ಜರ್ಮನಿಯಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಎಂಟು ಪುರುಷರು ಮತ್ತು ಎಂಟು ಮಹಿಳೆಯರನ್ನು ಒಳಗೊಂಡ ಲಿಂಗ ಸಮಾನತೆಯ ಸಚಿವ ಸಂಪುಟ ರಚನೆಯಾಗಿದೆ. ಜರ್ಮನಿಯ ಈ ಹಿಂದಿನ ಚಾನ್ಸಲರ್ ಆಗಿದ್ದ ಏಂಜೆಲಾ ಮರ್ಕೆಲ್ ಅವರು ಪುರುಷ ಉತ್ತರಾಧಿಕಾರಿ ಓಲಾಫ್ ಸ್ಕೋಲ್ಜ್ ಅವರಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸುತ್ತಿದ್ದರೂ, ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಮಹಿಳೆಯರನ್ನು ಹೊಸ ಸರ್ಕಾರ ಹೊಂದಲಿದೆ. ಜರ್ಮನಿಯಲ್ಲಿ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪುರುಷ ಚಾನ್ಸಲರ್ ಅಧಿಕಾರ ವಹಿಸುತ್ತಿದ್ದಾರೆ.
‘ಜರ್ಮನಿ ಚಾನ್ಸೆಲರ್’ ಎಂದರೆ ಜರ್ಮನಿ ಸರ್ಕಾರದ ಮುಖ್ಯಸ್ಥ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಯುದ್ದದ ಸಮಯದಲ್ಲಿ ಜರ್ಮನ್ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಜರ್ಮನಿಯ ಚಾನ್ಸೆಲರ್ ಅವರೇ ಆಗಿರುತ್ತಾರೆ.
ಇದನ್ನೂ ಓದಿ: ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ
ಜರ್ಮನಿಯ ಹೊಸ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರು ಚುನಾವಣೆಯ ಸಮಯದಲ್ಲೇ ತಮ್ಮ ಸರ್ಕಾರಕ್ಕೆ ಪುರುಷರಂತೆ ಹೆಚ್ಚಿನ ಮಹಿಳೆಯರನ್ನು ನೇಮಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಅವರ ಚುನಾವಣಾ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ, ಭದ್ರತೆ ಮತ್ತು ರಾಜತಾಂತ್ರಿಕತೆಗೆ ಸಂಬಂಧಿಸಿದ ಎಲ್ಲವನ್ನೂ ಮಹಿಳೆಯರೇ ಮುನ್ನಡೆಸುತ್ತಾರೆ.
ಈ ಬಾರಿ ಜರ್ಮನಿಯು ತನ್ನ ಮೊದಲ ಮಹಿಳಾ ವಿದೇಶಾಂಗ ಮಂತ್ರಿ ಮತ್ತು ಮೊದಲ ಮಹಿಳಾ ಆಂತರಿಕ ಮಂತ್ರಿಯನ್ನು ಹೊಂದಲಿದೆ. ದೇಶವು ಸತತ ಮೂರನೇ ಬಾರಿಗೆ ಮಹಿಳಾ ರಕ್ಷಣಾ ಸಚಿವೆಯನ್ನೂ ಪಡೆಯಲಿದೆ.
“ಭದ್ರತೆಯು ಈ ಸರ್ಕಾರದಲ್ಲಿ ಪ್ರಬಲ ಮಹಿಳೆಯರ ಕೈಯಲ್ಲಿ ಇರುತ್ತದೆ” ಎಂದು ಓಲಾಫ್ ಸ್ಕೋಲ್ಜ್ ಸೋಮವಾರ ಹೇಳಿದ್ದಾರೆ. ಓಲಾಫ್ ಸ್ಕೋಲ್ಜ್ ಸೋಶಿಯಲ್ ಡೆಮಾಕ್ರಟ್ ಪಕ್ಷದವರಾಗಿದ್ದು, ಪ್ರೋಗ್ರೇಸಿವ್ ಗ್ರೀನ್ಸ್ ಮತ್ತು ಲಿಬರ್ಟೇರಿಯನ್ ಫ್ರೀ ಡೆಮೋಕ್ರಾಟ್ ಜೊತೆ ಸೇರಿಕೊಂಡು ಮೂರು ಪಕ್ಷದ ಮೈತ್ರಿ ಒಕ್ಕೂಟವನ್ನು ಮುನ್ನಡೆಸುತ್ತಾರೆ.
“ಸಂಪುಟದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಇದ್ದಾರೆ. ಆದ್ದರಿಂದ ಮಹಿಳೆಯರು ಕೂಡಾ ಅರ್ಧದಷ್ಟು ಶಕ್ತಿಯನ್ನು ಪಡೆಯುತ್ತಾರೆ. ನಾವು ಇದನ್ನು ಅರಿತುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ನನಗೆ ತುಂಬಾ ಹೆಮ್ಮೆ ಇದೆ” ಎಂದು ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ.
16 ವರ್ಷಗಳಿಂದ ಜರ್ಮನಿಯ ಚಾನ್ಸೆಲರ್ ಆಗಿದ್ದ ಏಂಜೆಲಾ ಮರ್ಕೆಲ್, ಸಂಪ್ರದಾಯವಾದಿಯಾಗಿದ್ದು, ಫೆಮಿನಿಸ್ಟ್ ಪದದಿಂದ ದೂರವಿದ್ದರು. ತನ್ನ ಅಧಿಕಾರದ ಕೊನೆಯ ವರ್ಷಗಳವರೆಗೆ ಅವರು ಮಹಿಳೆಯರ ಪ್ರಗತಿಯ ವಿಷಯವಾಗಿ ವಿರಳವಾಗಿ ಮಾತನಾಡಿದ್ದರು. ಅವರ ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿಗಳು ಮತ್ತು ಶಾಸಕರ ಸಂಖ್ಯೆ ಸುಮಾರು ಮೂರನೇ ಒಂದು ಭಾಗದಷ್ಟು ಅಷ್ಟೇ ಇತ್ತು.
ಈ ವಾರ ಅಧಿಕಾರ ವಹಿಸಿಕೊಳ್ಳಲಿರುವ ಮಹಿಳೆಯರು ತಮ್ಮ ಸಚಿವಾಲಯದ ಮೇಲೆ ಛಾಪು ಮೂಡಿಸುವ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಗ್ರೀನ್ಸ್ ಪಕ್ಷದಿಂದ ಚಾನ್ಸೆಲರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜರ್ಮನಿಯ ಹೊಸ ವಿದೇಶಾಂಗ ಮಂತ್ರಿ ಅನ್ನಾಲೆನಾ ಬೇರ್‌ಬಾಕ್, ಚೀನಾ ಮತ್ತು ರಷ್ಯಾದಂತಹ ಆಯಕಟ್ಟಿನ ಪ್ರತಿಸ್ಪರ್ಧಿಗಳ ಕಡೆಗೆ ಕಠಿಣವಾದ ನಡೆಯನ್ನು ಅನುಸರಿಸಲಿದ್ದೇನೆ ಎಂದು ತನ್ನ ಯೋಜನೆಯ ಬಗ್ಗೆ ಪ್ರತಿಜ್ಞೆ ಮಾಡಿದ್ದಾರೆ.
ದೇಶದ ನೂತನ ಆಂತರಿಕ ಮಂತ್ರಿ ನ್ಯಾನ್ಸಿ ಫೈಸರ್ ಅವರು, ಉದಾರವಾದಿ ಪ್ರಜಾಪ್ರಭುತ್ವ ಎದುರಿಸುತ್ತಿರುವ ದೊಡ್ಡ ಬೆದರಿಕೆಯಾದ ಬಲಪಂಥೀಯ ಉಗ್ರವಾದದ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿದ್ದಾರೆ.
“ಲಿಂಗ ಸಮಾನತೆ ಹೊಂದಿರುವ ಕ್ಯಾಬಿನೆಟ್‌ನ ಭಾಗವಾಗಲು ನಾನು ಕೃತಜ್ಞಳಾಗಿದ್ದೇನೆ. ಇದಕ್ಕಾಗಿ ನಾನು ಹಲವು ವರ್ಷಗಳಿಂದ ಹೋರಾಡಿದ್ದೇನೆ. ಇದು ನಮ್ಮ ದೇಶದ ಎಲ್ಲಾ ಮಹಿಳೆಯರ ಸಂಕೇತವಾಗಿದೆ” ಎಂದು ನೂತನ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಕ್ಲಾರಾ ಗೆವಿಟ್ಜ್ ಹೇಳಿದ್ದಾರೆ.
ಇದನ್ನೂ ಓದಿ:ಸ್ತ್ರೀವಾದ ಸಮಾನ ಹಕ್ಕುಗಳ ಬೇಡಿಕೆಯಷ್ಟೆ ಅಲ್ಲ ಸಮಾನ ಗೌರವದ ಬೇಡಿಕೆ ಕೂಡ


