Homeಮುಖಪುಟಶ್ರದ್ಧಾಂಜಲಿ; ಮರೆಯಾದ ಮೌಲ್ಯಾಧಾರಿತ ರಾಜಕಾರಣಿ ಎಚ್.ಟಿ ಕೃಷ್ಣಪ್ಪ

ಶ್ರದ್ಧಾಂಜಲಿ; ಮರೆಯಾದ ಮೌಲ್ಯಾಧಾರಿತ ರಾಜಕಾರಣಿ ಎಚ್.ಟಿ ಕೃಷ್ಣಪ್ಪ

- Advertisement -
- Advertisement -

ಕರ್ನಾಟಕದಲ್ಲಿ ನಡೆಯುತ್ತಿರುವ ಕೊಳಕು ರಾಜಕಾರಣದ ಸಂದರ್ಭದಲ್ಲಿ ಸಭ್ಯ ರಾಜಕಾರಣಿಯಾಗಿದ್ದ ಎಚ್.ಟಿ ಕೃಷ್ಣಪ್ಪನವರು ನಿರ್ಗಮಿಸಿದ್ದು ಹೆಚ್ಚು ಸುದ್ದಿಯಾಗಲಿಲ್ಲ. 27 ವರ್ಷಗಳ ಹಿಂದೆಯೇ ರಾಜಕಾರಣದಿಂದ ದೂರ ತಳ್ಳಲ್ಪಟ್ಟಿದ್ದ ಕೃಷ್ಣಪ್ಪನವರು, ಜನಮಾನಸದಿಂದ ದೂರವಾಗಿದ್ದರು. ಅವರೊಬ್ಬ ಅಪರೂಪದ ರಾಜಕಾರಣಿ. ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರಬೇಕೆಂದು ನಾಗತಿಹಳ್ಳಿ ಚಂದ್ರಶೇಖರ ತೀರ್ಮಾನಿಸಿದಾಗ, ಆ ಗ್ರಂಥಕ್ಕಿಟ್ಟ ಹೆಸರು ’ಪುಣ್ಯಕೋಟಿ’ ಎಂದು. ಈ ಬಗ್ಗೆ ಕನ್ನಡದ ವಿದ್ವಾಂಸರೊಬ್ಬರು ಆಕ್ಷೇಪ ವ್ಯಕ್ತಮಾಡಿ, ಆ ಹೆಸರು ಸೂಕ್ತವಲ್ಲ ಎಂದರು. ಆದರಿಂದ ನಮಗೇನೂ ಬೇಸರವಾಗಲಿಲ್ಲ.

ಆದರೆ, ಕಳೆದ 40 ವರ್ಷದಿಂದ ಕೃಷ್ಣಪ್ಪನವರನ್ನು ಬಲ್ಲ ನಮಗೆ ಅವರು ನಿಜಕ್ಕೂ ಪುಣ್ಯಕೋಟಿ ಎನ್ನಿಸಿತ್ತು. ಅವರು ತಮ್ಮ ರಾಜಕೀಯ ಜೀವನದಲ್ಲಿ ಎದುರಾಳಿಗಳ ಬಗ್ಗೆ ಹಗುರವಾಗಿ ಮಾತನಾಡಿದವರಲ್ಲ. ಏಕವಚನ ಬಳಸಿದವರಲ್ಲ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಶಿಫಾರಸ್ಸಿಗಾಗಿ ಬಂದವರಿಗೆ ರಕ್ಷಣೆ ಕೊಟ್ಟವರಲ್ಲ. ಫೋನು ಮಾಡಿ ಪೊಲೀಸರಿಗೆ ಶಿಫಾರಸ್ಸು ಮಾಡುವ ಅನಿವಾರ್ಯತೆ ಬಂದಾಗ “ಆತ ನಿರಪರಾಧಿಯಾಗಿದ್ದರೆ ರಕ್ಷಣೆ ಮಾಡಿ ತಪ್ಪಿತಸ್ಥನಾಗಿದ್ದರೆ ನಿಮ್ಮ ಕರ್ತವ್ಯ ಮಾಡಿ” ಎಂದುಬಿಡುತ್ತಿದ್ದರು. ಹೀಗಾಗಿ ಕ್ಷೇತ್ರದ ಜನ ಕೃಷ್ಣಪ್ಪ ಇದ್ದಾರೆ ಎಂದು ನಂಬಿಕೊಂಡು ಯಾವ ಕೆಟ್ಟ ಕೆಲಸಕ್ಕೂ ಮುಂದಾಗುತ್ತಿರಲಿಲ್ಲ.

