Homeಕರ್ನಾಟಕಕರ್ನಾಟಕದಲ್ಲಿ ಶಿಕ್ಷಣದ ಕೇಸರೀಕರಣ

ಕರ್ನಾಟಕದಲ್ಲಿ ಶಿಕ್ಷಣದ ಕೇಸರೀಕರಣ

- Advertisement -
- Advertisement -

ಕರ್ನಾಟಕದಲ್ಲಿ ಶಾಸಕರನ್ನು ಕೊಂಡುಕೊಳ್ಳುವ ಮೂಲಕ ಅಧಿಕಾರಕ್ಕೆ ಬಂದಿದ್ದ ಭಾರತೀಯ ಜನತಾ ಪಕ್ಷಕ್ಕೆ ಶಿಕ್ಷಣದ ಕ್ಷೇತ್ರದಲ್ಲಿ ಕೈಯ್ಯಾಡಿಸುವ ಯಾವ ನೈತಿಕ ಹಕ್ಕನ್ನೂ ಹೊಂದಿರಲಿಲ್ಲ; ಆದರೂ ಅದು ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಪ್ರಾಥಮಿಕ ಹಾಗೂ ಮಾಧ್ಯಮಿಕ ತರಗತಿಗಳ ಪಠ್ಯಪುಸ್ತಕಗಳಲ್ಲಿ ಕೇಸರೀಕರಣವನ್ನು ಬಹುಪಾಲು ಯಶಸ್ವಿಯಾಗಿಸಿತು.

2014ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನೇಮಿಸಲಾದ ಸಮಿತಿ ಪರಿಷ್ಕರಿಸಿದ 1ರಿಂದ 10ನೆಯ ತರಗತಿಯ ಪಠ್ಯಪುಸ್ತಕಗಳನ್ನು ಮತ್ತೆ ಪರಿಷ್ಕರಿಸಲು ಭಾರತೀಯ ಜನತಾ ಪಕ್ಷದ ಸರಕಾರ 2021ರಲ್ಲಿ ರೋಹಿತ್ ಚಕ್ರತೀರ್ಥರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಬಗ್ಗೆ ಸಮಾಜ ವಿಜ್ಞಾನದ ಪುಸ್ತಕಗಳ ಪುನಃಪರಿಷ್ಕರಣೆಯ ಬಗ್ಗೆ ಬರೆದ ತಮ್ಮ ಮಾತುಗಳಲ್ಲಿ ಚಕ್ರತೀರ್ಥ 8 ಆಶಯಗಳನ್ನು ಹೇಳಿದ್ದಾರೆ. ಅವುಗಳಲ್ಲಿ 5ನೆಯ ಆಶಯ, “ಅರ್ಧಸತ್ಯ, ಅಸತ್ಯ, ಉತ್ಪ್ರೇಕ್ಷೆ ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನಷ್ಟೇ ಮುಂದಿಡಬೇಕು” ಎಂಬುದು. ಅದರೆ ಚಕ್ರತೀರ್ಥರ ಈ ಸಮಿತಿ ಮಾಡಿದ ಪುನಃಪರಿಷ್ಕರಣೆಗಳನ್ನು ಗಮನಿಸಿದರೆ ಇದರಲ್ಲಿ ಆಧಾರರಹಿತ ಕೇಸರೀಕರಣ ಮಾಡಲು ಪ್ರಯತ್ನಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಕೇಸರೀಕರಣದ ಮೂಲ ಉದ್ದೇಶಗಳು ಇವುಗಳನ್ನು ನಂಬಿಸುವುದಕ್ಕಾಗಿವೆ: ’ಆರ್ಯರು ಭಾರತದ ಹೊರಗಿನಿಂದ ಬಂದವರಲ್ಲ, ಭಾರತದ ಮೂಲನಿವಾಸಿಗಳು, ಆರ್ಯರ ವೈದಿಕ ಸಂಸ್ಕೃತಿಯೇ ಭಾರತದ ಸಂಸ್ಕೃತಿ, ಆದುದರಿಂದ ಸಿಂಧೂ ಕಣಿವೆಯ ಸಂಸ್ಕೃತಿಯೂ ವೈದಿಕ ಸಂಸ್ಕೃತಿಯೇ, ಈ ವೈದಿಕ ಸಂಸ್ಕೃತಿಯೇ ಅತ್ಯಂತ ಶ್ರೇಷ್ಠವಾದದ್ದು, ದ್ರಾವಿಡ ಸಂಸ್ಕೃತಿ ಎನ್ನುವುದೊಂದಿಲ್ಲ ಇತ್ಯಾದಿ. ಮೊದಲಿಗೆ ಈ ವಾದಗಳನ್ನು ನಿರಾಕರಿಸುವ, ಈ ವಾದಗಳಿಗೆ ಅನುಕೂಲವಲ್ಲದಿರುವ ತಥ್ಯಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಿ ನಂತರ ಈ ವಾದಗಳನ್ನು ಪುಷ್ಟೀಕರಿಸುವುದೇ ಪಠ್ಯಪುಸ್ತಕಗಳ ಪುನಃಪರಿಷ್ಕರಣೆಯ ಮೂಲ ಉದ್ದೇಶ. ಈ ಉದ್ದೇಶ ಸಾಧನೆಗಾಗಿ ಇವರು ಏನೆಲ್ಲ ಮಾಡಲು ಪ್ರಯತ್ನಿಸುತ್ತಾರೆ ಎನ್ನುವುದನ್ನು ನೋಡಬಹುದು.

