Homeಮುಖಪುಟಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ.

- Advertisement -
- Advertisement -

ಸ್ತ್ರೀವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ

ಸ್ತ್ರಿವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ
ಮಾನವರು ಸಮುದಾಯಗಳಾಗಿ ಬದುಕಲು ತೊಡಗಿದ ಆರಂಭದಲ್ಲಿ ಗಂಡು ಮತ್ತು ಹೆಣ್ಣುಗಳೆಂಬ ತಾರತಮ್ಯಗಳೇನೂ ಇರಲಿಲ್ಲ. ಮುಂದುವರೆದ ಒಂದು ಹಂತದಲ್ಲಿ ಗಂಡಸರ ಪ್ರಾಬಲ್ಯಕ್ಕೆ ಹೆಚ್ಚಿನ ಅವಕಾಶಗಳು ತೆರೆದುಕೊಂಡವು. ಇದನ್ನೇ ನಿರಂತರವಾಗಿಸುವ ಪ್ರಯತ್ನಗಳಲ್ಲಿ ಗಂಡಸರು ತಮ್ಮ ಜೊತೆಗೇ ಇದ್ದ ಹೆಂಗಸರ ಮೇಲೆ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನಗಳಲ್ಲಿ ತೊಡಗಿದರು. ಗಂಡು ಮತ್ತು ಹೆಣ್ಣುಗಳ ಸಂಬಂಧಗಳಲ್ಲಿ ಯಜಮಾನಿಕೆ ಮತ್ತು ಅಧೀನತೆ ಎಂಬ ಶ್ರೇಣೀಕರಣ ಮೊದಲಾಯಿತು.

ಇದೇ ಮಾನವ ಚರಿತ್ರೆಯಲ್ಲಿ ಕಾಣಿಸಿಕೊಂಡ ಮೊತ್ತಮೊದಲ ಶ್ರೇಣೀಕರಣ ಎಂದು ಏಂಗೆಲ್ಸ್ ಗುರುತಿಸುತ್ತಾನೆ. ಮುಂದೆ ಈ ತಂತ್ರಗಾರಿಕೆಯೇ ಪ್ರಯೋಗಗೊಳ್ಳುತ್ತಾ ಜಾತಿ, ಜನಾಂಗ, ಕೋಮು, ವರ್ಗ ಎಂಬ ಲೆಕ್ಕವಿಲ್ಲದಷ್ಟು ಶ್ರೇಣೀಕರಣಗಳು ಜಾರಿಗೊಂಡವು. ಎಲ್ಲ ಬಗೆಯ ಶ್ರೇಣೀಕರಣಗಳೂ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ಸ್ಥಾಪಿಸುವ ತಂತ್ರಗಾರಿಕೆಗಳೇ ಆಗಿವೆ. ಇಂದಿಗೂ ಸಮಾಜ ವ್ಯವಸ್ಥೆ ಎಂದರೆ ಅಧಿಕಾರ ಮತ್ತು ಅಧೀನತೆಗಳ ಸಂಘರ್ಷ ಮಾತ್ರವೇ ಆಗಿದೆ. ಕಲ್ಪಿತ ಶತ್ರುವಿನೊಂದಿಗೆ ನಡೆಸುತ್ತಿರುವ ಈ ಸಂಘರ್ಷವು ಎಂದಿಗೂ ಮುಗಿಯಲಾರದು. ಈ ಎಲ್ಲ ಸಂಗತಿಗಳನ್ನೂ ಸಾಮಾಜಿಕ ಕಳಕಳಿಯ ಚಿಂತನಶೀಲರೂ, ಸಂವೇದನಾಶೀಲರೂ ಚರ್ಚಿಸುತ್ತಲೇ ಬಂದಿದ್ದಾರೆ.

