ಅಕ್ರಮ ನಡೆದಿರುವ ಶಂಕೆ ಮೇಲೆ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್-ಯುಜಿಸಿ ನೆಟ್) ಪರೀಕ್ಷೆಯನ್ನು ಮುಂದೂಡಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚಿಸಿದೆ.
ಜೂನ್ 25ರಿಂದ 27ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿರಬಹುದು ಎಂಬ ಅನುಮಾನದ ಮೇಲೆ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಮುಂದೂಡಲು ಸೂಚಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಪ್ರಮುಖ ಜೊತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸರಣಿ ಸಭೆಗಳನ್ನು ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕೇಂದ್ರದ ಹೊಸ ಪರೀಕ್ಷಾ ಅಕ್ರಮ ತಡೆ ಕಾನೂನು ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ-2024ರ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದ ದಿನವೇ ಪರೀಕ್ಷೆ ಮುಂದೂಡಲು ಸೂಚಿಸಲಾಗಿದೆ.
ಡಿಸೆಂಬರ್ 2019 ರಿಂದ ಯುಜಿಸಿ ಮತ್ತು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಪರವಾಗಿ ಎನ್‌ಟಿಎ ಆನ್‌ಲೈನ್ ಮೋಡ್‌ನಲ್ಲಿ ಸಿಎಸ್‌ಐಆರ್-ಯುಜಿಸಿ ನೆಟ್ ಪರೀಕ್ಷೆ ನಡೆಸುತ್ತಿದೆ. ನಿರೀಕ್ಷೆಯಿತ್ತು.
ಸಿಎಸ್‌ಐಆರ್-ಯುಜಿಸಿ ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸಂದೇಶ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಶುಕ್ರವಾರ ಶಿಕ್ಷಣ ಸಚಿವರಿಗೆ ಮಾಹಿತಿ ನೀಡಲಾಗಿದೆ. ಶಿಕ್ಷಣ ಸಚಿವಾಲಯ ಈ ಕುರಿತು ಗೃಹ ಸಚಿವಾಲಯ ಅಥವಾ ಐ4ಸಿ (ಸೈಬರ್ ಅಪರಾಧದ ವಿರುದ್ಧ ಹೋರಾಡುವ ಗೃಹ ಇಲಾಖೆಯ ಕೇಂದ್ರ) ಯಿಂದ ಯಾವುದೇ ಮಾಹಿತಿ ಸ್ವೀಕರಿಸದಿದ್ದರೂ ನೆಟ್ ವಿಷಯದಲ್ಲಿ ಮಾಡಿದಂತೆ ಖಚಿತಪಡಿಸಿಕೊಳ್ಳಲು ಪರೀಕ್ಷೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಲಾಜಿಸ್ಟಿಕ್ ಸಮಸ್ಯೆಗಳಿಂದ ಪರೀಕ್ಷೆ ಮುಂದೂಡಲಾಗುತ್ತಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು ಎಂದು ಎನ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಿಎಸ್‌ಐಆರ್-ಯುಜಿಸಿ ನೆಟ್ ಜೂನ್ ಮತ್ತು ಡಿಸೆಂಬರ್‌ನಲ್ಲಿ ನಡೆಯುವ ದ್ವೈವಾರ್ಷಿಕ ಪರೀಕ್ಷೆಯಾಗಿದೆ. ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನದಲ್ಲಿ ಉಪನ್ಯಾಸಕರ ಅರ್ಹತೆಯನ್ನು ನಿರ್ಧರಿಸಲು ಇದನ್ನು ನಡೆಸಲಾಗುತ್ತದೆ. ಇದು ಪಿಹೆಚ್‌ಡಿ ಪ್ರವೇಶಕ್ಕೆ ನಿರ್ಣಾಯಕ ಮಾನದಂಡವಾಗಿದೆ.
ಪ್ರತಿಷ್ಠಿತ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಐಐಟಿಗಳು ಕೂಡ ಪಿಹೆಚ್‌ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ಸಿಎಸ್‌ಐಆರ್-ಯುಜಿಸಿ ನೆಟ್ ಫಲಿತಾಂಶವನ್ನು ಅರ್ಹತೆಯಾಗಿ ಸ್ವೀಕರಿಸುತ್ತವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಗೆ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ವೈಎಸ್‌ಆರ್ ಕಾಂಗ್ರೆಸ್‌ನ ನಿರ್ಮಾಣ ಹಂತದ ಕೇಂದ್ರ ಕಚೇರಿ ಕೆಡವಿದ ಆಂಧ್ರ ಸರ್ಕಾರ