ರೋಹಿತ್ ಚಕ್ರತೀರ್ಥ

ವಿದ್ಯಾ ಭಾರತೀ, ಅಖಿಲ ಭಾರತ ಶಿಕ್ಷಾ ಸಂಸ್ಥಾನ, ಸರಸ್ವತೀ ಶಿಶು ಮಂದಿರ, ವಿವೇಕಾನಂದ ವಿದ್ಯಾಲಯ ಮೊದಲಾದ ಸಂಘಟನೆಗಳನ್ನು ಕಟ್ಟಿಕೊಂಡು ಇವರು ಸಿದ್ಧಪಡಿಸುತ್ತಿರುವ ಪಠ್ಯಪುಸ್ತಕಗಳ ನಿರೂಪಣಾ ತಂತ್ರಗಳನ್ನು ಇವರು ಸಿದ್ಧಪಡಿಸಿರುವ ’ಗೌರವಶಾಲೀ ಭಾರತ’ ಎಂಬ ಪಠ್ಯ ಪುಸ್ತಕಗಳಿಂದ ತಿಳಿದುಕೊಳ್ಳಬಹುದು. ಇವುಗಳಲ್ಲಿ ಆಕ್ರಮಣಕಾರರಿಂದ ಆದ ಅವಮಾನಕರವಾದ ಸೋಲುಗಳನ್ನು ಬಹಳ ಸಂಕ್ಷಿಪ್ತವಾಗಿ ವಿವರಿಸಿ ಆಕ್ರಮಣಕಾರರ ವಿರುದ್ಧದ ನಂತರದ ಪ್ರತಿರೋಧದ ಬಗ್ಗೆ ದೀರ್ಘವಾಗಿ ವಿವರಿಸುತ್ತಾರೆ. ಉತ್ತರ ಭಾರತದ ಮೇಲಿನ ಮೊಘಲರ ವಿಜಯವನ್ನು ಕೆಲವು ವಾಕ್ಯಗಳಲ್ಲಿ ವಿವರಿಸಿ ಅವರ ವಿರುದ್ಧ ನಡೆದ ಹೋರಾಟಗಳನ್ನು 17 ಪುಟಗಳಲ್ಲಿ ವೈಭವೀಕರಿಸುತ್ತಾರೆ. ಈಸ್ಟ್ ಇಂಡಿಯಾ ಕಂಪನಿಯ ವಿಜಯಗಳನ್ನು 1 ಪುಟದಲ್ಲಿ ಸಂಕ್ಷೇಪಿಸಿ ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟವನ್ನು 52 ಪುಟಗಳಲ್ಲಿ ವಿವರಿಸುತ್ತಾರೆ. ವಿಜ್ಞಾನದ ಬಗೆಗಿನ ಇವರ ನಿಲುವಿನ ಬಗ್ಗೆ ಹೇಳುವುದಾದರೆ, “ಎರಡು ಕಾಲಿನ ಮನುಷ್ಯರು ನಾಲ್ಕು ಕಾಲಿನ ವಾನರನ ವಂಶಸ್ಥರು ಎಂಬುದನ್ನು ಹಲವಾರು ವಿಜ್ಞಾನಿಗಳು ಒಪ್ಪುವುದಿಲ್ಲ” ಎನ್ನುತ್ತದೆ (ಅಂದರೆ ವಿಕಾಸವಾದದಲ್ಲಿ ನಂಬಿಕೆಯಿಲ್ಲ ಎಂದು) ಈ ’ಗೌರವಶಾಲೀ ಭಾರತ’ದ ಪಠ್ಯ ಪುಸ್ತಕ.

ಕರ್ನಾಟಕದಲ್ಲಿ ಮಾಡಲಾಗಿರುವ ಪಠ್ಯ ಪುಸ್ತಕಗಳ ಕೇಸರೀಕರಣಕ್ಕೆ 8ನೆಯ ತರಗತಿಯ ಸಮಾಜ ವಿಜ್ಞಾನದ ಪುಸ್ತಕದ ಇತಿಹಾಸ ವಿಭಾಗದ ಉದಾಹರಣೆಯನ್ನು ಗಮನಿಸಬಹುದಾಗಿದೆ.

ಭಾರತ ವರ್ಷ ಎಂಬ ಪಾಠದಲ್ಲಿ ಒಂದು ನಕ್ಷೆಯನ್ನು ಮುದ್ರಿಸಿ ಅದರಲ್ಲಿ ಇಂದಿನ ಭಾರತದ ಜೊತೆಗೆ ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಭೂತಾನ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರಗಳನ್ನು ಒಟ್ಟುಗೂಡಿಸಿ ’ಅಖಂಡ ಭಾರತ’ ಎಂಬ ಶೀರ್ಷಿಕೆಯನ್ನು ಕೊಟ್ಟು ಕೆಳಗೆ ’ಅಖಂಡ ಭಾರತ ಈ ಎಲ್ಲಾ ಪ್ರದೇಶಗಳನ್ನು ಒಳಗೊಂಡಿತ್ತು’ ಎಂದು ಬರೆಯಲಾಗಿದೆ. ಆದರೆ ಇವೆಲ್ಲವೂ ಯಾವ ಒಂದು ಕಾಲಘಟ್ಟದಲ್ಲೂ ಭಾರತದ ಭಾಗಗಳಾಗಿರಲಿಲ್ಲವಷ್ಟೇ ಅಲ್ಲ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನು ಬಿಟ್ಟರೆ ಯಾವಾಗಲೂ ವಿಭಿನ್ನ ಪ್ರದೇಶಗಳೇ ಆಗಿದ್ದವು. ಆಶ್ಚರ್ಯವೆಂದರೆ ಈ ಅಖಂಡ ಭಾರತದ ನಕ್ಷೆಯಲ್ಲಿ ಟಿಬೇಟನ್ನು ಮಾತ್ರ ಬೇರೆ ಬಣ್ಣದಲ್ಲಿ ತೋರಿಸಿದ್ದರೂ ಅಖಂಡ ಭಾರತದ ಗಡಿ ರೇಖೆ ಟಿಬೇಟನ್ನೂ ಒಳಗೊಂಡಿದೆ. ಇದರ ಅರ್ಥವೇನು? ಇಂತಹ ಆಧಾರರಹಿತ ಪರಿಕಲ್ಪನೆಗಳು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡುಮಾಡುತ್ತವೆ.

