“ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದು ಹೇಳಿಕೊಂಡ ಉದ್ಯೋಗಿಗಳ ಒತ್ತಡಕ್ಕೆ ಮಣಿದ ಗೂಗಲ್ ಸಂಸ್ಥೆಯು, ಅಮೆರಿಕ ಮೂಲದ ದಲಿತ ಹೋರಾಟಗಾರ್ತಿ ತೇನ್ಮೋಳಿ ಸೌಂದರರಾಜನ್ ಅವರ ಭಾಷಣವನ್ನು ರದ್ದು ಮಾಡಿದ್ದು ಇತ್ತೀಚಿನ ಘಟನೆ.
ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ತೇನ್ಮೋಳಿ ಅವರು ’ಹಿಂದೂ ಫೋಬಿಕ್’ ಮತ್ತು ’ಹಿಂದೂ ವಿರೋಧಿ’ ಆಗಿದ್ದಾರೆ ಎಂದಿರುವ ಗೂಗಲ್‌ನ ಕೆಲವು ಉದ್ಯೋಗಿಗಳು, ಕಂಪನಿಗೆ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಿರುವ ವಿಷಯವನ್ನು ’ವಾಷಿಂಗ್ಟನ್ ಪೋಸ್ಟ್’ ಬಹಿರಂಗಪಡಿಸಿತ್ತು.
ಹಿಂದುತ್ವ ಪರ ಗುಂಪುಗಳ ಅಪಪ್ರಚಾರದಿಂದಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂಬುದೂ ಬೆಳಕಿಗೆ ಬಂದಿದೆ. ಗೂಗಲ್‌ನ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ ಅವರು ತೇನ್ಮೋಳಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದೇ ಅಪರಾಧವಾಗಿಬಿಟ್ಟಿತ್ತು!
ತೇನ್ಮೋಳಿ ಅವರ ಭಾಷಣವನ್ನು ವಿರೋಧಿಸಿರುವ ಗೂಗಲ್ ಉದ್ಯೋಗಿಗಳು, “ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ” ಎಂದುಬಿಟ್ಟರು! 8,000 ಜನರಿರುವ ದಕ್ಷಿಣ ಏಷ್ಯಾದ ಉದ್ಯೋಗಿಗಳ ಗುಂಪಿಗೆ ಮೇಲ್ ಹೋಯಿತು ಎಂದು ವಾಷಿಂಗ್‌ಟನ್ ಪೋಸ್ಟ್ ವರದಿ.

ಕಾರ್ಯಕ್ರಮವನ್ನು ರದ್ದು ಮಾಡಿದ ನಂತರ ತನುಜಾ ಗುಪ್ತಾ ಅವರು ಅರ್ಜಿಯ ಲಿಂಕ್‌ಅನ್ನು ಮತ್ತೊಮ್ಮೆ ಪೋಸ್ಟ್ ಮಾಡಿದಾಗ, ಗ್ರೂಪ್‌ನಲ್ಲಿರುವ ಜನರು, “ಅಮೆರಿಕದಲ್ಲಿ ಜಾತಿ ಇಲ್ಲ, ಜಾತಿ ತಾರತಮ್ಯ ಅಸ್ತಿತ್ವದಲ್ಲಿಲ್ಲ, ತುಳಿತಕ್ಕೊಳಗಾದ ಜಾತಿಗಳ ಜನರು ಕಡಿಮೆ ವಿದ್ಯಾವಂತರು (ಅರ್ಹತೆ ಕಡಿಮೆ ಉಳ್ಳವರು)” ಎಂಬ ವಾದವನ್ನು ಮುಂದಿಡುತ್ತಾರೆ.
ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಅಂಬೇಡ್ಕರ್‌ವಾದಿಗಳ ಸಂಘದ (AANA- Ambedkarites Association of North America) ಅಧ್ಯಕ್ಷರಾಗಿರುವ ತೆನ್ಮೋಳಿ, ಜಾಗತಿಕವಾಗಿ ಗುರುತಿಸಲ್ಪಟ್ಟ ಜಾತಿವಿರೋಧಿ ಹೋರಾಟಗಾರ್ತಿ. ದಕ್ಷಿಣ ಏಷ್ಯಾದಲ್ಲಿನ ಜಾತಿ ತಾರತಮ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಎಳೆಯಲು ಅವರು ಯತ್ನಿಸುತ್ತಿದ್ದಾರೆ.
