡು ನಾಮ್‌ದೇವ್, ತುಕಾರಾಮ್, ಕಬೀರ್, ತಮಿಳು ಸಂತ ಪರಂಪರೆ, ಅಮ್ಯಾತಿ ದಾಸ್‌ನ ಬೌದ್ಧ ಪರಂಪರೆ, ವಚನಕಾರರು ಇವರೆಲ್ಲರನ್ನು ಸೂಕ್ಷ್ಮವಾದ ಓದು ಮತ್ತು ಚಾರಿತ್ರಿಕ ತಿಳುವಳಿಕೆಯ ಬೆಂಬಲದಿಂದ ಅವರು ಈ ಕೃತಿಯಲ್ಲಿ ಚರ್ಚಿಸುತ್ತಾರೆ. ಕೃತಿಯಲ್ಲಿ ವಸಹತುಶಾಹಿ, ಜಾತಿವ್ಯವಸ್ಥೆಯ ಬಗೆಗಿನ ಆಧುನಿಕ ಚಿಂತನೆಗಳು ಇವೆಲ್ಲವೂ ಚರ್ಚೆಗೆ ಒಳಪಡುತ್ತವೆ. ನಾನು ಓದಿದ ಅಪರೂಪದ ಕೃತಿಗಳಲ್ಲಿ ಇದು ಒಂದು. ಮಹಿಳೆಯರು ಮತ್ತು ಹಿಂಸೆಯನ್ನು ಕುರಿತ ಅವರ ಕೃತಿ, ಜಾತಿಯ ಬಗೆಗಿನ ಕೃತಿ ಹೀಗೆ ದೀರ್ಘವಾದ ಪಟ್ಟಿ ಇದೆ. ಇವೆಲ್ಲವುಗಳನ್ನು ಓದಿರಬಹುದಾದ ಯುವ ಚಿಂತಕರ ಒಂದು ಪಡೆಯೇ ಕನ್ನಡದಲ್ಲಿದೆ. ಆದರೆ ಅವರೆಲ್ಲ ಗೇಲ್ ಆಮ್‌ವೆಟ್ ಚಿಂತನೆಯನ್ನು ಕನ್ನಡದಲ್ಲಿ ಬರೆದು ವಿಸ್ತಾರವಾಗಿ ಚರ್ಚಿಸಬೇಕು. ಫುಲೆ-ಅಂಬೇಡ್ಕರ್‌ವಾದಿ-ಮಾರ್ಕ್ಸ್‌ವಾದಿ ಚಿಂತನೆಗೆ ಇದರಿಂದ ಹೊಸ ಆಯಾಮವೇ ಬರಬಹುದು. ಅವರ ಉಳಿದ ಅನೇಕ ಕೃತಿಗಳ ಬಗ್ಗೆ ಬರೆಯಬೇಕಿದೆ. ಸಾಧ್ಯವಾದರೆ…

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...