ತಮ್ಮ ಪುಸ್ತಕ ’ದ ಹಿಸ್ಟರಿ ಆಫ್ ಪಾಕಿಸ್ತಾನ’ನಲ್ಲಿ ಪಾಕಿಸ್ತಾನೀ ಇತಿಹಾಸಕಾರ ಇಫ್ತಿಕಾರ ಎಚ್. ಮಲಿಕ್, “ಪಾಕಿಸ್ತಾನವು ಒಂದು ಹೊಸ ಹೆಸರಾಗಿರಬಹುದು, ಆದರೆ ಪಾಕಿಸ್ತಾನಿಗಳು ಒಂದು ಪ್ರಾಚೀನ ಸಮಾಜವನ್ನು ಹೊಂದಿದ್ದು, ಅವರ ಪೂರ್ವಜರು ಐತಿಹಾಸಿಕ ಸಿಂಧೂ ಕಣಿವೆಯಲ್ಲಿ ವಾಸಿಸುತ್ತಿದ್ದರು ಮತ್ತು ಅವರು ವಿಜಯಶಾಲಿಗಳು, ವಿದ್ವಾಂಸರು, ಸಂದರ್ಶಕರು, ಬೋಧಕರು, ಸೂಫಿಗಳು ಹಾಗೂ ಪಶ್ಚಿಮ ಮತ್ತು ಮಧ್ಯ ಏಷ್ಯಾದ ವಲಸಿಗರೊಂದಿಗೆ ಸಂವಹನ ನಡೆಸಿದರು” ಎನ್ನುತ್ತಾರೆ. ಇದೇ ಪುಸ್ತಕದಲ್ಲಿ ’ದ ಇಂಡಸ್ ವ್ಯಾಲೀ ಸಿವಿಲಿಜೇಶನ್: ದ್ರವಿಡಿಯನ್ಸ್ ಟು ಆರ್ಯನ್ಸ್’ ಎಂಬ ಒಂದು ಅಧ್ಯಾಯವನ್ನು ಬರೆಯುತ್ತಾರೆ. ಇಂತಹ ಬರವಣಿಗೆ ಹಿಂದೂ ಮತಾಂಧರಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ- ಸಿಂಧೂ ಕಣಿವೆಯ ಸಭ್ಯತೆಯನ್ನು ಹಾಗೂ ದ್ರಾವಿಡ ಸಂಸ್ಕೃತಿಯ ಅಸ್ತಿತ್ವವನ್ನು, ಕನಿಷ್ಟ ಹೆಸರಿನಲ್ಲಿ, ನಿರಾಕರಿಸುವುದು.

ಋಗ್ವೇದದಲ್ಲಿ ಹೇಳಲಾಗಿರುವ ಸರಸ್ವತೀ ನದಿ ಎಲ್ಲಿ ಹರಿಯುತ್ತಿತ್ತು ಎಂಬ ಬಗ್ಗೆ ಇನ್ನೂ ಯಾವ ಖಚಿತತೆಯೂ ಇಲ್ಲದಿದ್ದರೂ ಪರಿಷ್ಕೃತ ಪಠ್ಯದ ಮುಂದಿನ ಪಾಠವನ್ನು ’ಸಿಂಧೂ-ಸರಸ್ವತಿ ನಾಗರಿಕತೆ’ ಎಂದು ಹೆಸರಿಸಲಾಗಿದೆ. ಭಾರತದ ವಿಭಜನೆಯ ನಂತರ ಸಿಂಧೂ ನದಿ ಹಾಗೂ ಸಿಂಧೂ ಕಣಿವೆಯ ಸಂಸ್ಕೃತಿಯ ಹರಪ್ಪಾ ಮತ್ತು ಮೊಹೆಂಜೋದರೋ ಮೊದಲಾದ ನಗರಗಳು ಪಾಕಿಸ್ತಾನಕ್ಕೆ ಸೇರಿದ ನಂತರ ಈ ಹಿಂದೂ ಮತಾಂಧರಿಗೆ ಏನಾದರೂ ಮಾಡಿ, ಹೇಗಾದರೂ ಮಾಡಿ ಸಿಂಧೂ ಕಣಿವೆಯ ನಾಗರಿಕತೆಯನ್ನು ಸರಸ್ವತಿ ನಾಗರಿಕತೆ ಎಂದು ಪ್ರಚುರಪಡಿಸಬೇಕು ಹಾಗೂ ಈ ನಾಗರಿಕತೆಯನ್ನು ವೈದಿಕ ಪರಂಪರೆಯೊಂದಿಗೆ ಜೋಡಿಸಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿಬಿಟ್ಟಿದೆ. ಇದಕ್ಕಾಗಿ ಅವರು ಹಸಿಹಸಿ ಸುಳ್ಳನ್ನೂ ಹೇಳುತ್ತಾರೆ. ಉದಾಹರಣೆಗೆ “ಸರಸ್ವತಿಯ ಹರಿವು ವ್ಯಾಪಿಸಿಕೊಂಡ ಪ್ರದೇಶಗಳಲ್ಲೆಲ್ಲ ಇಂದು ನಮಗೆ ನೂರಾರು ಪ್ರಾಚೀನ ತಾಣಗಳು, ನಗರಗಳು ಉತ್ಖನನದ ಮೂಲಕ ದೊರೆತಿವೆ” ಎಂದು ಹೇಳುತ್ತ ಅನಾಮತ್ತಾಗಿ “ಹಾಗೆ ದೊರೆತ ಮೊದಮೊದಲ ನಗರಗಳಲ್ಲಿ ’ಹರಪ್ಪ’ ’ಮೊಹೆಂಜೋದಾರೋ’ ಪ್ರಮುಖವಾದವು” ಎಂದು ಸೇರಿಸಿ ಸಿಂಧು ಕಣಿವೆಯ ನಾಗರಿಕತೆಯನ್ನೇ ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ.