ಗೂಗಲ್‌ನ ನಡೆಯನ್ನು ವಿರೋಧಿಸಿರುವ ತೆನ್ಮೋಳಿ, “ಜಾತಿಸಮಾನತೆಯ ಬಗ್ಗೆ ಮಾತನಾಡುವುದನ್ನು ಗೂಗಲ್ ಕಾನೂನುಬಾಹಿರವಾಗಿ ರದ್ದುಗೊಳಿಸಿದೆ. ಅದರ ಕ್ರಮಗಳು ಎಷ್ಟು ಆಘಾತಕಾರಿ ಹಾಗೂ ತಾರತಮ್ಯದಿಂದ ಕೂಡಿವೆ ಎಂಬುದನ್ನು ವ್ಯಕ್ತಪಡಿಸಲು ನನಗೆ ಪದಗಳು ಸಿಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 18ರಂದು ’ದಲಿತ ಇತಿಹಾಸ ಮಾಸ’ದ ಅಂಗವಾಗಿ ತೇನ್ಮೋಳಿ ಅವರ ಭಾಷಣವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮುಂದೂಡಲಾಯಿತು ಅರ್ಥಾತ್ ಅಂದೇ ರದ್ದು ಮಾಡಲಾಯಿತು. ಬಳಿಕ ತೆನ್ಮೋಳಿಯವರು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದ್ದರು.
“ಅದನ್ನು ಗುರುತಿಸಲಾಗದಿದ್ದರೂ ಜಾತಿ ತಾರತಮ್ಯ ವ್ಯವಹಾರಕ್ಕೆ ಕೆಡುಕ್ಕುಂಟು ಮಾಡುತ್ತದೆ ಮತ್ತು ಅದು ಅಸುರಕ್ಷ ಹಾಗೂ ಪ್ರತಿಕೂಲ ಉದ್ಯೋಗ ಪರಿಸರವನ್ನು ಸೃಷ್ಟಿ ಮಾಡುತ್ತದೆ. ಗೂಗಲ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ, ಕನಿಷ್ಠ ಶೇ.25ರಿಂದ ಶೇ.30ರಷ್ಟು ಮಾರುಕಟ್ಟೆ ಜಾತಿಶೋಷಣೆಯನ್ನು ಅನುಭವಿಸಿರುವ ದಲಿತರದ್ದಾಗಿದೆ ಮತ್ತು ಮುಂದಿನ ಬಿಲಿಯನ್ ಬಳಕೆದಾರರನ್ನು ಹಿಡಿದಿಡಲು ಅವರು ಅತ್ಯವಶ್ಯಕ” ಎಂದು ಪತ್ರದಲ್ಲಿ ವಿವರಿಸಿದ್ದರು.
ತೇನ್ಮೋಳಿ ಅವರ ಭಾಷಣವನ್ನು ರದ್ದು ಮಾಡಿರುವುದನ್ನು ’ಈಕ್ವಾಲಿಟಿ ಲ್ಯಾಬ್ಸ್’ ಖಂಡಿಸಿದ್ದು, ಗೂಗಲ್‌ನ ಈ ವರ್ತನೆಯು ಜಾತಿವಾದದಿಂದ ಕೂಡಿರುವುದಾಗಿ ಆಕ್ರೋಶ ಹೊರಹಾಕಿದೆ. ಗೂಗಲ್‌ನ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಉಪಕ್ರಮದ ನ್ಯಾಯಸಮ್ಮತೆಯನ್ನು ಅದು ಪ್ರಶ್ನಿಸಿದ್ದು, “ಗೂಗಲ್ ಜಾತಿ ಧರ್ಮಾಂಧತೆ ಮತ್ತು ಕಿರುಕುಳವನ್ನು ಅನಿಯಂತ್ರಿತವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿದೆ” ಎಂದು ಅಭಿಪ್ರಾಯಪಟ್ಟಿದೆ.
ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳಲ್ಲಿ ಬೇರುಬಿಟ್ಟಿರುವ ಜಾತಿವ್ಯವಸ್ಥೆಯನ್ನು, ಅದನ್ನು ಪೋಷಿಸುತ್ತಿರುವ ಕೈಗಳನ್ನು ಹುಡುಕುತ್ತಾ ಹೋದರೆ ಅನೇಕ ಅನಾಹುತಕಾರಿ ಸಂಗತಿಗಳು ತೆರೆದುಕೊಳ್ಳುತ್ತವೆ. 2020ನೇ ಇಸವಿಯಲ್ಲಿ ನಡೆದ ಘಟನೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಜಾತಿ ತಾರತಮ್ಯವದು. ಕ್ಯಾಲಿಫೋರ್ನಿಯಾ ಅಧಿಕಾರಿಗಳು ಸಿಸ್ಕೊ ಸಿಸ್ಟಮ್ಸ್ ಇಂಕ್ ಸಂಸ್ಥೆ ವಿರುದ್ಧ ಮೊಕದ್ದಮೆ ಹೂಡುತ್ತಾರೆ. ಭಾರತೀಯ-ಅಮೆರಿಕನ್ ಉದ್ಯೋಗಿಯ ವಿರುದ್ಧ ತಾರತಮ್ಯ ಎಸಗಲಾಗಿದೆ, ಇಬ್ಬರು ಮ್ಯಾನೇಜರ್‌ಗಳಿಂದ ಕಿರುಕುಳವನ್ನು ಉದ್ಯೋಗಿಗೆ ನೀಡಲಾಗಿದೆ ಎಂದು ಆರೋಪ ಬರುತ್ತದೆ.
ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಹೆಚ್ಚಿನ ಭಾರತೀಯರು ಉದ್ಯೋಗ ಪಡೆಯುವುದು ವಾಡಿಕೆಯಾಗಿದೆ. ಆದರೆ ಇಲ್ಲಿ ಕೆಲಸ ಪಡೆಯುವವ ಬಹುತೇಕರು ಸವರ್ಣೀಯ ಜಾತಿಗೆ ಸೇರಿದವರು. ಭಾರತವು ’ಅಸ್ಪೃಶ್ಯತೆ’ಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿದ ಏಳು ದಶಕಗಳ ನಂತರವೂ ದಲಿತರು ಅವಮಾನ, ಅಸಮಾನತೆಗಳನ್ನು ಈ ತಂತ್ರಜ್ಞಾನ ಜಗತ್ತಿನಲ್ಲಿ ಮತ್ತು ಸಾಮಾಜಿಕ ಬದುಕಿನಲ್ಲಿ ಅನುಭವಿಸುತ್ತಿದ್ದಾರೆ.
ಇನ್ನೊಂದು ಘಟನೆ: ಫೇಸ್‌ಬುಕ್ ಸಂಸ್ಥೆಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಸುಮಾರು 450,000 ಡಾಲರ್ ಪ್ಯಾಕೇಜ್‌ನೊಂದಿಗೆ ಸಿದ್ಧಾಂತ್ ಎಂಬ ದಲಿತ ಯುವಕ ಕೆಲಸಕ್ಕೆ ಸೇರುತ್ತಾರೆ. ಅಮೆರಿಕಕ್ಕೆ ತೆರಳಿದ ಅವರಿಗೆ
ಕಹಿ ಅನುಭವವಾಗುತ್ತದೆ. ದಲಿತರು ತಮ್ಮ ಹಿನ್ನೆಲೆಯನ್ನು ವ್ಯಕ್ತಪಡಿಸಲು ಹಿಂಜರೆಯುತ್ತಾರೆ. “ಗುರುತನ್ನು ಹೇಳಿಕೊಳ್ಳುವುದು ಅಪಾಯಕಾರಿ. ಹೆಸರುಗಳನ್ನು ಬದಲಿಸಿಕೊಂಡು ಬದುಕಬೇಕಾಗುತ್ತದೆ” ಎಂಬುದು ಸಿದ್ಧಾಂತ್ ಅನುಭವ.
ಸಿಸ್ಕೋ ಸಂಸ್ಥೆಯ ಪ್ರಕರಣ ಹೊರಬಂದ ಬಳಿಕ ಅನೇಕ ದಲಿತ ಟೆಕ್ಕಿಗಳು ಹೊರಬಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಕ್ವಾಲಿಟಿ ಲ್ಯಾಬ್ಸ್ ಸಂಸ್ಥೆಯು (ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪು) ಗೂಗಲ್, ನೆಟ್‌ಫ್ಲಿಕ್ಸ್, ಅಮೆಜಾನ್, ಫೇಸ್‌ಬುಕ್ ಮೊದಲಾದ ಸಂಸ್ಥೆಗಳ ನೌಕರರು ತಮ್ಮ ಸಹೋದ್ಯೋಗಿಗಳ ವಿರುದ್ಧ ಮಾಡಿದ 250ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ ಎಂದು wired.com ವರದಿ ಮಾಡಿದೆ.
“ಹೊರಗಿನವರಿಗೆ ಜಾತಿಯ ಕುಂದುಕೊರತೆಗಳನ್ನು ಗುರುತಿಸುವುದು ಕಷ್ಟ. ಜಾತಿಯು ಅದೃಶ್ಯವಾದದ್ದು ಎಂಬುದೇ ಅತ್ಯಂತ ಅಪಾಯಕಾರಿ ಸಂಗತಿ” ಎಂದು ’ಕಮಿಂಗ್ ಔಟ್ ಆಸ್ ದಲಿತ್’ ಎಂಬ ಆತ್ಮಚರಿತ್ರೆ ಬರೆದ ಲೇಖಕಿ ಯಾಶಿಕಾ ದತ್ ಹೇಳುತ್ತಾರೆ.