ಸ್ತ್ರೀವಾದೀ ಚಿಂತನೆಯು ಕೂಡಾ ಪುರುಷರನ್ನು ಶತ್ರುವಾಗಿ ಕಲ್ಪಿಸಿಕೊಂಡೇ ಹುಟ್ಟಿದ್ದು. ಆದರೆ ಇಂದು ಈ ಚಿಂತನೆಯು ಅತ್ಯಂತ ಸೂಕ್ಷ್ಮವಾದ ದಾರ್ಶನಿಕ ಒಳನೋಟಗಳನ್ನು ಕಾಣಿಸಬಲ್ಲ ಪ್ರಬುದ್ಧತೆಯದಾಗಿ ಬೆಳೆದಿದೆ. ಎಲ್ಲ ದುರ್ಬಲ ಸಮುದಾಯಗಳೂ ನಿರಂತರವಾಗಿ ತೊಡಗಿಕೊಂಡೇ ಬರುತ್ತಿರುವ ಹೋರಾಟಗಳಿಗೆ ದಾರಿಗಳನ್ನು ಕಾಣಿಸಬಲ್ಲ ಸಾಮರ್ಥ್ಯ ಈ ಸ್ತ್ರೀವಾದೀ ದಾರ್ಶನಿಕ ನೋಟಕ್ಕೆ ಇದೆ. ಯಾವುದೇ ಹೋರಾಟಗಳು ಹೊಂದಿರಬಹುದಾದ ವೈಚಾರಿಕ ಆಶಯಗಳು, ಸಾಮರ್ಥ್ಯಗಳು ಕೇವಲ ಆರಂಭಿಕ ಬಿಂದುಗಳು ಮಾತ್ರವೇ ಆಗಿರುತ್ತವೆ; ಇವುಗಳ ನಿರ್ಣಾಯಕ ಅಂತ್ಯವಾಗಿ ಅವು ನಮ್ಮ ಜೀವನಕ್ರಮಗಳಲ್ಲಿ ಕ್ರಿಯಾಶೀಲವಾಗಬೇಕು ಎಂಬ ಒಳನೋಟವನ್ನು ಸ್ತ್ರೀವಾದೀ ದಾರ್ಶನಿಕತೆಯು ನೀಡುತ್ತದೆ. ಸಮಾಜವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಶ್ರೇಣೀಕರಣಗಳೂ, ಆ ಕುರಿತು ನಡೆಯುತ್ತಿರುವ ಸಾಮಾಜಿಕ ಹೋರಾಟಗಳೂ ಈ ಮಾತನ್ನು ಗಮನಿಸುವ ಅಗತ್ಯವಿದೆ.

ಇಂದಿನ ಸ್ತ್ರೀವಾದಿಗಳು ಎಲ್ಲರೂ ಸ್ತ್ರೀವಾದಿಗಳಾಗೋಣ, ಸ್ತ್ರೀವಾದವು ನಮ್ಮೆಲ್ಲರ
ಅಗತ್ಯವೇ ಆಗಿದೆ ಎಂದು ಹೇಳುತ್ತಿದ್ದಾರೆ. ಈವರೆಗೂ ಸ್ತ್ರೀವಾದ ಎಂದರೆ ಪುರುಷರೊಂದಿಗೆ ಸಾಮಾಜಿಕ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂಬ ಮಾತುಗಳೇ ಕೇಳಿಬರುತ್ತಿದ್ದವು. ಈಗ ಇದ್ದಕ್ಕಿದ್ದಂತೆ ಸ್ತ್ರೀವಾದವನ್ನು ಎಲ್ಲರ ಅಗತ್ಯ ಎಂದು ಹೇಳಿದರೆ ಸುಲಭವಾಗಿ ನಂಬಲಾಗದು. ಆದರೆ ಇದು ತುಂಬಾ ಸೂಕ್ಷ್ಮವಾದ ಒಂದು ಚಿಂತನೆ. ಎಲ್ಲ ಬಗೆಯ ಸಾಮಾಜಿಕ ಶ್ರೇಣೀಕರಣಗಳಲ್ಲಿಯೂ ಪುರುಷರು ಮತ್ತು ಮಹಿಳೆಯರು ಹೆಚ್ಚೂಕಡಿಮೆ ಸಮಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಮಾಜ ವ್ಯವಸ್ಥೆ ಎಂಬ ಅಧಿಕಾರ ಕೇಂದ್ರವು ಶತ್ರುತ್ವವನ್ನು ಹುಟ್ಟುಹಾಕಿದೆ.

