ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯವು ಪತ್ರಕರ್ತೆ, ದಿಟ್ಟ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಉಗ್ರ ಬಲಪಂಥೀಯ ಸಂಘಟನೆಯ 17 ಜನರ ಮೇಲೆ ಕೊಲೆ, ಸಂಘಟಿತ ಅಪರಾಧ ಕೃತ್ಯಗಳ ಅಡಿ ದೋಷಾರೋಪ ಮಾಡಿದೆ.
ಕ್ರಿಮಿನಲ್ ಪಿತೂರಿ ಮತ್ತು ಕ್ರಿಮಿನಲ್ ಉದ್ದೇಶದಿಂದ ನಡೆಸಿದ ಅಪರಾಧಗಳಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಸಂಘಟಿತ ಅಪರಾಧ ಕಾಯಿದೆ 2000 ಮತ್ತು ಶಸ್ತ್ರಾಸ್ತ್ರ ಕಾಯಿದೆ, 1959ರ ಅಡಿಯಲ್ಲಿ ಆರೋಪಗಳನ್ನು ದಾಖಲು ಮಾಡಲಾಗಿದೆ. ನ್ಯಾಯಾಲಯವು ಡಿಸೆಂಬರ್ 8ರಂದು ವಿಚಾರಣೆಯನ್ನು ಪ್ರಾರಂಭಿಸಲು ದಿನಾಂಕವನ್ನು ನಿಗದಿಪಡಿಸಲಿದೆ.
ವಿವಿಧ ಬಲಪಂಥೀಯ ಹಿಂದುತ್ವವಾದಿ ಸಂಘಟನೆಗಳಿಂದ ಬಂದ 17 ಆರೋಪಿಗಳನ್ನು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ತಂಡ ಬಂಧಿಸಿದೆ. ಲಂಕೇಶ್ ಅವರನ್ನು “ಹಿಂದೂ ವಿರೋಧಿ” ಎಂದು ಟಾರ್ಗೆಟ್ ಮಾಡಲಾಗಿತ್ತು.
ಬೆಂಗಳೂರು ಸೆಂಟ್ರಲ್ ಜೈಲು, ಮುಂಬೈನ ಆರ್ಥರ್ ರೋಡ್ ಜೈಲು ಮತ್ತು ಪುಣೆಯ ಯರವಾಡ ಜೈಲಿನಲ್ಲಿರುವ 17 ಜನರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳು ತಪ್ಪೊಪ್ಪಿಕೊಂಡಿಲ್ಲ.
ಸುಗಮ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, “ನಿರ್ದಿಷ್ಟ ಆದೇಶಗಳಿಲ್ಲದೆ ಯಾವುದೇ ಆರೋಪಿಗಳನ್ನು ಬೇರೆ ಯಾವುದೇ ಜೈಲಿಗೆ ವರ್ಗಾಯಿಸಬೇಡಿ” ಎಂದು ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಎಸ್‌ಐಟಿ ಸುಮಾರು ಮೂರು ವರ್ಷಗಳ ಹಿಂದೆ ಆರೋಪಪಟ್ಟಿ ಸಲ್ಲಿಸಿದ್ದು, ಆರೋಪಿಗಳು ಸಲ್ಲಿಸಿದ ವಿವಿಧ ಅರ್ಜಿಗಳು, ಅವರು ವಿವಿಧ ಜೈಲುಗಳಲ್ಲಿರುವುದು ಮತ್ತು ಕೋವಿಡ್ ಪರಿಸ್ಥಿತಿಯಿಂದಾಗಿ ವಿಚಾರಣೆಯ ಪ್ರಾರಂಭವು ವಿಳಂಬವಾಯಿತು. ಆರೋಪಗಳನ್ನು ರೂಪಿಸುವ ಹಂತದಲ್ಲಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. 17 ಆರೋಪಿಗಳು ಅಂತಿಮವಾಗಿ ಬೆಂಗಳೂರು ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಗಿತ್ತು.
ಧಾರವಾಡದಲ್ಲಿ ಕನ್ನಡ ವಿದ್ವಾಂಸ ಎಂ.ಎಂ.ಕಲಬುರ್ಗಿ, ಕೊಲ್ಲಾಪುರದಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ ಹತ್ಯೆಗೆ ಬಳಸಿದ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲ್, ಗೌರಿ ಲಂಕೇಶ ಅವರ ಹತ್ಯೆಗೂ ಬಳಕೆಯಾಗಿದೆ ಎಂದು ಎಸ್‌ಐಟಿ ಪತ್ತೆ ಹಚ್ಚಿತ್ತು.
ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲು ಬಳಸಿದ ಬಂದೂಕಿಗೂ ಪನ್ಸಾರೆ ಗುಂಡಿನ ದಾಳಿಯಲ್ಲಿ ಬಳಸಿದ ಎರಡನೇ ಬಂದೂಕಿಗೂ ಹೊಂದಾಣಿಕೆಯಾಗಿರುವುದು ಕಂಡುಬಂದಿದೆ.
ಆರೋಪಿಗಳು: ಅಮೋಲ್ ಕಾಳೆ (37), ಪರಶುರಾಮ್ ವಾಘ್ಮೋರೆ (27), ಗಣೇಶ್ ಮಿಸ್ಕಿನ್ (27), ಅಮಿತ್ ಬಾಡ್ (27), ಅಮಿತ್ ದೆಗ್ವೇಕರ್ (38), ಭರತ್ ಕುರಣೆ (37), ಸುರೇಶ್ ಹೆಚ್ ಎಲ್ (36), ರಾಜೇಶ್ ಬಂಗೇರ (50 ವರ್ಷ), ಸುಧನ್ವ ಗೊಂದಲೇಕರ್ (39), ಶರದ್ ಕಲಾಸ್ಕರ್ (25), ಮೋಹನ್ ನಾಯಕ್ (50), ವಾಸುದೇವ್ ಸೂರ್ಯವಂಶಿ (29), ಸುಜಿತ್ ಕುಮಾರ್ (37), ಮನೋಹರ ಎಡವೆ (29), ಶ್ರೀಕಾಂತ್ ಪಂಗರ್ಕರ್ (40), ಕೆ ಟಿ ನವೀನ್ ಕುಮಾರ್ (37) ಮತ್ತು ರುಶಿಕೇಶ್ ದಿಯೋದಿಕರ್ (44).
ಇದನ್ನೂ ಓದಿರಿ: ಗೌರಿ ಲಂಕೇಶ್ ಹತ್ಯೆ ಆರೋಪಿ ವಿರುದ್ಧದ KCOCA ರದ್ದುಗೊಳಿಸುವ ಕುರಿತ ಆದೇಶ ಕಾಯ್ದಿರಿಸಿದ ಸುಪ್ರೀಂ