“ಜಾತಿ ಅಗೋಚರವಾದದ್ದು, ನಮ್ಮ ಸುತ್ತಲೂ ಅನೇಕ ಸಂಕೇತಗಳು, ರಹಸ್ಯ ಭಾಷೆಗಳು ಅಸ್ತಿತ್ವದಲ್ಲಿವೆ. ವ್ಯಕ್ತಿಯ ಸರ್ ನೇಮ್, ಗ್ರಾಮದ ಬಗ್ಗೆ ಗಮನ ಹರಿಸುವುದೆಲ್ಲ ಜಾತಿಯನ್ನು ಹುಡುಕುವುದಕ್ಕಾಗಿಯಷ್ಟೇ. ಭುಜದ ಮೇಲೆ ತಟ್ಟುವುದು ಸ್ನೇಹಪೂರ್ವಕ ಶುಭಾಶಯವಾಗಿರಬಹುದು ಅಥವಾ ಬ್ರಾಹ್ಮಣರು ಧರಿಸುವ ಜನಿವಾರದ ಅನ್ವೇಷಣೆಯೂ ಆಗಿರಬಹುದು” ಎನ್ನುತ್ತದೆ wired.com ವರದಿ.
ಐಟಿ ಕ್ಷೇತ್ರದಲ್ಲಿನ ಜಾತಿ ತಾರತಮ್ಯ ಹೀಗೆ ಮುಂದುವರಿಯುತ್ತಲೇ ಇದೆ. ಈ ಕ್ಷೇತ್ರದಲ್ಲಿ ದಲಿತರಿಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲದೆ ಇರುವುದು, ಸವರ್ಣೀಯ ಜನರು ಮೇಲಿನ ಸ್ಥಾನದಲ್ಲಿ ಕೂತಿರುವುದು, ಖಾಸಗಿ ವಲಯದಲ್ಲಿ ಮೀಸಲಾತಿ ಇಲ್ಲದೆ ಇರುವುದು- ಇವೆಲ್ಲವೂ ಈ ತಾರತಮ್ಯಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಲೇ ಇವೆ.
ಸವರ್ಣೀಯರ ಮೇಲುಗೈ
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಸನ್ನ ಲಕ್ಷ್ಮೀಪುರ ಅವರು ’ನ್ಯಾಯಪಥ’ದೊಂದಿಗೆ ಮಾತನಾಡಿ, ಐಟಿ ಕ್ಷೇತ್ರದಲ್ಲಿ ಹೇಗೆ ಸವರ್ಣೀಯರು ಏಕಸ್ವಾಮ್ಯವನ್ನು ಸಾಧಿಸಿದ್ದಾರೆಂದು ವಿವರಿಸಿದರು.
“ಸಾಫ್ಟ್‌ವೇರ್‌ನಲ್ಲಿ ಸರ್ವಿಸಸ್ ಹಾಗೂ ಪ್ರೊಡಕ್ಟ್ ಎಂಬ ಎರಡು ವಿಧದ ಕಂಪನಿಗಳಿವೆ. ಇನ್ಫೋಸಿಸ್, ವಿಪ್ರೋ ಮೊದಲಾದವುಗಳು ಸರ್ವಿಸಸ್ ಕಂಪನಿಗಳು. ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್- ಇಂಥವುಗಳೆಲ್ಲ ಪ್ರೊಡೆಕ್ಟ್ ಕಂಪೆನಿಗಳು. ಪ್ರೊಡೆಕ್ಟ್ ಕಂಪನಿಗಳಲ್ಲಿ ಸಾಮಾನ್ಯವಾಗಿ ಐಐಟಿ, ಐಐಎಸ್‌ಸಿನಂತಹ ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಂಡು, ಹೆಚ್ಚಿನ ಸಂಬಳವನ್ನೂ ನೀಡುತ್ತಾರೆ. ಸರ್ವಿಸಸ್ ಕಂಪೆನಿಗಳಲ್ಲಿ ವಿವಿಧ ಹಂತದ ಪೋಸ್ಟ್‌ಗಳಲ್ಲಿ ವಿವಿಧ ಸಮುದಾಯಗಳನ್ನು ನೋಡಬಹುದು. ಸಾಫ್ಟ್‌ವೇರ್ ಇಂಜಿನಿಯರ್, ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್, ಟೀಮ್ ಲೀಡರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೈರೆಕ್ಟರ್, ಸೀನಿಯರ್ ಡೈರೆಕ್ಟರ್, ವೈಸ್‌ಪ್ರೆಸಿಡೆಂಟ್ ಈ ರೀತಿಯಲ್ಲಿ ಶ್ರೇಣೀಕರಣ ಇರುತ್ತದೆ. ಸಾಫ್ಟ್‌ವೇರ್, ಸೀನಿಯರ್ ಸಾಫ್ಟ್‌ವೇರ್ ಹಂತದಲ್ಲಿ ಶೇ.10ರಷ್ಟು ದಲಿತ ಉದ್ಯೋಗಿಗಳು ಕಾಣಸಿಗಬಹುದೇನೋ! ಆದರೆ ಅದಕ್ಕಿಂತ ಉನ್ನತ ಹುದ್ದೆಗಳಲ್ಲಿ ಸವರ್ಣೀಯರೇ ಇರುತ್ತಾರೆ” ಎನ್ನುತ್ತಾರೆ ಪ್ರಸನ್ನ ಲಕ್ಷ್ಮೀಪುರ.
