ನಾನು ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಬಿಜೆಪಿಯಲ್ಲಿದ್ದಾಗ ಇದೇ ರೀತಿಯ ಅನುಭವ ನನಗೂ ಆಗಿದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ನಾನು ಬಿಜೆಪಿಯಲ್ಲಿದ್ದು ಬಂದವ. ನನಗೂ ಇದೇ ರೀತಿಯ ಅನುಭವವಾಗಿದೆ. ಬಿಜೆಪಿಯಲ್ಲಿದ್ದಾಗ ಕೆಲವೊಂದು ಕಡೆ ನಮಗೆ ಆಹ್ವಾನವೇ ಇರುತ್ತಿರಲಿಲ್ಲ. ಕೆಲವೊಂದಿಷ್ಟು ವಿಷಯಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿಕೆ ನನಗೆ ಈಗ ಮತ್ತೆ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂಭಾಷಣೆಯ ಆಡಿಯೋ ಸಂದೇಶ ವೈರಲ್ ಆಗಿತ್ತು. ಆಡಿಯೋದಲ್ಲಿ ಬಹಳ ಖುಷಿಯಿಂದ ನಾನು ಆರ್‌ಎಸ್‌ಎಸ್ ಕಚೇರಿಗೆ ಹೋದೆ, ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇದೆ. ಚುನಾವಣೆ ಘೋಷಣೆಯಾಗುವುದಕ್ಕೂ ಎರಡು ತಿಂಗಳ ಮುಂಚೆ ಸ್ನೇಹಿತರ ಜತೆಗೆ ಮಹಾರಾಷ್ಟ್ರದ ನಾಗಪುರದ ಆರೆಸ್ಸೆಸ್ ಕಚೇರಿಗೆ ಖುಷಿಯಿಂದ ಭೇಟಿ ನೀಡಿದ್ದೆ. ಹೆಡಗೇವಾರ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದ ವಸ್ತುಸಂಗ್ರಹಾಲಯಕ್ಕೆ ತೆರಳಿದಾಗ ನನ್ನನ್ನು ಪರಿಶಿಷ್ಟ ಜಾತಿಯವನಾ ಎಂದು ಕೇಳಿದರು, ನಾನು ಹೌದು ಎಂದಿದ್ದಕ್ಕೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ನನಗೆ ಬಹಳ ನೋವಾಗಿದೆ ಎಂದು ಹೇಳಿದ್ದರು.
ಮ್ಯೂಸಿಯಂ ವೀಕ್ಷಣೆಗೆ ಬರುವವರ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ತಪ್ಪು ತಿಳಿಯಬೇಡಿ, ನೀವು ಮೀಸಲಾತಿ ಪಡೆದುಕೊಳ್ಳುವ ಜಾತಿಗೆ ಸೇರಿದ್ದೀರಾ ಎಂದು ಕೇಳಿದರು. ನಾನು ಹೌದು ಎಂದಿದ್ದಕ್ಕೆ ನನಗೆ ಪ್ರವೇಶ ನಿರಾಕರಿಸಿದರು. ನನ್ನೊಂದಿಗೆ ಬಂದಿದ್ದ ಇಬ್ಬರು ಸ್ನೇಹಿತರು ಮಾತ್ರ ಒಳಗೆ ಹೋದರು. ಪರವಾಗಿಲ್ಲ ಎಂದು ಹೇಳಿದ ನಾನು, ಹೊರಗೆ ಕಾಯುತ್ತಾ ಕುಳಿತುಕೊಂಡೆ. ಗೋವಿಂದ ಕಾರಜೋಳ ಹಾಗೂ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರಿಗೂ ಪ್ರವೇಶ ನಿರಾಕರಿಸಲಾಗಿತ್ತಾ? ಇದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿದ್ದರು.
ಆಡಿಯೋ ವೈರಲ್ ಆಗಿ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿದ್ದ ಆರ್‌ಎಸ್‌ಎಸ್ ಗೂಳಿಹಟ್ಟಿ ಆರೋಪ ನಿರಾಧಾರ ಎಂದು ಹೇಳಿತ್ತು. ಇತ್ತ ಕಡೆ ಬಿಜೆಪಿ ಕೂಡ ದಲಿತ ಸಮುದಾಯದ ನಾಯರನ್ನು ಮುಂದಿಟ್ಟುಕೊಂಡು ಗೂಳಿಹಟ್ಟಿ ಆರೋಪ ಸುಳ್ಳು ಎಂದು ಹೇಳಿಸಿತ್ತು.
ಇದನ್ನು ಓದಿ: ಗೂಳಿಹಟ್ಟಿ ‘ಅಸ್ಪೃಶ್ಯತೆ’ ಆರೋಪ; ದಲಿತ ನಾಯಕರನ್ನು ಮುಂದಿಟ್ಟು ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಯಿತೇ ಬಿಜೆಪಿ?