ಮುಂದುವರಿದು “ಸಿಂಧೂ ಸರಸ್ವತಿ ನಾಗರಿಕತೆಯ ಕಾಲವನ್ನು ’ಉತ್ತರ ವೇದಯುಗ’ ಎಂದು ವಿದ್ವಾಂಸರು ಹೆಸರಿಸಿದ್ದಾರೆ. ಆ ಸಮಯದ ಹೊತ್ತಿಗೆ ನಾಲ್ಕೂ ವೇದಗಳು ರೂಪ ತಾಳಿದ್ದವು. ಅಥರ್ವಣವೇದದಲ್ಲಿ ಕಂಡುಬರುವ ಸಾಂಸ್ಕೃತಿಕ ಅಂಶಗಳಿಗೂ ಹರಪ್ಪ ಮೊದಲಾದ ನಗರಗಳಲ್ಲಿ ಲಭ್ಯವಿರುವ ವಸ್ತುಗಳಿಗೂ ಬಹುಮಟ್ಟಿಗೆ ಹೊಂದಿಕೆಯಾಗುತ್ತದೆ” ಎಂದು ಹೇಳಿಬಿಡುತ್ತಾರೆ. “ಶಿವನ ವಾಹನವಾಗಿ ಧರ್ಮದ ಪ್ರತೀಕವಾಗಿ ನಿಲ್ಲುವ ವೃಷಭ, ಯಜ್ಞವೃಕ್ಷ ಎಂದು, ಜಗತ್‌ವೃಕ್ಷ ಎಂದು ಪ್ರಸಿದ್ಧವಾದ ಅಶ್ವತ್ಥದ ಎಲೆ, ವೈದಿಕ ದರ್ಶನಗಳಲ್ಲಿ ಒಂದಾದ ಯೋಗವೇ ಮೊದಲಾದ ಸಂಗತಿಗಳು ಸಿಂಧೂ-ಸರಸ್ವತಿ ನಾಗರಿಕತೆಯಲ್ಲಿ ಕಂಡುಬರುವ ವೈದಿಕ ಪರಂಪರೆಯ ಅವಿಚ್ಛಿನ್ನತೆಯನ್ನು ತೋರಿಸುತ್ತದೆ” ಎನ್ನುತ್ತಾರೆ. “ಧೊಲಾವೀರಾ ನಗರ ವ್ಯವಸ್ಥೆಯ ಉದ್ದಗಲಗಳು ವೈದಿಕ ಯಾಗಗಳಿಗೆ ಬೇಕಾದ ’ಮಹಾವೇದಿ’ಗಳ ಅನುಪಾತಕ್ಕೆ ಅನುಗುಣವಾಗಿವೆ. ಈ ಅನುಪಾತವು ಶತಪಥಬ್ರಾಹ್ಮಣ, ಶುಲ್ಬಸೂತ್ರಗಳೇ ಮೊದಲಾದ ವೈದಿಕ ಗ್ರಂಥಗಳಿಂದ ಮೊದಲ್ಗೊಂಡು ಅನಂತರದ ಕಾಲದ ಬೃಹತ್‌ಸಂಹಿತೆಯಂಥ ವಿಶ್ವಕೋಶದಲ್ಲಿಯೂ ಕಂಡುಬರುವುದು, ನಮ್ಮ ಪರಂಪರೆಯ ಅನುಸ್ಯೂತತೆಯನ್ನು ತೋರಿಸುತ್ತದೆ” ಎನ್ನುತ್ತಾರೆ. ಒಟ್ಟಿನಲ್ಲಿ ಉದ್ದೇಶ ಸಿಂಧೂ ಕಣಿವೆಯ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿ ಎಂದು ಬಿಂಬಿಸುವುದು. ಇನ್ನೂ ಮುಂದುವರಿದು ಹೆಂಗಸರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿದ್ದುದು ವೈದಿಕ ಪರಂಪರೆ ಎಂದೂ, “ಆ ಪದ್ಧತಿ ಇಂದಿಗೂ ಮುಂದುವರೆದಿದೆ” ಎಂದೂ ಹೇಳಿಬಿಡುತ್ತಾರೆ. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ ಭಾಗವತ್ ಇತ್ತೀಚೆಗೆ ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳು ಎಂದಿದ್ದರು. ಈ ಪಠ್ಯಪುಸ್ತಕ ಅವರಿಗಿಂತ ಮುಂದೆ ಹೋಗಿ, “ಸುಸಂಸ್ಕೃತರಾದ ಸಂಭಾವಿತರಾದ ಜನರನ್ನು ’ಆರ್ಯ’ ಎಂದು ಕರೆಯುತ್ತಿದ್ದರು. ಆರ್ಯ ಎಂಬುದು ಯಾವ ಜನಾಂಗವನ್ನೂ ಸೂಚಿಸುವುದಿಲ್ಲ. ಆರ್ಯರೆಲ್ಲ ಭಾರತೀಯರೇ” ಎಂದುಬಿಡುತ್ತದೆ. ಇಲ್ಲಿ “ಭಾರತೀಯರೆಲ್ಲ ಆರ್ಯರೇ” ಎನ್ನದೇ “ಆರ್ಯರೆಲ್ಲ ಭಾರತೀಯರೇ” ಎನ್ನುತ್ತಿರುವುದು ಗಮನಾರ್ಹ.

