ಶಿಕ್ಷಣ ಕ್ಷೇತ್ರದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದ ಅನುಭವಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳಾಗುವ ಅರ್ಹತೆ ದೊರಕಿಸಿಕೊಡುವ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ನಿಯಮಗಳ ಕರಡನ್ನು ಕೇಂದ್ರ ರೂಪಿಸಿದ್ದು, ಒಕ್ಕೂಟ ಸರ್ಕಾರ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಿವೃತ್ತ ಪ್ರಾಧ್ಯಾಪಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ ಹಾಗೂ ಪ್ರೊ. ರಹಮತ್ ತರೀಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ‍್ಳಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ” ಎಂದು ಹೇಳಿದ್ದಾರೆ.
“ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಸಣ್ಣ ಅವಕಾಶವನ್ನೂ ಬಿಟ್ಟುಕೊಡದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುಜಿಸಿ ನೇಮಕಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಕರಡು ನಿಯಮಾಳಿಗಳನ್ನು ನಮ್ಮ ಸರ್ಕಾರ ಪರಿಶೀಲಿಸಿ, ಇದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಚನೆ ಮಾಡಲಾಗುವುದು” ಎಂದರು.
“ಈಗಿರುವ ನಿಯಮಾವಳಿಗಳ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸುತ್ತಿತ್ತು. ಅದರಲ್ಲಿ ಕುಲಪತಿಗಳಾಗಿರುವ ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳು ಕೂಡಾ ಸದಸ್ಯರಾಗಿರುತ್ತಿದ್ದರು. ಹೊಸ ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿಯಾಗಿದೆ” ಎಂದರು.
“ರಾಜ್ಯದ ವಿಶ‍್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಾಗಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಯುಜಿಸಿ ಹೊಸ ನಿಯಮಾವಳಿಗಳು ಹೇಳುತ್ತಿದೆ. ಇಲ್ಲಿಯ ವರೆಗೆ ಆಯಾ ರಾಜ್ಯಗಳ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ರಾಜ್ಯಪಾಲರ ಹುದ್ದೆ ಹೊಸ ನಿಯಮಗಳು ಜಾರಿಗೆ ಬಂದರೆ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸ್ಥಾನದಲ್ಲಿ ಅನ್ಯಭಾಷಿಕರು ಬಂದು ಕೂರುವ ಅಪಾಯ ಇದೆ” ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
“ಉಪಕುಲಪತಿಗಳ ನೇಮಕಾತಿಯ ಅರ್ಹತೆಗೆ ಸಂಬಂಧಿಸಿದಂತೆಯೂ ಕೆಲವು ಪ್ರಮುಖ ಬದಲಾವಣಿಗಳನ್ನು ಮಾಡಲಾಗಿದೆ. ಹೊಸ ನಿಯಮಗಳ ಪ್ರಕಾರ ಉಪಕುಲಪತಿಗಳನ್ನು ಕೇವಲ ಅಕಾಡೆಮಿಕ್ ವಲಯದಿಂದ ಮಾತ್ರ ನೇಮಿಸಿಕೊಳ್ಳದೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿದಂತೆ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ನೇಮಕಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಬಗೆಯುವ ದ್ರೋಹವಾಗಿದೆ” ಎಂದು ಕಿಡಿಕಾರಿದ್ದಾರೆ.
“ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರು ಅನಗತ್ಯವಾಗಿ ಮೂಗುತೂರಿಸುತ್ತಾ ಬಂದಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ನಿರ್ಲಕ್ಷಿಸಿ ತಮ್ಮ ಆಯ್ಕೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ನಿರ್ವಹಣೆ ರಾಜ್ಯ ಸರ್ಕಾರದ ಪರಮಾಧಿಕಾರವಾಗಿದ್ದು ಇದರಲ್ಲಿ ಅನಗತ್ಯವಾದ ಮಧ್ಯಪ್ರವೇಶದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಏರ್ಪಡುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
“ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಇಂತಹ ನಡವಳಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದಿದ್ದಾರೆ.
