ಕೆನಡಾದ ಪ್ರಜೆ ಮತ್ತು ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟರ ಕೈವಾಡ ಶಂಕಿಸಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡಿದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಸಂಬಂಧಗಳಲ್ಲಿ ಬಿರುಕು ಉಂಟಾಗಿದೆ.
ಇದರ ಬೆನ್ನಲ್ಲೇ ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಭಾರತ ಸಲಹೆಯನ್ನು ನೀಡಿದೆ.
ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಣೆ ಪಡೆದ ದ್ವೇಷದ ಅಪರಾಧಗಳು ಮತ್ತು ಹಿಂಸಾಚಾರ ಸಾಧ್ಯತೆ ಕಂಡು ಬರುತ್ತಿರುವ ಹಿನ್ನೆಲೆ ಅಲ್ಲಿ ಇರುವ ಎಲ್ಲಾ ಭಾರತೀಯರು ಮತ್ತು ಕೆನಡಾಗೆ ತೆರಳಲು ಇಚ್ಚಿಸುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಮತ್ತು ಭಾರತೀಯರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಕೆನಡಾದಲ್ಲಿ ಇಂತಹ ಬೆಳವಣಿಗೆಗಳು ಕಂಡು ಬರುತ್ತಿರುವ ಸ್ಥಳಗಳಿಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ. ಭಾರತೀಯ ಹೈಕಮಿಷನ್ ಕೆನಡಾದ ಅಧಿಕಾರಿಗಳೊಂದಿಗೆ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ವಿಚಾರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಮೊದಲು ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಭಾರತಕ್ಕೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಸಲಹೆ ನೀಡಿತ್ತು.
ಅನಿವಾರ್ಯವಿಲ್ಲದಿದ್ದರೆ ಭಾರತಕ್ಕೆ ಪ್ರಯಾಣಿಸಬೇಡಿ ಎಂದು ಕೆನಡಾ ತನ್ನ ಪ್ರಜೆಗಳಿಗೆ ಸಲಹೆ ನೀಡಿತ್ತು. ಕುಟುಂಬ, ವ್ಯವಹಾರ ಶೈಕ್ಷಣಿಕ ಉದ್ದೇಶಗಳಿಗೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ನೀವು ಮತ್ತೊಮ್ಮೆ ಯೋಚಿಸಬೇಕು. ನಿಮ್ಮ ಸುರಕ್ಷತೆಗೆ ಮತ್ತು ಭದ್ರತೆಗೆ ಅಪಾಯಬರಬಹುದು. ನೀವು ಈಗಾಗಲೇ ಅಲ್ಲಿದ್ದರೆ, ಅಲ್ಲಿರುವ ಅಗತ್ಯತೆಯ ಬಗ್ಗೆ ಯೋಚಿಸಿ. ಅನಗತ್ಯವಾಗಿ ಅಲ್ಲಿರಬೇಡಿ, ಅಲ್ಲಿಂದ ಹೊರಡಿ ಎಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ. ಕೆನಡಾ ಸರ್ಕಾರದ ವೆಬ್ಸೈಟ್ನಲ್ಲಿ ಪ್ರಕಟವಾದ ಸಲಹೆಯು ಭಾರತದಲ್ಲಿ ವಾಸಿಸುವ ಕೆನಡಾದ ಪ್ರಜೆಗಳು ಎಚ್ಚರಿಕೆಯಿಂದಿರುವಂತೆ ಹೇಳಲಾಗಿತ್ತು.
ಇದನ್ನು ಓದಿ: ನಂ.1 ಬೌಲರ್ ಸ್ಥಾನಕ್ಕೆ ಮರಳಿದ ಮೊಹಮ್ಮದ್ ಸಿರಾಜ್


