ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶದ ಜನರಿಗೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಲಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಂಗಳವಾರ ಸ್ಪಷ್ಟನೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ದೇಶದ ಇಡೀ ಜನಸಂಖ್ಯೆಗೆ ಲಸಿಕೆ ಹಾಕುವ ಅವಶ್ಯಕತೆಯಿಲ್ಲದಿರಬಹುದು ಎಂದು ಹೇಳಿದ್ದಾರೆ.
“ಇಡೀ ದೇಶಕ್ಕೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಲಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅಂತಹ ವೈಜ್ಞಾನಿಕ ವಿಚಾರಗಳನ್ನು ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕು, ಒಟ್ಟಾರೆ ಮಾತನಾಡಬಾರದು” ಎಂದು ರಾಜೇಶ್ ಭೂಷಣ್ ತಿಳಿಸಿದರು.
ಆದರೆ ನವೆಂಬರ್ 24 ರಂದು ರಾಜ್ಯಗಳನ್ನುದ್ದೇಶಿಸಿ ಮಾತನಾಡಿದ ದೇಶದ ಪ್ರಧಾನಿ, ದೇಶದ ಪ್ರತಿಯೊಬ್ಬ ಪ್ರಜೆಗೆ ವ್ಯಾಕ್ಸೀನ್ ತಲುಪಲಿದೆ. ಅದಕ್ಕಾಗಿ ಎಲ್ಲಾ ವ್ಯವಸ್ಥೆ ನಡೆದಿದೆ ಎಂದು ಭರವಸೆ ನೀಡಿದ್ದರು. ಸ್ವತಃ ಪ್ರಧಾನಮಂತ್ರಿಗಳ ಕಚೇರಿಯಿಂದ ಬಂದ ಸರ್ಕಾರಿ PIB ಪತ್ರಿಕಾ ಪ್ರಕಟಣೆ ಇದನ್ನು ಹೇಳಿತ್ತು. ಆದರೆ ಈಗ ಇದಕ್ಕೆ ಉಲ್ಟಾ ಹೊಡೆಯುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: 2021 ಏಪ್ರಿಲ್ ವೇಳೆಗೆ ಭಾರತದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ- ಆದರ್ ಪೂನವಾಲ್ಲಾ
#WATCH "Govt has never spoken about vaccinating the entire country," says Health Secretary Rajesh Bhushan
"If we're able to vaccinate critical mass of people & break virus transmission, then we may not have to vaccinate the entire population," ICMR DG Dr Balram Bhargava added. https://t.co/HKbssjATjH pic.twitter.com/egEB1TAiC9
— ANI (@ANI) December 1, 2020
ಐಸಿಎಂಆರ್ ನ ಡಿಜಿ ಬಾಲರಾಮ್ ಭಾರ್ಗವ ಕೂಡ “ಇದು ಲಸಿಕೆಯ ಪರಿಣಾಮಕಾರಿತ್ವವನ್ನು ಅವಲಂಬಿಸಿರುತ್ತದೆ ಮತ್ತು ವೈರಸ್ ಹರಡುವ ಸರಪಳಿ ಮುರಿಯುವುದು ನಮ್ಮ ಉದ್ದೇಶ. ಸೋಂಕು ಹರಡುವುದನ್ನು ತಡೆಯುವುದು ಸಾಧ್ಯವಾದರೇ ನಾವು ಎಲ್ಲರಿಗೂ ಲಸಿಕೆ ನೀಡಬೇಕಾಗಿಲ್ಲ” ಎಂದಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಮಾಸ್ಕ್‌ಗಳ ಪಾತ್ರವು ಬಹಳ ಮುಖ್ಯವಾಗಿದೆ. ವ್ಯಾಕ್ಸಿನೇಷನ್ ನಂತರವೂ ಮಾಸ್ಕ್‌ಗಳ ಬಳಕೆ ಮುಂದುವರಿಯುತ್ತದೆ. ಸೋಂಕು ಹರಡುವುದನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಲರಾಮ್ ಭಾರ್ಗವ ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಎಲ್ಲರಿಗೂ ಉಚಿತ ಕೊರೊಣಾ ಲಸಿಕೆ ನೀಡುವ ಭರವಸೆ ನೀಡಿತ್ತು.
ಕಳೆದ ಕೆಲ ದಿನಗಳ ಹಿಂದೆ ’2024 ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ನೀಡಲಾಗುವುದು’ ಎಂದು ಕೊರೊನಾ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ, ಆದರ್ ಪೂನವಾಲ್ಲಾ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮಿಟ್- 2020 ಕಾರ್ಯಕ್ರಮದಲ್ಲಿ (HTLS) ಹೇಳಿದ್ದರು. ಆದರೆ ಈಗ ಇದೆಲ್ಲದ್ದಕ್ಕೂ ಉಲ್ಟಾ ಹೊಡೆದಿದ್ದು ಎಲ್ಲರಿಗೂ ಲಸಿಕೆ ಹಾಕುತ್ತೇವೆಂದು ನಾವು ಹೇಳಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.