ನಮ್ಮಲ್ಲಿ ನಡೆಯುತ್ತಾ ಬಂದಿರುವ ವೈಚಾರಿಕ ಚರ್ಚೆಗಳು ಇವನ್ನೆಲ್ಲಾ ಬಿಡಿಬಿಡಿಯಾಗಿ ಸೂಕ್ಷ್ಮ್ಮಗಳಲ್ಲಿ ವಿವರಿಸುತ್ತಿವೆ. ಇಂಥ ಚರ್ಚೆಗಳ ಕೊನೆಯಲ್ಲಿ, ಸಾಧಾರಣವಾಗಿ, ಸಮಾಜವು ಬದಲಾಗಬೇಕು, ಮುಖ್ಯವಾಗಿ ಪುರುಷರ ಮನಸ್ಥಿತಿಯಲ್ಲಿ ಪರಿವರ್ತನೆಗಳು ಬರಬೇಕು ಎಂಬ ಅಮೂರ್ತವಾದ ಮಾತುಗಳಷ್ಟೇ ಕೇಳಿಸುತ್ತವೆ. ವೈಚಾರಿಕ ಚರ್ಚೆಗಳಲ್ಲಿ ಅಮೂರ್ತವಾಗಿಯೇ ಉಳಿದುಬಿಡುವ ಆಶಯಗಳು ನಮ್ಮೆಲ್ಲರ ಬದುಕುಗಳಲ್ಲಿ, ನಮ್ಮ ಜೀವನ ಕ್ರಮಗಳ ಎಲ್ಲ ಕ್ಷಣಗಳಲ್ಲಿಯೂ ಸಾಕಾರಗೊಳ್ಳುವ ಹಾದಿಗಳನ್ನು ಕುರಿತು ಸ್ತ್ರೀವಾದೀ ದಾರ್ಶನಿಕತೆಯು ಮಾತನಾಡುತ್ತದೆ.

ಆದರೆ ಈ ಯಾವ ಮಾತುಗಳನ್ನೂ ಒಂದು ವೈಚಾರಿಕ ಆಕೃತಿಯಾಗಿ ಕಟ್ಟಿ ನಿರೂಪಿಸಲು ಸಾಧ್ಯವಾಗುವುದಿಲ್ಲ. ಇದೊಂದು ಬಗೆಯ ವಿಶಿಷ್ಟವೂ, ಕ್ರಾಂತಿಕಾರಿಯೂ ಆದ ಹೋರಾಟದ ಬಗೆ. ಇಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳು. ಇಲ್ಲಿ ನೇತಾರರೆನಿಸಿ, ಮಾರ್ಗದರ್ಶಕರೆನಿಸಿ ಯಾರೂ ನಿಂತಿರುವುದಿಲ್ಲ. ಇಲ್ಲಿ ಯಾರೂ ಹಿಂಬಾಲಕರಲ್ಲ. ಇಲ್ಲಿನ ಹೋರಾಟದ ಒಟ್ಟು ಚಿಂತನೆ ಸಾಮುದಾಯಿಕವಾದದ್ದೇ. ಆದರೆ ಹೋರಾಟವು ಮಾತ್ರ ಪ್ರತಿಯೊಬ್ಬರೂ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ ಎನಿಸಿ ನಿರಂತರವಾಗಿ ನಡೆಯಬೇಕು.