ಇದನ್ನೂ ಓದಿ: ಧಾರವಾಡ: ಶೆಟ್ಟರ್ ಸೇಡು! ಜೋಶಿಗೆ ಕೇಡು?

ಇದೇ ವಾದದ ಮುಂದುವರಿಕೆಯಾಗಿ ಅವರು, ಸಿಂಧೂ ಕಣಿವೆಯಲ್ಲಿ ಕೌಟಿಲ್ಯ ಹೇಳಿದ ತೂಕ ಮತ್ತು ಅಳತೆಗಳನ್ನು ಬಳಸಲಾಗುತ್ತಿತ್ತು ಎಂಬ ಅರ್ಥ ಬರುವಂತೆ “ಆಗಿನ ಕಾಲದ ತೂಕ ಮತ್ತು ಅಳತೆಗಳು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕಾಣಸಿಗುವ ವಿವರಗಳಿಗೆ ಹೊಂದಿಕೊಳ್ಳುತ್ತವೆ” ಎಂದು ಬರೆಯುತ್ತಾರೆ. ಹೀಗೆ ಹೇಳುವ ಮೂಲಕ ಕೌಟಿಲ್ಯ ಸಿಂಧೂ ಕಣಿವೆಯ ಸಭ್ಯತೆಗಿಂತ ಹಿಂದೆ ಬದುಕಿದವನು ಎಂದು ಪರೋಕ್ಷವಾಗಿ ಸಾಧಿಸುತ್ತಾರೆ. ಇದೇ ವಾದವನ್ನು ಮುಂದುವರಿಸಿ “ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು ಎಂಬ ವಾದದಲ್ಲಿ ಸತ್ಯಾಂಶವಿಲ್ಲ ಎಂಬುದು ಸಾಬೀತಾಗಿದೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರು ಕೂಡ ’ಆರ್ಯರ ಆಗಮನ’ ಸಿದ್ಧಾಂತವನ್ನು ತೀವ್ರವಾಗಿ ಖಂಡಿಸಿದ್ದಾರೆ” ಎನ್ನುತ್ತಾರೆ. ತಮಗೆ ಅನುಕೂಲವಾಗುವಾಗ ಅಂಬೇಡ್ಕರ್ ಬಗ್ಗೆ ಪ್ರೀತಿ ತೋರಿಸುವ ಇವರು ತಮಗೆ ಅನಾನುಕೂಲವಾಗುವಾಗ ತಮ್ಮ ಚಿತ್ಪಾವನ ಬ್ರಾಹ್ಮಣ ಪಂಡಿತರು ಹೇಳಿದುದನ್ನೇ ಮರೆಮಾಚುತ್ತಾರೆ. 1903ರಲ್ಲಿ, ಬಾಲಗಂಗಾಧರ ತಿಲಕರು ತಮ್ಮ ಪುಸ್ತಕ ’ದಿ ಆರ್ಕ್ಟಿಕ್ ಹೋಮ್ ಇನ್ ದಿ ವೇದಾಸ್’ನಲ್ಲಿ, ಆರ್ಯರು ಉತ್ತರ ಧ್ರುವದಲ್ಲಿ ವೇದಗಳನ್ನು ರಚಿಸಿದ್ದಾರೆ ಮತ್ತು ತಮ್ಮ ದಕ್ಷಿಣದ ಪ್ರಯಾಣದಲ್ಲಿ ಎರಡು ಶಾಖೆಗಳಾಗಿ ವಿಂಗಡಿತವಾದರು, ಅದರಲ್ಲಿ ಒಂದು ಯುರೋಪ್‌ಗೆ ಹೋಯಿತು, ಇನ್ನೊಂದು ಭಾರತಕ್ಕೆ ಬಂದಿತು ಎನ್ನುತ್ತಾರೆ. ಆದರೆ ಆ ಆರ್ಕ್ಟಿಕ್ ನೆಲೆಯೇ ಭಾರತದಲ್ಲಿತ್ತು ಎನ್ನುವ ’ಬುದ್ಧಿವಂತಿಕೆ’ ತೋರಿಸುತ್ತಾರೆ ಆರ್‌ಎಸ್‌ಎಸ್‌ನ ಎಂ.ಎಸ್.ಗೋಳ್ವಲಕರ್. “ವೇದಗಳಲ್ಲಿ ಹೇಳಲಾದ ಆರ್ಕ್ಟಿಕ್ ನೆಲೆಯು ನಿಜವಾಗಿಯೂ ಹಿಂದೂಸ್ಥಾನದಲ್ಲಿಯೇ ಇತ್ತು ಮತ್ತು ಹಿಂದೂಗಳು ಅಲ್ಲಿಗೆ ವಲಸೆ ಹೋಗಲಿಲ್ಲ, ಆದರೆ ಹಿಂದೂಗಳನ್ನು ಹಿಂದೂಸ್ಥಾನದಲ್ಲಿಯೇ ಬಿಟ್ಟು ಆರ್ಕ್ಟಿಕ್ ನೆಲೆಯೇ ಭಾರತದಿಂದ ಉತ್ತರಕ್ಕೆ ವಲಸೆ ಹೋಗಿ ಬಿಟ್ಟಿತು,” ಎಂದು ಬರೆಯುತ್ತಾರೆ. (We or our Nationhood Defined, P. 45). ಆರ್‌ಎಸ್‌ಎಸ್ ಆರಾಧಿಸುವ ಸ್ವಾಮಿ ವಿವೇಕಾನಂದ ಕೂಡ, “ಆರ್ಯರು ಸಣ್ಣ ಗುಂಪುಗಳಲ್ಲಿ ಭಾರತಕ್ಕೆ ಬಂದರು” ಎನ್ನುತ್ತಾರೆ. (ಸ್ವಾಮಿ ವಿವೇಕಾನಂದರ ಸಂಪೂರ್ಣ ಕೃತಿಗಳು, ಮಾಯಾವತಿ ಸ್ಮಾರಕ ಆವೃತ್ತಿ, ಸಂಪುಟ. 4. ಪುಟ 78). ಆದರೆ ಇವರಾರನ್ನೂ ಪುನಃಪರಿಷ್ಕರಣಕಾರರು ನೆನಪಿಸಿಕೊಳ್ಳುವುದಿಲ್ಲ.