ಒಮ್ಮೆ ಚುನಾವಣೆ ಸಮಯದಲ್ಲಿ ಎದುರು ನಿಂತ ಅಭ್ಯರ್ಥಿಯ ಪರ ಗೂಂಡಾಗಳು ಕೃಷ್ಣಪ್ಪನವರ ಮೇಲೆ ಹಲ್ಲೆಗೆ ಬಂದರು. ಯಡಿಯೂರು ಬಳಿ ಕಾರು ನಿಲ್ಲಿಸಿದ ಕೃಷ್ಣಪ್ಪನವರು ಕಾರಿನಿಂದ ಇಳಿದು ಬೈಗುಳ ಮತ್ತು ಹಲ್ಲೆಯನ್ನು ಎದುರಿಸಲು ತಯಾರಾಗಿ ನಿಂತರು. ಆಗ ಗೂಂಡಾಗಳು ಕನಲಿ ತೆಪ್ಪಗಾಗಿ ಕಾಲ್ಕಿತ್ತರು. ಆಯುಧ ಹಿಡಿದು ಬಂದವರ ಎದುರು ನಿರಾಯುಧರಾಗಿ ನಿಲ್ಲುವ ಗುಣ ಅವರಿಗೆ ಗಾಂಧೀಜಿಯಿಂದಲೇ ಬಂದಿತ್ತು. ಎಲ್ಲಾ ವರ್ಗದ ಜನಗಳನ್ನು ಸಮಾನವಾಗಿ ಗೌರವಿಸುವುದು, ಸ್ತ್ರೀ ಸಮುದಾಯಕ್ಕೆ ಪ್ರೋತ್ಸಾಹ ಕೊಡುವುದು, ಅಲ್ಪಸಂಖ್ಯಾತರಿಗೆ ಆತ್ಮವಿಶ್ವಾಸ ತುಂಬುವುದು, ಅಸ್ಪೃಶ್ಯರಿಗೆ ನಾನಿದ್ದೇನೆ ಎಂದು ಧೈರ್ಯ ಹೇಳುವುದು – ಈ ಎಲ್ಲಾ ಗಾಂಧೀ ಆದರ್ಶಗಳನ್ನು ನಾವು ಕೃಷ್ಣಪ್ಪನವರಲ್ಲಿ ನೋಡಿದ್ದೆವು.

ನಾಗಮಂಗಲದ ಮಕ್ಬುಲ್ ಅಹಮದ್ ಮಾತು ಇಲ್ಲಿ ಯಥಾವತ್ ಉಲ್ಲೇಖ:

“ನಮ್ದು ಕಿಷ್ಣಪ್ಪ ರಾಜ್‌ಕೀಯದಲ್ಲಿ ದುಡ್ಡು ಕಾಸು ಆಸ್ತಿ ಮಾಡಕ್ಕೆ ಹೋಗ್ಲಿಲ್ಲ, ನಮ್ದು ತಾಲ್ಲೂಕ್‌ಗೆ ಹೇಮಾವತಿ ನೀರು ತಂದ್ರು, ನಮಗೆ ಮಕ್ಕಳತರ ನೋಡಿದ್ರು, ತುಂಬ ಸಾಧು ಮನ್ಸ, ಕೆಟ್ಟದ್ದು ಮಾಡಿ ಅಂತ ಹೇಳಿದ್ರೆ ಸೈಡ್‌ಗೆ ಹೋಗಿಬಿಡ್ತಾರೆ, ಇಲ್ಲ ತಪ್ಪಿಸಿಕೊಂಡುಬಿಡ್ತಾರೆ. ಅವುರು ದಳದಲ್ಲಿದ್ರು ಕಾಂಗ್ರೆಸ್ ಕೆಲಸ ಮಾಡಿಕೊಡ್ತಿದ್ರು ಕಾಂಗ್ರೆಸ್ಸಲಿದ್ರೂ ದಳದವುರುದು ಕೆಲ್ಸ ಮಾಡಿಕೊಡ್ತಿದ್ರು. ಪಾರ್ಟಿನ ಸೈಡ್‌ಗೆ ಬಿಸಾಕಿ ಎಲ್ಲ ಜನಗಳ್ದು ಕೆಲ್ಸ ಮಾಡ್ತಿದ್ರು. ಅಂತವುರು ಈಗ ಇದ್ದಾರ ತೋರ್ಸಿ. ಅವರ್ದು ಮನೆ ವಳಗಡೆ ಹೋಗಿ ಊಟ ಹಾಕ್ಕೊಂಡು ತಿಂತಿದ್ದೊ. ನಮ್ದು ಒಬ್ಬ ರಾಜಕಾರಣಿ, ಅವರ್ದು ಮನೆ ವಳಗಡೆ ಹೋಗಿ ಸಖತ್ತಾಗಿ ನಾನ್‌ವೆಜ್ ತಿಂದು ಹೋಗಿದ್ದ. ಕೃಷ್ಣಪ್ಪ ಹೋಗಿ ನೋಡಿದ್ರೆ ಪೋರ್ಕ್ ಮಟನ್ನು ಒಂದು ಪೀಸು ಇಲ್ದಂಗೆ ಖಾಲಿ ಮಾಡಿದ್ದ. ಪಾಪ ಕೃಷ್ಣಪ್ಪ ಯಾರ್ಗು ಹೇಳ್ಳಿಲ್ಲ. ರಾಜಕೀಯದಲ್ಲಿ ನಾಯಕ ಅದೋನು ಫಾಲೊಯಾರ್‌ಗೆ ಮಕ್ಕಳತರ ನೋಡಬೇಕು. ಅದು ಬಿಟ್ಟು, ತಂದು ತಲೆ ಮಾತ್ರ ಉಳಿಸ್‌ಕಳೊ ರಾಜಕಾರಣ ಮಾಡಿದ್ರೆ ಗ್ಯಾರೇಜ್‌ಗೆ ಹೋಗ್ತನೆ ಅಷ್ಟೆ. ಕೃಷ್ಣಪ್ಪರಿಗೆ ವಿರೋಧ ಮಾಡೋರೆ ಇಲ್ಲ. ಅಕಸ್ಮಾತ್ ಇದ್ರೆ ಅವುದ್ರು ತಲೆ ಸರಿಯಿಲ್ಲ ಸಾರ್. ಕೃಷ್ಣಪ್ಪನವರ ವ್ಯಕ್ತಿತ್ವದ ಬಗ್ಗೆ ಮುಗ್ಧ ಮಕ್ಬುಲ್ ವ್ಯಾಖ್ಯಾನ ಮೀರಿ ಇನ್ನೇನು ದಾಖಲಿಸಲಾಗುತ್ತಿಲ್ಲ!”

ಅವರ ಅವಧಿ ಒಂದು ಸಂಭ್ರಮದ ಯುಗ. ಆಗ ಊರುಗಳು, ಹೊಲ ಮಾಳಗಳು, ಸ್ಕೂಲು ಮೈದಾನಗಳು ಮತ್ತು ಜನಗಳೆಲ್ಲಾ ಸುಂದರವಾಗಿ ಕಾಣುತ್ತಿದ್ದರು. ಹಳ್ಳಿಗಳಲ್ಲಿ ನಾಟಕಗಳು ನಡೆಯುತ್ತಿದ್ದವು. ಬೆಳಕು ಹರಿಯುವುದರಲ್ಲಿ ನಾಲ್ಕೈದು ನಾಟಕಗಳಲ್ಲಿ ಭಾಗವಹಿಸಿರುತ್ತಿದ್ದ ಕೃಷ್ಣಪ್ಪನವರು, ಕಂದ ಪದ್ಯ, ಸೀಸ ಪದ್ಯಗಳನ್ನು ಹೇಳಿ, ಒಂದು ಇಡೀ ಹಗಲು ನಿದ್ರಿಸುತ್ತಿದ್ದರು. ಆಂಜನೇಯ ಹಾಡುವ ಪಂಚರಾಗದ ಹಾಡು “ಇಂತಿವರ ನುಡಿಗಳನು ದೂರದಲ್ಲಿ ಕೇಳೀ” ತುಂಬ ಹೆಸರು ಮಾಡಿತ್ತು. ಅಂದು ನಡೆಯುತ್ತಿದ್ದ ಶಾಸಕರ ದಿನಾಚರಣೆಗೆ ಬೇರ್ ಬಾಡಿ ಮೇಕಪ್ಪಿನಲ್ಲಿ ಆಂಜನೇಯನಾಗಿ ಬಂದ ಕೃಷ್ಣಪ್ಪನವರನ್ನು ನೋಡಿದ ಶಾಸಕರು ದಂಗು ಬಡಿದುಹೋಗಿದ್ದರು.

