Homeಅಂಕಣಗಳುಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

- Advertisement -

ಸಂಘಟಿತ ಸಂಸ್ಕೃತಿಯು ಹೇಗೆ ಜನರನ್ನು ಒಂದುಗೂಡಿಸುತ್ತದೆ; ಆದರೆ ಅದರ ವಿರುದ್ಧವಾಗಿ ಪರಿಶುದ್ಧತೆಯ ವಾದ ಹೇಗೆ ಜನಾಂಗವನ್ನು ಪ್ರತ್ಯೇಕಿಸುತ್ತದೆ ಎಂಬುದರ ಬಗ್ಗೆ ಇತ್ತೀಚೆಗೆ ಆಸ್ಕರ್ ಆಲಿ ಇಂಜಿನಿಯರ್‌ರವರ ಲೇಖನವೊಂದನ್ನು ಓದಿದೆ. ಅದರಲ್ಲಿ ಇಂಜಿನಿಯರ್‌ರವರು ಎಷ್ಟೊಂದು ಉತ್ತಮ ಉದಾಹರಣೆಗಳನ್ನು ಕೊಟ್ಟಿದ್ದಾರೆಂದರೆ, ಅವುಗಳು ಜಾಣ-ಜಾಣೆಯರನ್ನು ತಲುಪಲೇಬೇಕು ಎಂದು ಇಲ್ಲಿ ಹಲವನ್ನು ನೀಡುತ್ತಿದ್ದೇನೆ.

ಎಲ್ಲಾ ಧರ್ಮಗಳ ಪರಿಶುದ್ಧತೆಯನ್ನು ಕಾಪಾಡಬೇಕು ಎನ್ನುವವರು ಸಂಘಟಿತ ಸಂಸ್ಕೃತಿಯನ್ನು ಒಪ್ಪುವುದೇ ಇಲ್ಲ. ಅವರಿಗೆ ’ಶುದ್ಧ ಹಿಂದೂ’ ಅಥವಾ ’ಶುದ್ಧ ಇಸ್ಲಾಂ’ ಧರ್ಮ ಮಾತ್ರ ಮುಖ್ಯವಾಗಿರುತ್ತದೆ. ಆದರೆ ಇಂತಹ ’ಶುದ್ಧ’ತೆ ಜನಸಾಮಾನ್ಯರಿಂದ ದೂರವಾಗಿಯೇ ಉಳಿಯುತ್ತದೆ. ಉದಾಹರಣೆಗೆ ‘ಶುದ್ಧ ಧರ್ಮ’ದ ಪ್ರತಿಪಾದಕರಾದ ಬ್ರಾಹ್ಮಣರು ಸಂಸ್ಕೃತದಲ್ಲಿ ಮತ್ತು ಉಲೆಮಾಗಳು ಅರಬ್ಬೀ ಭಾಷೆಯಲ್ಲಿ ಬರೆಯುತ್ತಿದ್ದರು. ಜನರ ಆಡುಭಾಷೆಗೂ ಇವರ ಕೃತಿಗಳ ಭಾಷೆಗೂ ಯಾವುದೇ ಸಂಬಂಧವಿರದಿದ್ದ ಕಾರಣ ಅವು ಜನಪ್ರಿಯವಾಗಲೇ ಇಲ್ಲ. ಆದರೆ ಅದೇ ಹಿಂದೂ ಸಂತರು, ಮುಸ್ಲಿಂ ಸೂಫಿಗಳು ಜನರ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು. ಹಾಗೆ ಮಾಡಿದ್ದರಿಂದಲೇ ಅವರು ಜನಪ್ರಿಯರಾದರಲ್ಲದೇ, ಭಾರತದಲ್ಲಿ ಧರ್ಮಗಳ ನಡುವಿನ ಭೇದಭಾವಗಳನ್ನು ಸಡಿಲಗೊಳಿಸುವುದರಲ್ಲೂ ಯಶಸ್ವಿಯಾದರು.

ಹದಿನಾಲ್ಕನೇ ಶತಮಾನದಲ್ಲಿದ್ದ ಖುಸ್ರೋ ಎಂಬ ಪರ್ಶಿಯನ್ ಕವಿ, ತನ್ನ ಪ್ರಾಂತಭಾಷೆಯಲ್ಲೂ ಪದ್ಯಗಳನ್ನು ರಚಿಸಿದ್ದಕ್ಕೆ ಇವತ್ತಿಗೂ ಆತನ ಪದ್ಯಗಳು ಜನರ ನಾಲಗೆಗಳಲ್ಲಿ ಜೀವಂತವಾಗಿದೆ; ಭಾಷೆಗೂ ಧರ್ಮಕ್ಕೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ರಸ್ ಖಾನ್ ಮತ್ತು ರಹೀಂ ಎಂಬ ಅವಧ್ ಕವಿಗಳು ಕೃಷ್ಣನ ಭಕ್ತರಾಗಿದ್ದರು. ಹಸ್‌ರತ್ ಮೊಹನಿ ಎಂಬ ಇನ್ನೋರ್ವ ಕವಿಗೆ ಕೃಷ್ಣನ ಬಗ್ಗೆ ಎಂತಹ ಪ್ರೇಮ ಎಂದರೆ ಪ್ರತಿ ಕೃಷ್ಣ ಜನ್ಮಾಷ್ಟಮಿಯಂದು ತಪ್ಪದೇ ಬೃಂದಾವನಕ್ಕೆ ಭೇಟಿ ನೀಡುತ್ತಿದ್ದ.