ಇವೆಲ್ಲ ಆಧಾರರಹಿತ ಎನ್ನಲು ಒಂದೇ ಒಂದು ಉದಾಹರಣೆ ಸಾಕು. ಸಿಂಧೂ ಕಣಿವೆಯ ಸಂಸ್ಕೃತಿ ವೈದಿಕ ಸಂಸ್ಕೃತಿ ಎನ್ನುವುದಾದರೆ ಸಿಂಧೂ ಕಣಿವೆಯ ನಗರಗಳಲ್ಲಿ ದೊರೆತ ಸಾವಿರಾರು ಮುದ್ರೆಗಳಲ್ಲಿರುವ ಲಿಪಿಯನ್ನು ಈ ಸಂಸ್ಕೃತದ ಪಂಡಿತರಿಗೆ ಯಾಕೆ ಓದಲು ಸಾಧ್ಯವಾಗುತ್ತಿಲ್ಲ?

ಬಲ ಪಂಥೀಯ ಇತಿಹಾಸಕಾರರೇ ಈ ವಾದಗಳನ್ನು ಖಂಡಿಸುತ್ತಾರೆ. “ಇಂಡೋ-ಯುರೋಪಿಯನ್ ಭಾಷಾ-ಕುಟುಂಬದ ಭಾಷಾವೈಶಿಷ್ಟ್ಯಗಳ ಭೌಗೋಳಿಕ ವಿತರಣೆಯು ಇಂಡೋ-ಯುರೋಪಿಯನ್ನರ ಮೂಲ ಮನೆಯನ್ನು ಏಷ್ಯಾಕ್ಕಿಂತ ಯುರೋಪಿನಲ್ಲಿ ಹುಡುಕಬೇಕು ಎಂದು ಸೂಚಿಸುತ್ತದೆ. ಈ ಎರಡು ಮೂಲಭೂತ ಸಂಗತಿಗಳು ಭಾರತವು ಆರ್ಯರ ಮೂಲ ಮನೆಯಾಗಿದೆ ಎಂಬ ಸಿದ್ಧಾಂತದ ವಿರುದ್ಧ ಬಲವಾದ ಮೇಲ್ನೋಟದ ಪ್ರಮಾಣ ನೀಡುತ್ತವೆ. ಶ್ರಾಡರ್‌ನ (ಜರ್ಮನ್ ಭಾಷಾಶಾಸ್ತ್ರಜ್ಞ) ದಿನಗಳಿಂದ ಜ್ಞಾನದ ಅಗಾಧ ಹೆಚ್ಚಳದ ಹೊರತಾಗಿಯೂ, ದಕ್ಷಿಣ ರಷ್ಯಾವನ್ನು ಇತರ ಯಾವುದೇ ಪ್ರದೇಶಗಳಿಗಿಂತ ಹೆಚ್ಚಾಗಿ, ಆರ್ಯರ (= ಇಂಡೋ-ಯುರೋಪಿಯನ್ನರ) ತೊಟ್ಟಿಲು-ಭೂಮಿ ಎಂದು ಪರಿಗಣಿಸಬಹುದು ಎಂಬ ಅವರ ತೀರ್ಮಾನಕ್ಕೆ ಬದ್ಧರಾಗಿರುವುದು ಉತ್ತಮ” ಎನ್ನುತ್ತಾರೆ ಬಲ-ಪಂಥೀಯ ಇತಿಹಾಸಕಾರ ಬಿ. ಕೆ. ಘೋಷ್. (ದ ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್. ಸಂಪುಟ 1 ವೈದಿಕ ಯುಗ, ಪು 206 ಮತ್ತು 217).