“ಸರ್ವೀಸಸ್ ಕಂಪನಿಗಳಿಗೆ ಹೋಲಿಸಿದರೆ ಪ್ರೊಡೆಕ್ಟ್ ಕಂಪನಿಗಳಲ್ಲಿ ದಲಿತರಿಗೆ ಅವಕಾಶಗಳು ತುಂಬಾ ಕಡಿಮೆ. ಕೆಳಗಿನ ಹಂತದಲ್ಲೂ ಇಲ್ಲಿ ದಲಿತರು ಕಾಣಸಿಗುವುದಿಲ್ಲ. ಮೇಲಿನ ಹಂತದಲ್ಲಂತೂ ಇರುವುದೇ ಇಲ್ಲ. ಡೈರೆಕ್ಟರ್, ಸೀನಿಯರ್ ಡೈರಕ್ಟರ್ ಸ್ಥಾನಗಳಲ್ಲಿ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರೇ ಹೆಚ್ಚು ಇರುತ್ತಾರೆ. ಅತಿಹೆಚ್ಚು ಬ್ರಾಹ್ಮಣರೇ, ಸುಮಾರು ಶೇ.70 ಇರುತ್ತಾರೆ. ಒಬಿಸಿಗಳು, ದಲಿತರು ಕಾಣುವುದೇ ಇಲ್ಲ. ಸಾವಿರ ಜನರಲ್ಲಿ ಒಬ್ಬ ದಲಿತ ಇದ್ದರೂ ಹೆಚ್ಚು” ಎಂದು ಮಾಹಿತಿ ನೀಡಿದರು.
“ವೈವಿಧ್ಯತೆಯ ಕುರಿತು ಐಟಿ ಕಂಪನಿಗಳು ಮಾತನಾಡುತ್ತವೆ. ಈ ವೈವಿಧ್ಯತೆಯು ಮಹಿಳೆಯರನ್ನು ಒಳಗೊಳ್ಳುವುದಕ್ಕೆ ಸೀಮಿತವಾಗಿದೆ ಹೊರತು ಜಾತಿ ವೈವಿಧ್ಯತೆ ಮುಖ್ಯವಾಗುವುದಿಲ್ಲ. ಸಾಫ್ಟ್‌ವೇರ್ ಕಂಪನಿಗಳೆಲ್ಲ ಬಹುಪಾಲು ಅಮೆರಿಕ ಮೂಲದ್ದಾಗಿವೆ. ಹೀಗಾಗಿ ಮಹಿಳಾ ಪ್ರಾತಿನಿಧ್ಯದ ಕುರಿತು ಚರ್ಚೆಯಾಗುತ್ತದೆ. ಆದರೆ ಜಾತಿ ಪ್ರಾತಿನಿಧ್ಯದ ಬಗ್ಗೆ ಮಾತನಾಡುವುದೇ ಇಲ್ಲ ಎಂದು ವಿಷಾದಿಸಿದರು.
“ಸವರ್ಣೀಯರಿಗೆ ಹೆಚ್ಚಿನ ಉದ್ಯೋಗಗಳು ಸಿಗುವುದಕ್ಕೆ ’ಕಾಂಟ್ಯಾಕ್ಟ್’ ಮೂಲಕ ಆಗುವ ನೇಮಕಾತಿಗಳು ಕಾರಣ” ಎನ್ನುತ್ತಾರೆ ಪ್ರಸನ್ನ. “ಹೆಚ್ಚಿನದಾಗಿ ತಮ್ಮ ಪರಿಚಯದವರನ್ನೇ ನೇಮಿಸಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ. ಇದಕ್ಕೂ ಮುಂಚೆ ಎಲ್ಲಿಯಾದರೂ ಕೆಲಸ ಮಾಡಿದವರನ್ನು ನೋಡುತ್ತಾರೆ. ಇಲ್ಲಿ ಮೆರಿಟ್‌ಗಿಂತ ಸಂಪರ್ಕ (ಕಾಂಟ್ಯಾಕ್ಟ್) ಮುಖ್ಯವಾಗುತ್ತದೆ. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ’ಸಂಪರ್ಕ’ ಸಾಧಿಸಲು ಸಾಧ್ಯವಾಗುವುದಿಲ್ಲ. ಮೇಲಿನ ಸ್ಥಾನಗಳಲ್ಲಿ ಕುಳಿತವರ ಪರಿಚಯ ದಲಿತರಿಗೆ ಇರುವುದಿಲ್ಲ. ಉದಾಹರಣೆಗೆ ನಾನು ನಿರ್ದೇಶಕನಾಗಿದ್ದೇನೆ ಎಂದುಕೊಳ್ಳಿ. ವ್ಯವಸ್ಥಾಪಕ ಹುದ್ದೆ ಖಾಲಿ ಇದ್ದರೆ, ನನ್ನ ಪರಿಚಯದವರನ್ನು ನೇಮಿಸಿಕೊಳ್ಳುತ್ತೇನೆ. ನಾನು ಉಪಾಧ್ಯಕ್ಷನಾಗಿದ್ದು, ನಿರ್ದೇಶಕ ಹುದ್ದೆ ಖಾಲಿ ಇದ್ದರೆ ನನ್ನ ಪರಿಚಯದವರಿಗೆ ಕೆಲಸ ನೀಡುತ್ತೇನೆ. ಹೀಗೆ ಒಂದು ಜಾತಿಯ ಏಕಸ್ವಾಮ್ಯ ಐಟಿ ವಲಯದಲ್ಲಿ ಬೆಳೆದಿದೆ” ಎಂದು ವಿವರಿಸಿದರು.