ಇಂತಹವರು ಬೀರಿದ ಪ್ರಭಾವದಿಂದಲೇ ಶತಶತಮಾನಗಳ ಕಾಲ ಮೊಹರಂನಲ್ಲಿ ಹಿಂದೂಗಳು ಭಾಗವಹಿಸುತ್ತಿದ್ದರು; ರಾಮಲೀಲೆ ನಾಟಕಗಳಲ್ಲಿ ಮುಸ್ಲಿಂ ಯುವಕರು ರಾಮ, ಹನುಮಂತನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ಬರೋಡಾದಲ್ಲಿ ಅಬ್ದುಲ್ ರಶೀದ್ ಇಸ್ಮಾಯಿಲ್ ಎಂಬ ವೃದ್ಧರೊಬ್ಬರಿದ್ದಾರೆ. ಈತ ಜನಿಸಿದ್ದು ಇಸ್ಲಾಂ ಧರ್ಮದಲ್ಲಾದರೂ ಪ್ರವೃತ್ತಿಯಲ್ಲಿ ಈತ ಹಿಂದೂ. ಈತ ಎಂತಹ ಗಣೇಶನ ಭಕ್ತಾದಿ ಎಂದರೆ, ಬರೋಡಾ ವಿಶ್ವವಿದ್ಯಾಲಯದಲ್ಲಿರುವ ಗಣೇಶನ ಗುಡಿಗೆ ಈತನೇ ಅಧಿಕೃತ ಪೂಜಾರಿ. ಸಂಸ್ಕೃತ ಪಂಡಿತರೂ ಆದ ಇಸ್ಮಾಯಿಲ್‌ರವರು ಶ್ಲೋಕಗಳನ್ನು ಪಠಿಸುತ್ತಾರೆ; ಬೆಳಗ್ಗೆ ಮತ್ತು ಸಂಜೆ ಗಣೇಶನಿಗೆ ಪೂಜೆ ಸಲ್ಲಿಸುತ್ತಾರೆ. ’ಇಲ್ಲಿಯ ಮುಸ್ಲಿಂ ಬ್ರಾಹ್ಮಣ ನಾನು’ ಎಂದು ನಗುತ್ತಾರೆ ಎಲ್ಲರಿಗೆ ‘ಚಾಚಾ’ ಆಗಿರುವ ಇಸ್ಮಾಯಿಲ್.

ಮುಂಬೈಯಲ್ಲಿ ಗುಲಾಂ ದಸ್ತಗಿರ್ ಎಂಬುವವರು ಮುಸ್ಲಿಂ ವೇದಗಳ ಪಂಡಿತ. ಈತನ ಬಳಿ ಇರುವ ಹಲವಾರು ಪುಸ್ತಕಗಳಲ್ಲಿ ಕುರಾನಿನ ಸಂಸ್ಕೃತ ಅನುವಾದವೂ ಒಂದು. ದಸ್ತಗಿರ್‌ರವರು ಎಂತಹ ಪ್ರಚಂಡ ಹಿಂದೂ ಪಂಡಿತರೆಂದರೆ ಇವರ ಪ್ರವಚನಗಳನ್ನು ಕೇಳಲು ದೇಶದ ವಿವಿಧ ಭಾಗಗಳಿಂದ ಆಹ್ವಾನಗಳು ಬರುತ್ತಿರುತ್ತವೆ.

ದೆಹಲಿ ನಿವಾಸಿಯಾಗಿರುವ ಜ್ಯೋತಿ ಪಾಂಡೆ ಎಂಬುವವರು ಹಿಂದೂ ಧರ್ಮಕ್ಕೆ ಸೇರಿದ್ದರೂ ಅವರ ಮೇಲೆ ಇಸ್ಲಾಮಿನ ಶಿಯಾ ಪಂಕ್ತಿ ಎಂತಹ ಪ್ರಭಾವ ಬೀರಿದೆ ಎಂದರೆ ಆತ ಮಹಮದ್ ಪೈಗಂಬರ್‌ರವರ ಮೊಮ್ಮಗ ಇಮ್ಮಾಮ್ ಹುಸೇನ್‌ರ ಭಕ್ತ. ಇಮ್ಮಾಮ್ ಹುಸೇನ್ ಕುರಿತಂತೆ ಇವರು ಶುದ್ಧ ಉರ್ದುವಿನಲ್ಲಿ ಚರಮಗೀತೆಗಳನ್ನು ಹಾಡುತ್ತಾರೆ.

