ಮಹಾರಾಷ್ಟ್ರದ ಬದ್ಲಾಪುರ ಶಿರಗಾಂವ್ ಪ್ರದೇಶದಲ್ಲಿ ನೋಬಲ್ ಇಂಟರ್ ಮೀಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೈಗಾರಿಕಾ ಘಟಕದಲ್ಲಿ ಬುಧವಾರ ಜೂನ್ 3 ರಂದು ಬೃಹತ್ ಪ್ರಮಾಣದ ಅಪಾಯಾಕಾರಿ ಅನಿಲ ಸೋರಿಕೆಯಾಗಿದೆ. ಅನಿಲ ಸೋರಿಕೆಯ ಪರಿಣಾಮ ಸುತ್ತ ಮುತ್ತಲಿನ ಪ್ರದೇಶದ ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆಗಳು ಮತ್ತು ಕಣ್ಣು ಉರಿಯ ಸಮಸ್ಯೆಗಳು ಕಾಣಿಸಿಕೊಂಡಿವೆ.
ನಾನು ಮತ್ತು ನನ್ನ ಸಹೋದ್ಯೋಗಿಗಳು ಪಕ್ಕದಲ್ಲಿರುವ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆವು. ಇದ್ದಕ್ಕಿದ್ದಂತೆ ಉಸಿರಾಡಲು ಕಷ್ಟವಾಯಿತು. ಆನಂತರ ನಮಗೆ ಪಕ್ಕದ ಫ್ಯಾಕ್ಟರಿಯಲ್ಲಿ ಅಪಾಯಕಾರಿ ಅನಿಲ ಸೋರಿಕೆಯಾಗಿರುವುದು ತಿಳಿಯಿತು. ನಂತರ ನಾವು ಸುರಕ್ಷತಾ ಕ್ರಮಗಳನ್ನು ಕೈಗೊಂಡೆವು ಎಂದು ಸ್ಥಳೀಯ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಅನಿಲ ಸೋರಿಕೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಪ್ರದೇಶದಿಂದ ಹೊರಗೆ ತೆರಳಿದ್ದಾರೆ. ನಂತರ ಪೊಲೀಸರು ಫ್ಯಾಕ್ಟರಿಯಿಂದ ಸೋರಿಕೆಯಾಗಿರುವ ಅನಿಲ ಅಷ್ಟು ವಿಷಕಾರಿಯಾಗಿಲ್ಲ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ಪರಿಸ್ಥಿತಿಯನ್ನು ಸದ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ.
ಅನಿಲ ಸೋರಿಕೆ ಘಟನೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ಇದುವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಇದನ್ನೂ ಓದಿ: 2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?