ಪಾಠದಲ್ಲಿ ಮುಂದುವರಿದು “ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾರತೀಯರನ್ನು ಜಾತಿ-ಧರ್ಮಗಳ ಆಧಾರದಲ್ಲಿ ಒಡೆದು ಆಳುವ ಅನಿವಾರ್ಯತೆ ಬ್ರಿಟಿಷರಿಗೆ ಬಂತು. ಅದಕ್ಕಾಗಿ ಆರ್ಯ-ದ್ರಾವಿಡ ಎಂಬ ವಿಭಾಗವನ್ನು ಸೃಷ್ಟಿಸಲಾಯಿತು. ಕ್ರೈಸ್ತ ಮಿಷನರಿಗಳು ದ್ರಾವಿಡ ಎಂಬುದು ಜನಾಂಗ ಸೂಚಕ ಎಂದು ಮೊದಲು ಪ್ರತಿಪಾದಿಸಿದರು. ನಂತರ ಬಂದ ಕೆಲವು ಇತಿಹಾಸಕಾರರು ಇದನ್ನು ಪ್ರಚಾರ ಮಾಡುತ್ತ ಹೋದರು. ಆದರೆ ಆರ್ಯ ಮತ್ತು ದ್ರಾವಿಡ ಎಂಬುದು ಜನಾಂಗಸೂಚಕಗಳು ಎನ್ನಲು ಯಾವ ಆಧಾರವೂ ಇಲ್ಲ ಎನ್ನುತ್ತಾರೆ. “’ಆರ್ಯ ಎನ್ನುವುದು ಒಂದು ಜನಾಂಗ ಸೂಚಕ ಎಂದು ಮೊದಲಿಗೆ ಪ್ರಚುರಪಡಿಸಿದ್ದ ಮ್ಯಾಕ್ಸ ಮ್ಯೂಲರ್ ಅವರೇ ಈ ನಿಲುವನ್ನು ಬದಲಿಸಿ ಆರ್ಯ ಎಂದರೆ ಒಂದು ವಿಶಿಷ್ಟ ಭಾಷೆಯನ್ನು ಬಳಸುತ್ತಿದ್ದ ಜನರು ಎಂದು ಹೇಳಿದ್ದರು, ಹಾಗೂ ದ್ರಾವಿಡ ಎನ್ನುವುದು ದ್ರವಿಡ ಮೂಲದ ಭಾಷೆಗಳನ್ನಾಡುತ್ತಿದ್ದ ಜನ ಎಂಬುದು ಸ್ಪಷ್ಟವಿದ್ದರೂ, ’ಆರ್ಯ ಮತ್ತು ದ್ರಾವಿಡ ಎಂಬುದು ಜನಾಂಗಸೂಚಕಗಳು ಎನ್ನಲು ಯಾವ ಆಧಾರವೂ ಇಲ್ಲ'” ಎಂದು ಹೇಳುವ ಮೂಲಕ ಇಲ್ಲದಿರುವುದನ್ನು ಅಲ್ಲಗಳೆದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡುಮಾಡುತ್ತಾರೆ.