ಗುರು ನಾನಕ್ ಸ್ಥಾಪಿಸಿದ ಸಿಖ್ ಧರ್ಮವೂ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಅಂಶಗಳನ್ನು ಹೊಂದಿದೆ. ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾಗೂ ಭೇಟಿ ನೀಡಿದ್ದ ಗುರುನಾನಕ್ ತಮ್ಮ ಗುರುದ್ವಾರವನ್ನು ನಿರ್ಮಿಸಲು ಹೊರಟಾಗ ಅದರ ಅಡಿಗಲ್ಲನ್ನು ಹಾಕಲು ಮುಸ್ಲಿಂ ಸೂಫಿ ಮಿಯಾನ್ ಮಿರ್ ಅವರನ್ನು ಆಹ್ವಾನಿಸಿದ್ದರು.
ಅಷ್ಟೇ ಏಕೆ ದೇಶ ವಿಭಜನೆಯಾಗುವವರೆಗೂ ಹಲವಾರು ಗುರುದ್ವಾರಗಳಲ್ಲಿ ಗುರುಗ್ರಂಥ್ ಸಾಹೀಬ್ ಅನ್ನು ಹಾಡುತ್ತಿದ್ದದ್ದು ಈಗ ಪಾಕಿಸ್ತಾನದಲ್ಲಿರುವ ಪಂಜಾಬಿನ ಮುಸ್ಲಿಂ ’ರಾಗಿ’ಗಳೇ.

ಕರ್ನಾಟಕದ ಬಾಬಾಬುಡನ್‌ಗಿರಿಯಲ್ಲಿನ ಧಾರ್ಮಿಕ ಭಾವೈಕ್ಯತೆ ಎಲ್ಲರಿಗೂ ಗೊತ್ತಿದೆ. ಇದರಂತೆ ಮಹಾರಾಷ್ಟ್ರದ ಕಲ್ಯಾಣ್ ಎಂಬ ಜಾಗದಲ್ಲಿ ಹಾಜಿ ಮಾಲಂಗ್ ದರ್ಗ ಎಂಬುದೊಂದಿದೆ. ಎಷ್ಟೋ ತಲೆಮಾರುಗಳಿಂದ ಈ ದರ್ಗದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವುದು ಓರ್ವ ಬ್ರಾಹ್ಮಣ ಸಂಸಾರ.

ಹಲವಾರು ದಶಕಗಳಿಂದ ಈ ದರ್ಗಾಕ್ಕೆ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಪಾರ್ಸಿಗಳೂ ಬರುತ್ತಿದ್ದರು. ಎಲ್ಲರೂ ಹಾಜಿ ಮಾಲಂಗ್‌ರವರ ಉರ್ಸ್‌ಅನ್ನು ಆಚರಿಸುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದ ಶಿವಸೇನೆಗಳು ಈ ದರ್ಗದಲ್ಲಿರುವುದು ಹಾಜಿ ಮಾಲಂಗ್‌ರವರ ಸಮಾಧಿಯಲ್ಲ; ಬದಲಾಗಿ ಅಲ್ಲಿರುವುದು ಶ್ರೀ ಮಚ್ಚೀಂದ್ರನಾಥರ ಸಮಾಧಿ ಎಂದು ವಾದಿಸಿ ತಕರಾರು ಶುರು ಮಾಡಿದ್ದಾರೆ. ಪರಿಣಾಮವಾಗಿ ಅಲ್ಲಿ ಇಂದು ಪ್ರತಿ ಉರ್ಸ್ ದಿನದಂದು ಕೋಮು ಗಲಭೆಗಳು ಉದ್ಭವಿಸಿ ಪೊಲೀಸರು ಬಂದೋಬಸ್ತ್ ಮಾಡುವಂತಾಗಿದೆ.

