ಬ್ಯಾಗ್ ಖರೀದಿಯಲ್ಲಿ 6 ಕೋಟಿ ಅಕ್ರಮ: ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್ ಆರೋಪ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್‌ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಎಂಟು ಕೋಟಿ ಎಸ್‌ಎಸ್‌ಸಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ಲಾಸ್ಟಿಕ್ ಮುಕ್ತ ಮೈಸೂರು ನೆಪದಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಸಾ.ರಾ ಮಹೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆರೋಪದ ಜೊತೆಗೆ ದಾಖಲೆಗಳನ್ನು ಕೂಡ ಪ್ರದರ್ಶಿಸಿದ್ದಾರೆ.

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಬ್ಯಾಗ್ ಖರೀದಿ ಮಾಡಲಾಗಿದೆ. ಮಾತ್ರವಲ್ಲದೆ, ಉಪವಿಭಾಗಾಧಿಕಾರಿಯೊಬ್ಬರ ಪತಿಯೊಬ್ಬ ಬ್ಯಾಗ್ ಸರಬರಾಜು ಗುತ್ತಿಗೆದಾರರಾಗಿದ್ದು, ಅವರಿಂದ ಬ್ಯಾಗ್‌ ಖರೀದಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ: ಡಿಸಿ ರೋಹಿಣಿ ಸಿಂಧೂರಿ

ಮಾರುಕಟ್ಟೆಯಲ್ಲಿ 9 ರೂಪಾಯಿಗೆ ಸಿಗುವ ಐದು ಕೆಜಿ ಅಳತೆಯ ಒಂದು ಬ್ಯಾಗ್‌ಗೆ 52 ರೂ ಬಿಲ್ ಮಾಡಲಾಗಿದೆ. 14,71,458 ಬ್ಯಾಗ್‌ಗಳಿಗೆ 7.65 ಕೋಟಿ ರೂಪಾಯಿ ಬಿಲ್ ಮಾಡಲಾಗಿದೆ. ಆದರೆ, ಇವುಗಳ ವಾಸ್ತವ ಬೆಲೆ‌ 1,47,14,586 ರೂಪಾಯಿ ಇದೆ. ಹೀಗಾಗಿ ಬ್ಯಾಗ್‌ ಖರೀದಿಯಲ್ಲಿ ಆರು ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಬ್ಯಾಗ್‌ಗಳ ಮೇಲೆ ಕೇವಲ “ನಾನು ಪರಿಸರ ಸ್ನೇಹಿ” ಎಂಬ ಸಾಲು ಹಾಗೂ ಹಾಗೂ ಚಿಹ್ನೆ ಮುದ್ರಣ ಮಾಡಿಸಲು, ಪ್ರತಿ ಚೀಲಕ್ಕೆ 42 ರೂ. ಬಿಲ್ ಮಾಡಿದ್ದಾರೆ. ಬರೋಬ್ಬರಿ 6 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಿಎಸ್ ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತೇನೆ. ರೋಹಿಣಿ ಸಿಂಧೂರಿ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡದಿದ್ದರೆ ಮುಖ್ಯ ಕಾರ್ಯದರ್ಶಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮುಜರಾಯಿಗೆ ರೋಹಿಣಿ ಸಿಂಧೂರಿ, RDPRಗೆ ಶಿಲ್ಪಾ ನಾಗ್‍ ವರ್ಗಾವಣೆ

LEAVE A REPLY

Please enter your comment!
Please enter your name here