ಎಂ.ಪಿ ಪ್ರಕಾಶರಂತೂ ಅವರ ಅಭಿಮಾನಿಯಾಗಿಹೋದರು. ಕಲೆ, ಸಾಹಿತ್ಯ, ಸಂಗೀತ ಮತ್ತು ಸಿನಿಮಾ, ರಾಜಕಾರಣ ಜೊತೆಯಾಗಿ ಸಾಗುತ್ತಿದ್ದ ಕಾಲ ಅದು. ಅರಸುಯುಗದ ಸಮಯ. ದಿಢೀರನೆ ತುರ್ತುಪರಿಸ್ಥಿತಿ ಅಪ್ಪಳಿಸಿತು. ಸಂಸ್ಥಾ ಕಾಂಗ್ರೆಸ್ಸಿನ ಲೀಡರುಗಳು ಜೈಲಿಗೆ ಹೋಗುವ ಮುನ್ನ ಕೃಷ್ಣಪ್ಪನವರನ್ನು ಅರಸು ಅವರ ಎದುರು ಲೀಡರನ್ನಾಗಿ ಮಾಡಿದ್ದರು. ಆದರೆ, ಜೈಲಿಂದ ಬಂದು ನಾವು ಆಕಡೆ ಇಂದಿರಾ ಕಾಂಗ್ರೆಸ್ ಸೇರೋಣ ಎಂದೂ ಹೇಳಿಹೋದರು. ಇತ್ತ ಕೃಷ್ಣಪ್ಪನವರನ್ನು ಅರಸು ಕರೆದು ನಮ್ಮ ಕಡೆ ಬಂದುಬಿಡಿ ಎಂಬ ಆಫರ್ ಕೊಟ್ಟಾಗ “ನನ್ನ ತಾಲೂಕಿಗೆ ಹೇಮಾವತಿ ನೀರು ಕೊಡ್ತೀರ” ಅಂದ್ರು ಕೃಷ್ಣಪ್ಪ. ಅರಸು ಕೂಡಲೇ ಇಂಜಿನಿಯರ್ ಕರೆದು ನಾಗಮಂಗಲಕ್ಕೆ ಹೇಮಾವತಿ ಹರಿಸಿ ಎಂಬ ಆಜ್ಞೆಯಿತ್ತರು. ಕಡೆಗಳಿಗೆಯಲ್ಲಿ ಮಂತ್ರಿ ಮಾಡಿದರು.