ಐಟಿ ಕ್ಷೇತ್ರದ ಏಕಸ್ವಾಮ್ಯಕ್ಕೆ ಮೆರಿಟ್ ಕಾರಣವೇ?
“ಸವರ್ಣೀಯ ಜಾತಿಗಳು ಐಟಿ ವಲಯದಲ್ಲಿ ಹೆಚ್ಚಿದ ಪಾರಮ್ಯ ಸಾಧಿಸಲು ’ಮೆರಿಟ್’ ಕಾರಣವೇ ಹೊರತು ಮತ್ತ್ಯಾವ ಮಾನದಂಡವೂ ಇಲ್ಲ. ಇಲ್ಲಿ ಜಾತಿ ಮುಖ್ಯವಾಗುವುದಿಲ್ಲ, ಪ್ರತಿಭೆಯಷ್ಟೇ” ಎಂಬ ವಾದವನ್ನು ಸವರ್ಣೀಯ ಎಲೈಟ್ ವರ್ಗ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಕೆಲವು ಖಾಸಗಿ ಕಂಪನಿಗಳೂ ಇದನ್ನೇ ಹೇಳುತ್ತಿವೆ. ಆದರೆ ಅದು ವಾಸ್ತವವಲ್ಲ.
’ಮೆರಿಟ್ ವರ್ಸಸ್ ಜಾತಿ’ಯ ವಾಸ್ತವಗಳನ್ನು ಬಿಚ್ಚಿಡುವ ಪ್ರಯೋಗಗಳು ಭಾರತದಲ್ಲಿ ನಡೆದಿರುವುದನ್ನು ಚಿಂತಕ, ರಾಜಕೀಯ ವಿಶ್ಲೇಷಕರಾದ ಶಿವಸುಂದರ್ ಹೀಗೆ ವಿವರಿಸುತ್ತಾರೆ: “2004ರಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದು ಕಾಮನ್ ಮಿನಿಮಮ್ ಪ್ರೋಗ್ರಾಂ ಹಮ್ಮಿಕೊಳ್ಳಲಾಗಿತ್ತು. ಖಾಸಗಿ ವಲಯದ ಮೀಸಲಾತಿಯನ್ನು ಪರಿಗಣಿಸುತ್ತೇವೆ, ದೇಶಾದ್ಯಂತ ಸೆಮಿನಾರ್‌ಗಳನ್ನು ಮಾಡಿ ಅಭಿಪ್ರಾಯ ರೂಪಿಸುತ್ತೇವೆ. ಎಲ್ಲ ಖಾಸಗಿ ಕ್ಷೇತ್ರಗಳ ಮನವೊಲಿಸುತ್ತೇವೆ. ಅದಕ್ಕಾಗಿ ರಾಷ್ಟ್ರೀಯ ವಿಚಾರಸಂಕಿರಣ ನಡೆಸುತ್ತೇವೆ ಎಂದು ಸರ್ಕಾರ ಹೇಳಿತು. ಕಾಮನ್ ಮಿನಿಮಮ್ ಪ್ರೋಗ್ರಾಂ ಪ್ರಕಟವಾದ ತಕ್ಷಣವೇ ದೇಶದ 60ಕ್ಕೂ ಹೆಚ್ಚು ಐಟಿ ಸೆಕ್ಟರ್ ಉದ್ಯಮಿಗಳು (ಮುಖ್ಯವಾಗಿ ನಾರಾಯಣಮೂರ್ತಿ, ಅಜೀಮ್ ಪ್ರೇಮ್‌ಜೀ, ಟಾಟಾ ಮೊದಲಾದವರು) ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು. ನಮ್ಮ ಖಾಸಗಿ ಸಂಸ್ಥೆಗಳಲ್ಲಿ ಯಾವುದೇ ರೀತಿಯಲ್ಲೂ ಜಾತಿ ತಾರತಮ್ಯ ಮಾಡಲ್ಲ, ನಾವು ಪ್ರತಿಭೆಗೆ ಮಾತ್ರ ಆದ್ಯತೆ ಮತ್ತು ಪ್ರೋತ್ಸಾಹ ಕೊಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ವಾಸ್ತವ ಬೇರೆಯಾಗಿದೆ”.

