ಗಾಝಾ ಕದನ ವಿರಾಮ ಒಪ್ಪಂದಂತೆ ಹಮಾಸ್ ಗುಂಪು ನಾಲ್ವರು ಇಸ್ರೇಲಿ ಮಹಿಳಾ ಸೈನಿಕರನ್ನು ಶನಿವಾರ (ಜ.25) ರೆಡ್‌ಕ್ರಾಸ್ ಸಂಸ್ಥೆಯ ಮೂಲಕ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 200 ಜನರು ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.
ಕರೀನಾ ಅರಿಯೆವ್, ಡೇನಿಯೆಲ್ಲಾ ಗಿಲ್ಬೋವಾ, ನಾಮಾ ಲೆವಿ ಮತ್ತು ಲಿರಿ ಅಲ್ಬಾಗ್ ಎಂಬ ನಾಲ್ವರು ಇಸ್ರೇಲಿ ಮಹಿಳಾ ಸೈನಿಕರು ಬಿಡುಗಡೆಯಾಗಿದ್ದಾರೆ. ಇವರು ತಮ್ಮ ಬ್ಯಾಗ್‌ಗಳನ್ನು ಎತ್ತಿಕೊಂಡು ಗಾಝಾ ನಗರದ ಪ್ಯಾಲೆಸ್ತೀನ್ ಚೌಕದಲ್ಲಿ ಜನಸಮೂಹದ ಕಡೆಗೆ ಕೈ ಬೀಸುತ್ತಾ, ನಗುತ್ತಾ ತಮ್ಮ ದೇಶಕ್ಕೆ ಮರಳಿದರು ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜನವರಿ 19ರಂದು ಗಾಝಾ ಕದನ ವಿರಾಮ ಜಾರಿಯಾದ ಬಳಿಕ ಹಮಾಸ್ ಎರಡನೇ ಬಾರಿಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಮೂವರು ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ 90 ಜನ ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆಗೊಳಿಸಿದೆ.
ನಾಲ್ವರು ಸೈನಿಕರ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ 200 ಜನ ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಬೇಕಿದೆ. ಈ ಪೈಕಿ ಇಸ್ರೇಲ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವರೂ ಇದ್ದಾರೆ ಎಂದು ವರದಿಗಳು ಹೇಳಿವೆ.
ಕದನ ವಿರಾಮ ಒಪ್ಪಂದದ ಪ್ರಕಾರ, 42 ದಿನಗಳ ಮೊದಲ ಹಂತದಲ್ಲಿ, 33 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕು. ಇದಕ್ಕೆ ಬದಲಾಗಿ 1,900 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಬಿಡುಗಡೆಗೊಳಿಸಬೇಕು.
ಆದರೆ, ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ. ಒಪ್ಪಂದ ಜಾರಿಗೆ ಬಂದ ಎರಡನೇ ದಿನವೇ ಒಂದು ಪ್ಯಾಲೆಸ್ತೀನಿಯನ್ ಮಗುವನ್ನು ಕೊಂದಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಾರಕ ದಾಳಿಗಳನ್ನು ನಡೆಸಿದೆ ಮತ್ತು ಹಲವಾರು ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ, ಬಂಧಿಸಿದೆ.
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸಿ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಯುದ್ಧೋಚಿತ ಕಾರ್ಯವಿಧಾನಗಳನ್ನು ಬಳಸುತ್ತಿರುವ ಬಗ್ಗೆ ವಿಶ್ವಸಂಸ್ಥೆ ಶುಕ್ರವಾರ (ಜ.24) ಕಳವಳ ವ್ಯಕ್ತಪಡಿಸಿದೆ.
ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಆಕ್ರಮಿತ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 12 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ವಿಶ್ವಸಂಸ್ಥೆಯ ತಜ್ಞರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ‘ಜನಾಂಗೀಯ ಹತ್ಯೆ’ ಎಂದು ಗುರುತಿಸಿರುವ ಗಾಝಾ ಮೇಲಿನ ಇಸ್ರೇಲ್ ಆಕ್ರಮಣದಲ್ಲಿ 18,000 ಕ್ಕೂ ಹೆಚ್ಚು ಮಕ್ಕಳು, 200ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಸೇರಿದಂತೆ 47,000 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಅಮೆರಿಕದಿಂದ ಅಕ್ರಮ ವಲಸಿಗ ಭಾರತೀಯರನ್ನು ಹಿಂಪಡೆಯಲು ಸಿದ್ದ: ಕೇಂದ್ರ ಪುನರುಚ್ಛಾರ