ನಂತರ ನಡೆದ ಚುನಾವಣೆಯಲ್ಲಿ ಕೃಷ್ಣಪ್ಪ ಮಾತ್ರ ಗೆದ್ದದ್ದು. ಅಂದರೆ, ವರುಣ ನೀರಿನ ಚಳವಳಿ ಪ್ರಯುಕ್ತ ಇಡೀ ಮಂಡ್ಯ ಜಿಲ್ಲೆಯು ಜನತಾ ಪಕ್ಷದ ಪಾಲಾಯ್ತು. ಕೃಷ್ಣಪ್ಪನವರಿಗೆ ಮೂರು ಎಕ್ಸ್ಟ್ರಾ ಚುನಾವಣೆಗಳು ಎದುರಾಗಿವೆ – ಆ ಪೈಕಿ ಒಂದು ಮಾದಪ್ಪಗೌಡರ ಸಾವಿನ ನಂತರ ಚುನಾವಣೆ ಎದುರಿಸಿದ್ದರು. ಚಿಗರಿಗೌಡರ ಸಾವಿನ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಹೋಗುತ್ತಿದ್ದಾಗ ಹೆಗಡೆಯವರು ಇಂದಿರಾಗಾಂಧಿ ಸಾವಿನ ಪ್ರಯುಕ್ತ ವಿಧಾನಸಭೆ ವಿಸರ್ಜಿಸಿ ಬಿಟ್ಟರು. ನಂತರದ ಚುನಾವಣೆಯನ್ನು ಖಾಲಿ ಕೈಯ್ಯಲ್ಲೇ ಎದುರಿಸಿ ಗೆದ್ದರು. ಆಗ ಅವರನ್ನು ಸಮರ್ಥ ನಾಯಕನೆಂದು ಗುರುತಿಸಿದ ಹೆಗಡೆಯವರು ಆರೋಗ್ಯ, ಅಬಕಾರಿ ಹೀಗೆ ಎರಡು ಮೂರು ಬೃಹತ್ ಖಾತೆಗಳನ್ನು ಕೊಟ್ಟರು.

ಅಬಕಾರಿ ಖಾತೆಯ ವಾರಸುದಾರರಾದ ಉದ್ಯಮಿಯೊಬ್ಬರು ಬಂದು ’ಈ ಹಿಂದಿನ ಸಚಿವರಿಗೆ ಮನೆ ಕೊಟ್ಟಿದ್ದೇವೆ, ನಿಮಗೂ ಕೊಡುತ್ತೇವೆ’ ಎಂದಾಗ, ಕೃಷ್ಣಪ್ಪನವರು ’ನೋಡಿ ಹೆಗಡೆಯವರು ನನ್ನ ಮೇಲೆ ತುಂಬಾ ವಿಶ್ವಾಸವಿಟ್ಟು ಬೃಹತ್ ಖಾತೆಗಳನ್ನು ಕೊಟ್ಟಿದ್ದಾರೆ. ಈಗಾಗಲೇ ತೊಂದರೆಯಲ್ಲಿರುವ ಅವರಿಗೆ ನನ್ನಿಂದ ದ್ರೋಹವಾಗಬಾರದು, ತಾವು ದಯಮಾಡಿ ನನ್ನಿಂದ ಅಂತಹ ಕೆಲಸ ಮಾಡಿಸಬೇಡಿ’ ಎಂದರು. ಅಬಕಾರಿ ಕುಳಗಳು ತಣ್ಣಗೆ ನಿರ್ಗಮಿಸಿದರು. ಈ ಹೊತ್ತಿಗಾಗಲೇ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಮನಸ್ತಾಪಗಳು ಮುಸುಕಿನೊಳಗೆ ಗುಸುಗುಡುತ್ತಿದ್ದವು. ತನ್ನ ವಿರುದ್ಧ ಮತ್ತೊಬ್ಬ ನಾಯಕನನ್ನು ಹೆಗಡೆ ಹುಟ್ಟುಹಾಕುತ್ತಿದ್ದಾರೆಂದು ಭಾವಿಸಿ, ಒಂದು ದಿನ ನಿಮ್ಮ ಸಂಪುಟದಲ್ಲಿ ನಾನಿರಬೇಕು ಇಲ್ಲ ಆ ಹೆಚ್.ಟಿ ಕೃಷ್ಣಪ್ಪನವರಿರಬೇಕು, ನೀವೇ ತೀರ್ಮಾನಿಸಿ ಎಂದು ಹಠಹಿಡಿದು ಕುಳಿತುಬಿಟ್ಟರು. ಸಂಜೆಯೊಳಗೆ ಕೃಷ್ಣಪ್ಪನವರು ತಮ್ಮ ಖಾತೆಗಳನ್ನು ಬಿಟ್ಟು ನಾಗಮಂಗಲಕ್ಕೆ ಬಂದರು. ಮುಂದೆ ಅವರು ಜನತಾ ಪಕ್ಷದಿಂದ ಅಭ್ಯರ್ಥಿಯಾದರೂ ಸ್ವಪಕ್ಷೀಯರೇ ಅವರನ್ನ ಸೋಲಿಸುವ ತಂತ್ರ ಹೆಣೆದಿದ್ದರು. ಅವರೆಂದೂ ತಮಗಾದ ಅನ್ಯಾಯವನ್ನು ಕುರಿತು ಕೊರಗಿದವರಲ್ಲ.