“ಖಾಸಗಿ ಸಂಸ್ಥೆಯ ಹೇಳಿಕೆ ಹೊರಬಿದ್ದ ಬಳಿಕ 2007ರಲ್ಲಿ ಯುಜಿಸಿ ಚೇರ್‌ಮನ್ ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಅಕಾಡೆಮಿಕ್ ಸ್ಟಿಂಗ್ ಆಪರೇಷನ್ ಮಾಡಲಾಯಿತು. ನಾಲ್ಕು ಬಗೆಯ ಒಂದೇ ರೀತಿಯ ಅಪ್ಲಿಕೇಷನ್‌ಗಳನ್ನು ರೂಪಿಸಲಾಯಿತು. ಆದರೆ ಹೆಸರಿನಲ್ಲಿಯೇ ಜಾತಿಸೂಚಕಗಳಿರುವ ನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಉದಾಹರಣೆಗೆ ರಾಘವೇಂದ್ರ ಭಟ್ ಎಂದಿದ್ದರೆ ಬ್ರಾಹ್ಮಣ, ರಾಘವೇಂದ್ರ ಪೂಜಾರಿ ಎಂದಿದ್ದರೆ ಒಬಿಸಿ, ರಾಘವೇಂದ್ರ ಚಮ್ಮಾರ್ ಎಂದಿದ್ದರೆ ದಲಿತ, ರಫೀ ಎಂದಿದ್ದರೆ ಮುಸ್ಲಿಂ. ಈ ನಾಲ್ಕು ಜನರೂ ಒಂದೇ ರೀತಿಯ ವಿದ್ಯಾರ್ಹತೆ, ಮೆರಿಟ್ ಉಳ್ಳವರು. ಈ ನಾಲ್ಕು ಜನರ ಅಪ್ಲಿಕೇಷನ್‌ಗಳನ್ನು ಭಾರತದ ಆರು ನೂರು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗೆ ಉದ್ಯೋಗ ಕೋರಿ ಕಳುಹಿಸಲಾಯಿತು. ’ಭಟ್’ ಎಂದು ಹೆಸರುಳ್ಳು ಅಪ್ಲಿಕೇಷನ್‌ಗೆ ಹೆಚ್ಚಿನ ಸಂದರ್ಶನದ ಕರೆಗಳು ಬಂದಿದ್ದವು. ಈ ಅಭಿಯಾನದ ಮಾಹಿತಿ ಇಪಿಡಬ್ಲೂ ವೆಬ್‌ಸೈಟ್‌ನಲ್ಲಿ ಲಭ್ಯವಿದೆ” ಎನ್ನುತ್ತಾರೆ ಶಿವಸುಂದರ್.
“ಖಾಸಗಿ ಸಂಸ್ಥೆಗಳು ಪ್ರತಿಭೆಯನ್ನು ಮಾನದಂಡ ಎಂದು ಪರಿಗಣಿಸುವುದಾದರೆ ಈ ಎಲ್ಲ ಅಪ್ಲಿಕೇಷನ್‌ಗಳಿಗೆ ಸಮಾನವಾದ ಅವಕಾಶಗಳನ್ನು ನೀಡಬೇಕಿತ್ತಲ್ಲ? ಈ ನಾಲ್ವರಿಗೂ ಸಂದರ್ಶನದ ಕರೆ ಬರಬೇಕಿತ್ತಲ್ಲ? ನಿರೀಕ್ಷಿತವಾಗಿ ಶೇ.90ರಷ್ಟು ಸಂದರ್ಶನದ ಕರೆಗಳು ಬ್ರಾಹ್ಮಣ ಜಾತಿಸೂಚಕವುಳ್ಳ ವ್ಯಕ್ತಿಗೆ ಬರುತ್ತವೆ. ಶೇ.20ರಷ್ಟು ಕರೆಗಳು ದಲಿತರಿಗೆ ಬರುತ್ತವೆ. ಮುಸ್ಲಿಮರಿಗಂತೂ ಕಟ್ಟಕಡೆಯ ಆಹ್ವಾನ. ಈ ಅಭಿಯಾನವನ್ನು ಮುಂದಿಟ್ಟುಕೊಂಡು ಖಾಸಗಿ ಕ್ಷೇತ್ರಗಳನ್ನು ಪ್ರಶ್ನಿಸಲಾಗುತ್ತದೆ. ಮೆರಿಟ್ ಹೆಸರಲ್ಲಿ ಖಾಸಗಿ ಕ್ಷೇತ್ರಗಳಲ್ಲಿ ಹೇಗೆ ವ್ಯವಸ್ಥಿತವಾಗಿ ಜಾತಿ ತಾರತಮ್ಯವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಮಾಡುತ್ತಿದೆ ಎಂಬುದು ಇಲ್ಲಿ ಸಾಬೀತಾಗಿದೆ. ಈ ಕುರಿತು ದೇಶಪಾಂಡೆ ಎನ್ನುವವರು