ಮಹಿಳೆಯರು ಮತ್ತು ಪುರುಷರು ತೀರಾ ವೈಯಕ್ತಿಕ ನೆಲೆಗಳಿಂದ ತೊಡಗಿ ಹಲವಾರು ಸಾರ್ವಜನಿಕ ವಲಯಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಅವರ ನಡುವೆ ಬರುವ ಹಲವು ಬಗೆಯ ಸಂಬಂಧಗಳಲ್ಲಿ ಅವೆಷ್ಟೋ ಮಾತುಕತೆಗಳು ನಡೆಯುತ್ತವೆ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಅವೆಷ್ಟೋ ರೂಢಿಗತ ವರ್ತನಾವಿಧಾನಗಳೂ ಇರುತ್ತವೆ. ಈ ಎಲ್ಲ ಕ್ಷಣಗಳಲ್ಲಿಯೂ ನಮ್ಮ ನಮ್ಮ ಮಾತುಕತೆಗಳನ್ನು, ವರ್ತನಾವಿಧಾನಗಳನ್ನು ಸೂಕ್ಷ್ಮ ಸಂವೇದನೆಗಳಲ್ಲಿ ಗಮನಿಸಿಕೊಳ್ಳಲು ನಮಗೆ ಸಾಧ್ಯವಾಗಲು ತೊಡಗಿದರೆ, ಹೋರಾಟವು ಸರಿದಾರಿಯಲ್ಲಿ ಸಾಗಿದೆ ಎಂದೇ ಅರ್ಥ. ಆದರೆ ಈ ಗಮನಿಸುವಿಕೆ ಮತ್ತು ತಿದ್ದಿಕೊಳ್ಳುವ ಕ್ರಿಯೆ ಎಂದರೆ ಒಮ್ಮೆಗೇ ಮುಗಿಯುತ್ತದೆ ಎಂದಿಲ್ಲ. ನಮಗೇ ತಿಳಿಯದೆಯೂ ನಾವು ಹಳೆಯ ಚಾಳಿಯ ಮಾತುಕತೆಗಳಿಗೆ, ವರ್ತನೆಗಳಿಗೆ ಹೊರಳಿಬಿಟ್ಟಿರುತ್ತೇವೆ. ಈ ಸೂಕ್ಷ್ಮದ ಎಚ್ಚರದಲ್ಲಿ ನಾವು ಸದಾಕಾಲವೂ ಇರಬೇಕಾಗುತ್ತದೆ.

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ. ಏಕೆಂದರೆ ನಮ್ಮ ಅನುಭವ ಲೋಕದ ಪ್ರೀತಿ, ಗೌರವ, ಸಮಾನತೆ ಎಂಬ ಭಾವನೆಗಳನ್ನು ಮಾತ್ರವೇ ಅಲ್ಲ, ಅವುಗಳನ್ನು ವ್ಯಕ್ತಪಡಿಸುವ ಬಗೆಗಳನ್ನು ಕೂಡಾ ಆ ತರಬೇತಿಯೇ ವ್ಯಾಖ್ಯಾನಿಸಿಬಿಡುತ್ತದೆ.