ಕೊನೆಯ ಮೊಳೆ: ರಹಮತ್ ತರೀಕೆರೆ
“ವಿಶ್ವವಿದ್ಯಾಲಯಗಳಿಗೆ ಬೌದ್ಧಿಕ ನಾಯಕತ್ವ ಕೊಡುವ ಕೆಲಸವನ್ನು ಅದರ ಕುಲಪತಿಗಳು ಮಾಡುವಂಥವರಾಗಬೇಕು ಎಂಬುದು ಉನ್ನತ ಶಿಕ್ಷಣ ರೂಪಿಸಿದ ಪೂರ್ವಿಕರ ಆಶಯವಾಗಿತ್ತು. ಈ ಸದಾಶಯವು, ರಾಜಕಾರಣ, ಹಣ, ಸಿದ್ಧಾಂತ, ಜಾತಿ, ಖಾಸಗಿ ವಿವಿಗಳ ಸ್ಥಾಪನೆ ಮತ್ತು ಲೋಕೋಪಯೋಗಿ ಇಲಾಖೆಯಷ್ಟು ಮುಖ್ಯವಲ್ಲದ ಖಾತೆಯೆಂಬ ಎಲ್ಲ ಪಕ್ಷದ ಸರ್ಕಾರಗಳ ಉಪೇಕ್ಷೆಗಳಿಂದ ಎಂಥ ಅವಸ್ಥೆಗೆ ಮುಟ್ಟಿದೆ ಎನ್ನುವುದು ಸರ್ವವಿದಿತ. ಆದರೆ, ಈ ಇಕ್ಕಟಿನಲ್ಲೂ ವಿದ್ವಾಂಸರು ಮುಂಗಾಣ್ಕೆಯುಳ್ಳವರು ಆದ ಕೆಲವರು ಆಯ್ಕೆಯಾಗುತ್ತ ಸಂಸ್ಥೆಗಳ ಮರ್ಯಾದೆ ಉಳಿಸಿಕೊಂಡು ಬಂದಿದ್ದರು” ಎಂದು ಚಿಂತಕರಾದ ಪ್ರೊ. ರಹಮತ್ ತರೀಕೆರೆ ಹೇಳಿದ್ದಾರೆ.
“ಈಗ ಕೇಂದ್ರ ಸರ್ಕಾರವು ಮಾಡಬಯಸಿರುವ ರಚನಾತ್ಮಕ ಬದಲಾವಣೆ, ಈಗಿರುವ ಸಮಸ್ಯೆಗಳಿಂದ ಸಂಸ್ಥೆಗಳನ್ನು ಪಾರುಮಾಡಬೇಕಿತ್ತು. ಬದಲಿಗೆ ಮತ್ತಷ್ಟು ಬಿಕ್ಕಟ್ಟಿಗೆ ದೂಡುತ್ತಿದೆ. ಹೊಡೆದ ಮೊಳೆಗಳನ್ನು ಕೀಳುವ ಬದಲಿಗೆ, ಕೊನೆಯ ಮೊಳೆ ಹೊಡೆಯುತ್ತಿದೆ. ರಾಜಕೀಯ ಪಕ್ಷದ ಕಾಲಾಳುಗಳೂ ಬೃಹತ್ ಉದ್ಯಮಿಗಳ ಹಿತಾಸಕ್ತ ಅಧಿಕಾರಿಗಳೂ ವಿವಿಗಳನ್ನು ಮುನ್ನಡೆಸುವುದಕ್ಕೆ ಅಧಿಕೃತ ಮುದ್ರೆ ಒತ್ತುತ್ತಿದೆ. ಕ್ಯಾಪಿಟಲಿಸಂ-ಕಮ್ಯುನಲಿಸಂಗಳ ಈ ಅಪವಿತ್ರ ಸಖ್ಯ ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಳಿತೆಸಗದು. ಆರೋಗ್ಯ ಶಿಕ್ಷಣಕ್ಷೇತ್ರಗಳು ಖಾಸಗೀಕರಣಗೊಂಡಷ್ಟೂ ಅನ್ಯಾಯಕ್ಕೆ ಒಳಗಾಗುವವರು ಈ ದೇಶದ ಬಡವರು” ಎಂದಿದ್ದಾರೆ.

ಉದ್ಯಮೀಪತಿಗಳೇ ವಿವಿಗಳನ್ನು ಆಳುವ ಕಾಲ ಜಾರಿಯಾಗಲಿದೆ: ಅರವಿಂದ ಮಾಲಗತ್ತಿ
“ಇನ್ನು ಉದ್ಯಮೀಪತಿಗಳೇ ವಿಶ್ವವಿದ್ಯಾನಿಲಯಗಳನ್ನು ಆಳುವ ಕಾಲ ಜಾರಿಯಾಗಲಿದೆ. ಸಾಮಾನ್ಯ ಜನತೆಯ ಶಿಕ್ಷಣ ಅಯೋಮಯ ಸ್ಥಿತಿಗೆ ತಿರುಗಬಹುದು” ಎಂದು ಪ್ರೊ. ಅರವಿಂದ ಮಾಲಗತ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
“ವಿಶ್ವವಿದ್ಯಾನಿಲಯದ ಅನುದಾನ ಆಯೋಗವು (ಯುಜಿಸಿ) 2025 ರ ಹೊಸ ನಿಯಮಗಳ ಕರಡನ್ನು ರೂಪಿಸಿದ್ದು ವರದಿಯಾಗಿದೆ. ಪತ್ರಿಕೆಗಳಲ್ಲಿ ವರದಿಯಾದ ವಿಚಾರಗಳಿಗೆ ಅನುಗುಣವಾಗಿ ಪರಿಶೀಲಿಸಿದರೆ, ವಿಶ್ವವಿದ್ಯಾನಿಲಯಗಳು ಉದ್ದಿಮೆಯ ಕೇಂದ್ರಗಳಾಗುವ ಸಕಲಸಿದ್ಧತೆಯನ್ನು ಮಾಡಿದಂತಿದೆ ಕುಲಪತಿಯ ನೇಮಕಕ್ಕೆ ಅರ್ಹತೆಗಳನ್ನು ಬದಲಾಯಿಸಲಾಗಿದೆ. ಉದ್ಯಮ, ಸಾರ್ವಜನಿಕ ಆಡಳಿತ ನೀತಿ ನಿರೂಪಣೆ ಅಥವಾ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರು ಕುಲಪತಿಯಾಗುವ ಅರ್ಹತೆಯನ್ನು ಪಡೆದಿರುತ್ತಾರೆ ಎಂದಿದೆ. ಎರಡನೆಯದಾಗಿ ನೂತನ ಬೋಧನಾ ವಿಧಾನಗಳ ಶೋಧ ಡಿಜಿಟಲ್ ಕಂಟೆಂಟ್ ಸೃಷ್ಟಿ, ಸಂಶೋಧನೆಗೆ ನಿಧಿ ಸಂಗ್ರಹಕ್ಕೆ ಕೊಡುಗೆಯಾಗುವಂತಹ ವೃತ್ತಿಪರ ಸಾಧನೆಯನ್ನು ಗುರುತಿಸುವುದಕ್ಕಾಗಿ ವಿದ್ಯಾ ಅರ್ಹತೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ. ಈ ಎರಡು ಸಂಗತಿಗಳು, ಸ್ಪಷ್ಟಪಡಿಸುವುದೇನೆಂದರೆ; ಶಿಕ್ಷಣ ಕ್ಷೇತ್ರ ಸೇವಾ ಕ್ಷೇತ್ರವಾಗದೆ ಉದ್ಯಮ ಕ್ಷೇತ್ರವಾಗಿ ಬದಲಾವಣೆ ಮಾಡುವುದಾಗಿದೆ ಎಂದು ಸಾರುತ್ತದೆ” ಎಂದಿದ್ದಾರೆ.
“ಇಂಥ ಪರಿಕಲ್ಪನೆಯಿಂದ ಆದಾಯ ತರಬಲ್ಲ ವಿಭಾಗಗಳು ಜೀವಂತವಾಗಿರುತ್ತವೆ. ಆದಾಯ ತರದ ವಿಭಾಗಗಳು ಬಾಗಿಲು ಹಾಕುವ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುವ ಕಾಲವಿದು. ಇದರ ಮೊದಲ ಬಲಿಪಶು ಕಲಾನಿಕಯಗಳು (ಭಾಷೆ, ಕಲೆಗಳು, ಸಾಹಿತ್ಯ) ಹಾಗೂ ಮಾನವಿಕ ವಿಭಾಗಗಳು (ಸಮಾಜಶಾಸ್ತ್ರ, ರಾಜ್ಯಶಾಸ್ತ್ರ) ಇಂಥವೆಲ್ಲ ಅನುತ್ಪಾದಕ ಕ್ಷೇತ್ರಕ್ಕೆ ಸಂಬಂಧಪಟ್ಟವು ಎಂದು ತಿಳಿದಿರುವುದರಿಂದ ಇಂಥವುಗಳಿಗೆ ಉಸಿರಾಡಲು ಕಷ್ಟ ಸಾಧ್ಯವೆನಿಸುತ್ತದೆ. ಬದಲಾದ ನಿಯಮಗಳು; ನಾಯಕರಿದ್ದಂತೆ ನಾಡು, ಕುಲಪತಿಗಳಿದ್ದಂತೆ ಶಿಕ್ಷಣ ಎನ್ನುವ ಗಾದೆ ಬಳಕೆಗೆ ಬರುವ ಸಕಲ ಲಕ್ಷಣಗಳಿವು. ಇನ್ನು ಉದ್ಯಮೀಪತಿಗಳೇ ವಿಶ್ವವಿದ್ಯಾನಿಲಯಗಳನ್ನು ಆಳುವ ಕಾಲ ಜಾರಿಯಾಗಲಿದೆ. ಸಾಮಾನ್ಯ ಜನತೆಯ ಶಿಕ್ಷಣ ಅಯೋಮಯ ಸ್ಥಿತಿಗೆ ತಿರುಗಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ವಿಶ್ವವಿದ್ಯಾನಿಲಯದ ಕುಲಪತಿಗಳ ಸ್ಥಾನ ಈಗಾಗಲೇ ಧರೆಗಿಳಿಸಿದ ಶ್ರೇಯಸ್ಸು, ಡಿಮ್ಡ್ ವಿಶ್ವವಿದ್ಯಾನಿಲಯಗಳಿಗೆ ಸಲ್ಲುತ್ತದೆ. ಈ ಡಿಮ್ಡ್ ವಿಶ್ವವಿದ್ಯಾನಿಲಯಗಳು ತಳ್ಳುಗಾಡಿಯ ಪಾನಿಪುರಿ ಅಂಗಡಿಗಳಂತಾಗಿವೆ. ಈಗ ಅದರ ಸರದಿ ಅರೆ ಸರ್ಕಾರಿ ವಿಶ್ವವಿದ್ಯಾನಿಲಯಗಳದ್ದಾಗಿದೆ. ಇದರರ್ಥ ನಾನು ಖಾಸಗಿ ವಿಶ್ವವಿದ್ಯಾನಿಲಯಗಳನ್ನು ವಿರೋಧಿಸುತ್ತೇನೆ ಎಂದಲ್ಲ. ಎಲ್ಲವೂ ಹಾಗೆಯೇ ಇವೆ ಎಂದರ್ಥವೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಯ ಸಹಭಾಗಿತ್ವವಾಗಿದೆ ಎನ್ನುವ ಅರಿವೂ ನನಗಿದೆ” ಎಂದು ಹೇಳಿದ್ದಾರೆ.
“ವಿಶ್ವವಿದ್ಯಾನಿಲಯಗಳಿಗೆ ಅದರದ್ದೇ ಆದ ಘನತೆ ಗೌರವ ಸ್ಥಾನಮಾನವನ್ನು ಹೊಂದಿವೆ. ಅದಕ್ಕೆ ಮುಖ್ಯ ಕಾರಣ, ಶಿಕ್ಷಣ/ ಜ್ಞಾನ ಎಂಬುದು ವಿನಿಮಯದ /ಹಂಚುಂಬುವ ಕ್ಷೇತ್ರ ಎನ್ನುವುಗಿತ್ತು. ಈಗ ದುಡ್ಡಿದ್ದರೆ ಜ್ಞಾನವನ್ನು ಹಂಚಿ ಎನ್ನುವ ಸ್ಥಾನಕ್ಕೆ ತಿರುಗುವ ಸ್ವರೂಪ. ಸರ್ಕಾರಿ ವಿಶ್ವವಿದ್ಯಾನಿಲಯಗಳ ಈಗಿನ ಸ್ಥಿತಿ ಎಂದರೆ, ಖಾಲಿ ಗಡಿಗೆಯಲ್ಲಿ ಸವಟು ಆಡಿಸಿವ ಸ್ವರೂಪದಲ್ಲಿವೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ಕ್ಷೇತ್ರ ಅನುತ್ಪಾದಕ ಕ್ಷೇತ್ರ ಎಂಬ ಪರಿಕಲ್ಪನೆ ಇದಕ್ಕೆ ಕಾರಣವಾಗಿದೆ. ಇದರ ಮೂಲ ಕಾರಣಗಳಲ್ಲೊಂದು ರಾಜಕೀಯ ವ್ಯವಸ್ಥೆಗೆ ಶೈಕ್ಷಣಿಕ ಮಾನದಂಡ ಇಲ್ಲದಿರುವುದೂ ಆಗಿರಬಹುದು” ಎಂದು ಬೇಸರ ಹೊರಹಾಕಿದ್ದಾರೆ.
“ಎಲ್ಲಾ ಕಲಿಕೆಯ ಜ್ಞಾನದ ಕ್ಷೇತ್ರಗಳನ್ನು ಉತ್ಪಾದಕ ಕ್ಷೇತ್ರಗಳನ್ನಾಗಿ ಪರಿಗಣಿಸುವುದು ಎಂದರೆ ಸಾಮಾಜಿಕ ಧಾರ್ಮಿಕ ಮೌಲ್ಯಗಳನ್ನು ಬದಿಗೆ ಸರಿಸಿದಂತೆಯೇ ಸರಿ. ಇಷ್ಟು ದಿನಗಳ ಕಾಲ ಇದು ಜಾಗತೀಕರಣದ ಹೆಸರಿನಲ್ಲಿ ಆಘೋಷಿತವಾಗಿ ನಡೆಯುತ್ತಿತ್ತು, ಪ್ರಾಯೋಗಿಕತೆ ಹಿನ್ನೆಲೆಯಲ್ಲಿ ನಡೆಯುತ್ತಿತ್ತು. ಆದರೆ, ಈಗ ಅದಕ್ಕೆ ನಿಯಮಾವಳಿಯ ಅಧಿಕೃತ ರೂಪ ಸಿಕ್ಕಂತಾಗಿದೆ” ಎಂದು ಹೇಳಿದ್ದಾರೆ.