ಜೊತೆಗೆ ದ್ರವಿಡ ಎನ್ನುವುದು ಜನಾಂಗಸೂಚಕವಲ್ಲದಿದ್ದರೂ ಅವರೊಂದು ಬುಡಕಟ್ಟು (Tribe) ಆಗಿದ್ದರು ಎನ್ನುವುದು, ಬ್ರಿಟಿಷರ ಅಸ್ತಿತ್ವದ ಕಲ್ಪನೆಯೇ ನಮಗಿಲ್ಲದಿದ್ದಾಗ, ಮಹಾಭಾರತದಲ್ಲಿಯೂ ಸೂಚಿತವಾಗಿದೆ. ಯುಧಿಷ್ಟಿರ ನಡೆಸಿದ ಅಶ್ವಮೇಧ ಯಜ್ಞದ ಕುದುರೆಯನ್ನು ರಕ್ಷಿಸಲು ಅರ್ಜುನ ದ್ರವಿಡರು, ಆಂಧ್ರರ ಜೊತೆ ಯುದ್ಧ ಮಾಡಿದ್ದಾಗಿ ಮಹಾಭಾರತ ಹೇಳುತ್ತದೆ. ದ್ರವಿಡ ಭಾಷೆ ಬರಿ ದಕ್ಷಿಣ ಭಾರತದ ಭಾಷೆಯಾಗಿರದೇ ಆರ್ಯರು ಭಾರತಕ್ಕೆ ಬರುವುದಕ್ಕಿಂತ ಮೊದಲು ಇಡೀ ಭಾರತದ ತುಂಬ ಹರಡಿಕೊಂಡಿದ್ದ ಭಾಷೆಯಾಗಿತ್ತು ಎಂದು ಇತಿಹಾಸಕಾರ ಬಿ.ಆರ್.ಭಂಡಾರಕರ ಅವರು ಅಭಿಪ್ರಾಯ ಪಡುತ್ತಾರೆ. “ಪಶ್ಚಿಮ ಏಶಿಯದ ಎಲಮೈಟ ಹಾಗೂ ಬಲುಚಿಸ್ತಾನನಲ್ಲಿ ಬಳಕೆಯಾಗುತ್ತಿದ್ದ ಬ್ರಹುಇ ಭಾಷೆಗಳ ನಡುವಿನ ಸಮಾನತೆಯನ್ನು ಡೇವಿಡ್ ಮ್ಯಾಕ್‌ಆಲ್ಪೈನ್ ಗುರುತಿಸಿದ ನಂತರ ಸಿಂಧು ಕಣಿವೆಯ ಜನ ’ಪ್ರೊಟೊ-ಎಲಮೊ-ದ್ರವಿಡಿಯನ್’ ಭಾಷೆಯನ್ನು ಬಳಸುತ್ತಿದ್ದರೆಂಬುದು ಈಗ ವಿಶೇಷವಾಗಿ ಖಚಿತತೆ ಪಡೆದಿದೆ ಎನ್ನುತ್ತಾರೆ ಇತಿಹಾಸಕಾರ ಇರ್ಫಾನ ಹಬೀಬ್. ’ಪೂಜೆ’ ಎನ್ನುವುದು ದ್ರವಿಡ ಶಬ್ದವಾಗಿದ್ದು, ಈ ಶಬ್ದ ಅಥವಾ ಅದರ ಮೂಲರೂಪ ಭಾರತದ ಹೊರಗಿನ ಯಾವುದೇ ಆರ್ಯ ಅಥವಾ ಇಂಡೊ-ಯುರೋಪಿಯನ್ ಭಾಷೆಯಲ್ಲಿ ದೊರಕುವುದಿಲ್ಲ- ಬಹುಶಃ ಸಿಂಧೂ ಕಣಿವೆಯ ಜನ ದ್ರವಿಡ ಭಾಷೆಯನ್ನು ಬಳಸುತ್ತಿದ್ದರು ಎನ್ನುತ್ತಾರೆ ಇತಿಹಾಸಕಾರ ಎಸ್.ಕೆ.ಚಾಟರ್ಜೀ. ಆದರೂ ಈ ಪಠ್ಯ ಪುಸ್ತಕ ಪುನಃಪರಿಷ್ಕರಣೆಯಲ್ಲಿ ದ್ರವಿಡರ ಅಸ್ತಿತ್ವವನ್ನೇ ಅಲ್ಲಗಳೆಯುವ ಪ್ರಯತ್ನ ಮಾಡಲಾಗಿದೆ.

“ಅರ್ಧಸತ್ಯ, ಅಸತ್ಯ, ಉತ್ಪ್ರೇಕ್ಷೆ, ನಿರ್ಣಯ ಮುಂತಾದವನ್ನು ಕೈಬಿಟ್ಟು ಅಧಿಕೃತ ಆಧಾರಗಳಿರುವ ಸಂಗತಿಗಳನ್ನಷ್ಟೇ ಮುಂದಿಡಬೇಕು” ಎಂದು ತಾವೇ ನಿರ್ಧರಿಸಿರುವ ಒರೆಗಲ್ಲಿನ ಪರೀಕ್ಷೆಯಲ್ಲಿ ಇವರ ಪುನಃಪರಿಷ್ಕರಣೆ ಸಂಪೂರ್ಣವಾಗಿ ಸೋಲುತ್ತದೆ. ಇಂತಹ ಅಂಶಗಳನ್ನು ತಕ್ಷಣ ತೆಗೆದುಹಾಕಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡದಂತಹ ಆಧಾರಸಹಿತವಾದ ತಥ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ಆವಶ್ಯಕ. ಈ ಹಿಂದೂ ಮತಾಂಧರಿಗೆ ಪಠ್ಯಪುಸ್ತಕಗಳ ಪುನಃಪರಿಷ್ಕರಣೆಯ ಇನ್ನೊಂದು ಅವಕಾಶ ಸಿಕ್ಕರೆ ಇವರು ಪಠ್ಯಪುಸ್ತಕಗಳಲ್ಲಿ ತಾಜ ಮಹಲವನ್ನು ತೇಜೋ ಮಹಾಲಯ ಎಂದೂ, ಕುತುಬ್ ಮಿನಾರವನ್ನು ವಿಷ್ಣು ಸ್ತಂಭವೆಂದೂ, ಕ್ರಿಶ್ಚಿಯಾನಿಟಿಯನ್ನು ಕೃಷ್ಣನೀತಿ ಎಂದೂ ದಾಖಲಿಸಿ ಬಿಡುತ್ತಾರೆ ಎನ್ನುವ ಬಗ್ಗೆ ಸಂದೇಹವಿಲ್ಲ. ಈ ಬಗ್ಗೆ ಶಿಕ್ಷಣತಜ್ಞರು ಎಚ್ಚರಿಕೆ ವಹಿಸುವುದು ಅತ್ಯವಶ್ಯಕ. ಕರ್ನಾಟಕ ಶಿಕ್ಷಣ ಇಲಾಖೆ ಕೂಡಲೇ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಹೊಸ ಸಮಿತಿಯೊಂದನ್ನು ರಚಿಸಿ ಇಂತಹ ಅಪದ್ಧಗಳಿಗೆ ಇತಿಶ್ರೀ ಹಾಡಬೇಕಿದೆ.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ? ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...