ಹೋದ ವರ್ಷ ಕೋಮುದಳ್ಳುರಿಯನ್ನೇ ಕಂಡ ಗುಜರಾತ್ ರಾಜ್ಯದ ಕಛ್ ಪ್ರದೇಶದಲ್ಲಿ ಥಿಕಾರಿಯಾ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಮುಸ್ಲಿಂ ಸಂತ ಅಸ್ಲಾಂ ಪೀರ್‌ನ ದರ್ಗವಿದ್ದರೂ, ಹಳ್ಳಿಯಲ್ಲಿ ವಾಸಿಸುತ್ತಿರುವ 2200 ಜನರೆಲ್ಲಾ ಹಿಂದೂಗಳೇ. ಆದರೂ ಪ್ರತಿ ವರ್ಷ ಆಷಾಢದ ತಿಂಗಳಲ್ಲಿ ಈ ಹಿಂದೂಗಳೇ ಸೇರಿ ಆಸ್ಲಾಂ ಪೀರ್‌ನ ಉರ್ಸ್ ಅನ್ನು ಆಚರಿಸುತ್ತಾರೆ. ದರ್ಗಕ್ಕೆ ಬಟ್ಟೆಗಳನ್ನು, ಧ್ವಜಗಳನ್ನು ದಾನ ಮಾಡುತ್ತಾರೆ. ಪ್ರತಿ ಸಂಸಾರದ ಪ್ರತಿಯೊಬ್ಬರೂ ಎರಡು ರೂಪಾಯಿಗಳನ್ನು ಮತ್ತು 250 ಗ್ರಾಂ ಅಕ್ಕಿ, ಬೇಳೆಯನ್ನು ನೀಡಿ, ಸಿಹಿ ಗಂಜಿಯನ್ನು ತಯಾರಿಸಿ, ಜಾತಿ, ಧರ್ಮ, ಕುಲ ಯಾವ ಭೇದವೂ ಇಲ್ಲದೆ ಜೊತೆಯಾಗಿ ಕೂತು ಊಟ ಮಾಡುತ್ತಾರೆ.

ಮಹಾರಾಷ್ಟ್ರದ ಮರಾಠ್‌ವಾಡಾದಲ್ಲಿರುವ ಎರಡು ಹಳ್ಳಿಗಳ ಕತೆಯಂತೂ ಅದ್ಭುತವಾಗಿದೆ. ಆಸುಪಾಸಿನಲ್ಲೇ ಈ ಹಳ್ಳಿಗಳು ಇವೆ. ಮುಸ್ಲಿಮರೇ ಇರುವ ಹಳ್ಳಿಯಲ್ಲಿ ಹನುಮಂತನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಮುಸ್ಲಿಮರೇ ಚೊಕ್ಕವಾಗಿ ಇಡುತ್ತಾರಲ್ಲದೇ ಪ್ರತಿ ವರ್ಷ ಅವರೇ ಹಣ ಸಂಗ್ರಹಿಸಿ, ವಾರ್ಷಿಕ ಜಾತ್ರೆಯನ್ನು ನಡೆಸುತ್ತಾರೆ. ಪಕ್ಕದ ಹಳ್ಳಿಗಳಿಂದ ಜಾತ್ರೆಗೆ ಬರುವ ಹಿಂದೂಗಳಿಗೆ ಹಳ್ಳಿಯ ಮುಸ್ಲಿಮರೇ ಅಡುಗೆ ತಯಾರಿಸಿ ಬಡಿಸಿ ಅತಿಥಿ ಸತ್ಕಾರ ಮಾಡುತ್ತಾರೆ.

ಹಾಗೆಯೇ ಹತ್ತಿರದಲ್ಲೇ ಇರುವ ಹಿಂದೂಗಳೇ ವಾಸಿಸುತ್ತಿರುವ ಹಳ್ಳಿಯಲ್ಲಿ ದರ್ಗ ಒಂದಿದೆ. ಇದರ ಉಸ್ತುವಾರಿಯನ್ನು ಹಿಂದೂಗಳು ನೋಡಿಕೊಳ್ಳುತ್ತಾರಲ್ಲದೇ ಪ್ರತಿ ವರ್ಷ ದರ್ಗದ ಉರ್ಸ್‌ಅನ್ನು ಅವರೇ ಏರ್ಪಡಿಸುತ್ತಾರೆ.

ಇಂತಹ ಉದಾಹರಣೆಗಳು ಕರ್ನಾಟಕದಲ್ಲೂ ಹೇರಳವಾಗಿವೆ. ಇಂತಹ ಸಂಘಟಿತ, ಸೌಹಾರ್ದದ ಸಂಸ್ಕೃತಿಯ ಬದಲಾಗಿ ದುಷ್ಟ ಮನಸ್ಸುಗಳ ’ಶುದ್ಧ’ ಧರ್ಮ ಯಾರಿಗೆ ಬೇಕಿದೆ?!

(ಇದು ಗೌರಿಯವರ ಕಂಡಹಾಗೆ ಅಂಕಣದ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ಗೌರಿ ಲಂಕೇಶ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

1
"ಪ್ರಜಾಪ್ರಭುತ್ವ ವಿರೋಧಿಗಳು, ಕೋಮುವಾದಿಗಳು ಕ್ರಿಯಾಶೀಲವಾಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ" ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌ ಹೇಳಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ರಾಯಚೂರಿನ ಜಿಲ್ಲಾ...
Wordpress Social Share Plugin powered by Ultimatelysocial