Homeಕರ್ನಾಟಕಗೂಳಿಹಟ್ಟಿ 'ಅಸ್ಪೃಶ್ಯತೆ' ಆರೋಪ; ದಲಿತ ನಾಯಕರನ್ನು ಮುಂದಿಟ್ಟು 'ಡ್ಯಾಮೇಜ್ ಕಂಟ್ರೋಲ್‌'ಗೆ ಮುಂದಾಯಿತೇ ಬಿಜೆಪಿ?

ಗೂಳಿಹಟ್ಟಿ ‘ಅಸ್ಪೃಶ್ಯತೆ’ ಆರೋಪ; ದಲಿತ ನಾಯಕರನ್ನು ಮುಂದಿಟ್ಟು ‘ಡ್ಯಾಮೇಜ್ ಕಂಟ್ರೋಲ್‌’ಗೆ ಮುಂದಾಯಿತೇ ಬಿಜೆಪಿ?

- Advertisement -
- Advertisement -

‘ನಾನು ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ’ ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಪರಿಶಿಷ್ಟ ಸಮುದಾಯದ ವಿರುದ್ಧ ನಡೆಯುತ್ತಿರುವ ಬಹಿರಂಗ ಅಸ್ಪೃಶ್ಯತೆ ಆಚರಣೆ ವಿರುದ್ಧ ಮಾತನಾಡಿದ್ದ ಬಿಜೆಪಿ ಮಾಜಿ ಶಾಸಕನ ವಿರುದ್ಧ ಸ್ವಪಕ್ಷದ ದಲಿತ ನಾಯಕರೇ ಈಗ ತಿರುಗಿಬಿದ್ದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಪಿ. ರಾಜೀವ್ ಹಾಗೂ ಅರವಿಂದ ಲಿಂಬಾವಳಿ ಅವರು ಗೂಳಿಹಟ್ಟಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ದಲಿತ ನಾಯಕರನ್ನೇ ಮುಂದಿಟ್ಟು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತೇ ಎಂಬ ಪ್ರಶ್ನೆ ಎದ್ದಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಗೂಳಿಹಟ್ಟಿ ಶೇಖರ್ ಕಳುಹಿಸಿದ್ದಾರೆ ಎನ್ನಲಾಗಿದ್ದು ಆಡಿಯೋ ವೈರಲ್ ಆಗಿ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿದ್ದ ಆರ್‌ಎಸ್‌ಎಸ್‌, ‘ಗೂಳಿಹಟ್ಟಿ ಆರೋಪ ನಿರಾಧಾರ’ ಎಂದು ಹೇಳಿತ್ತು. ಇತ್ತಕಡೆ ಬಿಜೆಪಿ ಕೂಡ ದಲಿತ ಸಮುದಾಯದ ನಾಯರನ್ನು ಮುಂದಿಟ್ಟುಕೊಂಡು, ಗೂಳಿಹಟ್ಟಿ ಆರೋಪ ಸುಳ್ಳು ಎಂದು ಹೇಳಿಸಿದೆ.

ಗೂಳಿಹಟ್ಟಿ ಹೇಳಿಕೆ ಹಿಂದೆ ಕಾಣದ ಕೈಗಳ ಒತ್ತಡ:

‘ಆರ್‌ಎಸ್‌ಎಸ್‌ ಕುರಿತು ಗೂಳಿಹಟ್ಟಿ ನೀಡಿದ ಹೇಳಿಕೆ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಅವರು ಯಾವ ಮಾನಸಿಕ ಸ್ಥಿತಿಯಲ್ಲಿ, ಯಾರಿಂದ ದುಷ್ಪ್ರೇರಣೆಗೆ ಒಳಗಾಗಿ, ಯಾವ ಕಾಣದ ಕೈಗಳ ಒತ್ತಡಕ್ಕೆ ಒಳಗಾಗಿ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ’ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ. ರಾಜೀವ್ ಆರೋಪವನ್ನು ನಿರಾಕರಿಸಿದ್ದಾರೆ.

‘ಗೂಳಿಹಟ್ಟಿ ಶೇಖರ್ ಅವರು ಹೇಳಿದ್ದು ತಪ್ಪು ಮಾಹಿತಿ. ನಾನು ಒಬ್ಬ ದಲಿತನಾಗಿದ್ದು, ರಾಜಕಾರಣಕ್ಕೆ ಬಂದ ಮೇಲೆ ಆರ್‌ಎಸ್‌ಎಸ್‌ ಸಂಪರ್ಕದಲ್ಲಿದ್ದು, ಹತ್ತಿರದಿಂದ ನೋಡಿದ್ದೇನೆ. ಆರ್‌ಎಸ್‌ಎಸ್‌ ಎಲ್ಲರನ್ನೂ ಜೋಡಿಸುತ್ತದೆ. ಸಂಪೂರ್ಣ ಹಿಂದೂ ಸಮಾಜವನ್ನು ಒಗ್ಗೂಡಿಸುತ್ತದೆ. ಆರ್‌ಎಸ್‌ಎಸ್‌, ಭಾರತ ಮಾತೆಯ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತದೆ. ಅಲ್ಲಿ ಜಾತೀಯತೆ, ಒಡೆಯುವಂಥದ್ದು, ಜಾತಿ ಕೇಳುವ ಆಚರಣೆ ನನ್ನ ಗಮನಕ್ಕೆ’ ಬಂದಿಲ್ಲ ಎಂದರು.

ಉಂಡ ತಟ್ಟೆಯಲ್ಲಿ ಮಣ್ಣು ಹಾಕಿ ಹೋಗುವುದು ಎಷ್ಟು ಸರಿ?

ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಆಕ್ರೋಶ ಹೊರಹಾಕಿರುವ ಬಿಜೆಪಿಯ ಮತ್ತೋರ್ವ ದಲಿತ ಮುಖಂಡ ಛಲವಾದಿ ನಾರಾಯಣಸ್ವಾಮಿ, ‘ಗೂಳಿಹಟ್ಟಿ ಶೇಖರ್ ಆರ್‌ಎಸ್‌ಎಸ್‌ ಕುರಿತಂತೆ ಸತ್ಯಕ್ಕೆ ದೂರವಾದ ಪ್ರಸ್ತಾಪ ಮಾಡಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಜಾತಿಭೇದ ಇಲ್ಲ. ರಿಜಿಸ್ಟರ್‌ನಲ್ಲಿ ಸಹಿ ಮಾಡುವ ಪದ್ಧತಿಯೂ ಇಲ್ಲ. ಅವರ ಆಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ್ದೇನೆ. ಅದು ನಿಜಕ್ಕೂ ಅವರದೇ ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬಂದ ವಿಷಯ ನಮ್ಮ ಪಕ್ಷದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿದೆ. ಅವರು ನಮ್ಮ ಪಕ್ಷದ ಸದಸ್ಯರಾಗಿದ್ದರು’ ಎಂದು ತಿಳಿಸಿದರು.

‘ನನ್ನ ಅನುಭವದ ಪ್ರಕಾರ ಸಂಘದಲ್ಲಿ ಯಾವುದೇ ತಾರತಮ್ಯ ಇಲ್ಲ; ಇದು ಸ್ಪಷ್ಟ. ಇವತ್ತು ಗೂಳಿಹಟ್ಟಿಯವರು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್ ಬಾಗಿಲು ತಟ್ಟುವ ಸಂದರ್ಭದಲ್ಲಿ ಪಕ್ಷಕ್ಕೆ ಈ ರೀತಿ ಹಾನಿ ಮಾಡುವುದು ಸರಿಯಾದ ಕ್ರಮವಲ್ಲ. ನೀವು ಕಾಂಗ್ರೆಸ್‌ಗೆ ಹೋಗುವುದಾದರೆ ನಮ್ಮ ಅಡ್ಡಿ ಇಲ್ಲ; ಹೋಗಬಹುದು. ಆದರೆ, ನೀವು ಉಂಡ ತಟ್ಟೆಯಲ್ಲಿ ಮಣ್ಣು ಹಾಕಿ ಹೋಗುವುದು ಎಷ್ಟು ಸರಿ’ ಎಂದು ಛಲವಾದಿ ಕಿಡಿಕಾರಿದ್ದಾರೆ.

ಗೂಳಿಹಟ್ಟಿ ಆಡಿಯೋದಲ್ಲಿ ಮಾತನಾಡಿದ್ದು ಶುದ್ಧ ಸುಳ್ಳು:

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ‘ಆರ್‌ಎಸ್‌ಎಸ್‌ ಕೇಂದ್ರ ಕಚೇರಿ, ಇತರ ಯಾವುದೇ ಕಚೇರಿಗಳಲ್ಲಿ ಜಾತಿ ಕೇಳಿ ಒಳಕ್ಕೆ ಬಿಡುವ ಪದ್ಧತಿಯೇ ಇಲ್ಲ. ನಾನು ಆರ್‌ಎಸ್‌ಎಸ್‌, ವಿದ್ಯಾರ್ಥಿ ಪರಿಷತ್ತಿನಲ್ಲಿ ಬೆಳೆದ ಹುಡುಗ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ವಯಂಸೇವಕನಾಗಿದ್ದೆ. ನನ್ನ ಜಾತಿ ಬಗ್ಗೆ ಬಹಳ ಜನರಿಗೆ ಗೊತ್ತಾದುದು ಬಿಜೆಪಿಗೆ ಬಂದ ಬಳಿಕ. ಸುಳ್ಳು ಸುದ್ದಿ ಹಬ್ಬಿಸಬೇಡಿ. ಆರ್‌ಎಸ್‌ಎಸ್‌ನ ರಾಜ್ಯ, ಇತರ ರಾಜ್ಯಗಳ ಪದಾಧಿಕಾರಿಗಳ ಮನೆಗೂ ಹೋಗಿದ್ದೇನೆ. ಅವರ ಮನೆಯಲ್ಲೂ ಜಾತಿ ಕೇಳುವುದಿಲ್ಲ. ಅಲ್ಲಿ ಕೂಡ ಆತಿಥ್ಯ ಗಮನಿಸಿದರೆ, ಭೇದಭಾವ ಕಾಣಲಿಲ್ಲ. ಚರ್ಚೆಗಾಗಿ ಆರ್‌ಎಸ್‌ಎಸ್‌ ಅನ್ನು ಎಳೆದು ತರುವುದು ನಿಲ್ಲಿಸಿ’ ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...