ಮತ್ತಷ್ಟು ಅಧ್ಯಯನ ಮಾಡಿದ್ದು, ಖಾಸಗಿ ಕ್ಷೇತ್ರದಲ್ಲಿ ಸ್ವಜಾತಿ, ಸ್ವಕುಟುಂಬ ಪ್ರೇಮ ಹೇಗಿರುತ್ತದೆ, ದಲಿತರ ಬಗ್ಗೆ ಎಂತಹ ತಿರಸ್ಕಾರ ಭಾವನೆ ಇರುತ್ತದೆ, ಸಂದರ್ಶನದ ವೇಳೆ ಹೇಗೆ ದಲಿತರನ್ನು ಫಿಲ್ಟರ್ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ” ಎಂದು ತಿಳಿಸಿದರು.
“ಇಂಗ್ಲಿಷ್ ಸಂವಹನ, ವ್ಯಕ್ತಿಯ ಅಭಿರುಚಿ, ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಮಾಧ್ಯಮಗಳ ಪೋಸ್ಟ್- ಹೀಗೆ ವಿವಿಧ ರೀತಿಯಲ್ಲಿ ಜಾಲಾಡುತ್ತಾರೆ. ಇದೆಲ್ಲದರ ಆಧಾರದಲ್ಲಿ ಕೆಲಸ ಕೊಡುತ್ತಾರೆ. ನಮ್ಮ ದೇಶದಲ್ಲಿ ಅಭಿರುಚಿಯಂತೂ ಜಾತಿಯ ಮೂಲದಿಂದಲೇ ಬಂದಿರುತ್ತದೆ. ಹೀಗಾಗಿ ಸಂದರ್ಶನದ ವೇಳೆ ದಲಿತರನ್ನು ನಿರಾಕರಿಸುತ್ತಾರೆ. ಖಾಸಗಿ ಕ್ಷೇತ್ರದಲ್ಲಿ ಜಾತಿ ತಾರತಮ್ಯ, ಜಾತಿ ತಿರಸ್ಕಾರ ಬೇರೂರಿದೆ. ಮೆರಿಟ್ ಹೆಸರಲ್ಲಿ ವಂಚಿಸಲಾಗುತ್ತಿದೆ ಎಂಬುದು ಸಾಬೀತಾಗಿದೆ” ಎಂದರು.
ಖಾಸಗಿ ವಲಯದ ಮೀಸಲಾತಿ ಜಾರಿಯ ಕುರಿತು ಆಗಾಗ್ಗೆ ಪ್ರಸ್ತಾಪವಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇತ್ತೀಚೆಗೆ ಈ ಕುರಿತು ಮಾತನಾಡಿದ್ದಾರೆ. ಖಾಸಗಿ ವಲಯದ ಮೀಸಲಾತಿಗೆ ಕಾಂಗ್ರೆಸ್ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ವಿವರಿಸಿದ ಶಿವಸುಂದರ್ ಅವರು, “ಖಾಸಗಿ ಕ್ಷೇತ್ರದ ಆರ್ಥಿಕ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಲು ನಿರಾಕರಿಸಿದೆ ಎಂಬ ನೆಪವನ್ನು ಮೊದಲಿನಿಂದಲೂ ಕೇಳುತ್ತಾ ಬಂದಿದ್ದೇವೆ. ಸಂವಿಧಾನವನ್ನೇ ತಿದ್ದುಪಡಿ ಮಾಡಬಹುದಲ್ಲ. ಅದನ್ನು ಯಾರೂ ಮಾಡಲು ಸಿದ್ಧರಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಮೆರಿಟೋಕ್ರಸಿಯನ್ನೇ ಪ್ರತಿಪಾದಿಸುತ್ತವೆ. ಕಾಂಗ್ರೆಸ್ ಪಕ್ಷವೂ ಈ ಹಿಂದೆ ಇದನ್ನೇ ಮಾಡಿದೆ. ಚುನಾವಣೆ ಬಂದಿರುವುದರಿಂದ ಚರ್ಚೆಗೆ ತಂದಿದ್ದಾರೆ” ಎಂದು ವಿಷಾದಿಸಿದರು.
ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ


