ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಾದ್ಯಂತ ದಾಖಲಾಗಿರುವ ಮತ್ತು ಮುಂದೆ ದಾಖಲಾಗಲಿರುವ ಎಲ್ಲಾ ‘ಮತಗಳ್ಳತನ’ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಶನಿವಾರ (ಸೆ.20) ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
2023ರಲ್ಲಿ ಆಳಂದ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿನ 6 ಸಾವಿರಕ್ಕೂ ಹೆಚ್ಚು ಮತದಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿದ ಪ್ರಕರಣವನ್ನು ಮುಖ್ಯವಾಗಿ ಪರಿಗಣಿಸಲಾಗಿದೆ.
ಒಳಾಡಳಿತ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರು ಎಸ್‌ಐಟಿ ರಚನೆ ಬಗ್ಗೆ ಆದೇಶ ಹೊರಡಿಸಿದ್ದು, ಸಿಐಡಿ ಘಟಕದ ಅಪರ ಪೋಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ನೇತೃತ್ವದ ತನಿಖಾ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಸಿಸಿಡಿ, ಸಿಐಡಿ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್, ಎಸ್‍ಇಡಿ ಸಿಐಡಿಯ ಪೊಲೀಸ್ ಅಧೀಕ್ಷಕಿ ಶುಭಾನ್ವಿತ ಅವರು ಸದಸ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಅನಧಿಕೃತವಾಗಿ ಅಳಿಸಲು ಯತ್ನಿಸಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
ಎಸ್‌ಐಟಿಗೆ ಪೊಲೀಸ್ ಠಾಣೆಯ ಸ್ಥಾನ ನೀಡಿ, ಇಡೀ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಅಧಿಕಾರ ನೀಡಲಾಗಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (26/2023), ಬೇರೆ ಠಾಣೆಗಳಲ್ಲಿ ಈಗಾಗಲೇ ದಾಖಲಾಗಿರುವ ದೂರುಗಳು ಮತ್ತು ಮುಂದೆ ದಾಖಲಾಗಿರುವ ದೂರುಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಲಿದೆ.
ಆಳಂದ ಮತಗಳ್ಳತನ ಪ್ರಕರಣ 2023ರ ವಿಧಾನಸಭಾ ಚುನಾವಣೆಗೆ ಮುನ್ನ ನಕಲು ಫಾರ್ಮ್ 7ರ ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಡೆಸಿದ್ದ ಪಿತೂರಿಗೆ ಸಂಬಂಧಿಸಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ದತ್ತಾಂಶಗಳನ್ನು ಚುನಾವಣಾ ಆಯೋಗ ಸಿಐಡಿ ಜೊತೆ ಇನ್ನೂ ಹಂಚಿಕೊಳ್ಳದ ಕಾರಣ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ ಎಂದು ದಿ ಹಿಂದೂ ಪತ್ರಿಕೆ ಭಾನುವಾರ (ಸೆ.7) ವಿಸ್ತೃತ ವರದಿ ಪ್ರಕಟಿಸಿತ್ತು.
ಸೆಪ್ಟೆಂಬರ್ 18ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಆಳಂದ ಪ್ರಕರಣದ ದಾಖಲೆ ಬಿಡುಗಡೆ ಮಾಡಿದ್ದರು.
ಆಳಂದ ಮತಗಳ್ಳತನ ಕುರಿತ ಸಂಪೂರ್ಣ ವಿವರಗಳನ್ನು ಈ ಕೆಳಗಿನ ವರದಿಗಳಲ್ಲಿ ಓದಿ
‘ಆಳಂದ’ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣ: ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!
ಮುಖ್ಯ ಚುನಾವಣಾ ಆಯುಕ್ತ ‘ಮತಗಳ್ಳರ ರಕ್ಷಕ’ ಎಂದ ರಾಹುಲ್ ಗಾಂಧಿ: ಆಳಂದ ಮತಗಳ್ಳತನದ ದಾಖಲೆ ಬಿಡುಗಡೆ