ಅವರ ಅವಧಿಯಲ್ಲಿ ನಾಗಮಂಗಲಕ್ಕೆ ಬಂದವರು ತರುಣ ವೈದ್ಯ ಡಾ. ಬೆಸಗರಹಳ್ಳಿ ರಾಮಣ್ಣ. ಹಳ್ಳಿಗಾಡಿನ ಪ್ರೈಮರಿ ಹೆಲ್ತ್ ಸೆಂಟರ್‌ನಲ್ಲಿ ಒಂದು ವರ್ಷ ಇರಬಹುದೆಂದು ಭಾವಿಸಿದ್ದ ಕೃಷ್ಣಪ್ಪನವರ ಊಹೆ ಸುಳ್ಳಾಗುವಂತೆ ರಾಮಣ್ಣ ಏಳು ವರ್ಷ ಇದ್ದರು. ಏಕೆಂದರೆ ರೋಗಿಗಳೇ ಇಲ್ಲದ ಆ ಕಾಲದಲ್ಲಿ ರಾಮಣ್ಣನವರಿಗೆ ಓದಲು ಮತ್ತು ಬರೆಯಲು ನಾಗಮಂಗಲ ಕ್ಷೇತ್ರ ಸೂಕ್ತವಾಗಿ ಕಂಡಿತು. ಶಾಸಕರೇ ಗೆಳೆಯರಂತಿದ್ದರು. ಈ ಸಮಯದಲ್ಲಿ ಕೃಷ್ಣಪ್ಪನವರನ್ನು ಭೇಟಿ ಮಾಡಲು ಬಹುದೊಡ್ಡ ಜನಪದ ವಿದ್ವಾಂಸರು ಬರುತ್ತಿದ್ದರು. ಹೆರಗನಹಳ್ಳಿಯವರಾದ ಎಚ್ ಎಲ್ ನಾಗೇಗೌಡರು, ಜೀರಳ್ಳಿಯ ಜೀಶಂಪ, ಹ.ಕ ರಾಜೇಗೌಡ ಇಂತಹ ದಿಗ್ಗಜರ ಕಾರಣವಾಗಿ ನಾಗಮಂಗಲದಲ್ಲಿ 3ನೇ ಜಾನಪದ ಸಮ್ಮೇಳನ ನಡೆದದ್ದು ಒಂದು ದಾಖಲೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದ ಕೃಷ್ಣಪ್ಪನವರು ಸೂಕ್ತ ಪದ ಸಿಗದಿದ್ದರೆ ಮಾತನ್ನೆ ಮುಂದುವರೆಸುತ್ತಿರಲಿಲ್ಲ. ಅವರು ಸದನದಲ್ಲಿ ಬಳಸುತ್ತಿದ್ದುದು ಪ್ರಬುದ್ಧವಾದ ಭಾಷೆಯಾಗಿತ್ತು. ನಮ್ಮಂಥವರೊಂದಿಗೆ ಮಾತನಾಡುವಾಗ ಪ್ರಾದೇಶಿಕ ಗಾದೆಯನ್ನು ಧಾರಾಳವಾಗಿ ಬಳಸುತ್ತಿದ್ದರು. ಅವರು ತಮ್ಮ ಸಾಧನೆಗಳನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. ಚುನಾವಣೆ ಸಮಯದಲ್ಲಿಯೂ ತಮ್ಮ ಸಾಧನೆಗಳ ಪಟ್ಟಿ ಬಿಡುಗಡೆ ಮಾಡುತ್ತಿರಲಿಲ್ಲ. ಅವರ ದೈಹಿಕ ಶಕ್ತಿ ನಮ್ಮನ್ನು ದಂಗುಬಡಿಸಿತ್ತು. ಸುಮಾರು ಅರವತ್ತು ವರ್ಷದಿಂದ ಧೂಮಪಾನ ಮತ್ತು ಮದ್ಯದೊಂದಿಗೆ ಜೀವಿಸಿದ್ದ ಅವರಿಗೆ ಬಿ.ಪಿ, ಶುಗರ್ ಇಂತಹ ಯಾವುದೇ ಕಾಯಿಲೆ ಇರಲಿಲ್ಲ. ಕಾರ್ಡ್ಸ್ ಮತ್ತು ಮದ್ಯಸೇವನೆ ಚಟವಿದ್ದ ಎಲ್ಲ ರಾಜಕಾರಣಿಗಳಿಗೂ ಅವರಿಗೆ ಆತ್ಮೀಯರಾಗಿದ್ದರು. ಅಂಬರೀಶ್ ಜೊತೆ ಹೋಗಿ ರೇಸ್ ಆಡಿ ಕಾಸು ಕಳೆದುಕೊಂಡು ಬಂದಿದ್ದರು. ಇದನ್ನು ಅಂಬರೀಶ್ ಬಲವಂತಕ್ಕೆ ಆಡಿದೆ ಎಂದು ಹೇಳುತ್ತಿದ್ದರು. ಗೌರಿ ಲಂಕೇಶ್ ಜೊತೆ ಪಾರ್ಟಿ ಮಾಡಿದ ದಿನ ಆಕೆ ಕೃಷ್ಣಪ್ಪನವರನ್ನ ತಮ್ಮ ಕಾರಿನಲ್ಲಿ ಅವರ ಮನೆಗೆ ಸಾಗಿಸಿದಾಗ “ಚಂದ್ರೇಗೌಡ್ರೆ ಗೌರಿ ಅವರಪ್ಪನನ್ನು ಮೀರಿಸಿದ ಶಕ್ತಿವಂತೆ” ಎಂದು ಪ್ರಶಂಸಿಸಿದ್ದರು.