“ಸಂಶೋಧನೆ ಮಾಡುವವರು ಮೊದಲು ಆರ್ಥಿಕ ಆಕರವನ್ನು ಹುಡುಕಿ, ಆನಂತರ ಸಂಶೋಧನೆಗೆ ತೊಡಗುವುದು ಕಲಾವಿಭಾಗಕ್ಕೆ ದೊಡ್ಡ ಪೆಟ್ಟನ್ನು ಕೊಡುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದ ಹಣ ಗಳಿಕೆಯ ಚಿಂತನ ಮಾರ್ಗ ಬದುಕನ್ನು ಕಟ್ಟಿಕೊಡುವಲ್ಲಿ ಸೋಲುತ್ತದೆ ಎನ್ನುವ ಅರಿವು ನಮ್ಮದಾದಾಗ ಭೌತ ಮಾರ್ಗದೊಂದಿಗೆ ಅಭೌತದ ಮಾರ್ಗಕ್ಕೂ ಮಾನ್ಯತೆ ದೊರಕುತ್ತದೆ. ಹೀಗಾಗದೆ, ಹೋದರೆ ಯಾಂತ್ರಿಕವಾದ ಬದುಕು ಸೃಷ್ಟಿಯಾಗಿ ಅತೃಪ್ತ ಜಗ ನಿರ್ಮಾಣವಾಗಲು ಅನುವು ಮಾಡಿಕೊಟ್ಟಂತಾಗುತ್ತದೆ” ಎಂದು ಅವರು ಭವಿಷ್ಯ ನುಡಿದಿದ್ದಾರೆ.
“ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರಿ ಹಾಗೂ ಅರೆಸರ್ಕಾರಿ ಸಂಸ್ಥೆಗಳು ಮಾಡಿದ ಒಂದು ದೊಡ್ಡ ಲೋಪವೆಂದರೆ, ತಮಗೆ ಬಂದ ಆದಾಯವನ್ನೆಲ್ಲ ಖರ್ಚು ಮಾಡುವುದರಲ್ಲಿಯೇ ಕಾಲ ಕಳೆದವು. ಮೊದಮೊದಲು ನೈತಿಕವಾಗಿ ಗಟ್ಟಿ ಇದ್ದರೂ ಅನಂತರದಲ್ಲಿ ಆ ನೈತಿಕತೆ ಸಡಿಲಾಗಿ, ಲೇವಾದೇವಿಯ ಕ್ಷೇತ್ರವಾದದ್ದು ಕಣ್ಣೆದುರುಗಿದೆ. ಭವಿಷ್ಯತ್ತಿನಲ್ಲಿ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು ಎನ್ನುವುದೇ ಪ್ರಧಾನವಾಗಿದ್ದಲ್ಲಿ, ಮನೆಯ ಯಜಮಾನ ತನ್ನ ಮನೆಯ ಭದ್ರತೆಗಾಗಿ ಆಸ್ತಿಯನ್ನು ಮಾಡುವಂತೆ ಸಂಸ್ಥೆಗೆ ಅಂತಹ ಶಕ್ತಿಯ ಭದ್ರತೆಯನ್ನು ರೂಪಿಸುವ ಪರಿಕ್ರಮ ನಾವು ಮಾಡಬೇಕಾಗಿತ್ತು. ಅಂಥಲ್ಲಿ ಸೋತಿದ್ದರಿಂದಾಗಿ ಈ ವ್ಯವಸ್ಥೆಗೆ ನಾವು ಅನಿವಾರ್ಯವಾಗಿ ತಲೆ ಕೊಡಬೇಕಾಗಿದೆ ಎನ್ನುವದು ಮರೆಯುವ ಹಾಗಿಲ್ಲ. ಈಗ ಅದಕ್ಕೆ ಜಾಗತೀಕರಣದ ಲೇಪ ಹಚ್ಚಿ ಜಾರಿಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ” ಎಂದು ಅವರು ಮಾಲಗತ್ತಿ ಹೇಳಿದ್ದಾರೆ.

ಇದನ್ನೂ ಓದಿ; ಸಿಟಿ ರವಿ ದುರ್ವರ್ತನೆ ಆರೋಪ; ಸಿದ್ದರಾಮಯ್ಯ ಅವರಿಂದ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್