ಉದಾಹರಣೆಗೆ, ಪುರುಷರು ಮಹಿಳೆಯರಿಗೆ ಪ್ರೀತಿ ಗೌರವಗಳನ್ನು, ವಸ್ತುಗಳನ್ನು ಕೊಡುವ ಮೂಲಕ ತೋರಿಸಬೇಕು, ಮತ್ತು ಮಹಿಳೆಯರು ಆ ಭಾವಗಳನ್ನು ಸೇವೆಯ ಮೂಲಕ ತೋರಿಸಬೇಕು ಎಂಬ ಪಾಠವನ್ನು ನಾವೆಲ್ಲರೂ ಕಲಿತಿದ್ದೇವೆ ಮತ್ತು ಹಾಗೆಯೇ ವರ್ತಿಸುತ್ತೇವೆ. ನಮ್ಮೆಲ್ಲರ ಬದುಕುಗಳ ಎಲ್ಲ ಕ್ಷಣಗಳೂ ಈ ಮಾದರಿಯವೇ ಆಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಕೊನೆಯಿಲ್ಲದೆ ಜೋಡಿಸುತ್ತಲೇ ಹೋಗಬಹುದು. ಗಂಡಸರಾಗಲೀ, ಹೆಂಗಸರಾಗಲೀ ಇಷ್ಟೆಲ್ಲವನ್ನೂ ಚಿಂತಿಸಿ ಸಂಬಂಧಗಳನ್ನು ನಿಭಾಯಿಸುತ್ತಾರೆ ಎಂದೇನಲ್ಲ. ನಮಗೆ ದೊರೆಯುವ ತರಬೇತಿಗಳು ಅಷ್ಟು ಗಾಢವಾದವು ಎಂಬುದನ್ನು ನಾವು ತಿಳಿಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವು ಮಾತ್ರ ಎಲ್ಲಿಯೂ ಸಡಿಲುಗೊಳ್ಳದಂತೆ ಕಾಯುವ ತರಬೇತಿಯ ರಾಜಕಾರಣವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುವುದು ಆಗದ ಮಾತು. ಆದರೂ ಈ ರಾಜಕಾರಣವನ್ನು ಭೇದಿಸದ ಹೊರತು ಯಾವ ಹೋರಾಟಗಳಿಗೂ ಅರ್ಥವೇ ಉಳಿಯುವುದಿಲ್ಲ. ಸ್ತ್ರೀವಾದೀ ದಾರ್ಶನಿಕತೆಯು ಈ ಹಾದಿಯಲ್ಲಿ ಬೆಳಕನ್ನು ತೋರುವ ಸಾಮರ್ಥ್ಯದ್ದಾಗಿದೆ. ಮಹಿಳೆಯರೂ, ಪುರುಷರೂ ಕೂಡಿಯೇ ಸ್ತ್ರೀವಾದಿಗಳಾಗಬೇಕು ಎಂದರೆ ಈ ಹಾದಿಯಲ್ಲಿ ನಡೆಯೋಣ ಎಂದಷ್ಟೇ ಅರ್ಥ. ವ್ಯವಸ್ಥೆಯ ತರಬೇತಿಯ ಪಾಠಗಳನ್ನು ನಾವೆಲ್ಲರೂ ಮರೆಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವನ್ನು ನಿರಾಕರಿಸಿ ನಿಲ್ಲಬೇಕು. ಇದು ಮಾತ್ರವೇ ಸಮಸಮಾಜದ ಕನಸುಗಳನ್ನು ಸಾಕಾರಗೊಳಿಸಬಲ್ಲುದು. ಈ ಹೋರಾಟದ ಕ್ರಮವು ಸ್ಪಷ್ಟವಾಗಿದೆ. ವ್ಯವಸ್ಥೆಯು ನೀಡಿದ ತರಬೇತಿಯ ಪಾಠಗಳನ್ನು ಮರೆಯುವುದು ಎಂದರೆ ನಮ್ಮನಮ್ಮ ಮಾತುಕತೆಗಳನ್ನು, ವರ್ತನೆಗಳನ್ನು ಅನುಕ್ಷಣವೂ ಗಮನಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳುವುದು; ಮತ್ತು ಇದನ್ನೇ ಉಸಿರಾಡುವ, ಜೀವಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಈ ಪ್ರಯತ್ನವು ನಮ್ಮ ಜೀವನ ಕ್ರಮಗಳಲ್ಲಿ ಹಾಸುಹೊಕ್ಕಾಗಿ ನೆಲೆಗೊಳ್ಳಬೇಕು.

ಎಚ್ ಎಸ್ ಶ್ರೀಮತಿ

ಎಚ್ ಎಸ್ ಶ್ರೀಮತಿ
ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ’ರುಡಾಲಿ’, ’ಹಜಾರ್ ಚೌರಾಶೀರ ಮಾ’, ಸಿಮೋನ್ ದ ಬೋವ ಅವರ ‘ದ ಸೆಕಂಡ್ ಸೆಕ್ಸ್’, ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’, ಬೆಲ್ ಹುಕ್ಸ್ ಅವರ ’ಎಲ್ಲರಿಗಾಗಿ ಸ್ತ್ರೀವಾದ’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಶ್ರೀಮತಿ ಅವರು ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...