ನಾಗಮಂಗಲದಲ್ಲಿ ನಿಮಗೆಲ್ಲಾ ಒಂದು ಊಟ ಕೊಡಿಸುತ್ತೇನೆ ದಿನಾಂಕ ನಿಗದಿ ಮಾಡಿ ಎಂದು ಹೇಳುತ್ತಿದ್ದರು. ಅವರು ತೀರಿಕೊಳ್ಳುವ ಹಿಂದಿನ ದಿನ ಫೋನ್ ಮಾಡಿ “ನಾನಿನ್ನು ಬಹಳ ದಿನ ಇರಲ್ಲ, ತಾಲೂಕಿಗೆ ಏನೇನು ಬೇಕು ಅನ್ನೋದನ್ನ ಚರ್ಚೆ ಮಾಡಿ ಒಂದು ಪರಿವಿಡಿ ತಯಾರಿಸೋಣ ಬನ್ನಿ” ಎಂದದ್ದಲ್ಲದೆ ನನ್ನ ಜೊತೆಯಿದ್ದ ಶ್ರೀನಿವಾಸ್ ಕರಿಯಪ್ಪನವರನ್ನ ಕೂಡ ಬರುವಂತೆ ತುಂಬಾ ಒತ್ತಾಯ ಮಾಡಿದ್ದರು. ಒಂದು ದಿನ ಹೋಗಿ ಬರಲೆಂದು ನಾನು ತಯಾರಾಗುವಷ್ಟರಲ್ಲಿ, ಮರುದಿನವೇ (18.03.21) ಅವರು ಹೊರಟುಹೋದ ಸುದ್ದಿ ಬಂತು. ಯಾತನೆಯಿಲ್ಲದ ಯೋಚನೆಯಿಲ್ಲದ ಸಾವನ್ನ ಬಯಸಿದ್ದೀನಿ ಎನ್ನುತ್ತಿದ್ದರು. ಹಾಗೆಯೇ ಮರೆಯಾದರು. ಕೆಲವು ಮೌಲ್ಯಗಳು ಅವರ ಜೊತೆಗೇ ಮಣ್ಣಾದದ್ದು ಒಂದು ದುರಂತ.


ಇದನ್ನೂ ಓದಿ: ಬಂಗಾಳ: ‘ಬಿಜೆಪಿ ಸೆಂಚುರಿ ಹೊಡೆದಿದೆ; ಮಮತಾ ಕ್ಲೀನ್ ಬೌಲ್ಡ್‌’ – ನರೇಂದ್ರ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...